ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಸೂಚ್ಯಂಕ ಇಳಿಕೆಯ ನಡುವೆಯೂ ಜೊಮ್ಯಾಟೊ ಷೇರು ಶೇ 15ರಷ್ಟು ಏರಿಕೆ

ಅಕ್ಷರ ಗಾತ್ರ

ಬೆಂಗಳೂರು: ಹೂಡಿಕೆದಾರರು ಐಟಿ ಕಂಪನಿಗಳ ಷೇರುಗಳ ಮಾರಾಟಕ್ಕೆ ಮುಂದಾದ ಕಾರಣ ಷೇರುಪೇಟೆಗಳ ಸೂಚ್ಯಂಕ ಸತತ ಎರಡನೇ ದಿನವೂ ಇಳಿಮುಖವಾಯಿತು. ಈ ನಡುವೆ ಆಹಾರ ಪದಾರ್ಥಗಳನ್ನುಮನೆಬಾಗಿಲಿಗೆ ತಲುಪಿಸುವ ಜೊಮ್ಯಾಟೊ ಕಂಪನಿಯ ಷೇರು ಬೆಲೆ ಶೇಕಡ 15ರವರೆಗೂ ಏರಿಕೆ ದಾಖಲಿಸಿದೆ.

ಸಕ್ಕರೆಯ ರಫ್ತಿನ ಮೇಲೆ ಭಾರತ ಸರ್ಕಾರವು ನಿರ್ಬಂಧ ಹೇರುವ ಸಾಧ್ಯತೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆ ಸಕ್ಕರೆ ತಯಾರಿಸುವ ಕಂಪನಿಗಳ ಷೇರು ಬೆಲೆ ತೀವ್ರ ಕುಸಿತಕ್ಕೆ ಒಳಗಾಗಿದೆ. ಧಾಂಪುರ್‌ ಸುಗರ್‌ ಮಿಲ್ಸ್‌, ಬಲರಾಮ್‌ಪುರ್ ಚಿನಿ, ದಾಲ್ಮಿಯಾ ಭಾರತ್‌ ಶುಗರ್‌ ಆ್ಯಂಡ್‌ ಇಂಡಸ್ಟ್ರೀಸ್ ಹಾಗೂ ಶ್ರೀ ರೇಣುಕಾ ಶುಗರ್ಸ್‌ ಕಂಪನಿಗಳ ಷೇರು ಬೆಲೆ ಶೇಕಡ 5ರಿಂದ 7.7ರವರೆಗೂ ಇಳಿಕೆ ಕಂಡಿದೆ.

ಜೊಮ್ಯಾಟೊ ಕಂಪನಿಯು ಮಾರ್ಚ್‌ ತ್ರೈಮಾಸಿಕದಲ್ಲಿ ₹359 ಕೋಟಿ ನಷ್ಟ ಅನುಭವಿಸಿದ್ದರೂ ಒಟ್ಟು ವರಮಾನದಲ್ಲಿ ಶೇಕಡ 75ರಷ್ಟು ಚೇತರಿಕೆ ದಾಖಲಿಸಿದೆ. 2021–22ರ ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿ ₹1,211 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ₹692 ಕೋಟಿ ವರಮಾನ ಗಳಿಸಿತ್ತು.

ಮಂಗಳವಾರದ ವಹಿವಾಟು ಅಂತ್ಯಕ್ಕೆ ಜೊಮ್ಯಾಟೊ ಷೇರು ಬೆಲೆ ಶೇಕಡ 14.72ರಷ್ಟು ಹೆಚ್ಚಳದೊಂದಿಗೆ ₹65.45 ತಲುಪಿದೆ. ಈ ಮೂಲಕ ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ₹51,218 ಕೋಟಿಗೆ ತಲುಪಿದೆ. ಕಂಪನಿಯ ಒಟ್ಟು 49.21 ಲಕ್ಷ ಷೇರುಗಳು ಇಂದು ವಹಿವಾಟುಗೊಂಡಿದೆ.

ರಷ್ಯಾ–ಉಕ್ರೇನ್‌ ಸಂಘರ್ಷ, ಹಣದುಬ್ಬರ ಹೆಚ್ಚಳದ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆ ಮಾಡುವ ಆರ್‌ಬಿಐ ನಿರ್ಧಾರ, ಚೀನಾದಲ್ಲಿ ಕೋವಿಡ್‌–19 ಪ್ರಕರಣ ಏರಿಕೆಯಿಂದ ಸರಕು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಅದರ ನೇರ ಪರಿಣಾಮ ಷೇರುಪೇಟೆಗಳಲ್ಲಿ ಕಾಣಬಹುದಾಗಿದೆ.

ಇನ್ಫೊಸಿಸ್‌, ಟಿಸಿಎಸ್‌ ಹಾಗೂ ವಿಪ್ರೊ ಕಂಪನಿಗಳ ಷೇರು ಶೇಕಡ 1.88ರಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT