ಮಂಗಳವಾರ, ನವೆಂಬರ್ 24, 2020
25 °C

ಸೂತ್ರಬದ್ಧ ಹೂಡಿಕೆ ಇರಲಿ

ವಿಜಯ್‌ ಜೋಶಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಖರ್ಚುಗಳನ್ನೆಲ್ಲ ಕಳೆದ ನಂತರ ಉಳಿಯುವ ಹಣವನ್ನು ಉಳಿತಾಯ ಅಥವಾ ಹೂಡಿಕೆಗೆ ಮೀಸಲಿಡುವುದು ಸರಿಯಲ್ಲ. ಹೂಡಿಕೆಗಾಗಿ ಒಂದಿಷ್ಟು ಹಣವನ್ನು ತೆಗೆದಿರಿಸಿ, ನಂತರ ಉಳಿಯುವ ಹಣವನ್ನು ನಿತ್ಯದ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಬೇಕು’ ಎನ್ನುವುದು ಹೂಡಿಕೆದಾರ ವಾರನ್ ಬಫೆಟ್ ಅವರ ಜನಪ್ರಿಯ ಮಾತು.

ಈ ಮಾತು ಸಾಮಾನ್ಯ ಸಂದರ್ಭಗಳಲ್ಲಿ ಬರಿಯ ಮಾತಾಗಿಯಷ್ಟೇ ಕೇಳಿಸಿದ್ದಿದೆ. ಆದರೆ, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅದೆಷ್ಟು ಮೌಲ್ಯಯುತವಾಗಿದ್ದಾಗಿತ್ತು ಎಂಬುದು ಕೆಲವರಿಗಾದರೂ ಅನಿಸಿರಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ: ಉಳಿತಾಯ ಇದ್ದವರು ಉಳಿದುಕೊಂಡವರು, ಉಳಿತಾಯದ ಹಣ ಇಲ್ಲದವರು ಕಡುಕಷ್ಟ ಅನುಭವಿಸಿದರು.

ಉಳಿತಾಯ ಮಾಡಬೇಕು ಎಂಬ ಮಾತಿಗೆ ತಕ್ಷಣಕ್ಕೆ ಎದುರಾಗುವ ಪ್ರಶ್ನೆ, ಎಲ್ಲಿ ಉಳಿತಾಯ ಮಾಡಬೇಕು, ಎಷ್ಟು ಉಳಿತಾಯ ಮಾಡಬೇಕು ಎಂಬುದು. ತಿಂಗಳ ಆದಾಯದ ಶೇಕಡ 20ರಷ್ಟನ್ನಾದರೂ ಕಡ್ಡಾಯವಾಗಿ ಉಳಿತಾಯ ಮಾಡಲು ಸಾಧ್ಯವಾದರೆ ಒಳ್ಳೆಯದು ಎಂಬ ಮಾತನ್ನು ತಜ್ಞರು ಹೇಳುತ್ತಾರೆ, ಅನುಭವಿಗಳು ಅನುಮೋದಿಸುತ್ತಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 7.34ರಷ್ಟು ಇತ್ತು. ಆದರೆ, ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವು ಶೇಕಡ 6ರ ಆಸುಪಾಸಿನಲ್ಲಿ ಇದೆ. ಹಣದುಬ್ಬರದ ಪ್ರಮಾಣಕ್ಕಿಂತ ಠೇವಣಿ ಮೇಲಿನ ಬಡ್ಡಿ ಕಡಿಮೆ ಇರುವ ಸಂದರ್ಭ ಇದು. ಹಣವನ್ನು ಠೇವಣಿ ರೂಪದಲ್ಲಷ್ಟೇ ಇರಿಸಿದರೆ, ಕಾಲಕ್ರಮೇಣ ಹಣದ ಮೌಲ್ಯವೇ ಕಡಿಮೆ ಆಗಿಬಿಡಬಹುದು. ಹಾಗಾಗಿ, ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಲಾಭ ತಂದುಕೊಡುವ ಸಾಮರ್ಥ್ಯ ಇರುವ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬೇಕು ಎಂದು ಹಣಕಾಸು ತಜ್ಞರು ಹೇಳುತ್ತಾರೆ.

ಸದಾ ಏರಿಳಿತ ಕಾಣುವ ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡುವುದು ಸೂಕ್ತ ಎಂಬುದು ಸಾಮಾನ್ಯ ಪ್ರಶ್ನೆ. ಇದಕ್ಕೆ ಉತ್ತರ, ಪ್ರಶ್ನೆ ಕೇಳುವ ವ್ಯಕ್ತಿಯ ವಯಸ್ಸನ್ನು ಆಧರಿಸಿರುತ್ತದೆ! ವ್ಯಕ್ತಿಯ ಈಗಿನ ವಯಸ್ಸನ್ನು 100ರಿಂದ ಕಳೆದಾಗ ಎಷ್ಟು ಮೊತ್ತ ಸಿಗುತ್ತದೆಯೋ, ಅಷ್ಟು ಪ್ರಮಾಣದ ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಉದಾಹರಣೆಗೆ, ವ್ಯಕ್ತಿಯೊಬ್ಬನಿಗೆ ಈಗ 30 ವರ್ಷ ವಯಸ್ಸು ಎಂದಾದಲ್ಲಿ, ಆತ ತನ್ನ ಒಟ್ಟು ಉಳಿತಾಯದಲ್ಲಿ ಶೇಕಡ 70ರಷ್ಟನ್ನು (100ರಿಂದ 30ನ್ನು ಕಳೆದಾಗ ಸಿಗುವ ಮೊತ್ತ) ಈಕ್ವಿಟಿಗಳ ಮೇಲೆ ಹೂಡಿಕೆ ಮಾಡಬಹುದು. ಇನ್ನುಳಿದ ಶೇಕಡ 30ರಷ್ಟನ್ನು ನಿಶ್ಚಿತ ಠೇವಣಿಗಳಲ್ಲಿ ಅಥವಾ ಸಾಲಪತ್ರಗಳಲ್ಲಿ ಹೂಡಿಕೆ ಮಾಡಬಹುದು.

ವ್ಯಕ್ತಿಯ ವಯಸ್ಸು 50 ಎಂದಾದಲ್ಲಿ, ಶೇಕಡ 50ರಷ್ಟನ್ನು ಮಾತ್ರ ಈಕ್ವಿಟಿಗಳ ಮೇಲೆ ಹೂಡಿಕೆ ಮಾಡಬೇಕು. ವ್ಯಕ್ತಿಗೆ 70 ವರ್ಷ ವಯಸ್ಸಾದಾಗ ಆತ ಈಕ್ವಿಟಿಗಳ ಮೇಲಿನ ಹೂಡಿಕೆಯನ್ನು ಶೇಕಡ 30ರಷ್ಟಕ್ಕೆ ಇಳಿಸಿ, ಇನ್ನುಳಿದ ಶೇಕಡ 70ನ್ನು ನಿಶ್ಚಿತ ಠೇವಣಿಗಳಲ್ಲಿ ಇಟ್ಟುಕೊಳ್ಳುವುದು ಉತ್ತಮ. ಈ ಸೂತ್ರವನ್ನು ಎಲ್ಲರೂ ಪಾಲಿಸಬೇಕು ಎಂದೇನೂ ಇಲ್ಲ. ಮಾರುಕಟ್ಟೆಯ ಏರಿಳಿತ ಜೀರ್ಣಿಸಿಕೊಳ್ಳುವ ಶಕ್ತಿ ಇರುವವರು ಹೆಚ್ಚಿನ ಮೊತ್ತವನ್ನು ಅಲ್ಲಿ ಹೂಡಿಕೆ ಮಾಡಬಹುದು.

ನೇರ ಹೂಡಿಕೆ?

ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಕೆಲವು ಆ್ಯಪ್‌ಗಳು ಅತ್ಯಂತ ಸುಲಭವಾಗಿ, ಮನೆಯಲ್ಲಿ ಕುಳಿತೇ ಡಿಮ್ಯಾಟ್‌ ಖಾತೆ ತೆರೆಯುವ, ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಸೌಲಭ್ಯ ನೀಡುತ್ತಿವೆ. ಇದು, ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವ ಆಸೆಯನ್ನು ಹಲವರಲ್ಲಿ ಹುಟ್ಟಿಸಬಹುದು. ಆದರೆ, ಕಂಪನಿಗಳ ಶಕ್ತಿ–ದೌರ್ಬಲ್ಯಗಳನ್ನು ಖುದ್ದಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲದಿದ್ದರೆ ಷೇರುಗಳಲ್ಲಿ ನೇರ ಹೂಡಿಕೆ ಬೇಡವೇ ಬೇಡ ಎಂದು ಹಣಕಾಸು ತಜ್ಞರು ಎಚ್ಚರಿಸುತ್ತಾರೆ.

ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಹೆಚ್ಚು ಸುರಕ್ಷಿತ. ಮ್ಯೂಚುವಲ್‌ ಫಂಡ್‌ಗಳನ್ನು ನಿರ್ವಹಿಸುವವರು, ಪ್ರತಿ ಕಂಪನಿಯ ಶಕ್ತಿ–ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು ಹಣ ಹೂಡಿಕೆ ಮಾಡಿ ಗರಿಷ್ಠ ಲಾಭವನ್ನು ತಂದುಕೊಡುವ ಹೊಣೆ ಹೊತ್ತಿರುತ್ತಾರೆ. ಹಾಗಾಗಿ, ಷೇರು ಮಾರುಕಟ್ಟೆಯ ಏರಿಳಿತಗಳ ಅರಿವು ಇಲ್ಲದವರಿಗೆ ನೇರವಾಗಿ ಷೇರು ವಹಿವಾಟು ಸೂಕ್ತವಲ್ಲ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು