ಭಾನುವಾರ, ಏಪ್ರಿಲ್ 5, 2020
19 °C

ಸೆನ್ಸೆಕ್ಸ್‌ 1,410 ಅಂಶ ಏರಿಕೆಯೊಂದಿಗೆ ವಹಿವಾಟು ಮುಕ್ತಾಯ: ಹೂಡಿಕೆಗೆ ವಿಶ್ವಾಸ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆ

ಮುಂಬೈ: ಸತತ ಮೂರನೇ ದಿನವೂ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಗುರುವಾರ ವಹಿವಾಟು ಆರಂಭದಿಂದಲೂ ಏರಿಕೆ–ಇಳಿಕೆಯಲ್ಲೇ ಸಾಗಿದ ಸೆನ್ಸೆಕ್ಸ್‌ ಮತ್ತು ನಿಫ್ಟಿ, ಕೇಂದ್ರ ಸರ್ಕಾರದ ಪರಿಹಾರ ಪ್ಯಾಕೇಜ್‌ ಘೋಷಣೆಯಾಗುತ್ತಿದ್ದಂತೆ ಇನ್ನಷ್ಟು ಚೇತರಿಸಿಕೊಂಡಿತು. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇ 4.94 (1,410.99 ಅಂಶ) ಏರಿಕೆಯೊಂದಿಗೆ 29,946.77 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ‍್ಟಿ ಶೇ 3.89 (323.60 ಅಂಶ) ಏರಿಕೆಯೊಂದಿಗೆ 8,641.45 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಯಿತು. 

ಇಂಡ್‌ಇಂಡ್‌ ಬ್ಯಾಂಕ್‌ ಒಂದೇ ದಿನ ಶೇ 46ರಷ್ಟು ಜಿಗಿಯುವ ಮೂಲಕ ದಾಖಲೆಯ ಗಳಿಕೆ ಕಂಡಿತು. ಭಾರ್ತಿ ಏರ್‌ಟೆಲ್‌, ಎಲ್‌ಆ್ಯಂಡ್‌ಟಿ, ಬಜಾಜ್‌ ಫೈನಾನ್ಸ್‌, ಕೊಟ್ಯಾಕ್‌ ಮಹೀಂದ್ರಾ, ಬಜಾಜ್‌ ಆಟೊ, ಹಿಂದುಸ್ತಾನ್‌ ಯೂನಿಲಿವರ್‌ ಲಿ., ಹಾಗೂ ಎಚ್‌ಡಿಎಫ್‌ಸಿ ಷೇರು ಶೇ 10ರ ವರೆಗೂ ಏರಿಕೆ ಕಂಡಿದೆ. ಆದರೆ, ಅತ್ಯಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಮಾರುತಿ ಸುಜುಕಿ, ಟೆಕ್‌ ಮಹೀಂದ್ರಾ ಹಾಗೂ ಸನ್‌ ಫಾರ್ಮಾ ಷೇರು ಬೆಲೆ ಇಳಿಕೆಯಾಯಿತು. 

ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ಅನುವಾಗಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ₹1.70 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌ ಪ್ರಕಟಿಸಿದರು. ಕೋವಿಡ್‌–19 ಬಿಕ್ಕಟ್ಟಿನಿಂದ ಆರ್ಥಿಕತೆಯ ಮೇಲೆ ಹೊರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಮುಂದಿನ ಮೂರು ತಿಂಗಳ ವರೆಗೂ ಹೆಚ್ಚುವರಿ ಆಹಾರ ಪದಾರ್ಥಗಳು, ಮಹಿಳೆ ಹಾಗೂ ಹಿರಿಯ ನಾಗರಿಕರಿಗೆ ಪರಿಹಾರ ಮೊತ್ತ ನೀಡಲಾಗುತ್ತಿದೆ. ಕಂಪನಿಗಳು ಹಾಗೂ ನೌಕರರಿಗೆ ಪಿಎಫ್‌ ಮೊತ್ತ ಪಾವತಿ ಮೂಲಕ ಸಹಕಾರ ನೀಡಲಾಗಿದೆ. 

ತಕ್ಷಣದಿಂದಲೇ ಈ ಪ್ಯಾಕೇಜ್‌ ಅನ್ವಯವಾಗಲಿದ್ದು, ಕೈಗಾರಿಕೆಗಳಿಗೆ ಸಂಬಂಧಿಸಿದ ಮತ್ತೊಂದು ಪ್ಯಾಕೇಜ್‌ನ್ನು ಸರ್ಕಾರ ಶೀರ್ಘ್ರದಲ್ಲೇ ಘೋಷಿಸಲಿದೆ. ಇದರಿಂದಾಗಿ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿ ಖರೀದಿ ಮುಂದುವರಿಸಿದರು. 

ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ 57 ಪೈಸೆ ಚೇತರಿಕೆ ಕಂಡು, ₹75.37ರಲ್ಲಿ ವಹಿವಾಟು ನಡೆಯಿತು. 

ಚೀನಾದ ಶಾಂಘೈ ಷೇರುಪೇಟೆ, ಹಾಂಕಾಂಗ್‌, ಜಪಾನ್‌ನ ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ದಾಖಲಾಗಿದೆ. ಯುರೋಪ್‌ ಷೇರುಪೇಟೆಗಳಲ್ಲಿಯೂ ಮಾರಾಟ ಒತ್ತಡ ಸೃಷ್ಟಿಯಾಗಿದೆ. ಇನ್ನೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 2.15ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 26.80 ತಲುಪಿದೆ. 

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಭಾರತದಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 649ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಸಂಖ್ಯೆ 13 ಆಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು