ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ಸೃಷ್ಟಿಗೆ ಹೊಣೆಗಾರಿಕೆಯ ಹೂಡಿಕೆ

Last Updated 13 ಡಿಸೆಂಬರ್ 2019, 6:15 IST
ಅಕ್ಷರ ಗಾತ್ರ

ಉಳಿತಾಯದ ಹಣವನ್ನು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಹಣಕಾಸು ಯೋಜನೆ ರೂಪಿಸುವವರು ಮತ್ತು ಹೂಡಿಕೆ ತಜ್ಞರು ಕಳೆದ ಕೆಲವು ವರ್ಷಗಳಿಂದ ತುಂಬ ತಲೆಕೆಡಿಸಿಕೊಂಡಿದ್ದಾರೆ. ಭಾರತದಲ್ಲಿ ಹೂಡಿಕೆದಾರರು ಎಚ್ಚೆತ್ತುಕೊಂಡಿರುವುದು, ಸಾಲ ನಿಧಿಗಳಿಗಿಂತಲೂ ಇತ್ತೀಚೆಗೆ ಷೇರು ಆಧಾರಿತ ಫಂಡ್‌ಗಳು ಹೆಚ್ಚು ಗಳಿಕೆ ದಾಖಲಿಸಿದ್ದೇ ಹೂಡಿಕೆ ತಜ್ಞರನ್ನು ಚಿಂತನೆಗೆ ಹಚ್ಚಲು ಕಾರಣವಾದ ಸಂಗತಿಗಳಾಗಿವೆ.

ಉಳಿತಾಯ ಮತ್ತು ಹೂಡಿಕೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿರುವುದು ನಿಜವಾಗಿದ್ದರೂ, ಮಾಡಿರುವ ಹೂಡಿಕೆಯನ್ನು ದೀರ್ಘಾವಧಿ ವರೆಗೆ ಉಳಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿದೆಯೆ ಎನ್ನುವುದು ಹೆಚ್ಚು ಸ್ಪಷ್ಟವಾಗಿಲ್ಲ. ಮ್ಯೂಚುವಲ್‌ ಫಂಡ್‌ಗಳಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡುವವರಲ್ಲಿ ಹೆಚ್ಚಿನವರು 25 ರಿಂದ 35 ವರ್ಷ ವಯಸ್ಸಿನೊಳಗಿನವರೇ ಇದ್ದಾರೆ. ಇಂಥವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಷೇರು ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಇಂದಿನ ಸ್ಥಿತಿಯೇ ಕೆಲವು ದಿನಗಳ ನಂತರವೂ ಇರುತ್ತದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಆದ್ದರಿಂದ ಹೆಚ್ಚಿನ ಗಳಿಕೆಯ ನಿರೀಕ್ಷೆಯೊಂದಿಗೆ ಹೂಡಿಕೆ ಮಾಡಿರುವವರು ಕೆಲವು ಸಂದರ್ಭಗಳಲ್ಲಿ ಬಹುಬೇಗ ನಿರಾಶರಾಗಿ ಬಿಡುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಗಳಿಕೆ ದಾಖಲಿಸಲು ಬೇಕಾದ ಬಹುಮುಖ್ಯ ಗುಣವೆಂದರೆ ತಾಳ್ಮೆ. ಇಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಿದರೆ ಉತ್ತಮ ಗಳಿಕೆ ಸಾಧ್ಯವಾಗುತ್ತದೆ ಎಂಬುದು ಸಾಬೀತಾಗಿದೆ. ಆದ್ದರಿಂದ ಇಲ್ಲಿ ‘ಯಾವ ಸಮಯ’ದಲ್ಲಿ ಹೂಡಿಕೆ ಮಾಡಿದ್ದೀರಿ ಎಂಬಷ್ಟೇ ‘ಎಷ್ಟು ಸಮಯ’ ಹೂಡಿಕೆ ಮಾಡಿದ್ದೀರಿ ಎಂಬುದೂ ಮುಖ್ಯವಾಗುತ್ತದೆ. ಅಲ್ಪ ಕಾಲದಲ್ಲಾಗುವ ಏರಿಳಿತಗಳಿಗೆ ಹೆದರಿ ಹೂಡಿಕೆಯಿಂದ ಹಿಂದೆ ಸರಿಯುವುದು ಬುದ್ಧಿವಂತಿಕೆಯಾಗದು.

ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಈಗ ಹೂಡಿಕೆದಾರರಿಗೆ ಹೆಚ್ಚು ಹೊರೆಯಾಗದಂತಹ ಆಕರ್ಷಕ ಹೂಡಿಕೆಯ ಯೋಜನೆಗಳನ್ನು ರೂಪಿಸಿವೆ. ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ, ಸಾಲ ನಿಧಿ ಹಾಗೂ ಷೇರುಗಳಲ್ಲಿ ಸಮಾನವಾಗಿ ಹೂಡಿಕೆ ಮಾಡುವಂತಹ ಹೈಬ್ರಿಡ್‌ ಫಂಡ್‌ಗಳೂ ಈಗ ಲಭ್ಯ ಇವೆ.

ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ–ಸಿಪ್‌) ಜಾರಿಯಾದ ಬಳಿಕ ಷೇರು ಆಧಾರಿತ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಜನರ ಆಸಕ್ತಿ ಹೆಚ್ಚತೊಡಗಿದೆ. ಭಾರತದ ಮ್ಯೂಚುವಲ್‌ ಫಂಡ್‌ ಸಂಘದ (ಎಎಂಎಫ್‌ಐ) ಇತ್ತೀಚಿನ ವರದಿಯ ಪ್ರಕಾರ, ‘ಎಸ್‌ಐಪಿ’ ಮೂಲಕ ಪ್ರತಿ ತಿಂಗಳೂ ನಡೆಯುತ್ತಿರುವ ಹೂಡಿಕೆಯ ಪ್ರಮಾಣ ₹ 8,000 ಕೋಟಿ ದಾಟಿದೆ. ಇದರಿಂದಾಗಿ ವಿದೇಶಿ ಹಣಕಾಸು ಸಂಸ್ಥೆಗಳೂ ಭಾರತದ ಮಾರುಕಟ್ಟೆಯತ್ತ ಆಕರ್ಷಿತವಾಗುತ್ತಿವೆ. ‘ಎಸ್‌ಐಪಿ’ ಹೂಡಿಕೆಯ ಪ್ರಮಾಣ ಹೆಚ್ಚುತ್ತಿರುವುದು ಒಳ್ಳೆಯ ಲಕ್ಷಣವಾಗಿದ್ದರೂ, ಮಾರುಕಟ್ಟೆಯ ಕ್ಷಣಿಕ ಏರುಪೇರಿನಿಂದ ಹೂಡಿಕೆದಾರರು ಧೃತಿಗೆಡದಂತೆ ನೋಡಿಕೊಳ್ಳಬೇಕಾಗಿರುವುದು ಮುಖ್ಯವಾಗಿದೆ.

ಹಿಂದೆ ಸಾಲನಿಧಿ ಮ್ಯೂಚುವಲ್‌ ಫಂಡ್‌ಗಳು ಭಾರತದ ಹೂಡಿಕೆದಾರರನ್ನು ಅಷ್ಟಾಗಿ ಅಕರ್ಷಿಸುತ್ತಿರಲಿಲ್ಲ. ಇವುಗಳ ಬದಲಿಗೆ ಹೂಡಿಕೆದಾರರು ನಿಶ್ಚಿತ ಠೇವಣಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸಾಲ ನಿಧಿಗಳೂ ಈಗ ಒಳ್ಳೆಯ ಗಳಿಕೆಯನ್ನು ತಂದುಕೊಡುವ ಹಣಕಾಸು ಉತ್ಪನ್ನಗಳಾಗಿವೆ. ಜೊತೆಗೆ ತೆರಿಗೆ ವಿನಾಯ್ತಿಯ ಹೆಚ್ಚುವರಿ ಅನುಕೂಲತೆಯೂ ಈ ಫಂಡ್‌ಗಳಿಗೆ ಲಭ್ಯವಾಗುತ್ತದೆ.

ಮ್ಯೂಚುವಲ್‌ ಫಂಡ್‌ ಉದ್ದಿಮೆಯು ಸದ್ಯಕ್ಕೆ ಹತ್ತಾರು ಬಗೆಯ ಹೂಡಿಕೆಯ ಉತ್ಪನ್ನಗಳನ್ನು ನೀಡುತ್ತಿದೆ. ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆದಾರರು ತಮಗೆ ಸೂಕ್ತವೆನಿಸುವ ಫಂಡ್‌ ಆಯ್ಕೆ ಮಾಡಿಕೊಂಡು ಹೂಡಿಕೆ ಆರಂಭಿಸಬಹುದಾಗಿದೆ. ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಮ್ಯೂಚುವಲ್‌ ಫಂಡ್‌ ಯೋಜನೆಗಳ ಮರು ವಿಂಗಡಣೆ ಮಾಡಿದ ನಂತರ ಈ ಕ್ಷೇತ್ರದಲ್ಲಿ ಹೆಚ್ಚಿನ ಪಾರದರ್ಶಕತೆ ಬಂದಿದೆ. ಆದ್ದರಿಂದ ‘ಮ್ಯೂಚುವಲ್ ಫಂಡ್‌ ಸಹಿ ಹೈ’ ಎಂಬ ಘೋಷಣೆ ನಿಜವಾಗಿಯೂ ಈ ಹೂಡಿಕಾ ವಿಧಾನಕ್ಕೆ ಸರಿಹೊಂದುತ್ತಿದೆ.

(ಲೇಖಕ: ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌ನನಿಧಿ ನಿರ್ವಾಹಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT