ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹೂಡಿಕೆ; ಅತಿ ನಿರೀಕ್ಷೆ ಬೇಡ

Last Updated 4 ಸೆಪ್ಟೆಂಬರ್ 2020, 7:39 IST
ಅಕ್ಷರ ಗಾತ್ರ

ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ. ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ ಕುಸಿತ ಕಂಡಿದೆ. ತಯಾರಿಕಾ ವಲಯ ಸೇರಿದಂತೆ ಅರ್ಥ ವ್ಯವಸ್ಥೆಯ ಪ್ರಮುಖ ವಲಯಗಳು ಕುಸಿತ ಅನುಭವಿಸಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿ ಸಂಗ್ರಹವಾಗುವ ಮೊತ್ತದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಇಳಿಕೆ ಕಂಡುಬಂದಿದೆ.

ಜಿಡಿಪಿ ಕುಸಿತ ಹಾಗೂ ತೆರಿಗೆ ಸಂಗ್ರಹದಲ್ಲಿನ ಇಳಿಕೆಯನ್ನು ಅಂಕಿ–ಅಂಶಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರವೇ ಸೀಮಿತಗೊಳಿಸಬಾರದು. ಇವೆರಡನ್ನೂ ಒಟ್ಟಿಗಿಟ್ಟು ನೋಡಿದಾಗ, ಜಿಡಿಪಿಗೆ ಕೊಡುಗೆ ನೀಡುವ ವಿವಿಧ ವಲಯಗಳ ಆರೋಗ್ಯ ಸರಿ ಇಲ್ಲ, ಅಲ್ಲಿನ ಚಟುವಟಿಕೆಗಳು ಉತ್ಸಾಹದಿಂದ ನಡೆಯುತ್ತಿಲ್ಲ ಎಂಬುದು ಗೊತ್ತಾಗುತ್ತದೆ; ಜನರು ಕೊಳ್ಳುವ–ಮಾರುವ ಪ್ರಮಾಣ ಕಡಿಮೆ ಆಗಿದ್ದರ ಪರಿಣಾಮವಾಗಿ ಜಿಎಸ್‌ಟಿ ಸಂಗ್ರಹ ಕೂಡ ಇಳಿದಿದೆ ಎಂಬುದು ಅರಿವಾಗುತ್ತದೆ. ಇಷ್ಟೆಲ್ಲ ಇದ್ದರೂ ದೇಶದ ಅರ್ಥ ವ್ಯವಸ್ಥೆಯ ಸೂಚ್ಯಂಕಗಳಲ್ಲಿ ಒಂದಾದ ಷೇರು ಮಾರುಕಟ್ಟೆಗಳಲ್ಲಿ ಮಾತ್ರ ಭರ್ಜರಿ ವಹಿವಾಟು ನಡೆಯುತ್ತಿವೆ!

ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು?! ದೇಶದಲ್ಲಿ ಲಾಕ್‌ಡೌನ್‌ ಆರಂಭವಾಗುವ ಸಂದರ್ಭದಲ್ಲಿ 25,900 ಅಂಶಗಳ ಸಮೀಪಕ್ಕೆ ಜಾರಿದ್ದ ಸೆನ್ಸೆಕ್ಸ್, ಈಗ 39 ಸಾವಿರದ ಆಸುಪಾಸಿನಲ್ಲಿ ಇದೆ. ಲಾಕ್‌ಡೌನ್‌ ಆರಂಭಗೊಂಡಾಗ ಬಹಳ ಕಡಿಮೆ ಬೆಲೆಗೆ ಸಿಗುತ್ತಿದ್ದ ಹಲವು ಕಂಪನಿಗಳ ಷೇರುಗಳು ಹೂಡಿಕೆದಾರರಿಗೆ ಒಳ್ಳೆಯ ಲಾಭ ತಂದುಕೊಟ್ಟಿವೆ. ನಿಜ, ಮೂರು ತಿಂಗಳುಗಳ ಹಿಂದೆ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದ್ದವರು ಈಗ ಒಳ್ಳೆಯ ಲಾಭವನ್ನು ಕಂಡಿರಬಹುದು. ಆದರೆ, ಈ ಸ್ಥಿತಿ ಶಾಶ್ವತ ಅಲ್ಲ. ಷೇರು ಮಾರುಕಟ್ಟೆಯಲ್ಲಿ ಹಣ ಎಷ್ಟು ಬೇಗ ಬರುತ್ತದೆಯೋ, ಅಷ್ಟೇ ಬೇಗ ಕರಗುತ್ತದೆ ಕೂಡ!

ಕಳೆದ ಡಿಸೆಂಬರ್‌ನಿಂದ ಈಚೆಗೆ ಡಿಮ್ಯಾಟ್ ಖಾತೆಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಆಗಿದೆ. ಅಂದರೆ, ಷೇರು ಮಾರುಕಟ್ಟೆಗಳಲ್ಲಿ ಹೊಸಬರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಲಾಕ್‌ಡೌನ್‌ ನಂತರದ ದಿನಗಳಲ್ಲಿ ಒಂದು ವರ್ಗದಿಂದ ಹೆಚ್ಚಿನ ಪ್ರಮಾಣದ ನಗದು ಷೇರು ಮಾರುಕಟ್ಟೆಗಳಿಗೆ ಹರಿದುಬರುತ್ತಿರುವುದು ಮಾರುಕಟ್ಟೆ ಜಿಗಿಯಲು ಕಾರಣ ಎಂದು ಹೇಳಲಾಗುತ್ತಿದೆ. ಸ್ಮಾರ್ಟ್‌ಫೋನ್‌ ಮೂಲಕವೇ ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ಆ್ಯಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಕೂಡ, ಹೂಡಿಕೆ ಪ್ರಕ್ರಿಯೆ ಸುಲಲಿತ ಆಗಿದೆ. ಇದು ಕೂಡ ರಿಟೇಲ್‌ ಹೂಡಿಕೆದಾರರು ಮಾರುಕಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿರಲು ಕಾರಣ.

ಆದರೆ, ರಿಟೇಲ್‌ ಹೂಡಿಕೆದಾರರು ಒಂದು ವಿಷಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂಬುದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಿರುವ ಎಚ್ಚರಿಕೆಯ ಮಾತು. ತಾವು ಹೂಡಿಕೆ ಮಾಡಬೇಕು ಎಂದು ತೀರ್ಮಾನಿಸುವ ಮುನ್ನ, ಹೂಡಿಕೆ ಮಾಡಲು ಇಚ್ಛಿಸುವ ಕಂಪನಿಗಳ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು. ಆ ಕಂಪನಿಯ ವಹಿವಾಟು ಹೇಗಿದೆ, ಯಾವ ಉದ್ಯಮ ವಲಯದಲ್ಲಿ ಆ ಕಂಪನಿ ಇದೆ, ಆ ವಲಯದ ಭವಿಷ್ಯ ಹೇಗಿದೆ, ಕಂಪನಿಯಲ್ಲಿನ ಕಾರ್ಪೊರೇಟ್‌ ಆಡಳಿತ ಯಾವ ರೀತಿಯದ್ದಿದೆ, ಕಂಪನಿಯ ಪ್ರಮುಖ ಹುದ್ದೆಗಳಲ್ಲಿ ಯಾರಿದ್ದಾರೆ, ಅವರು ಎಷ್ಟರಮಟ್ಟಿಗೆ ಸಮರ್ಥರಿದ್ದಾರೆ... ಇವೆಲ್ಲವನ್ನೂ ಅರ್ಥ ಮಾಡಿಕೊಂಡ ನಂತರವಷ್ಟೇ ನೇರವಾಗಿ ಷೇರುಗಳಲ್ಲಿ ಹೂಡಿಕೆಗೆ ಮುಂದಾಗುವುದು ಒಳಿತು.

ಹೊಸದಾಗಿ ಹಣ ಹೂಡಿಕೆ ಮಾಡಿದವರು, ಷೇರು ಪೇಟೆಯಲ್ಲಿ ಹಣ ಬೆಳೆದಿದ್ದನ್ನು ಮಾತ್ರ ಕಂಡಿದ್ದಾರೆ. ಅವರು ಅಲ್ಲಿ ಹಣ ಕಳೆದುಕೊಂಡ ಅನುಭವ ಪಡೆದವರಲ್ಲ. ಹಾಗಾಗಿ, ಯಾವುದೇ ಕಂಪನಿಯ ಮೇಲೆ ಹೂಡಿಕೆ ಮಾಡುವ ಮುನ್ನ ಆತುರದ ತೀರ್ಮಾನ ಕೈಗೊಳ್ಳುವುದು ಬೇಡ ಎನ್ನುವ ಕಿವಿಮಾತನ್ನು ಹಣಕಾಸು ಸಲಹೆಗಾರರು ಹೊಸ ಹೂಡಿಕೆದಾರರಿಗೆ ನೀಡುತ್ತಾರೆ.

ಭಾರತದ ಷೇರು ಮಾರುಕಟ್ಟೆ ಜಿಗಿಯುತ್ತಿರುವ ಪ್ರಮಾಣವನ್ನು ಕಂಡು ಬೆರಗಾಗಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ‘ಷೇರು ಮಾರುಕಟ್ಟೆಗಳು ವಾಸ್ತವದ ಜೊತೆಗಿನ ನಂಟು ಕಡಿದುಕೊಂಡಿವೆ’ ಎಂದು ಹೇಳಿದ್ದಾಗಿ ವರದಿಯಾಗಿದೆ. ಅಂದರೆ, ಮಾರುಕಟ್ಟೆ ಒಮ್ಮೆ ಕುಸಿಯಲಿದೆ. ಅದು ಖಚಿತ. ಆದರೆ, ಅದು ಯಾವಾಗ ಕುಸಿಯಲಿದೆ ಎಂಬ ಪ್ರಶ್ನೆಗೆ ಮಾತ್ರ ತಕ್ಷಣದ ಉತ್ತರ ಇಲ್ಲ.

ಹಾಗೆಂದು, ಹೂಡಿಕೆಯನ್ನು ನಿಲ್ಲಿಸುವ ಅಗತ್ಯ ಇಲ್ಲ. ಆದರೆ, ಅತಿಯಾದ ನಿರೀಕ್ಷೆಗಳನ್ನು ಇರಿಸಿಕೊಳ್ಳದೆ, ದೀರ್ಘಾವಧಿಗೆ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವ ಗುರಿಯೊಂದಿಗೆ ಹೂಡಿಕೆ ಮಾಡಿದ್ದೇ ಆದಲ್ಲಿ ನಿರಾಸೆ ಆಗುವ ಸ್ಥಿತಿಯಂತೂ ಎದುರಾಗದು. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವಷ್ಟು ಅರಿವು ಇಲ್ಲ, ಆದರೂ ಹೂಡಿಕೆ ಮಾಡಲೇಬೇಕು ಎಂಬ ಬಯಕೆ ಇದ್ದವರು ಮ್ಯೂಚುವಲ್ ಫಂಡ್‌ಗಳ ಮೂಲಕ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಸದ್ಯದ ಮಟ್ಟಿಗೆ ಶ್ರೇಯಸ್ಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT