ಮಂಗಳವಾರ, ಮಾರ್ಚ್ 28, 2023
33 °C

ಪ್ರಶ್ನೋತ್ತರ: ತೆರಿಗೆ ಹಾಗೂ ಹಣ ಉಳಿಸಲು ಮಾರ್ಗದರ್ಶನ ಮಾಡಿ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ರಾಮೇಗೌಡ, ಮಂಡ್ಯ

l ಪ್ರಶ್ನೆ: ನಾನು ರೈತ. ವಯಸ್ಸು 77 ವರ್ಷ. ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ನಮಗೆ ಉತ್ತಮ ನೀರಾವರಿಯ 4 ಎಕರೆ 7 ಗುಂಟೆ ಜಮೀನಿದೆ. ನನ್ನ ಮೂವರು ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ನನ್ನ ಇಳಿಯವಸ್ಸಿನಲ್ಲಿ ವ್ಯವಸಾಯ ಮಾಡುವುದು ಕಷ್ಟ. ಈ ಜಮೀನು ಮಾರಾಟ ಮಾಡಿದರೆ ಸುಮಾರು ಎರಡು ಕೋಟಿ ರೂಪಾಯಿ ಸಿಗಬಹುದು. ನಮ್ಮದು ಪಿತ್ರಾರ್ಜಿತ ಆಸ್ತಿ. ಮಾರಾಟ ಮಾಡಿದರೆ ಹೆಣ್ಣು ಮಕ್ಕಳಿಗೂ ಒಂದು ಅಂಶ ಕೊಡಬೇಕಾಗುತ್ತದೆ ಎನ್ನುತ್ತಾರೆ. ಕೆಲವರು, ‘ಕೃಷಿ ಜಮೀನು ಮಾರಾಟದಿಂದ ತೆರಿಗೆ ಬರುವುದಿಲ್ಲ’ ಎನ್ನುತ್ತಾರೆ. ತೆರಿಗೆ ಬರುವುದಾದರೆ ತೆರಿಗೆ ಹೇಗೆ ಉಳಿಸಬಹುದು? ಎಲ್ಲಿ ಹಣ ತೊಡಗಿಸಬಹುದು? ಹಣ ಹೂಡಲು ಎಷ್ಟು ಸಮಯದ ಅವಕಾಶ ದೊರೆಯುತ್ತದೆ?

ಉತ್ತರ: ನಿಮ್ಮ ಜಮೀನು ಮಂಡ್ಯಕ್ಕೆ ಸಮೀಪದಲ್ಲಿ ಇರುವುದರಿಂದ ಕೃಷಿ ಜಮೀನಾದರೂ ಬಂಡವಾಳವೃದ್ಧಿ ತೆರಿಗೆ ಬರುತ್ತದೆ. ನಿಮ್ಮದು ಪಿತ್ರಾರ್ಜಿತ ಆಸ್ತಿಯಾದ್ದರಿಂದ ನಿಮಗೂ ನಿಮ್ಮ ಐದು ಜನ ಮಕ್ಕಳಿಗೂ ಜಮೀನಿನಲ್ಲಿ ಸಮಾನ ಹಕ್ಕು ಇರುತ್ತದೆ. ಜಮೀನು ಮಾರಾಟ ಮಾಡಿ ಬರುವ ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಗ್ರಾಮೀಣ ವಿದ್ಯುದೀಕರಣ (ಆರ್‌ಇಸಿ) ಬಾಂಡ್‌ಗಳಲ್ಲಿ ಅವರವರ ಹೆಸರಿನಲ್ಲಿ ಇರಿಸಿದರೆ ಬಂಡವಾಳ ವೃದ್ಧಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆಯಬಹುದು. ಜಮೀನು ಮಾರಾಟ ಮಾಡಿದ ತಾರೀಕಿನಿಂದ ಆರು ತಿಂಗಳ ಒಳಗಾಗಿ ಅಥವಾ ರಿಟರ್ನ್ಸ್‌ ತುಂಬುವ ತಾರೀಕು ಇವುಗಳಲ್ಲಿ ಯಾವುದು ಮೊದಲೋ ಆ ಅವಧಿಯೊಳಗೆ ಸರ್ಕಾರಿ ಬಾಂಡ್‌ನಲ್ಲಿ ತೊಡಗಿಸಿದರೆ ಮಾತ್ರ ತೆರಿಗೆ ಉಳಿಸಬಹುದು. ಸಾಧ್ಯವಾದರೆ ಜಮೀನು ಉಳಿಸಿಕೊಳ್ಳಿ ಅಥವಾ ನಿಮ್ಮ ಮಕ್ಕಳಲ್ಲಿ ಯಾರಾದರೂ ಕೊಂಡು ಇತರರಿಗೆ ಹಣ ವಿತರಿಸಲಿ. ಭೂಮಿ ನಿಮ್ಮ ಕುಟುಂಬದಲ್ಲೇ ಉಳಿಯಲಿ ಎನ್ನುವುದು ನನ್ನ ಅಭಿಮತ.

***

ಮಹಂತೇಶ ರಾಚಪ್ಪ ಬೆಲ್ಲದ, ಬಾಗಲಕೋಟೆ

l ಪ್ರಶ್ನೆ: ನನ್ನ ವಯಸ್ಸು 67 ವರ್ಷ. ನನ್ನ ಹೆಂಡತಿ ವಯಸ್ಸು 62 ವರ್ಷ. ನಮ್ಮದು ಕಿರಾಣಿ ವ್ಯಾಪಾರ. ನಮಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ. ಎಲ್ಲರಿಗೂ ಮದುವೆಯಾಗಿದೆ. ಮಗ ನಮ್ಮೊಡನೆ ಕಿರಾಣಿ ಅಂಗಡಿಯಲ್ಲಿ ದುಡಿಯುತ್ತಾನೆ. ನಮಗೆ ಸ್ವಂತ ಮನೆ ಇದೆ ಹಾಗೂ ಎರಡು ಮನೆಗಳಿಂದ ತಿಂಗಳಿಗೆ ₹ 20 ಸಾವಿರ ಬಾಡಿಗೆ ಬರುತ್ತದೆ. ಎಲ್ಲವೂ ಸ್ವಯಾರ್ಜಿತ. ವ್ಯಾಪಾರದಿಂದ ತಿಂಗಳಿಗೆ ಖರ್ಚು ಹೋಗಿ ₹ 25 ಸಾವಿರದಿಂದ ₹ 30 ಸಾವಿರ ಉಳಿಯುತ್ತದೆ. ತೆರಿಗೆ ಹಾಗೂ ಹಣ ಉಳಿಸಲು ಮಾರ್ಗದರ್ಶನ ಮಾಡಿ.

ಉತ್ತರ: ವ್ಯಾಪಾರ ಹಾಗೂ ಬಾಡಿಗೆಯಿಂದ ಬರುವ ವರಮಾನಕ್ಕೆ ಆದಾಯ ತೆರಿಗೆ ಇರುತ್ತದೆ. ಬಾಡಿಗೆಯಲ್ಲಿ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30ರಷ್ಟು ಕಳೆದು ತೆರಿಗೆ ಸಲ್ಲಿಸಬಹುದು. ನಿಮಗೊಂದು ಸಲಹೆ. ನೀವು, ನಿಮ್ಮ ಮಗ ಸೇರಿ ಪಾರ್ಟ್ನರ್‌ಶಿಪ್ ಫರ್ಮ್‌ ಮಾಡಿಕೊಳ್ಳಿ. ಇದರಿಂದ ನೀವಿಬ್ಬರೂ ತೆರಿಗೆಗೆ ಒಳಗಾಗದಿರಬಹುದು. ಈ ಕುರಿತು ನಿಮ್ಮ ಸಮೀಪದ ತೆರಿಗೆ ಸಲಹೆಗಾರರು ಅಥವಾ ಲೆಕ್ಕಪರಿಶೋಧಕರ ಬಳಿ ವಿಚಾರಿಸಿ. ನೀವು ಉಳಿಸಬಹುದಾದ ಹಣದಲ್ಲಿ ಕನಿಷ್ಠ ತಲಾ ₹ 5 ಸಾವಿರವನ್ನು ನೀವು, ನಿಮ್ಮ ಹೆಂಡತಿ ಹಾಗೂ ಮಗ 10 ವರ್ಷಗಳ ಆರ್‌.ಡಿ. ಮಾಡಿರಿ. 10 ವರ್ಷ ಮುಗಿಯುತ್ತಲೇ ತಲಾ ₹ 8 ಲಕ್ಷ ಪಡೆಯುವಿರಿ. ನಿಮ್ಮ ಸ್ಥಿರ ಆಸ್ತಿ ವಿಚಾರದಲ್ಲಿ ವಕೀಲರನ್ನು ವಿಚಾರಿಸಿ ನೀವು ಇಚ್ಛಿಸುವಂತೆ ಮಕ್ಕಳಿಗೆ ಉಯಿಲು ಬರೆದಿಡಿ.

***

ರಮೇಶ್ ಕುಲಕರ್ಣಿ, ಧಾರವಾಡ

l ಪ್ರಶ್ನೆ: ನಾನು ಹಿರಿಯ ನಾಗರಿಕ. ವಯಸ್ಸು 72 ವರ್ಷ. ನಾನು ಪಿಂಚಣಿದಾರನಲ್ಲ. ನನಗೆ ವಾರ್ಷಿಕ ₹ 2,42,532 ಬ್ಯಾಂಕ್‌ ಠೇವಣಿಯಿಂದ ಬಡ್ಡಿ ಬರುತ್ತದೆ. ಬಡ್ಡಿ ವರಮಾನ ಹೊರತುಪಡಿಸಿ ಬೇರೆ ಆದಾಯ ಇಲ್ಲ. ನಾನು ನಮ್ಮ ಬ್ಯಾಂಕ್‌ಗೆ 15ಎಚ್‌ ಸಲ್ಲಿಸಲು ಹೋದಾಗ, ಅವರು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಈಗಾಗಲೇ ಟಿಡಿಎಸ್‌ ಕೂಡಾ ಮಾಡಿರುತ್ತಾರೆ. ಇದು ಸರಿಯೆ? ಕಾನೂನು ಏನು ಹೇಳುತ್ತದೆ?

ಉತ್ತರ: 15ಜಿ ಹಾಗೂ 15ಎಚ್‌ ಫಾರಂಗಳ ಉದ್ದೇಶವೇ ಬ್ಯಾಂಕ್‌ನವರು ಠೇವಣಿ ವರಮಾನದ ಮೇಲೆ ಶೇ 10ರಷ್ಟು ಟಿಡಿಎಸ್‌ ಮಾಡಬಾರದು ಎಂಬುದು. ಆದರೆ ಠೇವಣಿದಾರರಿಗೆ ತುಂಬಾ ಆದಾಯವಿದ್ದು ತೆರಿಗೆಗೆ ಒಳಗಾದಲ್ಲಿ ತೆರಿಗೆ ಮುರಿಯದಂತೆ 15ಎಚ್‌–15ಜಿ ಕೊಡಲು ಅವಕಾಶವಿಲ್ಲ. ನಿಮ್ಮ ಆದಾಯವು ₹ 3 ಲಕ್ಷದೊಳಗೆ ಇರುವುದರಿಂದ ತೆರಿಗೆ ಕೊಡುವ ಮತ್ತು ರಿಟರ್ನ್ಸ್‌ ತುಂಬುವ ಅಗತ್ಯವೂ ಇಲ್ಲ. ಬ್ಯಾಂಕ್‌ನವರು ಟಿಡಿಎಸ್‌ ಮಾಡುವ ಅಗತ್ಯವೂ ಇರಲಿಲ್ಲ. ಆದರೆ, ಬ್ಯಾಂಕ್‌ನವರು ಟಿಡಿಎಸ್‌ ಮಾಡಿದ ಕಾರಣ, ಆ ಹಣವನ್ನು ಮರಳಿ ಪಡೆಯಬೇಕಾದರೆ ನೀವು ರಿಟರ್ನ್ಸ್‌ ತುಂಬಬೇಕು. ₹ 3 ಲಕ್ಷ ಬಡ್ಡಿ ವರಮಾನ ಬರುವ ತನಕವೂ ರಿಟರ್ನ್ಸ್‌ ಸಲ್ಲಿಸುವ ಅಗತ್ಯ ಇಲ್ಲ. ಹಿರಿಯ ನಾಗರಿಕರಾದ್ದರಿಂದ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ಬಡ್ಡಿ ವರಮಾನದಲ್ಲಿ ಕೂಡಾ ₹ 50 ಸಾವಿರ ವಿನಾಯಿತಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು