ಸೋಮವಾರ, ಜುಲೈ 4, 2022
24 °C

ಪ್ರಶ್ನೋತ್ತರ: ಹೂಡಿಕೆ ಮಾಡಿದ ಅಸಲು ಮೊತ್ತಕ್ಕೆ ಯುದ್ಧದಿಂದ ಹಾನಿ?

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

ಪ್ರಶ್ನೆ: ನಾನು ಬ್ಯಾಂಕ್ ಮೂಲಕ ಎಸ್ಐಪಿ ಮಾಡುತ್ತಿದ್ದೇನೆ. ಸ್ಮಾಲ್ ಕ್ಯಾಪ್ ಫಂಡ್ ಇದು. ಉಕ್ರೇನ್ ಯುದ್ಧದ ಕಾರಣದಿಂದಾಗಿ ಸಣ್ಣ ಕಂಪನಿಗಳಿಗೆ ತೊಂದರೆ ಜಾಸ್ತಿ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಎಸ್ಐಪಿ ಹೂಡಿಕೆ ಸಣ್ಣ ಕಂಪನಿಗಳಲ್ಲಿ ಹೆಚ್ಚಿರುವ ಕಾರಣ, ಯುದ್ಧದಿಂದಾಗಿ ನನ್ನ ಅಸಲು ಮೊತ್ತಕ್ಕೂ ಹಾನಿಯಾದರೆ ಎಂಬ ಆತಂಕ ಇದೆ. ಎಸ್ಐಪಿ ನಿಲ್ಲಿಸಬೇಕೇ? ಹಣ ಪೂರ್ತಿಯಾಗಿ ಹಿಂಪಡೆಯಲೇ?

-ಕಿರಣ್, ತುಮಕೂರು

ಉತ್ತರ: ಯಾವುದೇ ಹೂಡಿಕೆಯ ಮೂಲ ಉದ್ದೇಶ ಲಾಭ ಗಳಿಸುವುದೇ ಆಗಿರುತ್ತದೆ. ಈ ನಡುವೆ ಸಂಭವಿಸುವ ಅನಿರೀಕ್ಷಿತ ನಷ್ಟ ಅಥವಾ ಹೂಡಿಕೆಯ ವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವುದಕ್ಕೆ ಹೂಡಿಕೆ ಮಾಡಿರುವ ಕಂಪನಿ, ಹೂಡಿಕೆ ಮಾಡಿದ ಕ್ಷೇತ್ರ, ದೇಶದ ರಾಜಕೀಯ ಸ್ಥಿರತೆ ಹಾಗೂ ಆರ್ಥಿಕ ಸ್ಥಿತಿಗತಿ, ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟುಗಳು ಪ್ರಧಾನವಾಗಿ ಕಾರಣವಾಗುವ ಅಂಶಗಳು. ಇದು ಮ್ಯೂಚುವ ಫಂಡ್‌ಗಳಿಗೂ ಅನ್ವಯಿಸುವ ವಿಚಾರ. ಕಾರಣ, ಇವುಗಳು ಕೂಡ ಒಟ್ಟು ಆರ್ಥ ವ್ಯವಸ್ಥೆ ಒಂದು ಭಾಗ. ಹೀಗಾಗಿ ಯಾವುದೇ ಹೂಡಿಕೆಯ ನಿರ್ಧಾರ ಕೈಗೊಳ್ಳುವ ಮೊದಲು, ಹೂಡಿಕೆದಾರರು ತಾವು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ ಹೂಡಿಕೆದಾರರೇ ಎಂಬುದನ್ನು ತಾವೇ ನಿರ್ಧರಿಸಿ ಮಾರುಕಟ್ಟೆಯಲ್ಲಿ ಹಣ ತೊಡಗಿಸಬೇಕು. ನೀವು ದೀರ್ಘಾವಧಿ ಹೂಡಿಕೆದಾರರಾಗಿದ್ದಲ್ಲಿ ಚಿಂತೆ ಬಿಡಿ, ಹೂಡಿಕೆ ಮುಂದುವರಿಸಿ. ಈ ಹಿಂದಿನ ಹಲವು ವರ್ಷಗಳ ಅಂಕಿ–ಅಂಶ ನೋಡಿದಾಗ ತಿಳಿಯುವುದೇನೆಂದರೆ, ಮಾರುಕಟ್ಟೆ ಎರಡು ಮೂರು ವರ್ಷಗಳ ಅವಧಿಗೊಮ್ಮೆ ಇಂತಹ ಒಂದು ಮಹತ್ವದ ಅಡೆತಡೆಗಳನ್ನು ಭೇದಿಸಿ ಮುಂದುವರಿಯುವ ಅವಕಾಶನ್ನೂ ಕಲ್ಪಿಸಿಕೊಡುತ್ತದೆ ಎಂಬುದನ್ನು ಮರೆಯದಿರಿ. ಇದು ದೀರ್ಘಾವಧಿಯಲ್ಲಿ ಬ್ಯಾಂಕುಗಳು ನೀಡುವ ಬಡ್ಡಿಗಿಂತ ಅಧಿಕ ಆದಾಯ ನೀಡಬಲ್ಲದು.

ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಂದ ಬಂದ ಹಣವನ್ನು ಆಯಾ ಫಂಡ್‌ಗಳ ಒಟ್ಟು ಆಶಯಕ್ಕೆ ಅನುಗುಣವಾಗಿ ವಿವಿಧ ಕಂಪನಿಗಳ ಷೇರು, ಬಾಂಡ್‌ ಮತ್ತು ಅಲ್ಪಾವಧಿಯ ಸಾಲಗಳಲ್ಲಿ ವ್ಯವಸ್ಥಿತವಾಗಿ ಮರುಹೂಡಿಕೆ ಮಾಡುತ್ತವೆ. ಇದು ಮಾರುಕಟ್ಟೆ ಯಾವುದೇ ಸ್ಥಿತಿಯಲ್ಲಿದ್ದರೂ ಮ್ಯೂಚುವಲ್ ಫಂಡ್ ಕಂಪನಿಗಳು ವ್ಯವಹರಿಸುವ ಕ್ರಮ. ನಿಮ್ಮ ಎಸ್ಐಪಿ ಪಾವತಿಯಾಗುವ ಸಮಯದಲ್ಲಿ ಮಾರುಕಟ್ಟೆ ಕೆಳಮುಖವಾಗಿ ಸಾಗುತ್ತಿದ್ದರೆ, ಆ ಸಂದರ್ಭದಲ್ಲಿ ಅನ್ವಯಿಸುವ ಎನ್ಎವಿ ನಿಮಗೆ ಲಭ್ಯವಾಗುತ್ತದೆ. ಒಂದು ರೀತಿಯಲ್ಲಿ ಇದು ನೀವು ಈಗಾಗಲೇ ಅಧಿಕ ಬೆಲೆ ನೀಡಿ ಖರೀದಿಸಿರುವ ಮ್ಯೂಚುವಲ್ ಫಂಡ್ ಯೂನಿಟ್‌ಗಳ ಸರಾಸರಿ ಖರೀದಿ ಬೆಲೆಯನ್ನು ತಗ್ಗಿಸುತ್ತದೆ ಮತ್ತು ಮಾರುಕಟ್ಟೆ ಮತ್ತೆ ಮೇಲ್ಮುಖವಾಗಿ ಸಾಗಿದಾಗ ವೇಗವಾಗಿ ಲಾಭದತ್ತ ಸಾಗಲು ನೆರವಾಗುತ್ತದೆ. ಇದುವೇ ಎಸ್ಐಪಿ ವೈಶಿಷ್ಟ್ಯ. ಒಂದೇ ಬಾರಿ ಹೂಡಿಕೆ ಮಾಡಿ ಹೆಚ್ಚಿನ ನಷ್ಟ ಆಗುವುದನ್ನು ಎಸ್ಐಪಿ ತಡೆಯುತ್ತದೆ. ಮಾತ್ರವಲ್ಲ, ಪ್ರತಿ ದಿನದ ಷೇರುಪೇಟೆಯ ಏರಿಳಿತಗಳನ್ನು ಅರ್ಥೈಸಿ ಹೂಡಿಕೆ ನಿರ್ಧಾರ ಕೈಗೊಳ್ಳಲು ಕಷ್ಟವಾಗುವ ಜನರಿಗೆ ಇದು ಉತ್ತಮ ಹೂಡಿಕೆ ವಿಧಾನ.

**

ಪ್ರಶ್ನೆ: ನಾನು ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನಾನು ಮನೆಯೊಂದನ್ನು ಕಟ್ಟಿಸುತ್ತಿದ್ದು ಮುಂದಿನ ಕೆಲವು ತಿಂಗಳಲ್ಲಿ ಅದರ ನಿರ್ಮಾಣ ಪೂರ್ಣಗೊಳ್ಳಲಿದೆ. ನಂತರ ಒಂದು ಮಹಡಿಯನ್ನು ಬಾಡಿಗೆಗೂ ನೆಲಮಹಡಿಯನ್ನು ಸ್ವಂತ ಉಪಯೋಗಕ್ಕೂ ಬಳಸಲಿದ್ದೇನೆ. ನಾನು ಗೃಹ ನಿರ್ಮಾಣಕ್ಕಾಗಿ ಸುಮಾರು ₹ 50 ಲಕ್ಷ ಸಾಲ ಪಡೆದಿದ್ದು ವರ್ಷಕ್ಕೆ ಸುಮಾರು ₹ 5 ಲಕ್ಷ ಬಡ್ಡಿ ಕಟ್ಟುತ್ತಿದ್ದೇನೆ. ಆದರೆ ಆದಾಯ ತೆರಿಗೆಯಡಿ ₹ 2 ಲಕ್ಷ ಮಾತ್ರ ಬಡ್ಡಿ ವಿನಾಯಿತಿ ಇದೆ ಎಂದು ತಿಳಿದಿದ್ದೇನೆ. ಉಳಿದ ₹ 3 ಲಕ್ಷವನ್ನು ಯಾವುದಾದರೂ ರೀತಿಯಲ್ಲಿ ತೆರಿಗೆ ವಿನಾಯಿತಿಗೆ ಒಳಪಡಿಸುವ ಸಾಧ್ಯತೆ ಇದೆಯೇ?

-ಧನಂಜಯ, ಹೆಬ್ಬಗೋಡಿ

ಉತ್ತರ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24, ಯಾವುದೇ ತೆರಿಗೆದಾರ ಗೃಹ ನಿರ್ಮಾಣಕ್ಕಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಲ್ಲಿ ಆದಾಯ ತೆರಿಗೆ ಲೆಕ್ಕ ಹಾಕುವಾಗ ₹ 2 ಲಕ್ಷದ ತನಕ ವಾರ್ಷಿಕ ಬಡ್ಡಿ ವಿನಾಯಿತಿ ಪಡೆಯಲು ಅವಕಾಶ ನೀಡುತ್ತದೆ. ಮಾಲೀಕರು ಅಥವಾ ಅವರ ಕುಟುಂಬವು ಸ್ವಂತ ವಾಸಕ್ಕೆ ಮನೆಯನ್ನು ಉಪಯೋಗಿಸುತ್ತಿದ್ದರೆ ಈ ಸೌಲಭ್ಯ ಸಿಗುತ್ತದೆ. ಇಂತಹ ಸಂದರ್ಭದಲ್ಲಿ ಆ ಮನೆಯಿಂದ ಶೂನ್ಯ ಆದಾಯ ಎಂದು ಪರಿಗಣಿಸಿ, ಸ್ವಂತ ಮನೆ ಕಟ್ಟಲು ಪಾವತಿಸುವ
₹ 2 ಲಕ್ಷದವರೆಗಿನ ಬಡ್ಡಿಯನ್ನು ನಷ್ಟ ಎಂದು ಪರಿಗಣಿಸಿ ಮಾಲೀಕರ ಯಾವುದೇ ಇತರ ಆದಾಯದೊಡನೆ ವಜಾ ಮಾಡಲಾಗುತ್ತದೆ.

ಮನೆಯ ಬೇರೆ ಬೇರೆ ಮಹಡಿಗಳು ಬಾಡಿಗೆಗೆ ಇದ್ದಾಗ, ಮೇಲೆ ಉಲ್ಲೇಖಿಸಿದ ₹ 2 ಲಕ್ಷದ ಮಿತಿ ಅನ್ವಯಿಸುವುದಿಲ್ಲ. ಬದಲಾಗಿ, ಆಯಾ ಮನೆಗೆ ಸಂಬಂಧಿಸಿದ ಬಡ್ಡಿ ಮೊತ್ತಕ್ಕೆ ಸಂಪೂರ್ಣ ವಿನಾಯಿತಿ ಸಿಗುತ್ತದೆ. ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ, ನಿಮ್ಮ ಸ್ವಂತಕ್ಕಾಗಿ ಬಳಸುವ ಮನೆ ಸಾಲದ ಮೇಲೆ ಕಟ್ಟುವ ಬಡ್ಡಿ ಮೊತ್ತಕ್ಕೆ ₹ 2 ಲಕ್ಷದ ತನಕ ಪೂರ್ಣ ವಿನಾಯಿತಿ ಇದೆ. ಮೊದಲ ಮಹಡಿಯನ್ನು ಬಾಡಿಗೆಗೆ ಕೊಟ್ಟ ಪಕ್ಷದಲ್ಲಿ, ಬಾಡಿಗೆ ಆದಾಯ ಘೋಷಿಸುವಾಗ ನೀವು ಕಟ್ಟುವ ಹೆಚ್ಚುವರಿ ಬಡ್ಡಿಯ ಸಂಪೂರ್ಣ ಲಾಭ ಪಡೆಯಬಹುದು. ಮಾತ್ರವಲ್ಲದೆ, ನೀವು ಮನೆ ಸಾಲ ಪಡೆದು ನಿರ್ಮಾಣ ಪೂರ್ಣಗೊಳಿಸುವ ತನಕದ ಬಡ್ಡಿ ಮೊತ್ತವನ್ನು, ಮೇಲೆ ಉಲ್ಲೇಖಿಸಿದ ನಿಯಮಕ್ಕೊಳಪಟ್ಟು, ತೆರಿಗೆ ಲೆಕ್ಕ ಹಾಕುವಾಗ ಮುಂದಿನ ಐದು ವರ್ಷ ಸಮಾನವಾಗಿ ವಿನಾಯಿತಿ ಪಡೆಯಬಹುದು. ಇಷ್ಟೇ ಅಲ್ಲದೆ, ನೀವು ಮುಂದಿನ ದಿನಗಳಲ್ಲಿ ಬಾಡಿಗೆಗೆ ಕೊಡುವ ಮನೆಗೆ ಕಟ್ಟುವ ಆಸ್ತಿ ತೆರಿಗೆಗೂ ವಿನಾಯಿತಿ ಇದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು