ಶನಿವಾರ, ಅಕ್ಟೋಬರ್ 24, 2020
22 °C

ಪ್ರಶ್ನೋತ್ತರ: 2019–20ನೇ ವರ್ಷದ ಆದಾಯ ತೆರಿಗೆ ಸಲ್ಲಿಸಲು ಸೂಕ್ತ ಮಾಹಿತಿ ನೀಡಿ

ಯು.ಪಿ. ಪುರಾಣಿಕ್‌ Updated:

ಅಕ್ಷರ ಗಾತ್ರ : | |

Prajavani

ಪ್ರಶ್ನೆ: 2019–20ನೇ ವರ್ಷದ ಆದಾಯ ತೆರಿಗೆ ಸಲ್ಲಿಸಲು ಸೂಕ್ತ ಮಾಹಿತಿ ನೀಡಬೇಕಾಗಿ ವಿನಂತಿ. ನಾನು ನಿವೃತ್ತ ಶಿಕ್ಷಕ. ವಯಸ್ಸು 71 ವರ್ಷ. ಕಮ್ಯುಟೇಶನ್‌ ಹೊರತುಪಡಿಸಿ ವಾರ್ಷಿಕ ಆದಾಯ ₹ 3,31,497. ಕಮ್ಯುಟೇಷನ್‌ ಸಹಿತ ಆದಾಯ ₹ 3,62,841. ಉಳಿತಾಯ ಖಾತೆಯಲ್ಲಿ ಬಂದಿರುವ ಬಡ್ಡಿ ₹ 923. ಇತರೆ ಯಾವುದೇ ಆದಾಯವಿಲ್ಲ.

ಎಂ.ಯು. ಪಾಟೀಲ್, ಯಡಗೋಡು

ಉತ್ತರ: ವಾರ್ಷಿಕ ಆದಾಯ ₹ 5 ಲಕ್ಷದವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಇದೇ ವೇಳೆ, ನೀವು ಪಿಂಚಣಿದಾರರಾದ್ದರಿಂದ ಸೆಕ್ಷನ್‌ 16 (1ಎ) ಅಡಿಯಲ್ಲಿ ₹ 50 ಸಾವಿರ ವಿನಾಯಿತಿ ಇದೆ. ತೆರಿಗೆ ಲೆಕ್ಕಾಚಾರ ಮಾಡುವಾಗ ವ್ಯಕ್ತಿ ನಿಜವಾಗಿ ಪಡೆದ ಮೊತ್ತವನ್ನು ಪರಿಗಣಿಸಬೇಕಾಗುತ್ತದೆ. ಕಮ್ಯುಟೇಷನ್‌ ಹಣವನ್ನು ನಿಮ್ಮ 75 ವರ್ಷದ ನಂತರ ಪಿಂಚಣಿಗೆ ಸೇರಿಸಿಕೊಡುವುದರಿಂದ ಸದ್ಯ ನೀವು ಕಮ್ಯುಟೇಷನ್‌ ಹೊರತುಪಡಿಸಿ ಬರುವ ಆದಾಯ ಮಾತ್ರ ಪರಿಗಣಿಸಬಹುದು.

ನಿಮ್ಮ ವಾರ್ಷಿಕ ಆದಾಯ ₹ 3,31,497ರಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್ (ಸೆಕ್ಷನ್‌ 16 (1ಎ)) ₹ 50 ಸಾವಿರ ಕಳೆದಾಗ ಬರುವ ಮೊತ್ತ ₹ 2,81,497. ಈಗಾಗಲೇ ನಿಮಗೆ ₹ 5 ಲಕ್ಷಗಳ ತನಕ ತೆರಿಗೆ ವಿನಾಯಿತಿ ಇರುವುದರಿಂದ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಸೆಕ್ಷನ್‌ 80 ಟಿಟಿಎ ಆಧಾರದ ಮೇಲೆ ಉಳಿತಾಯ ಖಾತೆಯಲ್ಲಿ ಬರುವ ಗರಿಷ್ಠ ಬಡ್ಡಿ ₹ 10 ಸಾವಿರದ ತನಕ ವಿನಾಯಿತಿ ಇದೆ. ಹೀಗಾಗಿ ಉಳಿತಾಯ ಖಾತೆಯಲ್ಲಿ ಬಂದಿರುವ ₹ 923 ಬಡ್ಡಿ ಕೂಡಾ ವಿನಾಯಿತಿ ಪಡೆದಿದೆ. ನಿಮ್ಮ ಒಟ್ಟು ಆದಾಯ (Gross Income) ₹ 3 ಲಕ್ಷ ದಾಟಿರುವುದರಿಂದ ಈ ಬಾರಿ ನವೆಂಬರ್‌ 30ರ ಒಳಗಾಗಿ ಐ.ಟಿ. ರಿಟರ್ನ್ಸ್‌ ಸಲ್ಲಿಸಿ. ಮುಂದಿನ ವರ್ಷದಿಂದ ಜುಲೈ 31ರ ಒಳಗಾಗಿ ಐ.ಟಿ. ರಿಟರ್ನ್ಸ್‌ ತುಂಬಬೇಕಾಗಲಿದೆ, ನೆನಪಿರಲಿ.

**

ಪ್ರಶ್ನೆ: ನನ್ನ ವಯಸ್ಸು 13 ವರ್ಷ. ನಾನು ಸೈಂಟ್‌ ಪೌಲ್ಸ್‌ ಇಂಗ್ಲಿಷ್‌ ಸ್ಕೂಲಿನಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದೇನೆ. ನೀವು ಪ್ರತಿ ಬುಧವಾರ ಪ್ರಜಾವಾಣಿಯಲ್ಲಿ ಬರೆಯುವುದು, ಟಿ.ವಿ. ಹಾಗೂ ಆಕಾಶವಾಣಿ
ಯಲ್ಲಿ ಕಾರ್ಯಕ್ರಮ ಕೊಡುವ ಬಗ್ಗೆ ನನ್ನ ತಂದೆ ಹೇಳಿದರು. ನಾನು ಯಾವ ಬ್ಯಾಂಕ್‌ನಲ್ಲಿಯೂ ಖಾತೆ ಹೊಂದಿಲ್ಲ. ನನ್ನ ತಂದೆ ತಾಯಿ ನನ್ನ ಮುಂದಿನ ಉಳಿತಾಯಕ್ಕೆ ಒಂದು ಬ್ಯಾಂಕ್‌ ಖಾತೆ ತೆರೆಯಬೇಕೆಂದಿದ್ದಾರೆ. ಉಳಿತಾಯದ ವಿಚಾರದಲ್ಲಿ ನನಗೆ ತಿಳಿಸಿಕೊಡಿ.

- ಉಮಾಗ್ ಎನ್‌.

ಉತ್ತರ: ನಿನ್ನ ಈ ಸಣ್ಣ ವಯಸ್ಸಿನಲ್ಲಿಯೇ ಹಣ ಉಳಿಸಲು ನೀನು ಮನಸ್ಸು ಮಾಡಿದ್ದು ನನಗೆ ತುಂಬಾ ಖುಷಿ ತಂದಿದೆ. ನಿನ್ನ ವಯಸ್ಸು 13 ಆಗಿರುವುದರಿಂದ ನಿನ್ನ ತಂದೆ ತಾಯಿಯ ಸಹಾಯದಿಂದ ನಿನ್ನ ಹೆಸರಿನಲ್ಲಿ ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ ಒಂದರಲ್ಲಿ ಉಳಿತಾಯ ಖಾತೆ ಪ್ರಾರಂಭ ಮಾಡು. ನಿನ್ನ ತಂದೆ ತಾಯಿ, ಬಂಧುಗಳು ಅಥವಾ ಇನ್ನಿತರರು ಹಬ್ಬ, ಬರ್ತ್‌ಡೇ ಅಥವಾ ಇನ್ನಿತರ ಸಂದರ್ಭಗಳಲ್ಲಿ ಇನಾಮು (Gift) ಕೊಡುವ ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಜಮಾ ಮಾಡುತ್ತಾ ಬಾ. ಹೀಗೆ ಉಳಿತಾಯ ಖಾತೆಯಲ್ಲಿ ಕೂಡಿಟ್ಟ ಹಣ ₹ 1,000 ಆದಾಗ ಅದನ್ನು 10 ವರ್ಷಗಳ ಅವಧಿಗೆ ಒಮ್ಮಲೇ ಬಡ್ಡಿ ಬರುವ ಅವಧಿ ಠೇವಣಿಯಲ್ಲಿ ಇರಿಸು. ಈ ಉಳಿತಾಯದ ಗೀಳು ಜೀವನದುದ್ದಕ್ಕೂ ಮುಂದುವರಿಯಲಿ.

**

ಪ್ರಶ್ನೆ: ನಾನು ಹಿರಿಯ ನಾಗರಿಕ. 1997ರಲ್ಲಿ ₹ 40 ಸಾವಿರ ಕೊಟ್ಟು ಒಂದು ನಿವೇಶನ ಕೊಂಡಿದ್ದೆ. ನವೆಂಬರ್‌ 2019ರಲ್ಲಿ ₹ 17 ಲಕ್ಷಕ್ಕೆ ಮಾರಾಟ ಮಡಿದ್ದೇನೆ. ತೆರಿಗೆ ಉಳಿಸಲು ಈ ಹಣದಿಂದ ಇನ್ನೊಂದು ನಿವೇಶನ ಕೊಳ್ಳಬಹುದೇ?

- ಹೆಸರು ಬೇಡ, ಮೈಸೂರು

ಉತ್ತರ: ಬಂಡವಾಳ ವೃದ್ಧಿ ತೆರಿಗೆ ಉಳಿಸಲು ಒಂದು ಸ್ಥಿರ ಆಸ್ತಿ ಮಾರಾಟ ಮಾಡಿ ಮತ್ತೊಂದು ನಿವೇಶನದಲ್ಲಿ ಇರುವ ಮನೆ ಕೊಳ್ಳಬಹುದು ಅಥವಾ ನಿವೇಶನವಿದ್ದರೆ ಅಲ್ಲಿ ಮನೆ ಕಟ್ಟಬಹುದು ಅಥವಾ ಸೆಕ್ಷನ್‌ 54 ಇಸಿ ಆಧಾರದ ಮೇಲೆ ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಎಲೆಕ್ಟ್ರಿಫಿಕೇಷನ್‌ ಇಲ್ಲಿ ಗರಿಷ್ಠ ₹ 50 ಲಕ್ಷಗಳ ನತಕ ಹಣ ಹೂಡಬಹುದು. ನಿವೇಶನ ಕೊಂಡರೆ ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ. ಸದ್ಯ, ಬಂಡವಾಳ ವೃದ್ಧಿ ತೆರಿಗೆ ಶೇಕಡ 20ರಷ್ಟು ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು