ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Published : 23 ಅಕ್ಟೋಬರ್ 2024, 0:08 IST
Last Updated : 23 ಅಕ್ಟೋಬರ್ 2024, 0:08 IST
ಫಾಲೋ ಮಾಡಿ
Comments
ಪ್ರ

ನನ್ನ ಪುತ್ರಿ ಕಳೆದ ಐದಾರು ವರ್ಷದಿಂದ ಗಂಡ ಹಾಗೂ ಮಕ್ಕಳೊಂದಿಗೆ ವಿದೇಶದಲ್ಲಿದ್ದು, ಉದ್ಯೋಗ ಮಾಡುತ್ತಿದ್ದಾಳೆ. ಮುಂದಿನ ಮೂರ್ನಾಲ್ಕು ವರ್ಷದ ಬಳಿಕ ಅವರು, ಕಾಯಂ ಆಗಿ ನಮ್ಮ ಜೊತೆ ಇರಲಿದ್ದಾರೆ. ಪ್ರಸ್ತುತ ನಮ್ಮ ಖರ್ಚಿಗೆ  ವಿದೇಶದಿಂದ ಹಣ ಕಳಿಸುತ್ತಿದ್ದಾಳೆ.

ಈ ಅವಧಿಯಲ್ಲಿ ನನ್ನ ಕೆಲವು ಆರ್ಥಿಕ ಹೂಡಿಕೆಗಳನ್ನು ಆಕೆಯ ಹೆಸರಿಗೆ ವರ್ಗಾಯಿಸಿ ಯಾವುದೇ ಆತಂಕ ಇಲ್ಲದೆ ಇರುವ ಬಗ್ಗೆ ಯೋಚಿಸಿದ್ದೇನೆ. ನನ್ನ ವಯಸ್ಸು  75. ಪತ್ನಿ ವಯಸ್ಸು 68. ನಾನು ಹದಿನೈದು ವರ್ಷ ಹಿಂದೆ ಬ್ಯಾಂಕ್‌ನಿಂದ ನಿವೃತ್ತಿಯಾದಾಗ ಬಂದ ₹30 ಲಕ್ಷ ಮೊತ್ತದಲ್ಲಿ ₹10 ಲಕ್ಷವನ್ನು ಅಂಚೆ ಇಲಾಖೆಯಲ್ಲಿ ಠೇವಣಿ ಇಟ್ಟಿದ್ದೆ. ಉಳಿದ ಮೊತ್ತವನ್ನು ಇನ್ಫೊಸಿಸ್, ಟಾಟಾ ಮೋಟರ್ಸ್, ಕೋಲ್ ಇಂಡಿಯಾ, ಐಟಿಸಿ, ಗೋದ್ರೇಜ್, ಏಷ್ಯನ್‌ ಪೇಂಟ್ಸ್‌, ಎಚ್‌ಯುಎಲ್, ಎಸ್‌ಬಿಐ ಹಾಗೂ ರಿಲಯನ್ಸ್ ಕಂಪನಿಗಳಲ್ಲಿ ₹2 ಲಕ್ಷದಂತೆ ನನ್ನ  ಹೂಡಿಕೆ ಮಾಡಿದ್ದೆ. ಇವುಗಳ ಮೇಲೆ ಚೆನ್ನಾಗಿ ಡಿವಿಡೆಂಡ್ ಸಿಕ್ಕಿದೆ. ಅದೃಷ್ಟಕ್ಕೆ ಕೆಲವು ಷೇರುಗಳು ಈ 15 ವರ್ಷದಲ್ಲಿ ಹತ್ತು ಪಟ್ಟು ಹೆಚ್ಚು ಬೆಳೆದಿವೆ.

ಈ ಎಲ್ಲಾ ಷೇರುಗಳನ್ನು ಮುಂದಿನ ದಿನಗಳಲ್ಲಿ ನನ್ನಿಂದ ನಿರ್ವಹಿಸುವುದು ಕಷ್ಟ. ಹೀಗಾಗಿ, ಮುಂದಿನ ರಜೆಯಲ್ಲಿ ಮಗಳು ಬಂದಾಗ ಆಕೆಯ ಹೆಸರಿಗೆ ವರ್ಗಾಯಿಸೋಣ ಎಂದುಕೊಂಡಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿ ಎಷ್ಟು ತೆರಿಗೆ ಕಟ್ಟಬೇಕು ಹಾಗೂ ವರ್ಗಾವಣೆ ಬಗ್ಗೆ ಮಾಹಿತಿ ನೀಡಿ.  

ನಿಮ್ಮ ಹೂಡಿಕೆ ಬಗೆಗಿನ ಅರಿವು ಸಾಮನ್ಯವೆಂದು ನೀವು ಹೇಳಿದರೂ ಅದರ ಹಿಂದಿರುವ ಲಕ್ಷ್ಯವನ್ನು ಮೆಚ್ಚಲೇಬೇಕು. ಇದು ಎಲ್ಲ ದೀರ್ಘಾವಧಿ ಹೂಡಿಕೆದಾರರಿಗೆ ಮಾರ್ಗದರ್ಶಿ ಸೂತ್ರದಂತಿದೆ. ನಿಮ್ಮ ಪ್ರಶ್ನೆಗೆ ಸಂಬಂಧಿಸಿ ಹೇಳುವುದಾದರೆ ನಿಮ್ಮ ಷೇರುಗಳ ಮೌಲ್ಯ ಎಷ್ಟೇ ಇದ್ದರೂ ನಿಮ್ಮ ಮಗಳ ಹೆಸರಲ್ಲಿ ಅವುಗಳನ್ನು ಉಡುಗೊರೆ ರೂಪದಲ್ಲಿ ಕೊಟ್ಟಾಗ ತೆರಿಗೆ ಇರುವುದಿಲ್ಲ. ತಂದೆ, ಮಕ್ಕಳ ನಡುವಿನ ಇಂತಹ ವರ್ಗಾವಣೆಗೆ ತೆರಿಗೆ ವಿನಾಯಿತಿ ಇದೆ. ಹೆಚ್ಚುವರಿ ದಾಖಲೆಗಾಗಿ ಅಗತ್ಯ ಬಿದ್ದರೆ ವಕೀಲರನ್ನು ಸಂಪರ್ಕಿಸಿ ಗಿಫ್ಟ್ ಡೀಡ್ ಮಾಡಿಸಿ ವರ್ಗಾಯಿಸಿ. ಆದರೆ, ಈ ವರ್ಗಾವಣೆಗೆ ಸಂಬಂಧಿಸಿ ಮಾರುಕಟ್ಟೆ ದರದ ಅನ್ವಯ ಸ್ಟಾಂಪ್‌ ಮೌಲ್ಯವನ್ನು ಪಾವತಿಸಬೇಕಾಗಬಹುದು. ಈ ಬಗ್ಗೆಯೂ ವಿಚಾರಿಸಿ.

ನಂತರ ನಿಮ್ಮ ಬ್ರೋಕರ್ ಅನ್ನು ಸಂಪರ್ಕಿಸಿ ವರ್ಗಾವಣೆಗೆ ಸಂಬಂಧಿಸಿದ ಡೆಲಿವರಿ ಇನ್ಟ್ರಕ್ಷನ್ ಸ್ಲಿಪ್ ಇತ್ಯಾದಿ ರವಾನಿಸಿ. ಇದು ಚೆಕ್ ಮೂಲಕ ಹಣ ವರ್ಗಾಯಿಸುವಂತೆಯೇ ಕಾರ್ಯ ನಿರ್ವಹಿಸುತ್ತದೆ.

ನಿಮ್ಮ ಅಧಿಕೃತ ಬ್ಯಾಂಕಿಗೂ ಈ ಬಗ್ಗೆ ಮಾಹಿತಿ ನೀಡಿ. ಒಂದು ವಿಚಾರ ಹೆಚ್ಚುವರಿಯಾಗಿ ಗಮನಿಸಿ. ಮುಂದೆ ಈ ಷೇರುಗಳನ್ನು ನಿಮ್ಮ ಮಗಳು ಮಾರಾಟ ಮಾಡುವಾಗ ಹಾಗೂ ಬರುವ ಡಿವಿಡೆಂಡ್ ಇತ್ಯಾದಿ ಲಾಭಕ್ಕೆ ಅವರೇ ತೆರಿಗೆ ಪಾವತಿಸಬೇಕು. ಅದಕ್ಕೆ ಸಂಬಂಧಿತ ಆದಾಯ ತೆರಿಗೆ ರಿಟರ್ನ್ಸ್ ಕೂಡ ಅವರೇ ಸಲ್ಲಿಸಬೇಕು.

ಪ್ರ

ನಾನು ಇತ್ತೀಚೆಗೆ ಬ್ಯುಸಿನೆಸ್‌ಗೆ ಸಂಬಂಧಪಟ್ಟ ಪತ್ರಿಕೆ ಓದುತ್ತಿದ್ದಾಗ ಟ್ಯಾಕ್ಸ್ ಹಾರ್ವೆಸ್ಟಿಂಗ್ ಬಗ್ಗೆ ಕೇಳಿದ್ದೇನೆ. ಇದು ತೆರಿಗೆ ಉಳಿಸುವಲ್ಲಿ ನೆರವಾಗುತ್ತದೆ ಎಂದು ಆ ಮೂಲಕ ತಿಳಿದುಕೊಂಡೆ. ನಾನು ಕೆಲವು ಹೂಡಿಕೆ ಮಾಡಿದ್ದೇನೆ. ನಾನು ಈ ರೀತಿಯ ಯೋಜನೆ ಮಾಡಿದರೆ ಅನುಕೂಲಕರವೇ? ಇತ್ತೀಚಿನ ಬದಲಾದ ತೆರಿಗೆ ದರದ ಪರಿಸ್ಥಿತಿಯಲ್ಲಿ ನಮಗೆ ಇದಕ್ಕೆ ಅವಕಾಶ ಇದೆಯೇ?

ಟ್ಯಾಕ್ಸ್ ಹಾರ್ವೆಸ್ಟಿಂಗ್ ಎಂಬುದು ಸಾಮಾನ್ಯವಾಗಿ ಹೂಡಿಕೆ ಕ್ಷೇತ್ರದಲ್ಲಿ ನಷ್ಟ ಅನುಭವಿಸುತ್ತಿರುವವರು ಈಗಾಗಲೇ ಬಂದ ಲಾಭದ ಮೇಲಿನ ತೆರಿಗೆಯನ್ನು ಉಳಿಸಲು ಬಳಸುವ ಒಂದು ತಂತ್ರಗಾರಿಕೆಯಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೀರ್ಘಾವಧಿಯಲ್ಲಿ ಲಾಭ ಮಾಡಲು ಹೊರಟಾಗ ತಾತ್ಕಾಲಿಕವಾಗಿ ಹೂಡಿಕೆ ಮೇಲೆ ನಷ್ಟವೂ ಗೋಚರಿಸಬಹುದು. ಇದನ್ನು ನಮ್ಮ ತೆರಿಗೆ ನಿರ್ವಹಣೆಯ ಉದ್ದೇಶಕ್ಕಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇಲ್ಲಿನ ಉದ್ದೇಶವಾಗಿರುತ್ತದೆ.

ನಿಮ್ಮ ಡಿಮ್ಯಾಟ್ ಖಾತೆ ಅಥವಾ ಮ್ಯೂಚುವಲ್ ಫಂಡ್ ಖಾತೆಯಲ್ಲಿರುವ ಹೂಡಿಕೆಗಳನ್ನು ತಾತ್ಕಾಲಿಕವಾಗಿ ಮಾರಾಟ ಮಾಡಿ ಅದೇ ಷೇರು ಅಥವಾ ಮ್ಯೂಚುವಲ್ ಫಂಡ್‌ಗಳನ್ನು ಮತ್ತೆ ಮುಂದುವರಿಸಿಕೊಂಡು ಹೋಗುವುದು ಇದರ ಭಾಗವಾಗಿದೆ. ಇದರಿಂದ ಒಂದಷ್ಟು ಬ್ರೋಕರೇಜ್ ಅಥವಾ ಶುಲ್ಕ ವೆಚ್ಚವಾಗಬಹುದು. ಆದರೆ, ಆಯಾ ವರ್ಷದಲ್ಲಿ ನಷ್ಟ ದಾಖಲಿಸಿ ಈಗಾಗಲೇ ಬಂದ ಲಾಭಕ್ಕೆ ಸರಿದೂಗಿಸುವುದು ಹಾಗೂ ತೆರಿಗೆ ಉಳಿಸುವುದು ಇದರ ಕಾರ್ಯ ವಿಧಾನವಾಗಿದೆ.    

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬದಲಾದ ತೆರಿಗೆ ನಿಯಮಗಳ ಪ್ರಕಾರ ₹1.25 ಲಕ್ಷಕ್ಕಿಂತ ಅಧಿಕ ದೀರ್ಘಾವಧಿ ಲಾಭ ಗಳಿಸಿದ್ದರೆ ಅದಕ್ಕಿಂತ ಅಧಿಕ ಮೊತ್ತದ ಲಾಭದ ಮೇಲೆ ಶೇ 12.5ರ ದರದಲ್ಲಿ ತೆರಿಗೆ ಕಟ್ಟಬೇಕು. ಇಂತಹ ಸಂದರ್ಭದಲ್ಲಿ ಅದೇ ದೀರ್ಘಾವಧಿ ಹೂಡಿಕೆಯಲ್ಲಿ ಹೆಚ್ಚುವರಿ ಲಾಭದ ಪ್ರಮಾಣಕ್ಕೆ ಸಮನಾಗಿ ನಷ್ಟವಾಗುವಂತೆ ಯಾವುದಾದರೂ ಹೂಡಿಕೆ ಇದ್ದರೆ ಅದನ್ನು ಮಾರಾಟ ಮಾಡಿ ನಷ್ಟ ದಾಖಲಿಸಬೇಕು. ಒಟ್ಟಾರೆ ಇದರ ಪರಿಣಾಮ ನಿಮ್ಮ ಲಾಭವು ₹1.25 ಲಕ್ಷಕ್ಕಿಂತ ಒಳಗೆ ಇರುವಂತೆ ನೋಡಿಕೊಂಡು ತೆರಿಗೆ ಸಂಪೂರ್ಣ ಉಳಿಸುವುದು ಒಂದು ಯೋಜನೆ.

ಇನ್ನೊಂದು ಉದಾಹರಣೆ ಹೇಳುವುದಾದರೆ ಅಲ್ಪಾವಧಿ ಹೂಡಿಕೆಯಲ್ಲಿ ಈಗಾಗಲೇ ₹2 ಲಕ್ಷ ಲಾಭ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ಪ್ರಸ್ತುತ ಇದರ ಮೇಲೆ ಶೇ 20ರ ದರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ನಿಮ್ಮ ಅದೇ ವರ್ಗದ ಅಲ್ಪಾವಧಿ ಹೂಡಿಕೆ ಆಕಸ್ಮಿಕವಾಗಿ ನಷ್ಟದಲ್ಲಿದ್ದರೆ ಸರಿಯಾದ ಸಂದರ್ಭ ನೋಡಿ ಸಾಧ್ಯವಾದಷ್ಟು ಅಲ್ಪಾವಧಿ ನಷ್ಟ ದಾಖಲಿಸಿ ಈ ಮೊತ್ತದ ಮೇಲೆ ಕಟ್ಟಬೇಕಾಗುವ ತೆರಿಗೆ ತಗ್ಗಿಸಬಹುದು. ತದ ನಂತರ ಅದೇ ಷೇರುಗಳನ್ನು ಖರೀದಿಸಬಹುದು.

ಈ ಯಾವುದೇ ತಂತ್ರಗಾರಿಕೆಯನ್ನು ನಿಮ್ಮ ಲಾಭದ ಉದ್ದೇಶಕ್ಕೆ ಪ್ರಯೋಗಿಸುವ ಮೊದಲು ನಿಮಗೆ ಅನ್ವಯವಾಗುವ ತೆರಿಗೆ ದರ, ಲಾಭ-ನಷ್ಟ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ಆದಾಯ ತೆರಿಗೆ ಸೆಕ್ಷನ್ 70 ಹಾಗೂ ಸೆಕ್ಷನ್ 74ರ ಷರತ್ತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ ಅಥವಾ ನಿಮ್ಮ ಪೋರ್ಟ್‌ ಫೋಲಿಯೊಗೆ ಸಂಬಂಧಿಸಿ, ಅಗತ್ಯ ತೆರಿಗೆ ಸಲಹೆಯನ್ನು ಪಡೆದುಕೊಳ್ಳಿ.

ಒಂದು ವಿಚಾರ ನೆನಪಿರಲಿ. ಟ್ಯಾಕ್ಸ್ ಹಾರ್ವೆಸ್ಟಿಂಗ್ ಎಂಬುದು ಆಕಸ್ಮಿಕವಾಗಿ ನಮ್ಮ ಊಹೆಗೂ ಮೀರಿದ ಸಂದರ್ಭಗಳಲ್ಲಿ ಉಂಟಾದ ನಷ್ಟವನ್ನು ನಮ್ಮ ತೆರಿಗೆ ಪಾವತಿಯ ಪರಿಸ್ಥಿತಿಗೆ ಹೊಂದಿಕೊಂಡು ವ್ಯವಹರಿಸುವ ವಿಷಯವೇ ಹೊರತು, ಮೂಲತಃ ಎಲ್ಲ ಹೂಡಿಕೆದಾರರೂ ಗಳಿಸಬೇಕಾಗುವ ಲಾಭದ ವಿಚಾರದಲ್ಲಿ ಮಾಡಿಕೊಳ್ಳುವ ರಾಜಿಯಲ್ಲ ಎಂಬುದು. ಹೀಗಾಗಿ, ಅದರ ಮೇಲೆ ಯಾವತ್ತೂ ತೆರಿಗೆ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT