ಸೆನ್ಸೆಕ್ಸ್ 814 ಅಂಶ ಜಿಗಿತ: ಐ.ಟಿ., ಬ್ಯಾಂಕ್ ಷೇರು ಮೌಲ್ಯ ಹೆಚ್ಚಳ

ಮುಂಬೈ: ಜಿಡಿಪಿ ಬೆಳವಣಿಗೆಯು ಉತ್ತಮವಾಗಿರುವ ಅಂದಾಜು ಮತ್ತು ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಚಲನೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸೂಚ್ಯಂಕಗಳು ಏರಿಕೆ ಹಾದಿಗೆ ಮರಳಿದವು.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿಯು ಸಹ ವಹಿವಾಟಿನ ಮೇಲೆ ಪ್ರಭಾವ ಬೀರಿತು ಎಂದು ವರ್ತಕರು ಹೇಳಿದ್ದಾರೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 814 ಅಂಶ ಹೆಚ್ಚಾಗಿ 58,014 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 238 ಅಂಶ ಹೆಚ್ಚಾಗಿ 17,340 ಅಂಶಗಳಿಗೆ ತಲುಪಿತು.
ಸೆನ್ಸಕ್ಸ್‌ನಲ್ಲಿ ಟೆಕ್ ಮಹೀಂದ್ರ ಕಂಪನಿ ಷೇರು ಮೌಲ್ಯವು ಶೇಕಡ 4.88ರಷ್ಟು ಗರಿಷ್ಠ ಏರಿಕೆ ಕಂಡಿತು.
ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಚಲನೆ ಮತ್ತು ಆರ್ಥಿಕ ಸಮೀಕ್ಷೆಯ ಪ್ರಭಾವದಿಂದಾಗಿ ಸೋಮವಾರ ದೇಶಿ ಷೇರುಪೇಟೆಗಳ ಸೂಚ್ಯಂಕಗಳು ಏರಿಕೆ ಕಂಡವು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. ಬಿಎಸ್‌ಇ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ 1.76ರವರೆಗೂ ಏರಿಕೆ ಕಂಡವು.
ರೂಪಾಯಿ ಮೌಲ್ಯ 42 ಪೈಸೆ ಹೆಚ್ಚಳ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 42 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.65ರಂತೆ ವಿನಿಮಯಗೊಂಡಿತು. 12 ವಾರಗಳಲ್ಲಿ ದಿನದ ವಹಿವಾಟಿನಲ್ಲಿ ಕಂಡಿರುವ ಗರಿಷ್ಠ ಗಳಿಕೆ ಇದು. ಬ್ರೆಂಟ್ ಕಚ್ಚಾ ತೈಲ ದರವು ಶೇ 0.86 ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 90.80 ಡಾಲರ್‌ಗೆ ತಲುಪಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.