ಭಾನುವಾರ, ಮಾರ್ಚ್ 26, 2023
24 °C

ಹಣಕಾಸು ವಿಚಾರ: ಪ್ರಶ್ನೋತ್ತರ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ನಾರಾಯಣಪ್ಪ, ನೆಲಮಂಗಲ

l ಪ್ರಶ್ನೆ: ಬಂಡವಾಳ ವೃದ್ಧಿ ತೆರಿಗೆ ಉಳಿಸಲು ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಲು ತಿಳಿಸುತ್ತೀರಿ. ಇದರ ಅವಧಿ, ಬಡ್ಡಿದರ, ಬಡ್ಡಿಗೆ ತೆರಿಗೆ, ಅವಧಿ ಮುಗಿದು ಬರುವ ಮೊತ್ತಕ್ಕೆ ಬಡ್ಡಿ ಬಗ್ಗೆ ತಿಳಿಸಿ. ನಾನು ಹಿರಿಯ ನಾಗರಿಕ. ಎನ್‌ಎಚ್‌ಎಐ/ಆರ್‌ಇಸಿ ಬದಲಾಗಿ ಅಂಚೆ ಕಚೇರಿ, ಹಿರಿಯ ನಾಗರಿಕರ ಠೇವಣಿ, ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ಹಣ ಇರಿಸಬಹುದೇ? ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸುವ ಮೊತ್ತ ₹ 50 ಲಕ್ಷವೇ ಆಗಿರಬೇಕೇ, ಕಡಿಮೆ ಮೊತ್ತವನ್ನು ತೊಡಗಿಸಲು ಅವಕಾಶ ಇದೆಯೇ?

ಉತ್ತರ: ಸೆಕ್ಷನ್‌ 54 ಇಸಿ ಪ್ರಕಾರ, ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ಇರಿಸಿದರೆ ಮಾತ್ರ ಬಂಡವಾಳ ವೃದ್ಧಿ ತೆರಿಗೆ ಉಳಿಸಬಹುದು. ನೀವು ತಿಳಿಸಿದಂತೆ ಬೇರೆ ಹೂಡಿಕೆ ಮಾಡುವಂತಿಲ್ಲ. ಬಂಡವಾಳವೃದ್ಧಿ ಆಗಿರುವ ಮೊತ್ತ ₹ 50 ಲಕ್ಷದೊಳಗೆ ಇರುವಲ್ಲಿ ಉದಾಹರಣೆಗೆ: ಬಂಡವಾಳ ವೃದ್ಧಿ ₹ 32 ಲಕ್ಷವಾದಲ್ಲಿ ಅಷ್ಟನ್ನು ಮಾತ್ರ ಇಲ್ಲಿ ತೊಡಗಿಸಬೇಕಾಗುತ್ತದೆ. ₹ 50 ಲಕ್ಷ ಮೊತ್ತವು ಗರಿಷ್ಠ ಮಿತಿ ಆಗಿದೆ. ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳ ಅವಧಿ 5 ವರ್ಷ. ಬಡ್ಡಿದರ ಶೇ 5. ಬಡ್ಡಿಗೆ ತೆರಿಗೆ ವಿನಾಯಿತಿ ಇಲ್ಲ. ಬಂಡವಾಳವನ್ನು 5 ವರ್ಷಗಳ ನಂತರ ವಾಪಸ್‌ ಪಡೆಯುವಾಗ ತೆರಿಗೆ ಬರುವುದಿಲ್ಲ. ಈ ಮೊತ್ತವನ್ನು ಯಾವುದಕ್ಕಾದರೂ ವಿನಿಯೋಗಿಸಬಹುದು.

ಚಿಕ್ಕಮಾದಯ್ಯ, ಮಳವಳ್ಳಿ

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ತಿಂಗಳ ಪಿಂಚಣಿ
₹ 26,252. ಸ್ವಂತ ಮನೆ ಇದೆ. 30X40 ಅಳತೆಯ ಮೂರು ನಿವೇಶನಗಳಿವೆ. ನನಗೆ ಮೂವರು ಮಕ್ಕಳು. ಎಲ್ಲರೂ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನನ್ನ ವಯಸ್ಸು 76 ವರ್ಷ. ನನ್ನ ಹೆಂಡತಿಯ ವಯಸ್ಸು 68 ವರ್ಷ. ನಮ್ಮ ಕಾಲಾನಂತರ ಸ್ಥಿರ ಆಸ್ತಿ ಮಕ್ಕಳಿಗೆ ವಾರಸುದಾರ ಹಕ್ಕಿನಂತೆ ದೊರೆಯುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಮರಣ ಪತ್ರ ಬರೆಯಬೇಕೇ ಅಥವಾ ದಾನ ಪತ್ರ ಮಾಡಬೇಕೇ?

ಉತ್ತರ: ನೀವು ತಿಳಿಸಿದಂತೆ ನಿಮ್ಮ ಕಾಲಾನಂತರ ಸಹಜವಾಗಿಯೇ ನಿಮ್ಮ ಹೆಂಡತಿ, ಮಕ್ಕಳಿಗೆ ವಾರಸುದಾರರ ಹಕ್ಕಿನಂತೆ ನಿಮ್ಮ ಆಸ್ತಿಯ ಹಕ್ಕು ಬರುವುದು ನಿಜ. ಓದುಗರು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಓರ್ವ ವ್ಯಕ್ತಿಯ ಮರಣಾನಂತರ ಆತನ ಎಲ್ಲಾ ಆಸ್ತಿಯಲ್ಲಿಯೂ ಎಲ್ಲಾ ವಾರಸುದಾರರಿಗೂ ಸಮಾನ ಹಕ್ಕು ಇರುತ್ತದೆ. ವಾರಸುದಾರರು ಆಸ್ತಿಯನ್ನು ಹಂಚಿಕೊಳ್ಳುವಾಗ ತಕರಾರು ತೆಗೆದಲ್ಲಿ ಕೋರ್ಟು ಕಚೇರಿ ಮೊರೆ ಹೋಗುವ ಸಂದರ್ಭ ಬರುತ್ತದೆ. ಇಂತಹ ತೊಂದರೆಯನ್ನು ನೀಗಿಸಲು ಪ್ರತಿಯೊಬ್ಬರೂ ತಮ್ಮ ಜೀವಿತಕಾಲದಲ್ಲಿ ಉಯಿಲು ಬರೆದಿಡುವುದು ಸೂಕ್ತ. ಉಯಿಲಿಗೆ ನೋಂದಣಿ ಹಾಗೂ ಸ್ಟ್ಯಾಂಪ್‌ ಪೇಪರ್‌ ಅಗತ್ಯ ಇಲ್ಲ. ಆದರೆ ನೋಂದಾಯಿಸಬಹುದು ಹಾಗೂ ಸ್ಟ್ಯಾಂಪ್‌ ಪೇಪರಿನಲ್ಲಿ ಬರೆಯಬಹುದು. ಸ್ವತಃ ಕೈಬರಹದಲ್ಲಿ ಬರೆಯಬಹುದು. ಇದೇ ವೇಳೆ ದಾನಪತ್ರವಾದಲ್ಲಿ ದಾನಪತ್ರ ಮಾಡಿದ ತಕ್ಷಣ ಆಸ್ತಿಯು ದಾನ ಪಡೆದವರ ಕೈಸೇರುತ್ತದೆ. ಆದರೆ, ಉಯಿಲಿನಲ್ಲಿ ವ್ಯಕ್ತಿಯ ಮರಣಾನಂತರವೇ ಆಸ್ತಿ ಬೇರೆಯವರಿಗೆ ಸಲ್ಲುತ್ತದೆ. 

ನಾಗಪ್ಪ, ಉಡುಪಿ

l ಪ್ರಶ್ನೆ: ನಾನು ಸಿವಿಲ್‌ ಗುತ್ತಿಗೆದಾರ. ತಿಂಗಳಿಗೆ ಸುಮಾರು ₹ 1.5 ಲಕ್ಷ ಆದಾಯವಿದೆ. ಆದರೆ ಒಮ್ಮೊಮ್ಮೆ ಏರುಪೇರು ಆಗುತ್ತದೆ. ಅವಿವಾಹಿತ. ಸ್ವಂತ ಮನೆ ಇದೆ. ಮ್ಯೂಚುವಲ್‌ ಫಂಡ್‌, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಗೆ? ಈ ವಿಚಾರದಲ್ಲಿ ನಿಮ್ಮ ಮಾರ್ಗದರ್ಶನ ಬೇಕು. ಉತ್ತಮ ಉಳಿತಾಯ ಯೋಜನೆ ತಿಳಿಸಿ. ನಾನು ವಿದ್ಯಾರ್ಥಿ ಆಗಿದ್ದಾಗಿನಿಂದ ನಿಮ್ಮ ಅಂಕಣ ಓದುತ್ತಾ ಇದ್ದೇನೆ.

ಉತ್ತರ: ಉಳಿತಾಯ ಯೋಜನೆ ಹಾಕುವಾಗ ವ್ಯಕ್ತಿಯ ಕಟ್ಟುಪಾಡು (ಕಮಿಟ್‌ಮೆಂಟ್‌) ನೋಡಿಕೊಳ್ಳಬೇಕು. ಎಲ್ಲ
ರಿಗೂ ಒಂದೇ ರೀತಿ ಯೋಜನೆ ಮಾಡಿಕೊಳ್ಳಲು ಬರುವುದಿಲ್ಲ. ನನ್ನ ಪ್ರಕಾರ ₹ 1 ಲಕ್ಷ ತಿಂಗಳಿಗೆ ಉಳಿಸಲೇಬೇಕು. ಹೀಗೆ ಉಳಿಸಬಹುದಾದ ₹ 1 ಲಕ್ಷದಲ್ಲಿ ₹ 10 ಸಾವಿರ ವಿಮೆಗೆ, ₹ 12 ಸಾವಿರ ಪಿಪಿಎಫ್‌, ₹ 10 ಸಾವಿರ ಮ್ಯೂಚುವಲ್ ಫಂಡ್‌ನ ಎಸ್‌ಐಪಿ, ₹ 10 ಸಾವಿರ ಬ್ಲೂಚಿಪ್‌ ಕಂಪನಿ ಷೇರುಗಳು, ಬಂಗಾರದ ನಾಣ್ಯದ ಸಲುವಾಗಿ ₹ 10 ಸಾವಿರ (ಒಂದು ವರ್ಷದ ಆರ್‌.ಡಿ. ಮಾಡಿ ವರ್ಷಾಂತ್ಯಕ್ಕೆ ಬಂಗಾರದ ನಾಣ್ಯ ಅಥವಾ ಬಾಂಡ್ ಕೊಳ್ಳಿರಿ) ₹ 40 ಸಾವಿರ ಮೊತ್ತವನ್ನು 5 ವರ್ಷಗಳ ಆರ್‌.ಡಿ. ಅಥವಾ ಸಾಲ ಮಾಡಿ ನಿವೇಶನ ಕೊಂಡು ಸಾಲಕ್ಕೆ ಇಎಂಐ ಕಟ್ಟಿರಿ. ಇನ್ನುಳಿದ ₹ 8,000 ಉಳಿತಾಯ ಖಾತೆಯಲ್ಲಿ ಇರಿಸಿರಿ. ಅತೀ ಅವಶ್ಯಕತೆ ಇದ್ದಾಗ ಉಪಯೋಗಿಸಲು ಬೇಕಾಗುತ್ತದೆ. ಯೋಜನೆ ರೂಪಿಸುವುದರ ಜೊತೆ ಯೋಜನೆಯಂತೆ ನಡೆದುಕೊಳ್ಳುವುದು ಬಹಳ ಮುಖ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು