ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಬಡ್ಡಿ ದರ ಕಡಿತ: ಗೃಹ, ವಾಹನ, ವೈಯಕ್ತಿಕ ಸಾಲದ ಅಗ್ಗ ಸಾಧ್ಯತೆ

Last Updated 7 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಅನಿರೀಕ್ಷಿತವಾಗಿ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಿದ್ದು, ಜಾಮೀನು ಮುಕ್ತ ಕೃಷಿ ಸಾಲದ ಮಿತಿಯನ್ನು₹ 1 ಲಕ್ಷದಿಂದ ₹ 1.60 ಲಕ್ಷಕ್ಕೆ ಹೆಚ್ಚಿಸಿದೆ.

ಹಣದುಬ್ಬರವು ತಾನು ನಿಗದಿಪಡಿಸಿದ ಗುರಿಯ ವ್ಯಾಪ್ತಿಯ ಒಳಗೆ ಇರುವ ಕಾರಣಕ್ಕೆ ಕೇಂದ್ರೀಯ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ 6ನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ತಗ್ಗಿಸಿದೆ. 18 ತಿಂಗಳಲ್ಲಿ ಇದೇ ಮೊದಲ ಬಾರಿಗೆ ದರ ಕಡಿತ ಮಾಡಲಾಗಿದೆ. ಈ ಹಿಂದೆ 2017ರಲ್ಲಿ ಇಂತಹ ನಿರ್ಧಾರ ಕೈಗೊಳ್ಳಲಾಗಿತ್ತು.

ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ದರವನ್ನು ಶೇ 6.50 ರಿಂದ ಶೇ 6.25ಕ್ಕೆ ಮತ್ತು ರಿವರ್ಸ್‌ ರೆಪೊ ದರವನ್ನು ಶೇ 6.25 ರಿಂದ ಶೇ 6ಕ್ಕೆ ಕಡಿತ ಮಾಡಲಾಗಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರಗಳನ್ನು (ಎಂಸಿಎಲ್‌ಆರ್‌) ಬ್ಯಾಂಕ್‌ಗಳು ಕಡಿಮೆ ಮಾಡಲಿವೆ. ಇದರಿಂದಾಗಿ ಗೃಹ, ವಾಹನ, ವೈಯಕ್ತಿಕ ಮತ್ತು ಕೈಗಾರಿಕೆಗಳಿಗೆ ವಿತರಿಸುವ ಸಾಲಗಳ ಮೇಲಿನ ಬಡ್ಡಿ ದರವೂ ಅಗ್ಗವಾಗಲಿದೆ. ಬಂಡವಾಳ ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಸಾಲಗಳ ಮಾಸಿಕ ಕಂತಿನ ಮೊತ್ತದಲ್ಲಿಯೂ ಇಳಿಕೆಯಾಗಲಿದೆ.

ಹಣದುಬ್ಬರ ಪ್ರಭಾವ: ‘ಡಿಸೆಂಬರ್ ತಿಂಗಳ ಹಣದುಬ್ಬರವು 18 ತಿಂಗಳ ಹಿಂದಿನ ಮಟ್ಟಕ್ಕೆ (ಶೇ 2.2) ಇಳಿದಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಇದು ಶೇ 2.8ಕ್ಕೆ ಇಳಿಯುವ ಅಂದಾಜು ಮಾಡಲಾಗಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

* ಆರ್‌ಬಿಐನಿಂದ ಮಧ್ಯಂತರ ಲಾಭಾಂಶ ಕೇಳುವುದು ಮತ್ತು ಅದನ್ನು ತನಗಿಷ್ಟ ಬಂದ ರೀತಿಯಲ್ಲಿ ವೆಚ್ಚ ಮಾಡುವುದು ಕೇಂದ್ರ ಸರ್ಕಾರದ ಹಕ್ಕಾಗಿದೆ
–ಶಕ್ತಿಕಾಂತ್ ದಾಸ್‌,ಆರ್‌ಬಿಐ ಗವರ್ನರ್‌

ಜಾಮೀನುಮುಕ್ತ ಕೃಷಿ ಸಾಲ ಮಿತಿ ಹೆಚ್ಚಳ

ಜಾಮೀನು ಮುಕ್ತ ಕೃಷಿ ಸಾಲದ ಮಿತಿಯನ್ನು ಸದ್ಯದ ₹ 1 ಲಕ್ಷದಿಂದ ₹ 1.60 ಲಕ್ಷಕ್ಕೆ ಹೆಚ್ಚಿಸಿದೆ. ಸಣ್ಣ ಮತ್ತು ಬಡ ರೈತರಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಸಾಲಗಳನ್ನು ಪರಾಮರ್ಶಿಸಲು ಮತ್ತು ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳಲು ಆಂತರಿಕ ಕಾರ್ಯಪಡೆ ತಂಡ ರಚಿಸಲು ಆರ್‌ಬಿಐ ನಿರ್ಧರಿಸಿದೆ.

ಸದ್ಯಕ್ಕೆ ಬ್ಯಾಂಕ್‌ಗಳು ಸಣ್ಣ ರೈತರಿಗೆ ₹ 1 ಲಕ್ಷದವರೆಗೆ ಜಾಮೀನುರಹಿತ ಸಾಲವನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಈ ಮಿತಿಯನ್ನು 2010ರಲ್ಲಿ ನಿಗದಿಪಡಿಸಲಾಗಿತ್ತು.

ಮುಖ್ಯಾಂಶಗಳು
* ಮಾರ್ಚ್‌ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ 2.8ರಷ್ಟು ನಿರೀಕ್ಷೆ

* 2019–20ರಲ್ಲಿ ಆರ್ಥಿಕ ವೃದ್ಧಿ ದರ ಶೇ 7.4ಕ್ಕೆ ಏರಿಕೆ ಅಂದಾಜು

* ‘ಸಗಟು ಠೇವಣಿ’ ವ್ಯಾಖ್ಯಾನ ₹ 1 ಕೋಟಿಯಿಂದ ₹ 2 ಕೋಟಿಗೆ ಪರಿಷ್ಕರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT