ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಸುಸ್ತಿದಾರರ ಪಟ್ಟಿ ನೀಡಿದ್ದ ರಘುರಾಮ್ ರಾಜನ್

ಆರ್‌ಟಿಐ ಅರ್ಜಿಯಿಂದ ದೃಢಪಟ್ಟ ಮಾಹಿತಿ * ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡಲು ಸರ್ಕಾರ ನಕಾರ
Last Updated 31 ಅಕ್ಟೋಬರ್ 2018, 7:03 IST
ಅಕ್ಷರ ಗಾತ್ರ

ನವದೆಹಲಿ: ರಘುರಾಮ್ ರಾಜನ್ ಅವರು ಆರ್‌ಬಿಐ ಗವರ್ನರ್ ಆಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಮುಖ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಮತ್ತುಸುಸ್ತಿದಾರರ (ಸಾಲ ಮರುಪಾವತಿಸದ ಉದ್ಯಮಿಗಳು) ಪಟ್ಟಿಯೊಂದನ್ನು ನೀಡಿದ್ದರು ಎಂಬ ವಿಷಯ ಈಗ ದೃಢಪಟ್ಟಿದೆ. ಆದರೆ, ರಾಜನ್ ನೀಡಿದ್ದ ಪಟ್ಟಿಯಲ್ಲಿದ್ದ ಸುಸ್ತಿದಾರರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ರಾಜನ್ ಅವರು ಪಟ್ಟಿ ನೀಡಿದ್ದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ವಯ ಮಾಹಿತಿ ಪಡೆಯಲಾಗಿದೆ ಎಂದುದಿ ವೈರ್ ಸುದ್ದಿತಾಣ ವರದಿ ಮಾಡಿದೆ.

‘ರಾಜನ್ ಅವರು ಪಟ್ಟಿ ನೀಡಿದ್ದ ವಿಷಯ ಬಹಿರಂಗವಾಗುತ್ತಿದ್ದಂತೆಯೇ, ಅದು ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ನೀಡಿದ್ದು ಎಂದು ಬಿಂಬಿಸಲು ಕೆಲವು ಮಾಧ್ಯಮಗಳು ಯತ್ನಿಸಿದ್ದವು. ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿರುವಾಗಲೇ ಅಂದರೆ, 2015ರ ಫೆಬ್ರುವರಿ 4ರಂದು ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ (ಪಿಎಂಒ) ನೀಡಲಾಗಿತ್ತು ಎಂಬುದನ್ನು ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಆರ್‌ಬಿಐ ಉಲ್ಲೇಖಿಸಿದೆ’ ಎಂದುದಿ ವೈರ್ ವರದಿ ಹೇಳಿದೆ.

ನಂತರ, ಮುರಳಿ ಮನೋಹರ್ ಜೋಶಿ ನೇತೃತ್ವದ ಸಂಸದೀಯ ಸಮಿತಿಯ ಕೋರಿಕೆ ಮೇರೆಗೆ ರಾಜನ್ ಅವರು ಅನುತ್ಪಾದಕ ಸಾಲ (ಮರುಪಾವತಿಯಾಗದ ಸಾಲ– ಎನ್‌ಪಿಎ) ಸಮಸ್ಯೆಗೆ ಸಂಬಂಧಿಸಿದ 17 ಪುಟಗಳ ವರದಿಯನ್ನು 6ನೇ ಸೆಪ್ಟೆಂಬರ್2018ರಂದು ಸಲ್ಲಿಸಿದ್ದರು. ಅಲ್ಲದೆ, ಸಾಲ ಮರುಪಾವತಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಚೇರಿಗೆ ಸಲಹೆ ನೀಡಿದ್ದಾಗಿಯೂತಿಳಿಸಿದ್ದರು. ಆದರೆ ಕ್ರಮಕ್ಕೆ ಸೂಚಿಸುವ ಸಂದರ್ಭ ಯಾರು ಪ್ರಧಾನಿಯಾಗಿದ್ದರು ಎಂಬುದನ್ನು ಉಲ್ಲೇಖಿಸಿಲ್ಲ.

ಮಾಹಿತಿ ನೀಡಲು ಒಕ್ಕೊರಲ ನಕಾರ

ರಾಜನ್ ನೀಡಿದ್ದ ಪಟ್ಟಿಗೆ ಸಂಬಂಧಿಸಿ ಕೈಗೊಂಡ ಕ್ರಮಗಳ ಬಗ್ಗೆ ಆರ್‌ಬಿಐ, ಪಿಎಂಒ ಮತ್ತು ಹಣಕಾಸು ಸಚಿವಾಲಯಗಳ ಬಳಿ ಮಾಹಿತಿ ಕೋರಲಾಯಿತು. ಆದರೆ, ಎಲ್ಲ ಇಲಾಖೆಗಳೂ ಗೌಪ್ಯತೆಯ ನೆಪವೊಡ್ಡಿ ಮಾಹಿತಿ ನೀಡಲು ನಿರಾಕರಿಸಿದವು ಎಂದು ವರದಿ ಹೇಳಿದೆ.

ಆರ್‌ಬಿಐ ಹೇಳಿದ್ದೇನು?

ರಾಜನ್ ಅವರು ರಿಸರ್ವ್ ಬ್ಯಾಂಕ್ಗವರ್ನರ್ ಆಗಿದ್ದಾಗ ಕೇಂದ್ರ ಸರ್ಕಾರ, ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ನೀಡಿರುವ ಪಟ್ಟಿಗೆ ಸಂಬಂಧಿಸಿ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಮಾಹಿತಿ ಬಹಿರಂಗಪಡಿಸುವುದರಿಂದ ತನಿಖಾ ಪ್ರಕ್ರಿಯೆಗೆ ತೊಡಕಾಗಲಿದೆ. 2005ರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8(1)ರ ಕಲಂ (ಎಚ್‌) ಅಡಿಯಲ್ಲಿ ನೀವು ಕೇಳಿರುವ ಮಾಹಿತಿಯನ್ನು ಬಹಿರಂಗಪಡಿಸಲಾಗದು ಎಂದು ಆರ್‌ಬಿಐ ತಿಳಿಸಿದೆ.

‘ಹೀಗೆ ಪ್ರತಿಕ್ರಿಯಿಸುವ ಮೂಲಕ ಪ್ರಧಾನಿ ಕಚೇರಿಮತ್ತು ಹಣಕಾಸು ಸಚಿವಾಲಯಗಳು ಅನುತ್ಪಾದಕ ಸಾಲಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಡಲು ಯತ್ನಿಸುತ್ತಿವೆ’ ಎಂದುದಿ ವೈರ್ ವರದಿ ಉಲ್ಲೇಖಿಸಿದೆ. ಜತೆಗೆ, ರಾಜನ್ ಪಟ್ಟಿಯಲ್ಲಿ ಹೆಸರಿಸಲಾಗಿದ್ದವರ ಪೈಕಿ ಕೆಲವರು ದೇಶ ತೊರೆದು ಪರಾರಿಯಾಗಿದ್ದಾರೆ ಎಂದೂ ಹೇಳಿದೆ.

ಆರ್‌ಟಿಐ ಅರ್ಜಿಗೆ ಆರ್‌ಬಿಐ ಉತ್ತರ
ಆರ್‌ಟಿಐ ಅರ್ಜಿಗೆ ಆರ್‌ಬಿಐ ಉತ್ತರ

ವಿಷಯ ಮುಚ್ಚಿಡಲು ಯತ್ನಿಸಿದ ಪ್ರಧಾನಿ ಕಾರ್ಯಾಲಯ

ರಾಜನ್ ಪತ್ರ ಬರೆದಿದ್ದ ವಿಷಯವನ್ನೇ ಮುಚ್ಚಿಡಲು ಪ್ರಧಾನಿ ಕಾರ್ಯಾಲಯಮತ್ತು ಹಣಕಾಸು ಸಚಿವಾಲಯ ಯತ್ನಿಸಿವೆ. ರಾಜನ್ ಪತ್ರ ಆರ್‌ಟಿಐ ಅಡಿಯಲ್ಲಿ ಬರುವುದಿಲ್ಲ ಎಂದು ಅವು ತಿಳಿಸಿದ್ದವು ಎನ್ನಲಾಗಿದೆ.

‘ತನಿಖೆಯ ಹಂತದಲ್ಲಿರುವ ಪ್ರಕರಣಗಳನ್ನು 2005ರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2(ಎಫ್) ಅಡಿಯಲ್ಲಿ ‘ಮಾಹಿತಿ’ ಎಂದುಪರಿಗಣಿಸಲು ಆಗುವುದಿಲ್ಲ’ ಎಂದು ಪ್ರಧಾನಿ ಕಾರ್ಯಾಲಯದ ಕಾರ್ಯದರ್ಶಿ ಪ್ರವೀಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದರು. ರಾಜನ್ ಪಟ್ಟಿಯೊಂದನ್ನು ಕಳುಹಿಸಿದ್ದರು ಎಂಬ ವಿಚಾರವನ್ನು ತಿಳಿಸಲೂ ಪಿಎಂಒ ಹಿಂದೇಟು ಹಾಕಿತ್ತು. ಸುಸ್ತಿದಾರರ ವಿರುದ್ಧ ಏನು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೂ ಉತ್ತರ ನೀಡಲು ಪಿಎಂ ನಿರಾಕರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ,ಪಿಎಂಒದ ಉತ್ತರ ಕಾನೂನಾತ್ಮಕವಾಗಿ ಸರಿಯಲ್ಲ ಎಂಬುದನ್ನು ಕೇಂದ್ರ ಮಾಹಿತಿ ಆಯೋಗದ ಆಯುಕ್ತ ಶೈಲೇಶ್ ಗಾಂಧಿ ತಿಳಿಸಿದ್ದಾರೆ. ‘ಏನು ಮಾಹಿತಿ ಇದೆಯೋ ಅದನ್ನು ಅದೇ ರೂಪದಲ್ಲಿ ನೀಡಬೇಕು. ಒಂದು ವೇಳೆ ರಾಜನ್ ನೀಡಿದ್ದ ಪಟ್ಟಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗಿದ್ದರೂ ಅದು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೇ ಬರುತ್ತದೆ. ಮಾಹಿತಿ ನೀಡದಿದ್ದರೆ ಅದು ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಗಾಂಧಿ ತಿಳಿಸಿದ್ದಾರೆ.

ಆರ್‌ಟಿಐ ಅರ್ಜಿಗೆ ಪಿಎಂಒ ಉತ್ತರ
ಆರ್‌ಟಿಐ ಅರ್ಜಿಗೆ ಪಿಎಂಒ ಉತ್ತರ

ನುಣುಚಿಕೊಳ್ಳಲೆತ್ನಿಸಿದ ಹಣಕಾಸು ಸಚಿವಾಲಯ

ಆರ್‌ಟಿಐ ಅರ್ಜಿ ಸಲ್ಲಿಸಿದ ಮೊದಲ 40 ದಿನಗಳ ವರೆಗೆ ಹಣಕಾಸು ಸಚಿವಾಲಯ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ನಂತರ, ಅಕ್ಟೋಬರ್ 24ರಂದು ಅರ್ಜಿಯನ್ನು ಆದಾಯ ಇಲಾಖೆ, ಆರ್ಥಿಕ ವ್ಯವಹಾರಗಳ ಇಲಾಖೆ, ವೆಚ್ಚ ಮತ್ತು ಹೂಡಿಕೆ ಇಲಾಖೆ ಹಾಗೂ ಸಾರ್ವಜನಿಕ ಸೊತ್ತು ನಿರ್ವಹಣಾ ಇಲಾಖೆಗಳಿಗೆ ಕಳುಹಿಸಿಕೊಟ್ಟಿತ್ತು. ‘ನಿಮ್ಮ ಅರ್ಜಿಗೆ ಸಂಬಂಧಿಸಿ ನಮ್ಮ ಬಳಿ ಮಾಹಿತಿ ಇಲ್ಲ. ಹೀಗಾಗಿ ಅದನ್ನು ಇತರ ನಾಲ್ಕು ಇಲಾಖೆಗಳಿಗೆ ಕಳುಹಿಸಿಕೊಟ್ಟಿದ್ದೇವೆ’ ಎಂದು ಸಚಿವಾಲಯದ ಹಣಕಾಸು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಎ.ಕೆ. ಘೋಷ್ ತಿಳಿಸಿದ್ದರು ಎಂದು ವರದಿ ತಿಳಿಸಿದೆ. ಆರ್ಥಿಕ ವ್ಯವಹಾರಗಳ ಇಲಾಖೆಯೂ ರಾಜನ್ ಪತ್ರಕ್ಕೆ ಸಂಬಂಧಿಸಿ ನಮ್ಮ ಬಳಿ ಉತ್ತರವಿಲ್ಲ ಎಂದಿತ್ತು.

ಸುಸ್ತಿದಾರರ ಪಟ್ಟಿ ಮಾಹಿತಿ ಯಾಕೆ ಸಿಗುತ್ತಿಲ್ಲ?

ರಘುರಾಮ್ ರಾಜನ್ಪಿಎಂಒಕ್ಕೆ ಸುಸ್ತಿದಾರರ ಬಗ್ಗೆ ಪಟ್ಟಿ ನೀಡಿದ್ದರು ಎಂದು ಆರ್‌ಟಿಐ ಅರ್ಜಿಗೆ ಆರ್‌ಬಿಐ ಉತ್ತರಿಸಿದೆ. ಹಾಗಾದರೆ, ಪಿಎಂಒ ಮತ್ತು ಹಣಕಾಸು ಸಚಿವಾಲಯಗಳಿಗೆ ಯಾಕೆ ಆ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ದಿ ವೈರ್ ವರದಿ ಪ್ರಶ್ನಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT