ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗಿತು ಹೂಡಿಕೆದಾರರ ₹5 ಲಕ್ಷ ಕೋಟಿ ಸಂಪತ್ತು: ಬಿಡದ ಕೊರೊನಾ ಆತಂಕ

Last Updated 9 ಮಾರ್ಚ್ 2020, 6:58 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರ ದೇಶದ ಷೇರುಪೇಟೆಗಳಲ್ಲಿ ಉಂಟಾದ ಮತ್ತೊಂದು ಮಹಾ ಕುಸಿತದಿಂದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರ ಅಂದಾಜು ₹5 ಲಕ್ಷ ಕೋಟಿ ಸಂಪತ್ತು ಕರಗಿದೆ.

ಕೋವಿಡ್‌–19 ಭೀತಿಯು ಇಡೀ ಏಷ್ಯಾ ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿದೆ. ಆರ್ಥಿಕತೆಯ ಮೇಲೂ ಹೊರೆಯಾಗುತ್ತಿರುವ ಕೊರೊನಾ ಆತಂಕದಿಂದ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. 1600 ಅಂಶಗಳಿಗೂ ಅಧಿಕ ಇಳಿಕೆಯೊಂದಿಗೆ ಸೆನ್ಸೆಕ್ಸ್‌ 36,000 ಅಂಶಗಳಿಗಿಂತ ಕಡಿಮೆಯಾಗಿದೆ. ನಿಫ್ಟಿ 440 ಅಂಶ ಕುಸಿದು, 10,500 ಅಂಶಗಳಿಗೆ ಸಮೀಪಿಸುತ್ತಿದೆ.

ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ ಶೇ 4ರಷ್ಟು ಕುಸಿತದ ಪರಿಣಾಮ, ಹೂಡಿಕೆದಾರರ ಅಂದಾಜು ₹4,79,820.87 ಕೋಟಿ ಕೊಚ್ಚಿ ಹೋಗಿದೆ.

ಮಾರ್ಚ್‌ 2 ರಿಂದ 6ರವರೆಗೆ ನಡೆದಿರುವ ವಹಿವಾಟಿನಲ್ಲಿ ಪ್ರಮುಖ 10 ಕಂಪನಿಗಳಲ್ಲಿ 6 ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ₹95,432 ಕೋಟಿ ಇಳಿಕೆಯಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಮಾರುಕಟ್ಟೆ ಮೌಲ್ಯದಲ್ಲಿ ₹37,144 ಕೋಟಿ ಕಡಿಮೆಯಾಗಿದ್ದು, ಒಟ್ಟಾರೆ ಮಾರುಕಟ್ಟೆ ಮೌಲ್ಯ ₹8,05,119 ಕೋಟಿಗೆ ಇಳಿಕೆಯಾಗಿದೆ.

ಇಂಡಿಯಾ ಬುಲ್ಸ್‌, ಒಎನ್‌ಜಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಎಲ್‌ಆ್ಯಂಡ್‌ಟಿ, ಐಸಿಐಸಿಐ ಬ್ಯಾಂಕ್‌ ಹಾಗೂ ಇನ್ಫೊಸಿಸ್‌ ಸೇರಿ ಬಹುತೇಕ ಕಂಪನಿಗಳ ಷೇರುಗಳು ಶೇ 2–13ರಷ್ಟು ಕುಸಿತ ದಾಖಲಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಮತ್ತು ಕೊರೊನಾ ಆತಂಕ ಹೂಡಿಕೆದಾರರಲ್ಲಿ ಮಾರಾಟಕ್ಕೆ ಪ್ರಚೋದಿಸುತ್ತಿದೆ.

ಚೀನಾದಲ್ಲಿ ಭಾನುವಾರದ ವರೆಗೂ ಒಟ್ಟು 80,735 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಆ ಪೈಕಿ 3,119 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT