ಗುರುವಾರ , ನವೆಂಬರ್ 14, 2019
19 °C

ಎನ್‌ಡಿಎ ಅಧಿಕಾರಕ್ಕೆ ಮರಳುವ ನಿರೀಕ್ಷೆಯ ಪರಿಣಾಮ: ಷೇರುಪೇಟೆ ಭಾರಿ ಸಂಚಲನ

Published:
Updated:

ಮುಂಬೈ: ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್‌ಡಿಎ, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿರುವುದು ದೇಶಿ ಷೇರುಪೇಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.

ಸೋಮವಾರದ ವಹಿವಾಟಿನಲ್ಲಿ ಎಲ್ಲ ವಲಯಗಳ ಷೇರುಗಳು ಗಮನಾರ್ಹ ಮತ್ತು ಅಸಾಮಾನ್ಯ ಸ್ವರೂಪದ ಗಳಿಕೆ ಕಂಡವು. ಸೂಚ್ಯಂಕವು ದಿನದ ಗಳಿಕೆಯಲ್ಲಿ 6 ವರ್ಷಗಳ ಗರಿಷ್ಠ ಪ್ರಮಾಣದ ಏರಿಕೆ ದಾಖಲಿಸಿತು. ಸರ್ಕಾರಿ ಬಾಂಡ್‌ಗಳ ಬೆಲೆ ಹೆಚ್ಚಾದರೆ, ಡಾಲರ್‌ ಎದುರು ರೂಪಾಯಿ ವಿನಿಮಯ ಬೆಲೆಯೂ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತು. ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 5.33 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

ವಹಿವಾಟಿನ ಏರುಗತಿ ಕಾಯ್ದುಕೊಳ್ಳಲು ಹೊಸ ಸರ್ಕಾರವು ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಭೂಮಿ ಮತ್ತು ಕಾರ್ಮಿಕ ಸುಧಾರಣಾ ಕ್ರಮಗಳನ್ನು ತ್ವರಿತಗೊಳಿಸಬೇಕಾಗಿದೆ. ಪೂರ್ಣಗೊಳ್ಳದ ಬ್ಯಾಂಕಿಂಗ್‌ ವ್ಯವಸ್ಥೆಯ ಪುನರ್‌ ಹೊಂದಾಣಿಕೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶಕ್ಕೆ ಸಂಬಂಧಿಸಿದಂತೆ ಈ ವಾರ ತೀವ್ರ ಸ್ವರೂಪದ ರಾಜಕೀಯ ಚಟುವಟಿಕೆಗಳು ನಡೆಯಲಿವೆ. ಈ ಕಾರಣಕ್ಕೆ ಷೇರುಪೇಟೆಯಲ್ಲಿ ಯಾವುದೇ ಬಗೆಯ ಕುತಂತ್ರಗಳು ನಡೆಯದಂತೆ ನೋಡಿಕೊಳ್ಳಲು ಷೇರುಪೇಟೆಗಳು ಮತ್ತು ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ತಮ್ಮ ನಿಗಾ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಂಡಿವೆ.

ರೂಪಾಯಿ ಚೇತರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆ 49 ಪೈಸೆಗಳಷ್ಟು ಚೇತರಿಕೆ ಕಂಡು ₹ 69.74ಕ್ಕೆ ತಲುಪಿತು.

ಎರಡು ತಿಂಗಳಲ್ಲಿನ ಗರಿಷ್ಠ ಗಳಿಕೆ ಇದಾಗಿದೆ. ಷೇರುಗಳ ಬೆಲೆ ಏರಿಕೆ ಮತ್ತು ವಿದೇಶಿ ಬಂಡವಾಳ ಒಳಹರಿವಿನಿಂದ ರೂಪಾಯಿ ಬೆಲೆ ಚೇತರಿಕೆ ಕಂಡಿತು.

₹ 5.33 ಲಕ್ಷ ಕೋಟಿ ಸಂಪತ್ತು ಹೆಚ್ಚಳ

ಷೇರುಗಳ ಬೆಲೆ ಹೆಚ್ಚಳದಿಂದಾಗಿ ಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಮೌಲ್ಯವು ಒಂದೇ ದಿನದಲ್ಲಿ ₹ 5.33 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ವಹಿವಾಟಿನ ಅಂತ್ಯಕ್ಕೆ ಮಾರುಕಟ್ಟೆಯ ಒಟ್ಟಾರೆ ಮೌಲ್ಯವು ₹ 151 ಲಕ್ಷ ಕೋಟಿಗೆ ತಲುಪಿದೆ. ಶುಕ್ರವಾರದ ವಹಿವಾಟಿನಲ್ಲಿ ಇದು ₹ 146 ಲಕ್ಷ ಕೋಟಿಗಳಷ್ಟಿತ್ತು.

52 ವಾರಗಳ ಗರಿಷ್ಠ ಮಟ್ಟ ತಲುಪಿದ 66 ಷೇರು

66 ಷೇರುಗಳು, 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿವೆ. ಇವುಗಳ ಪೈಕಿ ಬಜಾಜ್‌ ಫೈನಾನ್ಸ್‌, ಡಿಸಿಬಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಪಿವಿಆರ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಸೇರಿವೆ. ವಹಿವಾಟು ನಡೆಸಿದ ಒಟ್ಟು ಷೇರುಗಳಲ್ಲಿ 1,998 ಷೇರುಗಳು ಲಾಭ ಕಂಡವು. 631 ಷೇರುಗಳ ಬೆಲೆ ಕುಸಿದರೆ, 184 ಷೇರುಗಳ ಬೆಲೆ ಯಾವುದೇ ಏರಿಳಿತ ಕಾಣಲಿಲ್ಲ.

ಪ್ರತಿಕ್ರಿಯಿಸಿ (+)