ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮಕ್ಕೆ ಅವಕಾಶವಿಲ್ಲದ ಬಲಪಂಥೀಯ ವಾಮಮಾರ್ಗ

Last Updated 2 ಫೆಬ್ರುವರಿ 2011, 6:30 IST
ಅಕ್ಷರ ಗಾತ್ರ

ಸಾವಿರದೊಂಬೈನೂರ ಮೂವತ್ತನಾಲ್ಕನೇ ಇಸವಿಯಲ್ಲಿ ಬಿಹಾರದಲ್ಲಿ ಒಂದು ದೊಡ್ಡ ಭೂಕಂಪನವಾಯಿತು. ಮಹಾತ್ಮ ಗಾಂಧಿಯವರು ಈ ಭೂಕಂಪನದಿಂದ ಉಂಟಾದ ಸಾವುನೋವುಗಳು ಭಾರತೀಯರ ಅಸ್ಪೃಶ್ಯತೆಯ ಆಚರಣೆಗೆ ದೇವರು ಕೊಟ್ಟ ಶಿಕ್ಷೆ ಎಂದು ಹೇಳಿದ್ದರು. ಅಸ್ಪೃಶ್ಯತೆಯ ಆಚರಣೆಯನ್ನು ವಿರೋಧಿಸುತ್ತಿದ್ದ ಟ್ಯಾಗೋರರು ಗಾಂಧಿಯ ಈ ಮಾತನ್ನು ಒಪ್ಪಲಿಲ್ಲ. ಗಾಂಧಿಗೊಂದು ಕಾಗದವನ್ನು ಅವರು ಬರೆದರು- ‘ನನಗೆ ನಿಮ್ಮ ಮಾತಿನಿಂದ ನೋವಾಗಿದೆ. ಮೂಢನಂಬಿಕೆಯಲ್ಲಿ ಭಾರತೀಯರು ಕೂಡಲೇ ಒಪ್ಪಬಹುದಾದ ನಿಮ್ಮ ದೈವ ಶಿಕ್ಷೆಯ ಮಾತು ನಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಭೌತಿಕ ಕಾರಣಗಳಿಂದಾಗಿ ಆಗುವ ದುರಂತಕ್ಕೂ ಮಾನವನ ವರ್ತನೆಗೂ ಸಂಬಂಧವನ್ನು ಕಲ್ಪಿಸಲು ಹೋಗಕೂಡದು’.

ಹೀಗೆ ಮಾತಾಡುವುದರಿಂದ ನಮ್ಮಲ್ಲಿ ಸ್ವಾತಂತ್ರ್ಯಕ್ಕಾಗಿ ಧೈರ್ಯವನ್ನು ತುಂಬುತ್ತಿರುವ ಗಾಂಧೀಜಿ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಟ್ಯಾಗೋರ್ ಬರೆದ ಪತ್ರವನ್ನು ಗಾಂಧೀಜಿ ‘ಹರಿಜನ’ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಮಾತನ್ನೂ ಸೇರಿಸುತ್ತಾರೆ: ‘ನಮ್ಮ ತಿಳಿವಿಗೆ ಮೀರಿದ ನಿಸರ್ಗದ ಕ್ರೂರ ಹಾಗೂ ಕುರುಡಾದ ಶಕ್ತಿಯ ಅಭಿವ್ಯಕ್ತಿ ಮಾತ್ರವೆಂದು ನಾನು ಬಿಹಾರದ ಭೂಕಂಪನವನ್ನು ಪರಿಗಣಿಸುವುದಿಲ್ಲ. ಅಸ್ಪೃಶ್ಯತೆಗೂ ಭೂಕಂಪಕ್ಕೂ ಇರುವ ಸಂಬಂಧವನ್ನು ನಾನು ತರ್ಕಬದ್ಧವಾಗಿ ವಿವರಿಸಲಾರೆ. ಆದರೆ ನನ್ನ ಹೃದಯದಲ್ಲಿ ಹಾಗೆ ನನಗನ್ನಿಸಿದೆ. ನನ್ನ ಅತಾರ್ಕಿಕ ಮಾತು ಟ್ಯಾಗೋರಿಗೆ ಅಸಂಬದ್ಧವೆನ್ನಿಸಿದರೆ ನನಗೇನೂ ಬೇಸರವಿಲ್ಲ. ಏಕೆಂದರೆ ಅಂತಹ ಸಂಬಂಧ ಇದೆ ಎಂದು ತಿಳಿಯುವುದರಿಂದ ನನಗೇನೋ ನೈತಿಕವಾಗಿ ಒಳ್ಳೆಯದೇ ಆಗಿದೆ’.

ಭೂಕಂಪಕ್ಕೂ ಅಸ್ಪೃಶ್ಯತೆಯ ಆಚರಣೆಗೂ ಇರುವ ಸಂಬಂಧವನ್ನು ಗಾಂಧಿ ಹೀಗೆ ತಿಳಿದದ್ದು ಅತಾರ್ಕಿಕವೆಂದು ಈ ವೈಚಾರಿಕ ಯುಗದಲ್ಲಿ ಯಾರಿಗೂ ಅನ್ನಿಸಬಹುದು. ಆದರೆ ಭೂಮಿಯ ಶಾಖ ಹೆಚ್ಚಾಗಿ ಇಡೀ ನಮ್ಮ ಪ್ರಪಂಚ ನಾಶವಾಗುವುದಕ್ಕೂ ನಾವು ಇಂಗಾಲವನ್ನು ವಾತಾವರಣದಲ್ಲಿ ಹೆಚ್ಚಿಸುವಂತೆ ಬದುಕುತ್ತಿರುವ ಅನೈತಿಕತೆಗೂ ಸಂಬಂಧವಿದೆಯೆಂದು  ಈಗ ವೈಜ್ಞಾನಿಕವಾಗಿಯೇ ಹೇಳಬಹುದು. ಗಾಂಧಿ ಮತ್ತು ಟ್ಯಾಗೋರರ ನಡುವಿನ ಈ ಮುಖಾಮುಖಿಯನ್ನು ಗಾಂಧಿಯ ಮೊಮ್ಮಗ ರಾಮಚಂದ್ರ ಗಾಂಧಿ ತಾತ್ವಿಕವಾಗಿ ಚಿಂತಿಸಿ ಬರೆದಿದ್ದಾರೆ. ಅದನ್ನಿಲ್ಲಿ ನಾನು ವಿವರಿಸಲು ಹೋಗುವುದಿಲ್ಲ.

ಎಲ್ಲ ಕಾಲದಲ್ಲೂ ಮಾನವನ ನೈತಿಕತೆಗೂ ಜಗತ್ತಿನ ಚರಾಚರ ಸೃಷ್ಟಿಗೂ ಸಂಬಂಧಗಳನ್ನು ಆಧ್ಯಾತ್ಮಿಕತೆ ಹುಡುಕುತ್ತಲೇ ಹೋದ ಒಂದು ದೊಡ್ಡ ಐತಿಹ್ಯವೇ ಇದೆ. ಥಟ್ಟನೇ ನನಗೆ ನೆನಪಾಗುವುದು ಬೈಬಲ್‌ನ ‘ಹಳೆ ಒಡಂಬಡಿಕೆ’ಯಲ್ಲಿ ಬರುವ ಜೋಬ್ ಎಂಬುವವನ ಕಥೆ. ಇದೊಂದು ವೈಯಕ್ತಿಕ ನೆಲೆಯಲ್ಲಿ ನಡೆಯುವ, ಆದರೆ ಇಡೀ ಮಾನವನ ಸಂಕಟದ ಬೆರಗಿಗೆ ಕಾರಣವಾಗುವ ಕಥೆ. ಹರಿಶ್ಚಂದ್ರನನ್ನು ದೇವರು ಪರೀಕ್ಷಿಸುವ ಕಥೆಗೆ ಇದನ್ನು ಹೋಲಿಸುವುದೂ ಇದೆ. ದೇವರಿಗೂ ಸೈತಾನನಿಗೂ ನಡುವೆ ಒಂದು ಸಂವಾದ ಶುರುವಾಗುತ್ತದೆ.

‘ಇಡೀ ಪ್ರಪಂಚದಲ್ಲಿ ಜೋಬ್ ಎಂಬ ಒಬ್ಬ ಸತ್ಪುರುಷನಾದರೂ ತನ್ನನ್ನು ನಂಬಿ  ಇದ್ದಾನೆ’ ಎಂದು ದೇವರು ಹೇಳುವುದನ್ನು ಸೈತಾನ ಸಂಶಯದಿಂದ ನೋಡುತ್ತಾನೆ. ‘ಅವನ ಶ್ರೀಮಂತ ಬದುಕಿಗೆ ನೀನು ಅಡ್ಡ ಮಾಡಿದ್ದೇ ಆದರೆ ಸ್ವಾರ್ಥದಲ್ಲಿ ಅವನು ನಿನ್ನನ್ನು ಶಪಿಸುತ್ತಾನೆ’ ಎಂದು ಸೈತಾನ ದೇವರನ್ನು ಅಣಕ ಮಾಡುತ್ತಾನೆ. ದೇವರು ಸವಾಲನ್ನು ಸ್ವೀಕರಿಸಿ ಅವನ ದನ ಕರು ಇತ್ಯಾದಿ ಆಸ್ತಿಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾನೆ. ಜೋಬ್ ಎದೆಗುಂದುವುದಿಲ್ಲ. ‘ದೇವರೆ, ನೀನು ಕೊಟ್ಟುದನ್ನು ನೀನು ಹಿಂತೆಗೆದುಕೊಂಡಿ’ ಎಂದು ವಿನಯದಿಂದ ಜೋಬ್ ಕೈಮುಗಿದಿದ್ದನ್ನು ಸೈತಾನ್ ಪ್ರಶ್ನಿಸಿ ‘ಅವನ ಹೆಂಡತಿ ಮಕ್ಕಳನ್ನು ಸಾಯಿಸಿ, ಅವನನ್ನು ಏಕಾಂಗಿಯಾಗಿ ಮಾಡು; ಆಗಲೂ ಜೋಬ್ ನಿನ್ನನ್ನು ಪ್ರೀತಿಸುತ್ತಾನೋ ನೋಡೋಣ?’ ಎನ್ನುತ್ತಾನೆ.

ಜೋಬ್‌ನ ಹೆಂಡತಿ ಮಕ್ಕಳು ಸಾಯುವಂತೆ ದೇವರು ಮಾಡುತ್ತಾನೆ. ಆದರೂ ಜೋಬ್ ‘ನೀನು ಕೊಟ್ಟುದ್ದನ್ನು ನೀನು ಹಿಂದಕ್ಕೆ ತೆಗೆದುಕೊಂಡಿ; ನಿನ್ನ ಉದ್ದೇಶವನ್ನು ತಿಳಿಯಲಾರದ ನನ್ನ ದುಗುಡವನ್ನು ಕ್ಷಮಿಸು’ ಎಂದು ಜೋಬ್ ಮೊರೆಯಿಡುತ್ತಾನೆ. ಸೈತಾನ ಸುಮ್ಮನಿರುವುದಿಲ್ಲ. ‘ಅವನನ್ನೇ ಮುಟ್ಟಿ ನೋಡು’ ಎಂದು ದೇವರಿಗೆ ಸವಾಲೆಸೆಯುತ್ತಾನೆ. ಜೋಬ್ ಭಯಂಕರ ಖಾಯಿಲೆಗಳಿಂದ ನರಳಲು ತೊಡಗುತ್ತಾನೆ. ಆಗ ಅವನ ಸ್ನೇಹಿತರು ಕೆಲವರು ಬಂದು ಅವನನ್ನು ಸಂತೈಸುವುದರ ಬದಲು ‘ನೀನೇನೋ ಪಾಪ ಮಾಡಿದ್ದೀಯ, ಅದಕ್ಕಾಗಿ ಈ ಶಿಕ್ಷೆ ನಿನಗೆ’ ಎನ್ನುತ್ತಾರೆ. ಜೋಬ್ ಇದನ್ನು ಸಹಿಸಲಾರ. ತಾನು ಯಾವ ಪಾಪವನ್ನು ಮಾಡದಿದ್ದರೂ ‘ದೇವರು ಈ ಶಿಕ್ಷೆಯನ್ನು ನನಗೇಕೆ ಕೊಟ್ಟ’ ಎಂದು ಗಾಢವಾದ ದುಃಖದಲ್ಲಿ ಅವನು ದೇವರನ್ನು ಪ್ರಶ್ನಿಸಲು ತೊಡಗುತ್ತಾನೆ. ‘ನನಗೆ ಗೊತ್ತಿರುವ ಎಲ್ಲ ದುಷ್ಟರೂ ಸುಖಿಗಳಾಗಿ ಬದುಕುತ್ತಿದ್ದಾರೆ. ಆದರೆ ನಿನ್ನನ್ನು ಸಂಪೂರ್ಣ ನೆಚ್ಚಿಕೊಂಡ ನ್ನನ್ನನ್ನು ಯಾಕೆ ಹೀಗೆ ಶಿಕ್ಷಿಸುತ್ತಿದ್ದೀಯ? ನಿನ್ನ ಶಿಕ್ಷೆಯ ಹಿಂದಿರುವ ಕಾರಣಗಳೇನು?’ ಎಂದು ಅವನು ತಪ್ತನಾಗಿ ತನ್ನನ್ನು ಪಾಪಿಯೆಂದು ಹಳಿಯುವವರ ಮಾತಿಗೆ ಉತ್ತರ ಕೊಡಲಾಗದೇ ಹಲುಬುತ್ತಾನೆ.

ಈ ಜೋಬ್‌ನಿಗೆ ದೇವರ ಉತ್ತರವೇನು ಎಂಬುದು ಅತ್ಯಂತ ಕುತೂಹಲಕಾರಿಯಾದದ್ದು. ದೇವರು ಸರ್ವಶಕ್ತ, ಪ್ರಶ್ನಾತೀತನಲ್ಲವೇ? ಅವನು ಗುಡುಗುತ್ತಾನೆ: ‘ನನ್ನನ್ನು ಈ ಪ್ರಶ್ನೆ ಕೇಳಲು ನೀನು ಯಾರು? ನಾನು ಸೃಷ್ಟಿಸಿದ ಜಂತು ನೀನು. ಬಾಯಿಮುಚ್ಚಿಕೋ. ನಿನ್ನ ವೇದನೆಯನ್ನು ಪ್ರಶ್ನಿಸದೇ ಸಹಿಸಿಕೋ’.

ಬೈಬಲ್ಲಿನ ಕಥೆ ನಾನೀಗ ಬರೆಯುತ್ತಿರುವುದಕ್ಕಿಂತ ಇನ್ನಷ್ಟು ಮನೋಜ್ಞವಾಗಿದೆ. ಇಂಥ ವೈಚಾರಿಕ ಪ್ರಶ್ನೆಗಳನ್ನು ಕೇಳುವ ನಮ್ಮೆಲ್ಲರ ಬಾಯಿಯನ್ನು ಕ್ಷಣವಾದರೂ ಮುಚ್ಚಿಸುವಂತೆ ಇದೆ.

ನಾನು ಆನರ್ಸ್ ಓದುವಾಗ ಪಠ್ಯವಾಗಿದ್ದ ಈ ಕಥೆಯ ಕುರಿತು ಮನೋವಿಜ್ಞಾನಿ ಫ್ರಾಯ್ಡಾನ ಜೊತೆಯವನಾಗಿದ್ದ, ಆದರೆ ಫ್ರಾಯ್ಡಾಗಿಂತ ಆಳವಾಗಿ ಆಧ್ಯಾತ್ಮಿಕ ಸಮಸ್ಯೆಗಳ ಬಗ್ಗೆ ಬರೆಯುತ್ತಿದ್ದ ಕಾರ್ಲ್ ಯೂಂಗ್  ಎಂಬುವನು ಬರೆದ ಒಂದು ಪುಸ್ತಕವನ್ನು ನನಗೆ ಎ.ಕೆ.ರಾಮಾನುಜನ್ ಓದುವಂತೆ ಹೇಳಿದ್ದರು. ನನ್ನನ್ನು ಇವತ್ತಿಗೂ ಗಾಢವಾಗಿ ಕಾಡುವ ಪುಸ್ತಕ ಇದು. ಪುಸ್ತಕದ ಹೆಸರು Ans-wer to Job.  ಯೂಂಗ್‌ನ ಪ್ರಕಾರ ದೇವರದು ಧಿಮಾಕಿನ ಉತ್ತರ. ಅದನ್ನು ಮಾನವ ಒಪ್ಪಲಾರ. ಒಳ್ಳೆಯ ಮನುಷ್ಯ ಯಾಕೆ ನರಳಬೇಕು, ಕೆಟ್ಟವರು ಯಾಕೆ ಸುಖವಾಗಿ ಬಾಳುತ್ತಾರೆ ಎಂಬ ನೈತಿಕ ಪ್ರಶ್ನೆಗೆ ಉತ್ತರವನ್ನು ಬೈಬಲ್ ಹುಡುಕುತ್ತದೆ.

‘ದೇವರು ದಯಾಮಯಿ, ಅವನು ನಮ್ಮ ತಂದೆ. ತನ್ನ ಪ್ರೀತಿಯ ಮಗನಾದ ಏಸು ಕ್ರಿಸ್ತನ ಮುಖಾಂತರ ಅವನು ನಮ್ಮನ್ನು ಕಾಪಾಡುತ್ತಾನೆ; ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಮಾಡುತ್ತಾನೆ’ ಎಂಬ ಹೊಸ ಒಡಂಬಡಿಕೆಯ ಉತ್ತರವನ್ನು ಸೆಮೆಟಿಕ್ ಜನಾಂಗ ಪಡೆದುಕೊಂಡು ಇಡೀ ಲೋಕಕ್ಕೇ ಕ್ರಿಶ್ಚಿಯಾನಿಟಿಯ ಮುಖಾಂತರ ನೀಡುತ್ತದೆ. ಆದರೆ ಈ ದಯಾಮಯನಾದ ಜೋಬ್‌ನ ದೇವರಿಗೆ ವಿರುದ್ಧವಾದ ದೇವರು ಸೇಂಟ್ ಜಾನ್ ನಿರ್ಮಿತವಾದ ರೆವೆಲೇಷನ್ಸ್ ಎಂಬ ವೃತ್ತಾಂತದಲ್ಲಿ ಮತ್ತೆ ಕಾಣಿಸಿಕೊಂಡು ಎಲ್ಲ ತಿರುಗು ಮುರುಗಾಗುತ್ತದೆ. ದೇವರ ಮಗನಾದ ಏಸು ಕ್ರಿಸ್ತನ ಮಾತನ್ನು ಕೇಳಿಸಿಕೊಳ್ಳದೇ, ಪಾಪ ಜೀವನ ನಡೆಸಿ, ಅಂತಿಮ ತೀರ್ಪಿನ ದಿನದಂದು ಕ್ರಿಸ್ತನ ಎದುರು ಕ್ಷಮೆಗಾಗಿ ಜೀವಿಗಳು ಬಂದಾಗ ತನ್ನ ತಾಯಿ ಮೇರಿಯ ಮೊರೆಯನ್ನು ಕ್ರಿಸ್ತ ತಳ್ಳಿಹಾಕುತ್ತಾನೆ. ರೋಮಿನ ಸಿಸ್ಟೀನ್ ಚಾಪೆಲ್‌ನಲ್ಲಿ ಅಂಥದೊಂದು ಚಿತ್ರವೂ ಇದೆ. ಪಾಪಿಗಳ ಪರವಾಗಿ ದಯಾಮಯಿಯಾದ ತಾಯಿ, ಕ್ರಿಸ್ತನನ್ನು ಕ್ಷಮಿಸುವಂತೆ ಮೊರೆಯಿಡುವ ಚಿತ್ರ ಅದು. ಆದರೆ ಕ್ರಿಸ್ತ ತಾಯಿಯನ್ನು ಹಿಂದೆ ತಳ್ಳುತ್ತಾನೆ. ಜೋಬ್‌ನ ನಿಷ್ಕರುಣಿ ದೇವರು ಮತ್ತೆ ನಮಗೆದುರಾಗುತ್ತಾನೆ.

ಥಾಮಸ್ ಹಾರ್ಡಿ ಎಂಬ ದೊಡ್ಡ ಕವಿ ಮತ್ತು ಕಾದಂಬರಿಕಾರ ‘ದೇವರು ಇರುವನೋ ಇಲ್ಲವೋ ತಿಳಿಯದು. ಅವನು ಇರುವುದಾದರೆ ಉದ್ದೇಶ ಪೂರ್ವಕವಾದ ಕರುಣಿಯಂತೂ ಅಲ್ಲ. ಅವನಿಗೆ ನಮ್ಮ ಸುಖ-ಕಷ್ಟದ ಅಥವಾ ನೈತಿಕತೆಯ ಎಗ್ಗಿಲ್ಲ’ ಎನ್ನುತ್ತಾನೆ.

ಮಾನವನ ವರ್ತನೆಗೂ, ನೈತಿಕತೆಗೂ, ಹುಟ್ಟುಸಾವಿನ ಸತ್ಯಗಳಿಗೂ, ಪ್ರಕೃತಿಯ ಸೊಬಗಿಗೂ, ಅದರ ಉದಾಸೀನದ ತಟಸ್ಥತೆಗೂ ಇರುವ ಸಂಬಂಧಗಳನ್ನು ಜಗತ್ತಿನ ಆಧ್ಯಾತ್ಮಿಕ ಲೋಕ ಪಶ್ಚಿಮದಲ್ಲೂ ಹುಡುಕಿದೆ, ಪೂರ್ವದಲ್ಲೂ ಹುಡುಕಿದೆ, ಆದಿವಾಸಿಗಳ ಆಚರಣೆಗಳಲ್ಲೂ ಹುಡುಕಿದೆ. ಬುದ್ಧನಲ್ಲಿ ಇವೆಲ್ಲಕ್ಕಿಂತ ಅನ್ಯವಾಗಿ ಸೃಷ್ಟಿಕರ್ತನಾದ ದೇವರ ಅಗತ್ಯವೂ ಇಲ್ಲದಂತೆ, ನಿರಂತರವಾದ ಆತ್ಮದ ಅಗತ್ಯವೂ ಇಲ್ಲದ ಹುಡುಕಾಟವಿದೆ. ಮಾನವನ ಉದ್ಧಾರವೇ ತನ್ನ ಗುರಿಯೆಂದುಕೊಂಡ ಸೃಷ್ಟಿಕರ್ತನ ನಿಯಮಕ್ಕೆ ಶರಣಾಗುವ ಇಸ್ಲಾಂನಲ್ಲೂ ಈ ಹುಡುಕಾಟವಿದೆ. ಆದರೆ ಎಲ್ಲರೂ ಒಪ್ಪಬಹುದಾದಂಥ ನಿರ್ಣಾಯಕವಾದ ಉತ್ತರ ಇನ್ನೂ ಸಿಕ್ಕಿಲ್ಲ.

ಜಗತ್ತಿನ ಎಲ್ಲ ದೊಡ್ಡ ಮತ-ಧರ್ಮಗಳೂ, ಈ ಮತ-ಧರ್ಮಗಳ ಹಿಂದಿರುವ ಮಹಾಪುರುಷರೂ ಮಿಂಚಿ ಮಾಯವಾಗುವ ದರ್ಶನಗಳಲ್ಲಿ ತಾವು ಸಂಪೂರ್ಣವಾದ ಸತ್ಯವನ್ನು ಕಂಡಿದ್ದೇವೆಂದು ಸಾರಿದ್ದಾರೆ. ಆದರೂ ಕೂಡ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಸಂಕಟದಲ್ಲೆೀ ತ್ರಿಕರಣಪೂರ್ವಕವಾಗಿ ನೆಚ್ಚಬಹುದಾದ ಉತ್ತರ ಸಿಕ್ಕಿದಂತೆ ಕಾಣುವುದಿಲ್ಲ ಎಂಬುದನ್ನು ಯಾವ ಸ್ವಪ್ರತಿಷ್ಠೆಯಿಲ್ಲದಂತೆ ಎದುರಾಗುವುದೇ ನಮಗಿರುವ ಮಾರ್ಗವೇನೋ. ಗಾಂಧಿ ಹೇಳಿದ್ದುಂಟು: ‘ಯಾವ ಮತಧರ್ಮವೂ ಪರಿಪೂರ್ಣವಲ್ಲ, ಆದ್ದರಿಂದ ಮಾನವನಿಗೆ ಎಲ್ಲ ಮತಧರ್ಮಗಳ ಅಗತ್ಯವೂ ಇದೆ’. ಇದೊಂದು ವಿನಯದ ಆಧ್ಯಾತ್ಮಿಕ ಉತ್ತರವೇ ಸರಿ.

ಉತ್ಕಟಾವೇಶವೇ ಆಧಾರವಾದ ಭಕ್ತಿ ಪಂಥಗಳು ತರ್ಕಬದ್ಧವಾದ ಉತ್ತರವನ್ನು ಕೊಡುವಂತೆ ಅಥವಾ ಕೊಡಲು ಬಯಸುವಂತೆ ನಮಗೆ ಕಾಣುವುದಿಲ್ಲ. ರಾಮಕೃಷ್ಣ ಪರಮಹಂಸರು ಗಂಟಲಿನ ಕ್ಯಾನ್ಸರ್‌ನಿಂದ ನರಳಿದರು. ‘ಸತತವಾಗಿ ದೇವಿಯನ್ನು ಕೊಂಡಾಡಿದ ಈ ಬಾಯಿಯಲ್ಲಿ ನೀರು ಇಳಿಯದಂತೆ ಯಾಕೆ ಮಾಡಿದೆ ತಾಯಿ’ ಎಂದು ಅವರು ಪ್ರಶ್ನಿಸುತ್ತಾರಂತೆ. ಆರ್ತತೆಯಲ್ಲಿ ಜೋಬ್‌ನ ತರಹವೇ. ಆದರೆ ಅವರಿಗೆ ಸಿಕ್ಕಿದ ಉತ್ತರದ ಧಾಟಿಯೂ, ಧೋರಣೆಯೂ ಬೇರೆ. ‘ನಾನು ಸಹಸ್ರಾರು ಕಂಠದಿಂದ ನನ್ನ ಆಹಾರವನ್ನು ಪಡೆಯುತ್ತಿದ್ದಾಗ ನಿನ್ನದೊಂದು ಗಂಟಲೇನು ಮಹಾ ಎಂದು ಯಾಕೆ ತಿಳಿದುಕೊಳ್ಳುತ್ತೀಯಾ?’ ಪರಮಹಂಸರಿಗೆ ಇದೊಂದು ಉತ್ತರವಾಯಿತು. ಅಂದರೆ ಇದು ಸತ್ಯದ ಉತ್ತರಕ್ಕಿಂತ ಮಿಗಿಲಾದ ಸಮಾಧಾನದ ಉತ್ತರ ಎನ್ನಬಹುದೇನೋ? ವೇದವ್ಯಾಸರೂ ಪರಮವೈರಾಗ್ಯದಲ್ಲಿ ತನ್ನನ್ನು ತೊರೆದು ಹೋದ ಮಗನನ್ನು ಹುಡುಕುತ್ತ ಅವನನ್ನು ಕೂಗಿ ಕರೆದಾಗ ತನ್ನ ಸುತ್ತಲಿನ ನಿಸರ್ಗದಲ್ಲಿ ‘ಪುತ್ರಾ’ ಎಂದು ತಾನು ಕರೆದದ್ದು ಮರುಧ್ವನಿಯಾದದ್ದರಲ್ಲಿ ಅವರಿಗೆ ಪುತ್ರ ಪ್ರಾಪ್ತಿಯಾಯಿತು ಎಂದು ಭಾಗವತದಲ್ಲಿ ಓದಿದ ನೆನಪು. ಇದೊಂದು ಭಾರತೀಯ ಸ್ಪಂದನ, ವೈಯಕ್ತಿಕ ನೋವಿಗೆ ವ್ಯಕ್ತಿಯ ಸೀಮಿತತೆ ಮೀರಿದ ಸಮಸ್ತದಲ್ಲಿ ಕಂಡುಕೊಳ್ಳುವ ಉತ್ತರ. ಮೂಢನಂಬಿಕೆಯೆಂದು ಗುರುದೇವರಿಗೆ ಅನ್ನಿಸಿದ ಗಾಂಧೀಜಿಯ ಭೂಕಂಪದ ಸ್ಪಂದನವೂ ಈ ಮೂಲದಿಂದಲೇ ಬಂದುದೇನೊ?

ಆಧ್ಯಾತ್ಮಿಕ ಹುಡುಕಾಟದಲ್ಲಿ ಮನಸ್ಸಿನ ಸಮಾಧಾನ ಮಾತ್ರ ಸಾಕೆಂಬ ಭಾವನೆ ಕೂಡ ಮನಸ್ಸಿನ ಮಾಯೆ ಎನ್ನಿಸಿದಾಗ ನಿರಂತರವಾದ ಉತ್ತರದ ಹುಡುಕಾಟಗಳು ನಡೆಯುತ್ತಲೇ ಇರುತ್ತವೆ. ಇದು ಸಾಮಾನ್ಯರಲ್ಲೂ ಅವರಿಗೆ ಅರಿವಾಗದಂತೆ ವಿಜ್ಞಾನಿಗಳಲ್ಲೂ, ತತ್ವಶಾಸ್ತ್ರಜ್ಞರಲ್ಲೂ ಅವರ ಎಚ್ಚರದಲ್ಲಿ ಅರಿವಾಗುತ್ತಿದೆಯೆಂಬ ಭಾವನೆಯನ್ನು ಹುಟ್ಟಿಸುವಂತೆ ನಡೆಯುತ್ತಲೇ ಇರುತ್ತದೆ.

ಈವರೆಗಿನ ನನ್ನ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಎರಡು ಬಗೆಯ ಆಧ್ಯಾತ್ಮಿಕತೆಯನ್ನು ಗುರುತಿಸಿದ್ದೇನೆ. ಒಂದು, ಸ್ವಂತ ಮತ್ತು ಸಮಸ್ತ ಬೇರೆ ಬೇರೆಯಲ್ಲ. ಸ್ವಂತದ ಪಾಪ ಪುಣ್ಯಗಳು ಸಮಸ್ತಕ್ಕೂ ಸಲ್ಲುತ್ತವೆ. ಸಮಸ್ತದ ಪಾಪ ಪುಣ್ಯಗಳು ಸ್ವಂತದ್ದೂ ಆಗುತ್ತವೆ ಎಂಬ ಅವಿನಾ ಸಂಬಂಧದ ಗಾಂಧಿ, ಪರಮಹಂಸ ಮತ್ತು ವೇದವ್ಯಾಸರ ಮಾರ್ಗ.  ಪೇಗನ್ ಎನ್ನಬಹುದಾದ ನಾಗರಿಕತೆಗಳಲ್ಲಿ ಒಬ್ಬ ವ್ಯಕ್ತಿಯ ಪಾಪ ಇಡೀ ವಂಶವನ್ನು ನೂರಾರು ವರ್ಷ ಬಾಧಿಸುವುದನ್ನು ಕಾಣಬಹುದು.

ಇಡೀ ಜೀವಕುಲಕ್ಕೆ ತಾನು ಹೊಣೆಯೆಂಬ ಉದಾತ್ತತೆ ಈ ಮಾರ್ಗದಲ್ಲಿರುವುದು ಸಾಧ್ಯ. ಇನ್ನೊಂದು, ನಾನು ಒಬ್ಬ ವ್ಯಕ್ತಿಯಾಗಿ, ಒಂದು ಜೀವವಾಗಿ, ದೇವರಿಗೆ ಸಲ್ಲುವವನು ಎಂಬ ಕಟುವಾದ, ನಿಷ್ಠುರವಾದ ವ್ಯಕ್ತಿ ಮತ್ತು ದೇವರ ಸಂಬಂಧದ, ರಿಲಿಜನ್ ಎಂದು ಕರೆಯಬಹುದಾದ ಆಧ್ಯಾತ್ಮಿಕತೆ. ಈಗ ಭಾರತದಲ್ಲಿ ಚಾಲ್ತಿಯಲ್ಲಿರುವ ಮೂರನೇ ಬಗೆಯ ಆಧ್ಯಾತ್ಮಿಕತೆ ವಾಮಾಚಾರದ್ದು. ದೇವರಲ್ಲಿ ಭಕ್ತಿ, ನಂಬಿಕೆ ಇತ್ಯಾದಿಗಳು ಇದ್ದರೂ ಸರಿಯೇ, ಇಲ್ಲದಿದ್ದರೂ ಸರಿಯೇ, ಆದರೆ ಕೆಲವು ಕ್ರಿಯೆಗಳನ್ನು -ಯಜ್ಞ ಯಾಗ ಇತ್ಯಾದಿ ಕ್ರಿಯೆಗಳನ್ನು- ಶಾಸ್ತ್ರಬದ್ಧವಾಗಿ ಮಾಡಿದರೆ ನಾವು ಬಯಸಿದ್ದು ಆಗುತ್ತದೆ ಎಂಬ ಬಲಪಂಥೀಯ ವಾಮಮಾರ್ಗ ಇದು. ಶಂಕರಾಚಾರ್ಯರು, ರಾಮಾನುಜರು, ಮಧ್ವಾಚಾರ್ಯರು ಎಲ್ಲರೂ ಈ ತಾಂತ್ರಿಕ ಮಾರ್ಗ ಗುಣಾತ್ಮಕವಾದುದಲ್ಲ ಎಂದು ಅದರ ವಿರುದ್ಧ ಭಕ್ತಿ, ಜ್ಞಾನ ಎರಡೂ ಮಾರ್ಗಗಳಲ್ಲೂ ಹೋರಾಡಿದರು.

ಆದರೆ ನಮ್ಮ ಈ ಹೊಲಸು ಹೊಡೆದಾಟ ಬಡಿದಾಟಗಳ ರಾಜಕಾರಣದಲ್ಲಿ ತಾಂತ್ರಿಕರೇ ಮುಖ್ಯವಾಗಿ ಬಿಟ್ಟಿದ್ದಾರೆ. ಇದರಲ್ಲಿ ನಾನು ಮೊದಲು ಹೇಳಿದ ಎರಡು ಆಧ್ಯಾತ್ಮಿಕ ಮಾರ್ಗಗಳಿಗೂ ಅವಕಾಶವಿಲ್ಲ. ಇಲ್ಲಿ ಉಳಿಯುವುದು ಲೌಕಿಕದ ಸ್ವಾರ್ಥ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT