ಶನಿವಾರ, ಆಗಸ್ಟ್ 20, 2022
21 °C

ಪ್ರಶ್ನೋತ್ತರ: ಮಗನ ಓದಿಗೆ ನೆರವಾಗಲು ಉತ್ತಮ ಉಳಿತಾಯ ಯೋಜನೆ ತಿಳಿಸಿ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ಉಳಿತಾಯ

*ಪ್ರಶ್ನೆ: ನಾನು ಕೃಷಿಕ. ನನಗೆ ಒಂದು ವರ್ಷ ವಯಸ್ಸಿನ ಮಗನಿದ್ದಾನೆ. ಮಗನ ಓದಿಗೆ ನೆರವಾಗಲು ಉತ್ತಮ ಉಳಿತಾಯ ಯೋಜನೆ ತಿಳಿಸಿ. ನನ್ನ ಶಾಲಾ ದಿನಗಳಿಂದಲೇ ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ನಿಮಗೆ ಪ್ರಶ್ನೆ ಕೇಳುತ್ತಿದ್ದೇನೆ. ತಿಂಗಳಿಗೆ ₹ 6 ಸಾವಿರ ಉಳಿಸಲು ನನ್ನಿಂದ ಸಾಧ್ಯ.

ಸಂಗಮೇಶ್‌, ತುಮಕೂರು

ಉತ್ತರ: ನೀವು ಮಾಸಿಕ ₹ 6 ಸಾವಿರ ಉಳಿತಾಯ ಮಾಡಲು ಸಾಧ್ಯವಾದಲ್ಲಿ, ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ 10 ವರ್ಷಗಳ ಆರ್‌.ಡಿ.ಯನ್ನು ತಕ್ಷಣ ₹ 6 ಸಾವಿರದಿಂದ ಪ್ರಾರಂಭಿಸಿ. 10 ವರ್ಷ ಮುಗಿಯುತ್ತಲೇ ಬರುವ ಮೊತ್ತವನ್ನು ಅದೇ ಬ್ಯಾಂಕ್‌ನಲ್ಲಿ ಐದು ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ. 10 ವರ್ಷ ಮುಗಿಯುತ್ತಲೇ ಇನ್ನೊಂದು ಆರ್‌.ಡಿ. 5 ವರ್ಷಗಳ ಅವಧಿಗೆ ಇರಿಸಿ. ಈ ಯೋಜನೆಯಲ್ಲಿ 15 ವರ್ಷ ಮುಗಿಯುತ್ತಲೇ ನೀವು ಶೇ 6 ಬಡ್ಡಿದರದಲ್ಲಿ ₹ 17,49,064 ಈ ಕೆಳಗೆ ವಿವರಣೆ ನೀಡಿದಂತೆ ಪಡೆಯುತ್ತೀರಿ.

ಆರ್‌.ಡಿ. ಎಂಬುದು ಪ್ರತಿ ತಿಂಗಳೂ ತುಂಬುವ ಕ್ರಮಬದ್ಧವಾದ ಠೇವಣಿ. ಮೇಲಿನಂತೆ ₹ 6,000 ಪ್ರತಿ ತಿಂಗಳೂ ತುಂಬುತ್ತಾ ಬಂದಲ್ಲಿ 10 ವರ್ಷಗಳಲ್ಲಿ ₹ 9,86,500 ಪಡೆಯುವಿರಿ. ಈ ಮೊತ್ತ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷ ಇರಿಸಿದಾಗ ₹ 13,28,716 ಪಡೆಯುವಿರಿ. ನೀವು ಪುನಃ 5 ವರ್ಷ ₹ 6,000 ಆರ್‌.ಡಿ. ಮಾಡಿದಾಗ ₹ 4,20,348 ಬರುತ್ತದೆ (₹ 13,28,716 + 4,20,348 = ₹17,49,064) ಒಟ್ಟಿನಲ್ಲಿ ನಿಮ್ಮ ನಿರಂತರ ₹ 6,000 ಮಾಸಿಕ ಹೂಡಿಕೆ ₹ 17,49,064 ಮೊತ್ತವಾಗಿ 15ನೇ ವರ್ಷಕ್ಕೆ ನಿಮ್ಮ ಕೈಸೇರುತ್ತದೆ. ನಿಮ್ಮ ಮಗುವಿಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

*ಪ್ರಶ್ನೆ: ನಾನು 1995ರಲ್ಲಿ ₹ 1,25,000 ಕೊಟ್ಟು ನಿವೇಶನ ಕೊಂಡಿದ್ದೆ. ಈಗ ಅದನ್ನು ಮಾರಾಟ ಮಾಡಿದರೆ ₹ 72 ಲಕ್ಷ ಬರಲಿದೆ. ಬಂಡವಾಳ ವೃದ್ಧಿ ತೆರಿಗೆ ಲೆಕ್ಕ ಹಾಕುವ ಮುನ್ನ ಏನೆಲ್ಲಾ ಖರ್ಚು ವೆಚ್ಚ ಲಾಭದಿಂದ ಕಳೆಯಲು ಅವಕಾಶವಿದೆ? ಹಣದುಬ್ಬರ ವೆಚ್ಚದ ಮೂಲ ವರ್ಷ 2000 ಆದ್ದರಿಂದ ಆ ವರ್ಷಕ್ಕೂ ಮೊದಲು ಕೊಂಡವರು ಏನು ಮಾಡಬೇಕು? REC-NHAI ಬಾಂಡ್‌ನಲ್ಲಿ ತೊಡಗಿಸಿದ ನಂತರ ಬರುವ ಮೊತ್ತ, ಬೇರೊಂದು ಆಸ್ತಿಯಲ್ಲಿ ಹಾಕಬೇಕಾದೀತೆ?

ವಿನಾಯಕ, ಚಿತ್ರದುರ್ಗ

ಉತ್ತರ: ನೀವು ತಿಳಿಸಿದಂತೆ ಹಣದುಬ್ಬರ ವೆಚ್ಚದ ಮೂಲ ವರ್ಷ (cost of inflation index-base year) 2000 ಎಂದು ಪರಿಗಣಿಸಲಾಗಿದೆ. 2000ನೇ ಇಸವಿಗೂ ಮುನ್ನ ಆಸ್ತಿ ಕೊಂಡಲ್ಲಿ, ಆಸ್ತಿಯ ಸರ್ಕಾರಿ ಬೆಲೆ (Sub registrar ಕಟ್ಟುವ ಬೆಲೆ) 31–3–2000ಕ್ಕೆ ಎಷ್ಟು ಎಂದು ತಿಳಿದು ಆ ಮೊತ್ತದಿಂದ C.I.I ಕಂಡುಕೊಳ್ಳಬಹುದು. ನಿಮ್ಮ ಆಸ್ತಿ 31–3–2000ಕ್ಕೆ ₹ 18 ಲಕ್ಷವಾದಲ್ಲಿ ಈ ಮೊತ್ತದಿಂದಲೇ ಲೆಕ್ಕ ಹಾಕಬಹುದು. ಬಂಡವಾಳವೃದ್ಧಿ ತೆರಿಗೆ ಕೊಡುವ ಮುನ್ನ ಬಂದಿರುವ ಲಾಭಾಂಶದಿಂದ

1) ಆಸ್ತಿ ಬೆಲೆ 2) ನೋಂದಣಿ ವೆಚ್ಚ 3) ಕಾನೂನು ಸಲಹೆ ಖರ್ಚು 4) ಬ್ರೋಕರೇಜ್‌ 5) ಆಸ್ತಿ ಕೊಂಡ ನಂತರ ಆಸ್ತಿಯಲ್ಲಿ ಮಾಡಿರುವ ಹೂಡಿಕೆ (ಉದಾ: ಕಾಂಪೋಂಡ್‌ ವಾಲ್‌, ಮನೆ ಕಟ್ಟಿದಲ್ಲಿ, ಡೆವಲಪ್‌ಮೆಂಟ್‌ ಚಾರ್ಜ್‌ ಇತ್ಯಾದಿ) ಇವನ್ನೆಲ್ಲಾ ಕಳೆಯಬಹುದು.

REC-NHAI ಬಾಂಡ್‌ನ ಗರಿಷ್ಠ ಮಿತಿ ₹ 5 ಲಕ್ಷ. 5 ವರ್ಷ ಮುಗಿದು ವಾಪಸ್ ಪಡೆಯುವಾಗ ಪುನಃ ಬೇರೊಂದೆಡೆ ತೊಡಗಿಸಬೇಕಿಲ್ಲ. ಬಂಡವಾಳ ವೃದ್ಧಿ ತೆರಿಗೆ ಉಳಿಸಲು ಹಲವು ದಾರಿಗಳಿವೆ. ನನ್ನ ಮೊಬೈಲ್‌ ಸಂಖ್ಯೆ 94480 15300ಗೆ ನೇರವಾಗಿ ಸಂಪರ್ಕಿಸಿ.


ಯು.ಪಿ. ಪುರಾಣಿಕ್

*ಪ್ರಶ್ನೆ: ನಾನು ಸರ್ಕಾರಿ ನೌಕರ. ವಯಸ್ಸು 56 ವರ್ಷ. ನನ್ನ ಗೃಹಸಾಲದಲ್ಲಿ ₹ 4,27,667 ತೀರಿಸಲಿಕ್ಕಿದೆ. ಇಎಂಐ ಮೊತ್ತ ₹ 5,600. ಅಸೆಸ್‌ಮೆಂಟ್‌ ವರ್ಷದಲ್ಲಿ ₹ 95,690 ಟಿಡಿಎಸ್‌ ಮಾಡಿದ್ದಾರೆ. ಗೃಹ ಸಾಲ ತಿಂಗಳ ಕಂತಿನ ಮೂಲಕ ತುಂಬುತ್ತಾ ಬರಲೇ ಅಥವಾ ಸಂಪೂರ್ಣ ತೀರಿಸಲೇ? ಮನೆಯ ಮೇಲೊಂದು ಮನೆ ಕಟ್ಟುವ ಅಭಿಪ್ರಾಯವಿದೆ. ಈ ಸಾಲ ತೀರಿಸಿ ಬೇರೆ ಸಾಲಕ್ಕೆ ಅರ್ಜಿ ಹಾಕಲೇ? ನನಗೆ ಇಬ್ಬರು ಮಕ್ಕಳು. ಮೊದಲನೆಯವನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾನೆ. ಇನ್ನೊಬ್ಬ ಕಾಲೇಜಿನಲ್ಲಿ ಓದುತ್ತಿದ್ದಾನೆ. ಹೆಂಡತಿ ಗೃಹಿಣಿ. ಇದುವರೆಗೆ ಬ್ಯಾಂಕ್‌ ಠೇವಣಿಯಲ್ಲಿ ₹ 10 ಲಕ್ಷ ಇರಿಸಿದ್ದೇನೆ. ಗೃಹ ಸಾಲವಿರುವಾಗ ಮನೆ ಕಟ್ಟುವ ಅಥವಾ ಸ್ವಲ್ಪ ಬದಲಾವಣೆ ಮಾಡಲು ಬ್ಯಾಂಕ್‌ನಿಂದ ಪ‍ರವಾನಗಿ ಬೇಕೆ? ನನ್ನ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಸಲಹೆ ನೀಡಿ.

–ಕೃಷ್ಣಮೂರ್ತಿ, ಬೆಂಗಳೂರು

ಉತ್ತರ: ನಿಮ್ಮ ಮುಂದಿನ ಸೇವಾವಧಿ ಬರೇ ನಾಲ್ಕು ವರ್ಷ. ಅಷ್ಟರಲ್ಲಿ ನಿಮ್ಮ ಎರಡನೇ ಮಗ ಓದು ಮುಗಿಸಿ ಕೆಲಸಕ್ಕೆ ಸೇರಬಹುದು. ನಿಮ್ಮ ಮಾಸಿಕ ಸಂಬಳ–ಆದಾಯ ತಿಳಿಸಿಲ್ಲ. ₹ 95,690 ಮೂಲ ಆದಾಯದಲ್ಲಿ ತೆರಿಗೆ ಮುರಿದಿರುವುದನ್ನು ನೋಡುವಾಗ ನೀವು ತೆರಿಗೆ ಉಳಿಸಲು ಸೆಕ್ಷನ್‌ 80 ಸಿ ಆಧಾರದ ಮೇಲೆ ಹೆಚ್ಚಿನ ಉಳಿತಾಯ ಮಾಡಿದಂತಿಲ್ಲ. ಇದುವರೆಗಿನ ನಿಮ್ಮ ಉಳಿತಾಯ ಕೂಡಾ ಬರೇ ₹ 10 ಲಕ್ಷ. ನೀವು ಪ್ರಾರಂಭದಿಂದಲೇ ಹೆಚ್ಚಿನ ಉಳಿತಾಯಕ್ಕೆ ಮಹತ್ವ ಕೊಟ್ಟಂತಿಲ್ಲ. ಇನ್ನು ಮುಂದಾದರೂ ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ಉಳಿತಾಯ ಮಾಡಿ. ಜೊತೆಗೆ ಮಾಸಿಕ ₹ 20 ಸಾವಿರ ಆರ್‌.ಡಿ. ನಾಲ್ಕು ವರ್ಷಗಳ ಅವಧಿಗೆ ಮಾಡಿ. ಗೃಹ ಸಾಲ ನಿವೃತ್ತಿ ತನಕ ಇರಲಿ. ಇಲ್ಲಿ ನೀವು ಕೊಡುವ ಬಡ್ಡಿ ಕೂಡಾ ಕಡಿಮೆ ಹಾಗೂ ಕೊಡುವ ಬಡ್ಡಿ ಸೆಕ್ಷನ್‌ 24 (ಬಿ) ಆಧಾರದ ಮೇಲೆ ತೆರಿಗೆ ಉಳಿಸಲು ಅನುಕೂಲವಾಗುತ್ತದೆ. ನಿಮಗೆ ಬರೇ 4 ವರ್ಷ ಸೇವಾವಧಿ ಇದ್ದು, ಇನ್ನೊಂದು ಗೃಹ ಸಾಲ ಪಡೆಯುವುದು ಸೂಕ್ತವಲ್ಲ. ಇದ್ದ ಕಟ್ಟಡವನ್ನು ಬದಲಾವಣೆ ಮಾಡಲು ಗೃಹ ಸಾಲ ಇರುವುದರಿಂದ ಬ್ಯಾಂಕ್‌ನ ಪರವಾನಗಿ ಬೇಕಾಗುತ್ತದೆ. ನಿವೃತ್ತಿಯಿಂದ ಬರುವ ಮೊತ್ತದಲ್ಲಿ ಮನೆಯ ಮೇಲೆ ಮೊತ್ತೊಂದು ಮನೆ ಕಟ್ಟಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು