ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗಿತು ಹೂಡಿಕೆದಾರರ ₹6.25 ಲಕ್ಷ ಕೋಟಿ ಸಂಪತ್ತು: Yes Bank ಷೇರು ಶೇ 49 ಏರಿಕೆ

Last Updated 16 ಮಾರ್ಚ್ 2020, 6:43 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಆರ್ಥಿಕತೆ ಮೇಲೆ ಕೋವಿಡ್‌–19 ಪರಿಣಾಮದ ಕುರಿತು ಆತಂಕದಲ್ಲಿರುವ ಹೂಡಿಕೆದಾರರು ಸೋಮವಾರ ವಹಿವಾಟು ಆರಂಭದಲ್ಲಿಯೇ ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಕೆಲವೇ ನಿಮಿಷಗಳ ವಹಿವಾಟಿನಲ್ಲಿ ಹೂಡಿಕೆದಾರರ ₹6.25 ಲಕ್ಷ ಕೋಟಿ ಸಂಪತ್ತು ಕೊಚ್ಚಿ ಹೋಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2004.20 ಅಂಶ (ಶೇ 5.88) ಇಳಿಕೆಯಾಗಿ 32,099.28 ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 596.25 ಅಂಶ (ಶೇ 5.99) ಕುಸಿದು 9,358.95 ಅಂಶ ಮುಟ್ಟಿತು. ಶುಕ್ರವಾರ 45 ನಿಮಿಷಗಳ ವಹಿವಾಟು ನಂತರದಲ್ಲಿ ಏರಿಕೆ ಕಂಡಿದ್ದ ಷೇರುಗಳು ಇಂದು ಮತ್ತೆ ತಲ್ಲಣಕ್ಕೆ ಸಿಲುಕಿವೆ.

ಮುಂಬೈ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ₹6,25,501.8 ಕೋಟಿ ಸಂಪತ್ತು ಕರಗಿದ್ದು, ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯ ₹1,23,00,741.02 ಕೋಟಿ ತಲುಪಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 41 ಪೈಸಿ ಕುಸಿದಿದ್ದು, ₹74.16ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 2.98ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 32.84 ಡಾಲರ್‌ ಆಗಿದೆ.

ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಟಿಸಿಎಸ್‌, ಇನ್ಫೊಸಿಸ್‌, ಎಸ್‌ಬಿಐ, ಟೈಟಾನ್‌ ಕಂಪನಿ ಷೇರುಗಳ ಸಹ ನಕಾರಾತ್ಮಕ ವಹಿವಾಟು ಕಂಡಿವೆ. ಇದರಿಂದಾಗಿ ಸೂಚ್ಯಂಕ ಇಳಿಮುಖವಾಗಿದೆ. ಆದರೆ, ಯೆಸ್‌ ಬ್ಯಾಂಕ್‌ ಷೇರು ಶೇ 49.12ರಷ್ಟು ಏರಿಕೆಯಾಗಿ₹38.10 ತಲುಪಿದೆ. ಸರ್ಕಾರದ ಸೂಚನೆಗಳ ಪ್ರಕಾರ 100ಕ್ಕೂ ಹೆಚ್ಚು ಯೆಸ್‌ ಬ್ಯಾಂಕ್‌ ಷೇರುಗಳನ್ನು ಹೊಂದಿರುವವರಿಗೆ 3 ವರ್ಷಗಳ ವರೆಗೂ ಷೇರು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಆಟೋಮ್ಯಾಟಿಕ್‌ ಲಾಕ್‌–ಇನ್‌ ಆಗಿರುವುದರಿಂದ ಹೂಡಿಕೆದಾರರು ಯೆಸ್‌ ಷೇರು ಖರೀದಿಗೆ ಉತ್ಸಾಹ ತೋರಿದ್ದಾರೆ.

ಮುಂಬೈ ಷೇರುಪೇಟೆಯ ಬಹುತೇಕ ಎಲ್ಲ ಕಂಪನಿಗಳ ಷೇರುಗಳು ನಕಾರಾತ್ಮಕ ವಹಿವಾಟು ಕಂಡಿವೆ. ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್‌ ಬ್ಯಾಂಕ್ ಕಂಪನಿ ಷೇರುಗಳು ಶೇ 4ರಿಂದ ಶೇ 13ರಷ್ಟು ಕುಸಿದಿವೆ. ಬೆಳಿಗ್ಗೆ 11:30ಕ್ಕೆ ಸೆನ್ಸೆಕ್ಸ್‌32,465.13ಅಂಶ ಹಾಗೂ ನಿಫ್ಟಿ9,477.15 ಅಂಶ ದಾಖಲಾಗಿದೆ.

ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹6,027.58 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಕೋವಿಡ್‌–19ಗೆ ಜಗತ್ತಿನಾದ್ಯಂತ 6,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಹಾಗೂ 1,62,000ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT