ಮಂಗಳವಾರ, ಮಾರ್ಚ್ 2, 2021
18 °C

ಚಿನ್ನದ ಮಡಿಕೆ ಸಿಗಬೇಕು ಎಂದರೆ...

ಎಂ. ಶ್ರೀನಿವಾಸ ರಾವ್ Updated:

ಅಕ್ಷರ ಗಾತ್ರ : | |

Prajavani

ಗೀತಾ ಅವರು ‘ಫ್ರಾಗ್ರೆಂಟ್‌ ಕಿಚನ್‌’ ಆರಂಭಿಸಿದ್ದು 2010ರಲ್ಲಿ. ಆರಂಭದಲ್ಲಿ ಕೆಫೆ ಮತ್ತು ಬೇಕರಿ ರೂಪದಲ್ಲಿ ಶುರುವಾದ ಅವರ ಉದ್ಯಮ ಅವರ ನಿಜವಾದ ಕಾಳಜಿಯತ್ತ ತಿರುಗಿತು. ಯಾವುದೇ ರಾಸಾಯನಿಕಗಳಿಲ್ಲದೇ, ರುಚಿ ಹೆಚ್ಚಿಸುವ ಕೃತಕ ವಸ್ತುಗಳನ್ನು ಬಳಸದೇ ಸಾಂಪ್ರದಾಯಿಕ ರೀತಿಯಲ್ಲಿ ಬೇಕಿಂಗ್‌ ಮಾಡಬೇಕೆನ್ನುವುದೇ ಅವರ ಕಾಳಜಿಯಾಗಿತ್ತು. ಇದನ್ನೇ ಪ್ರಧಾನವಾಗಿ ಇರಿಸಿಕೊಂಡು ಅವರು ‘ಫ್ರಾಗ್ರೆಂಟ್‌ ಕಿಚನ್‌’ ಸಂಸ್ಥೆಗೆ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕವಾಗಿ ಮರುಹುಟ್ಟು ನೀಡಿದರು. ಗೀತಾ ಅವರ ಬೇಕಿಂಗ್‌ ಸಾಹಸಕ್ಕೆ 15 ವರ್ಷಗಳ ಹಿನ್ನೆಲೆಯಿದೆ. ಹಿಂದೆ ಅವರು ಓವನ್‌ ಒಂದನ್ನು ಕೈಗಡವಾಗಿ ಪಡೆದು ಬ್ರೌನಿಗಳನ್ನು ತಯಾರಿಸುತ್ತಿದ್ದರು. ತಾವು ತಪ್ಪುತ್ತಿರುವುದು ಎಲ್ಲಿ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸುತ್ತಿದ್ದರು.

ಫ್ರಾಗ್ರೆಂಟ್‌ ಕಿಚನ್‌ ಆರಂಭಿಸಲು ಏನು ಸ್ಫೂರ್ತಿ ಎಂದು ಕೇಳಿದರೆ ಗೀತಾ ಅವರು ಹೇಳುವುದು ಹೀಗೆ: ‘ನನಗೆ 17 ವರ್ಷ ವಯಸ್ಸಾಗಿದ್ದಾಗಲೇ ಒಂದು ರೆಸ್ಟಾರೆಂಟ್‌ ತೆರೆಯುವ ಕನಸು ಕಂಡಿದ್ದೆ. ವಿದೇಶಗಳಲ್ಲಿ ರೆಸ್ಟಾರೆಂಟ್‌ಗಳಿಗೆ ಭೇಟಿ ನೀಡಿದಾಗಲೆಲ್ಲ ಅಲ್ಲಿಯ ಬಾಣಸಿಗರೊಂದಿಗೆ ಮಾತನಾಡುತ್ತಿದ್ದೆ. ಅವರ ಅಡುಗೆಯ ರೀತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಭಾರತದ ಸಂಸ್ಕೃತಿ, ಆಹಾರ ಮತ್ತು ಇಲ್ಲಿಯ ಜನ ಹೊರಗಿನವರಿಗೆ ಸದಾ ಅಚ್ಚರಿಯ ವಿಷಯ. ಹಾಗಾಗಿ ನಾನು ಇಲ್ಲಿಯ ಆಹಾರ ಸಿದ್ಧಪಡಿಸುವ ಬಗೆಯನ್ನು ಅಲ್ಲಿನ ಬಾಣಸಿಗರ ಜೊತೆ ಹಂಚಿಕೊಳ್ಳುತ್ತಿದ್ದೆ’.

ಗೀತಾ ಅವರ ಬದುಕಿನಲ್ಲಿ ಬದಲಾವಣೆ ತಂದ ವರ್ಷ 2010. ಕ್ರಿಸ್ಮಸ್‌ ಸಮಯದಲ್ಲಿ 10 ಕೆ.ಜಿ. ಪ್ಲಮ್‌ ಕೇಕ್‌ ತಯಾರಿಸುವ ಹೊಣೆಯನ್ನು ಅವರು ವಹಿಸಿಕೊಂಡರು. ಜನರು ಅದನ್ನು ಹೇಗೆ ಸ್ವೀಕರಿಸಿಯಾರು ಎಂಬ ಅಳುಕು ಅವರಲ್ಲಿತ್ತು. ಆದರೆ ಅವರಿಗೇ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ, ಅವರು ತಯಾರಿಸಿದ ಕೇಕ್‌ ಚಿಟಿಕೆ ಹೊಡೆಯುವಷ್ಟರಲ್ಲಿ ಮಾರಾಟವಾಯಿತು. ಇದರಿಂದ ಸ್ಫೂರ್ತಿ ಪಡೆದ ಗೀತಾ ‘ಫ್ರಾಗ್ರೆಂಟ್‌ ಕಿಚನ್‌’ಅನ್ನು ಒಂದು ಬ್ರ್ಯಾಂಡ್‌ ರೀತಿಯಲ್ಲಿ ಬೆಳೆಸಲು ಮುಂದಾದರು. ಅಲ್ಲಿಂದ ಅವರ ಪ್ಲಮ್‌ ಕೇಕ್‌ಗೆ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿದೆ.

‘ನಮ್ಮ ಕೇಕ್‌ಗಳಲ್ಲಿ ಕೃತಕ ರಾಸಾಯನಿಕ ಬಳಸುವುದಿಲ್ಲ. ಆರ್ಡರ್‌ ಇದ್ದರೆ ಮಾತ್ರ ನಾವು ಉತ್ಪನ್ನಗಳನ್ನು ಸಿದ್ಧಪಡಿಸುತ್ತೇವೆ. ಹೆಚ್ಚುವರಿಯಾಗಿ ಉಳಿದರೆ ಅದನ್ನು ಅನಾಥಾಶ್ರಮಗಳಿಗೆ ನೀಡುತ್ತೇವೆ. ಆರ್ಡರ್‌ಗಳನ್ನು ಬೆಳಿಗ್ಗೆ ಸ್ವೀಕರಿಸಿ ಅದೇ ದಿನ ಸಂಜೆ ಮೂರು ಗಂಟೆಯೊಳಗೆ ವಿತರಣೆ ಮಾಡುತ್ತೇವೆ’ ಎಂದು ಗೀತಾ ಹೇಳುತ್ತಾರೆ.

ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮವಾಗಿ ಉಂಟಾದ ಬಿಕ್ಕಟ್ಟಿನಿಂದ ತಮಗೆ ಅನುಕೂಲವಾಯಿತು ಎನ್ನುವವರು ಕೆಲವೇ ಮಂದಿ. ಅಂತಹ ಕೆಲವೇ ಮಂದಿಯಲ್ಲಿ ಗೀತಾ ಸಹ ಒಬ್ಬರು. ‘ನನ್ನ ಉದ್ಯಮದ ಪಾಲಿಗೆ ಕೋವಿಡ್‌–19 ಸಕಾರಾತ್ಮಕವಾಗಿ ಪರಿಣಮಿಸಿತು. ಬೇಡಿಕೆ ಹೆಚ್ಚಿದ್ದರಿಂದ ಕೋವಿಡ್‌–19ಗೆ ಮುನ್ನ ಗ್ರಾಹಕರ ಆರ್ಡರ್‌ಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತಿತ್ತು. ಹಾಗಾಗಿ ಕೆಲವೊಂದು ಆರ್ಡರ್‌ಗಳನ್ನು ಮನಸ್ಸಿಲ್ಲದಿದ್ದರೂ ಕೈಬಿಡಬೇಕಾಗುತ್ತಿತ್ತು. ಲಾಕ್‌ಡೌನ್‌ ಸಮಯದಲ್ಲಿ ನಾನು ಆತಂಕದಲ್ಲಿದ್ದೆ. ನನ್ನದೇ ಆದ ಡೆಲಿವರಿ ಟೀಮ್‌ ಇರಲಿಲ್ಲ. ನಿವಾಸಿಗಳ ಕಲ್ಯಾಣ ಸಂಘಗಳು ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸುರಕ್ಷತೆಗೆ ಒತ್ತು ನೀಡುತ್ತಿದ್ದವು. ಅವುಗಳಿಂದ ಬೇಡಿಕೆ ಬರಲು ಆರಂಭವಾದಾಗ ಪರಿಸ್ಥಿತಿ ಬದಲಾಯಿತು’ ಎಂದು ಗೀತಾ ಹೇಳುತ್ತಾರೆ.

ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಆರಂಭದಲ್ಲಿ ಕಷ್ಟವಾಗುತ್ತಿತ್ತು ಎಂಬುದನ್ನು ಗೀತಾ ಒಪ್ಪಿಕೊಳ್ಳುತ್ತಾರೆ. ‘ಆರಂಭದಲ್ಲಿ ಇದು ಕಷ್ಟವಾಗಿತ್ತು. ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಮಾರ್ಗದರ್ಶನ ಮಾಡಲು, ಕೆಲವೊಂದು ಬ್ರೆಡ್‌ಗಳನ್ನು ತಯಾರಿಸಲು ನನ್ನ ಟೀಮ್‌ ಜೊತೆಗೆ ನಿರಂತರವಾಗಿ ವೀಡಿಯೋ ಕಾನ್ಫರೆನ್ಸಿಂಗ್‌ ಮಾಡುತ್ತಿದ್ದೆ. ವಿತರಣೆಗಾಗಿ ನಾವು ಸದಾ ಬಳಸುತ್ತಿದ್ದ ಆಟೋಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದೆವು. ಸಂಕಷ್ಟದ ಸಮಯದಲ್ಲಿ ಇದು ಅವರಿಗೆ ಸಹಕಾರಿಯೂ ಆಯ್ತು’.

ತಮ್ಮ ಉದ್ಯಮವನ್ನು ಇತರ ನಗರಗಳಿಗೂ ವಿಸ್ತರಿಸುವ ಯೋಜನೆ ಗೀತಾ ಅವರಲ್ಲಿದೆ. ಅವರು ಕೆಲವು ಉತ್ಪನ್ನಗಳನ್ನು ಈ ಕ್ರಿಸ್ಮಸ್‌ ವೇಳೆ ವಿವಿಧ ನಗರಗಳಿಗೆ ತಲುಪಿಸಿದ್ದಾರೆ. ವರ್ಷದ ಎಲ್ಲ ದಿನವೂ ಹೇಗೆ ಈ ರೀತಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ಗೀತಾ ಯೋಚಿಸುತ್ತಿದ್ದಾರೆ. ತಮ್ಮ ಸಹ ಉದ್ಯಮಿಗಳಿಗೆ ಗೀತಾ ಹೇಳುವ ಕಿವಿಮಾತಿದು; ‘ಏಳು ಬಾರಿ ಎಡವಿದರೆ, ಎಂಟು ಬಾರಿ ಎದ್ದು ನಿಲ್ಲಬೇಕು. ಪರಿ‍ಸ್ಥಿತಿ ಹಲವು ಬಾರಿ ನೀವಂದುಕೊಂಡ ರೀತಿಯಲ್ಲಿ ಇರುವುದಿಲ್ಲ. ಆದರೆ ನೀವು ಮಾಡುವ ಕೆಲಸವನ್ನು ಪ್ರೀತಿಸಿದರೆ, ಕಠಿಣ ಸಂದರ್ಭಗಳನ್ನೂ ನಿಭಾಯಿಸಬಹುದು. ಕಾಮನಬಿಲ್ಲಿನ ಬೆನ್ನಟ್ಟಿ ಹೋಗದೇ ಚಿನ್ನದ ಮಡಿಕೆಯಿರುವ ಸ್ಥಳ ಕಾಣಿಸುವುದಿಲ್ಲ ಎಂಬ ನಾಣ್ನುಡಿಯೇ ಇದೆ. ಮುಖ್ಯವಾಗಿ ನಿಮ್ಮ ಸಾಮರ್ಥ್ಯದಲ್ಲಿ ನಿಮಗೆ ನಂಬಿಕೆ ಇರಬೇಕು. ನಿಮ್ಮಲ್ಲೇ ಆ ನಂಬಿಕೆ ಇಲ್ಲದಿದ್ದರೆ ಬೇರೆಯವರಲ್ಲಿ ಅದಿರಲು ಸಾಧ್ಯವೇ?!’.


ಎಂ. ಶ್ರೀನಿವಾಸ್ ರಾವ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು