ಬುಧವಾರ, ಮಾರ್ಚ್ 22, 2023
28 °C

ಪ್ರಶ್ನೋತ್ತರ: ಸರ್ಕಾರದ ಸಾಲಪತ್ರಗಳು ಎಂದರೇನು?

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

ನಾಗರಾಜ, ಚಿತ್ರದುರ್ಗ

l ಪ್ರಶ್ನೆ: ನನ್ನ ವಯಸ್ಸು 30 ವರ್ಷ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಸಂಬಳ ₹ 50 ಸಾವಿರ. ಅದರಲ್ಲಿ ಮನೆ ಬಾಡಿಗೆ, ತಿಂಗಳ ಇತರ ಖರ್ಚು ಹೊರತುಪಡಿಸಿ ಸುಮಾರು ₹ 20-25 ಸಾವಿರ ಉಳಿಸಬಹುದು. ನನಗೆ 3 ವರ್ಷ ವಯಸ್ಸಿನ ಮಗ, 1 ವರ್ಷ ವಯಸ್ಸಿನ ಮಗಳು ಇದ್ದಾರೆ. ನನ್ನ ಪ್ರಸ್ತುತ ಉಳಿತಾಯ ಯೋಜನೆಗಳು: 1. ನನ್ನ ಹೆಸರಿನಲ್ಲಿ ₹ 50 ಲಕ್ಷಕ್ಕೆ ಅವಧಿ ವಿಮೆ. 2. ನನ್ನ ಹೆಸರಿನಲ್ಲಿ ಪ್ರತಿವರ್ಷ ₹ 50 ಸಾವಿರ ಪಿಪಿಎಫ್. 3. ಮಗಳ ಹೆಸರಿನಲ್ಲಿ ಪ್ರತಿವರ್ಷ ₹ 50 ಸಾವಿರ ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆ. 4. ಪ್ರತಿವರ್ಷ ಚಿನ್ನದ ಬಾಂಡ್‌ ಮೂಲಕ 5 ಗ್ರಾಂ ಚಿನ್ನ ಖರೀದಿ. 5. ಕಂಪನಿಯಿಂದ ಇಪಿಎಫ್ ಹಾಗೂ ₹ 3 ಲಕ್ಷಕ್ಕೆ ಆರೋಗ್ಯ ವಿಮೆ ಇದೆ.

ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಲೇ ಇರುವುದರಿಂದ ನಾನು ಹೇಗೆ ಇವೆರಡಕ್ಕೂ ಯೋಜನೆ ರೂಪಿಸಲಿ? ಚಿತ್ರದುರ್ಗದಲ್ಲಿ ನನ್ನದೊಂದು ನಿವೇಶನವಿದ್ದು ಮುಂದಿನ ದಿನಗಳಲ್ಲಿ ಅನುಕೂಲ ನೋಡಿಕೊಂಡು ಮನೆ ಕಟ್ಟಿಸುವ ಯೋಜನೆಯೂ ಇದೆ.

ಉತ್ತರ: ಅವಧಿ ವಿಮೆ ಹಾಗೂ ಆರೋಗ್ಯ ವಿಮೆ ವ್ಯಕ್ತಿಯ ಬದುಕಿನಲ್ಲಿ ಆಗಬಹುದಾದ ದುರ್ಘಟನೆಗಳಿಗೆ ಪರಿಹಾರ ರೂಪದಲ್ಲಿ ಒದಗಬಲ್ಲ ಸಾಧನಗಳು. ಆದರೆ, ಇವು ವಾರ್ಷಿಕ ಚಂದಾ ಇದ್ದಂತೆ. ಇದು ಮರಳಿ ಸಿಗುವ ಹೂಡಿಕೆ ಅಲ್ಲ. ಇವುಗಳೊಡನೆ ನೀವು ಯಾವುದೇ ಜೀವ ವಿಮಾ ಕಂಪನಿಯ ವಿಮಾ ಯೋಜನೆಗಳಲ್ಲೂ ವರ್ಷಕ್ಕೆ ₹ 50,000ದಷ್ಟು ತೊಡಗಿಸುವುದು ಒಳಿತು. ಅಥವಾ ಇದೇ ಮೊತ್ತವನ್ನು ಸಮೀಪದ ಅಂಚೆ ಕಚೇರಿಯ ವಿಮಾ ಯೋಜನೆಯಲ್ಲಿ ತೊಡಗಿಸಬಹುದು. ಇವು ಎಂಡೋಮೆಂಟ್ ಯೋಜನೆಗಳು. ಪರ್ಯಾಯವಾಗಿ ನೀವು ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ಗಳಲ್ಲಿಯೂ (ಯುಲಿಪ್) ಹೂಡಿಕೆ ಮಾಡಬಹುದು. ಇದು ಹೂಡಿಕೆಯ ಜೊತೆಗೆ ಉತ್ತಮ ವಿಮಾ ಮೊತ್ತವನ್ನು ನಿಮಗೆ ಒದಗಿಸುತ್ತದೆ, ಷೇರು ಮಾರುಕಟ್ಟೆಗೆ ಪೂರಕವಾಗಿ ನಿಮ್ಮ ಹೂಡಿಕೆಯ ಮೊತ್ತ ಏರಿಳಿತವಾಗುತ್ತದೆ. ದೀರ್ಘಾವಧಿಗೆ ಇದು ವಿಮೆಯೂ ಹೌದು ಹೂಡಿಕೆಯೂ ಹೌದು. ಮಾತ್ರವಲ್ಲದೆ, ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿ ಆದಾಯ ತೆರಿಗೆಗೆ ಸಿಗುವ ವಿನಾಯಿತಿಯನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ₹ 1.50 ಲಕ್ಷದವರೆಗೆ ಹೂಡಿಕೆ ಮಾಡುವುದು ಒಳಿತು.

ನಿವ್ವಳ ವೇತನದ ಶೇಕಡ 50ರಷ್ಟನ್ನು ಖರ್ಚಿಗಾಗಿ ಉಳಿಸಿ ಉಳಿದ ಮೊತ್ತವನ್ನು ದೀರ್ಘಾವಧಿ, ಮಧ್ಯಮಾವಧಿ ಹಾಗೂ ಅಲ್ಪಾವಧಿ ಹೂಡಿಕೆಗಳಲ್ಲಿ ತೊಡಗಿಸಿ. ಉತ್ತಮ ದರ್ಜೆಯ ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡಬಹುದು. ಈ ಯೋಜನೆ ನಿರಂತರವಾಗಿ, ದೀರ್ಘಾವಧಿಗೆ ಆಗಲಿ. ಇದು ನಿಮಗೆ ಮಾರುಕಟ್ಟೆ ಮೌಲ್ಯ ಏರಿಕೆಯಾದಂತೆ ದೀರ್ಘ ಕಾಲದಲ್ಲಿ ಉತ್ತಮ ಲಾಭ ನೀಡಬಲ್ಲದು. ಇದಕ್ಕೆ ಅಗತ್ಯ ಬಿದ್ದರೆ ಪರಿಣತರ ಮಾರ್ಗದರ್ಶನ ಪಡೆದುಕೊಳ್ಳಿ. ಉಳಿದ ಮೊತ್ತವನ್ನು, ಬ್ಯಾಂಕ್‌ನಲ್ಲಿ ಮಧ್ಯಮ ಅಥವಾ ಅಲ್ಪಾವಧಿಗೆ ಎಫ್.ಡಿ. ಅಥವಾ ರೆಕರಿಂಗ್ ಡೆಪಾಸಿಟ್‌ನಲ್ಲಿ (ಆರ್‌.ಡಿ) ಹೂಡಿಕೆ ಮಾಡುತ್ತಾ ಇರಿ. ಮುಂದಿನ ದಿನಗಳಲ್ಲಿ ಪಿಂಚಣಿ ಯೋಜನೆಗಳಲ್ಲೂ ಹೂಡಿಕೆ ಮಾಡಿ.

ರವಿಕಾಂತ ಎಂ.ಕೆ., ತುಮಕೂರು

l ಪ್ರಶ್ನೆ: ಸಣ್ಣ ಹೂಡಿಕೆದಾರರು ‘ಕೇಂದ್ರ ಸರ್ಕಾರದ ಸಾಲ ಪತ್ರಗಳು ಹಾಗೂ ರಾಜ್ಯ ಅಭಿವೃದ್ಧಿ ಸಾಲ ಪತ್ರಗಳಲ್ಲಿ ಹಣ ತೊಡಗಿಸಬಹುದು’ ಎಂದು ಜೂನ್ 9ರಂದು ವಾಣಿಜ್ಯ ಪುಟದ ವರದಿಯೊಂದರಲ್ಲಿ ಬರೆಯಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಲಪತ್ರಗಳು ಎಂದರೇನು? ಇವು ಸದಾ ಸಿಗುತ್ತವೆಯೇ? ಎಲ್ಲಿಂದ ಖರೀದಿಸಬಹುದು? ಇದರ ಬಗ್ಗೆ ವಿವರವಾದ ಮಾಹಿತಿ ಕೊಡಿ.

ಉತ್ತರ: ಕೇಂದ್ರ, ರಾಜ್ಯ ಸರ್ಕಾರಗಳು ಅಭಿವೃದ್ಧಿ ಉದ್ದೇಶಕ್ಕೆ ಹಣ ಸಂಗ್ರಹಿಸಲು ಬಾಂಡ್ (ಸಾಲಪತ್ರ) ಮೂಲಕ ಜನರನ್ನು ಅಥವಾ ಸಂಸ್ಥೆಗಳನ್ನು ತಲುಪುತ್ತವೆ. ಸರ್ಕಾರ ಇದಕ್ಕೆ ಪ್ರತಿಯಾಗಿ ನಿರ್ದಿಷ್ಟ ಮೊತ್ತದ ಮುಖ ಬೆಲೆಯ ಬಾಂಡ್ ಮೇಲೆ ನಿರ್ದಿಷ್ಟ ಕೂಪನ್ ದರದ ಬಡ್ಡಿಯನ್ನು ನಿಗದಿಪಡಿಸಿದ ಅವಧಿಗೊಮ್ಮೆ (ಸಾಮಾನ್ಯವಾಗಿ ಅರ್ಧವಾರ್ಷಿಕ ಅಥವಾ ವಾರ್ಷಿಕ ಅವಧಿ) ಹೂಡಿಕೆದಾರರಿಗೆ ನೀಡುತ್ತದೆ. ಹೂಡಿಕೆ ಭದ್ರತೆಯ ವಿಚಾರ ನೋಡುವುದಾದರೆ, ಇವು ಎಫ್.ಡಿ.ಗಿಂತ ಸುರಕ್ಷಿತ. ಕಾರಣ, ಇದಕ್ಕೆ ಸರ್ಕಾರದ ಖಾತರಿ ಇದೆ. ಎಲ್ಲ ಬ್ಯಾಂಕುಗಳು ತಮ್ಮ ಹೆಚ್ಚುವರಿ ಹೂಡಿಕೆಯನ್ನು ಸರ್ಕಾರಿ ಸಾಲಪತ್ರಗಳಲ್ಲಿ ತೊಡಗಿಸಿ, ಶಾಸನಬದ್ಧ ವಿತ್ತೀಯ ಅನುಪಾತವನ್ನು ಕಾಪಾಡುತ್ತವೆ.

ಬಾಂಡ್ ಖರೀದಿಸುವುದಕ್ಕೂ ಮೊದಲು ನೀವು ಆರ್‌ಬಿಐ ರಿಟೇಲ್ ಡೈರೆಕ್ಟ್ ಪೋರ್ಟಲ್‌ನಲ್ಲಿ (https://rbiretaildirect.in) ನಿಮ್ಮ ಕೆವೈಸಿ ಮಾಹಿತಿ ದಾಖಲಿಸಿ ನೋಂದಾಯಿಸಿಕೊಳ್ಳಬೇಕು. ಇಡೀ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುತ್ತದೆ. ನಿಮ್ಮ ಹೆಸರಲ್ಲಿರುವ ಬ್ಯಾಂಕ್ ಖಾತೆಗೆ ನೆಟ್ ಬ್ಯಾಂಕಿಂಗ್ ಹಾಗೂ ಯುಪಿಐ ಐಡಿ ಅಗತ್ಯ ಇರುತ್ತದೆ. ಇಲ್ಲಿ ಸಣ್ಣ ಹೂಡಿಕೆದಾರರಿಗೆ ಕನಿಷ್ಠ ₹ 10,000ದಿಂದ ಹೂಡಿಕೆಗೆ ಅವಕಾಶ ಇದೆ. ಬಾಂಡ್ ಅವಧಿ ದೀರ್ಘಾವಧಿಯದ್ದು – ಹತ್ತರಿಂದ ಮೂವತ್ತು ವರ್ಷಗಳತನಕ ಇದು ಮರುಪಾವತಿಯ ಅವಧಿ ಹೊಂದಿರುತ್ತದೆ. ಈ ಅವಧಿಯಲ್ಲಿ ಬಡ್ಡಿ ಬರುತ್ತಿರುತ್ತದೆ. ಈ ಪೋರ್ಟಲ್‌ನಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಬಾಂಡ್‌, ಟ್ರೆಷರಿ ಬಿಲ್, ಚಿನ್ನದ ಬಾಂಡ್ ಖರೀದಿಸಲು ಅವಕಾಶವಿದೆ. ವರ್ಷವಿಡೀ ಒಂದಲ್ಲ ಒಂದು ವರ್ಗದಲ್ಲಿ ಹೂಡಿಕೆಗೆ ಇಲ್ಲಿ ಅವಕಾಶವಿದೆ. ಟ್ರೆಷರಿ ಬಿಲ್‌ಗಳು ಮೂರು ತಿಂಗಳಿನಿಂದ ಒಂದು ವರ್ಷದ ತನಕ ಹೂಡಿಕೆಗೆ ಅವಕಾಶ ಕೊಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು