ಭಾನುವಾರ, ಸೆಪ್ಟೆಂಬರ್ 20, 2020
21 °C

ಸಾಲಕ್ಕೆ ಕಾರು ಖರೀದಿಸುವ ಮುನ್ನ...

ನರಸಿಂಹ ಬಿ. Updated:

ಅಕ್ಷರ ಗಾತ್ರ : | |

ಕಾರ್ ಕಾರ್ ಕಾರ್ ಎಲ್ನೋಡಿ ಕಾರ್. ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ಈ ಗೀತೆಯಲ್ಲಿ ವರ್ಣಿಸಿರುವಂತೆ ಕಾರಿನಲ್ಲಿ ಓಡಾಡುವುದು ಎಲ್ಲರಿಗೂ ಇಷ್ಟ. ಕಾರು ಯಾರಿಗೆ ಎಷ್ಟು ಅಗತ್ಯ ಎನ್ನುವುದಕ್ಕಿಂತ ಅದು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ಕಾರಿಲ್ಲದಿದ್ದರೆ ಅಪರಾಧವೆನೋ ಎನ್ನುವಷ್ಟರ ಮಟ್ಟಿಗೆ ಜನರು ಕಾರಿನ ಮೋಹಕ್ಕೆ ಬಿದ್ದಿದ್ದಾರೆ. ಈಗ ಬ್ಯಾಂಕ್‌ಗಳು ಕಾರ್‌ ಲೋನ್‌ ಕೊಡಲು ಮುಂದೆ ಬರುತ್ತಿವೆ. ಕಾರು ಪ್ರಿಯರು ಸಹ ಪೂರ್ವಾಪರ ಯೋಚಿಸದೆ ಕಾರು ಖರೀದಿಗೆ ಮುಗಿಬಿದ್ದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ವಾರ್ಷಿಕ ಆದಾಯಕ್ಕಿಂತ ಹೆಚ್ಚು ಸಾಲ ಬೇಡ: ಯಾವುದೇ ವ್ಯಕ್ತಿ ತನ್ನ ವಾರ್ಷಿಕ ಆದಾಯಕ್ಕಿಂತ ಹೆಚ್ಚು ಸಾಲ ಮಾಡಿ ಕಾರು ಖರೀದಿಸಿದರೆ ಆತನ ಆರ್ಥಿಕ ಸ್ಥಿತಿ ಹಳಿ ತಪ್ಪುತ್ತದೆ. ವರ್ಷಕ್ಕೆ ₹7 ಲಕ್ಷ  ಆದಾಯ ಗಳಿಸೋ ವ್ಯಕ್ತಿ, ಯಾವುದೇ ಕಾರಣಕ್ಕೂ ಸಾಲ ಮಾಡಿ ₹16 ಲಕ್ಷ  ಮೌಲ್ಯದ ಕಾರು ಖರೀದಿ ಮಾಡಬಾರದು. ಹೆಚ್ಚೆಂದರೆ ₹7 ಲಕ್ಷ  ಸಾಲ ಮಾಡಿ ಹೊಸ ಕಾರು ಖರೀದಿ ಮಾಡಬಹುದು.

ಒಂದೊಮ್ಮೆ ಆ ವ್ಯಕ್ತಿ ಅಂದುಕೊಂಡಂತೆ ₹16 ಲಕ್ಷ ಸಾಲ ಮಾಡಿ ಕಾರು ಖರೀದಿಸಿದ್ರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾನೆ. ಸಾಲ ಮರು ಪಾವತಿ, ವಿಮೆ ನವೀಕರಣ, ವಾಹನ ನಿರ್ವಹಣೆ, ಪ್ರಯಾಣ ವೆಚ್ಚ ಅಂತ ಖರ್ಚಿನ ಮೇಲೆ ಖರ್ಚು ಬರುತ್ತಿರುತ್ತದೆ. ಇದರ ಜತೆಗೆ ಕುಟುಂಬ ನಿರ್ವಹಣೆಯ ಹೊಣೆಯೂ ಇರುತ್ತದೆ. ಆಗ ಹಣಕಾಸು ಹೊಂದಿಸಲು ಕಷ್ಟವಾಗಿ ಕಾರನ್ನೇ ಮಾರಾಟ ಮಾಡುವ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ.

ಕಾರ್ ಮೌಲ್ಯ ವೃದ್ಧಿಸುವುದಿಲ್ಲ: ಕಾರ್‌ ಅನ್ನುವುದು ಮೌಲ್ಯ ವೃದ್ಧಿಸುವ ಆಸ್ತಿಯಲ್ಲ. ಎಷ್ಟೇ ಚೆನ್ನಾಗಿ ನಿರ್ವಹಣೆ ಮಾಡಿದ್ದರೂ ಷೋರೂಂನಿಂದ ಹೊರಬಂದ ತಕ್ಷಣ ಅದು ಸೆಕೆಂಡ್ ಹ್ಯಾಂಡ್ ಕಾರ್. ಸೆಕೆಂಡ್ ಹ್ಯಾಂಡ್ ಕಾರ್‌ಗಳಿಗೆ ಮಾರುಕಟ್ಟೆ ದರ ಹೆಚ್ಚಿರುವುದಿಲ್ಲ. ಹೀಗಾಗಿ ಕಾರ್ ಖರೀದಿಸಲು ದೊಡ್ಡ ಸಾಲ ಮಾಡುವುದು ಉಚಿತವಲ್ಲ.

ಡೌನ್ ಪೇಮೆಂಟ್ ಹೆಚ್ಚು ಕಟ್ಟಿ: ಕೆಲ ಬ್ಯಾಂಕ್‌ಗಳು ಷೋರೂಂ ಕಾರ್‌ನ ಪೂರ್ಣ ದರವನ್ನು ಸಾಲವಾಗಿ ನೀಡಿದರೆ, ಕೆಲವು ಬ್ಯಾಂಕ್‌ಗಳು ಶೇ 80 ರಷ್ಟನ್ನು ಮಾತ್ರ ನೀಡುತ್ತವೆ. 4 ವರ್ಷ ಅಥವಾ 7 ವರ್ಷಗಳ ಅವಧಿಗೆ ಲೋನ್ ಸಿಗುತ್ತದೆ. ಸಾಲದ ಅವಧಿ ಹೆಚ್ಚುತ್ತಾ ಸಾಗಿದಂತೆ ಬಡ್ಡಿಯ ದರವೂ ಏರುತ್ತದೆ. ವ್ಯಕ್ತಿಯ ಆದಾಯ ಮತ್ತು ಇಎಂಐ ಭರಿಸುವ ಸಾಮರ್ಥ್ಯದ ಆಧಾರದಲ್ಲಿ ಕಾರು ಸಾಲ ಸಿಗುತ್ತದೆ. ಕಾರಿನ ಡೌನ್‌ಪೇಮೆಂಟ್ ಸಾಧ್ಯವಾದಷ್ಟು ಹೆಚ್ಚು ಕೊಟ್ಟರೆ ಬಡ್ಡಿಯಲ್ಲಿ ಉಳಿತಾಯವಾಗುತ್ತದೆ.

ನೆನಪಿನಲ್ಲಿಡಿ, ಯಾವುದೇ ಕಾರಣಕ್ಕೂ ಕಾರ್ ಖರೀದಿಗೆ ಹಣ ಇಲ್ಲ ಅಂತ ಪರ್ಸನಲ್ ಲೋನ್ ತೆಗೆದುಕೊಳ್ಳಬೇಡಿ.

ಷೇರುಪೇಟೆಗೆ ಸಂಭ್ರಮದ ವಾರ

ಷೇರುಪೇಟೆ ಸೂಚ್ಯಂಕ 5 ದಿನಗಳ ನಿರಂತರ ಏರಿಕೆ ದಾಖಲಿಸಿ ಸಂಭ್ರಮದಲ್ಲಿದೆ. ನವೆಂಬರ್ 30 ಕ್ಕೆ ಕೊನೆಯಾದ ವಾರದ ವಹಿವಾಟಿನಂತೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಶೇ 3 ಕ್ಕಿಂತಲೂ ಹೆಚ್ಚು ಏರಿಕೆ ದಾಖಲಿಸಿವೆ. ಒಂದು ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 1,213 ಹಾಗೂ 350 ಅಂಶಗಳ ಏರಿಕೆ ಕಂಡಿವೆ.

ನವೆಂಬರ್ ಮೂರನೇ ವಾರದಲ್ಲಿ ನಿರಂತರ ಕುಸಿತ ದಾಖಲಿಸಿದ್ದ ಪೇಟೆ, ಹಿಂದಿನ ವಾರದ ಐದು ದಿನಗಳಲ್ಲೂ ಸಕಾರಾತ್ಮಕವಾಗಿ ವಹಿವಾಟು ನಡೆಸಲು ಹಲವು ಅಂಶಗಳು ಪೂರಕವಾಗಿ ಸ್ಪಂದಿಸಿವೆ. ಅವುಗಳಲ್ಲಿ ರೂಪಾಯಿ ಮೌಲ್ಯ ಚೇತರಿಕೆ, ಕಚ್ಚಾ ತೈಲ ಬೆಲೆ ಇಳಿಕೆ, ಪಂಚ ರಾಜ್ಯ ಚುನಾವಣೆ , ವಿದೇಶಿ ಮಾರುಕಟ್ಟೆ ಸ್ಪಂದನೆ ಪ್ರಮುಖವಾಗಿವೆ.

ಶುಕ್ರವಾರ ಆರಂಭದಲ್ಲಿ ನಕಾರಾತ್ಮಕವಾಗಿ ಕಾಣಿಸಿಕೊಂಡಿದ್ದ ವಹಿವಾಟು ದಿನದ ಅಂತ್ಯಕ್ಕೆ ಸಕಾರಾತ್ಮಕ ಹಾದಿಗೆ ಮರಳಿತು.

ಆರ್ಥಿಕ ಪ್ರಗತಿಯ ದತ್ತಾಂಶ ( ಜಿಡಿಪಿ) ಬಿಡುಗಡೆಯ ನಿರೀಕ್ಷೆಯಿದ್ದ ಕಾರಣ ಬ್ಯಾಂಕಿಂಗ್, ತೈಲ ಮತ್ತು ಅನಿಲ, ಟೆಲಿಕಾಂ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. 

ಮುನ್ನೋಟ

ನವೆಂಬರ್ ತಿಂಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ ಶೇ 5.08 ರಷ್ಟು ಏರಿಕೆ ಕಂಡು ಆರು ವರ್ಷಗಳ ಬಳಿಕ ದಾಖಲೆ ನಿರ್ಮಿಸಿದೆ.

2102 ರ ನವೆಂಬರ್‌ನಲ್ಲಿ ಸೆನ್ಸೆಕ್ಸ್ 4.1 ರಷ್ಟು ಏರಿಕೆ ಕಂಡಿತ್ತು. ಆದರೆ ಇದೇ ವೇಗ ಡಿಸೆಂಬರ್‌ನಲ್ಲಿ ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಡಿಸೆಂಬರ್ 6 ರಂದು ಆಸ್ಟ್ರಿಯಾದಲ್ಲಿ ನಡೆಯಲಿರುವ ಪೆಟ್ರೋಲಿಯಂ ಪೂರೈಕೆ ರಾಷ್ಟ್ರಗಳ ಒಕ್ಕೂಟದ (ಒಪೆಕ್) ಸಭೆಯಲ್ಲಿ ಪೆಟ್ರೋಲ್ ಉತ್ಪಾದನೆ ಕಡಿತಗೊಳಿಸಲು ತೀರ್ಮಾನಿಸಿದಲ್ಲಿ ಅದರ ಪ್ರಭಾವ ಷೇರುಪೇಟೆಯ ಮೇಲಾಗಲಿದೆ.

ಅರ್ಜೆಂಟಿನಾದ ‘ಜಿ–20’ ಶೃಂಗ ಸಭೆಯಲ್ಲಿನ ಬೆಳವಣಿಗೆಗಳು ಕೂಡ ಮಾರಕಟ್ಟೆಯ ಗತಿ ನಿರ್ಧಿರಿಸಲಿವೆ. ರೂಪಾಯಿ ಮೌಲ್ಯ, ತೈಲ ಬೆಲೆ, ರಾಜಸ್ಥಾನ ಚುನಾವಣೆಯು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿವೆ. ಈ ವಾರ ನೆಸ್ಟ್ಲೇ ಇಂಡಿಯಾ, ಮುತ್ತೂಟ್ ಫೈನಾನ್ಸ್, ತಮ್ಮ ಹಣಕಾಸು ಸಾಧನೆ ಪ್ರಕಟಿಸಲಿವೆ.

(ಲೇಖಕ: ಇಂಡಿಯನ್ ಮನಿಡಾಟ್‌ಕಾಂನ ಉಪಾಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು