ಗುರುವಾರ , ಮೇ 6, 2021
33 °C

ಒಡಲ ಬೆಂಕಿ ಆರದಿರಲಿ...

ವಸು ಮಳಲಿ Updated:

ಅಕ್ಷರ ಗಾತ್ರ : | |

ಒಡಲ ಬೆಂಕಿ ಆರದಿರಲಿ...

ಬೆಳ್ಳನೆಯ ಹಾಸಿಗೆಯ ಮೇಲೆ ತೆಳ್ಳನೆಯ ಹೊದಿಕೆಯನ್ನು ತನ್ನ ಎದೆಯವರೆಗೂ ಎಳೆದು ಮಲಗಿದ್ದ ಭೂಮಿ ಬಾಗಿಲತ್ತ ಕಾತರದಿಂದ ನೋಡುತ್ತಿದ್ದಳು.ನೋಡಿದರೆ ವಯಸ್ಸಿನ್ನೂ ಮೂವತ್ತೆನ್ನುವಂತೆ ಹರೆಯ ಉಕ್ಕಿತ್ತು, ಇಂದಿನ ಕಾತರ, ಕಳೆದ ಹದಿನೈದು ವರ್ಷಗಳ ನಿರೀಕ್ಷೆಗಿಂತ ಭಿನ್ನವಾಗಿತ್ತು. ವೇಗವಾಗಿ ಆತುರಾತುರದಿಂದ ಬಂದ ಡಾಕ್ಟರ್, ನೇರವಾಗಿ ಭೂಮಿಯ ಕಡೆ ನುಗ್ಗಿ, ಹೊದ್ದಿದ್ದ ಹೊದಿಕೆಯನ್ನು ಸರಿಸಿ ಹಾಗೇ ಅವಳ ಎದೆಯನ್ನೇ ನೋಡುತ್ತಾ `ವ್ಹಾವ್ ಬ್ಯೂಟಿಫುಲ್' ಎಂದಾಗ ಅವರ ಮುಖದಲ್ಲಿ ತೃಪ್ತಿ ಸಮಾಧಾನವಿತ್ತು.ಆದರೆ ಭೂಮಿಗೆ ಈ ಉದ್ಗಾರ, ಭರವಸೆಯನ್ನು ತಂದುಕೊಟ್ಟಿತ್ತು. ಅವಳ ಎದೆಯ ಸೌಂದರ್ಯ ಹೊಗಳುವ ಪದಗಳನ್ನು ಬದುಕಿನಲ್ಲಿ ಸತತವಾಗಿ ಕೇಳುತ್ತಲೇ ಬಂದಿದ್ದಳು. ಅದು ಬದುಕಿನ ಭಾಗವಾಗಿತ್ತು. ಆ ನುಡಿಯ ಹಿಂದೆ ಹೆಣ್ಣಿನ ಸೌಂದರ್ಯವನ್ನು ಆರಾಧಿಸುವ ನುಡಿಗಳೋ, ಕಾಮುಕ ಭಾವನೆಗಳೋ, ಪ್ರೀತಿ, ಪ್ರೇಮ, ಹೀಗೆ ಎಲ್ಲವೂ ಸೇರಿದ್ದರೂ ಅದನ್ನು ಮುಖ್ಯವೆಂದು ಭೂಮಿ ಭಾವಿಸಿರಲಿಲ್ಲ, ಹಾಗಂತ ಬದುಕಿನ ಬಗ್ಗೆ ಸದಾ ಉಕ್ಕುವ ಆಸಕ್ತಿಗೇನೂ ಕೊರತೆ ಇರಲಿಲ್ಲ.ಹನ್ನೆರಡರ ಹದಿಹರೆಯದಲ್ಲಿ ದೇಹ ಹೆಣ್ಣಾಗಿ ರೂಪುಗೊಳ್ಳತೊಡಗಿದಾಗ ಎಲ್ಲ ಹೆಣ್ಣುಮಕ್ಕಳಂತೆ ಸಂಕೋಚ, ಕೀಟಲೆಯ ನೋಟದಿಂದ ದೇಹವನ್ನು ಮುಚ್ಚಿಕೊಳ್ಳುವ ಪ್ರಯತ್ನ. ತೊಟ್ಟ ಬಟ್ಟೆಯ ಮೇಲೆ ಸ್ವೆಟರ್ ತೊಟ್ಟು ಎರಡು ಜಡೆಗಳನ್ನು ಮುಂದೆ ಇಳಿಬಿಟ್ಟು ಶಾಲೆಗೆ ಹೋಗುವಾಗ ಪುಸ್ತಕವನ್ನು ಎದೆಗೆ ಅಡ್ಡ ಹಿಡಿದು ಹೋಗುವುದು ಆರಂಭವಾಯಿತು. ಹೀಗೆ ಮುಚ್ಚಿಟ್ಟ, ಹಿಡಿದಿಟ್ಟ ಸುಪ್ತ ಮಾನಸಿಕ ಸ್ಥಿತಿ, ವಿಕಾಸವಾಗುವ ದೇಹದ ಮೇಲೆ ಹಲವು ಬಗೆಯ ಒತ್ತಡಗಳನ್ನು ಹುಟ್ಟುಹಾಕತೊಡಗಿತ್ತು.ಹೀಗೆ ಅರೆಗಳಿಗೆಯಲ್ಲಿ ಆ ಎದೆಯ ಕಥೆ ಹಾಡಾಗಿತ್ತು. ಭೂಮಿಯ ಕೋಣೆಗೆ ಪ್ರವೇಶಿಸಿದ ಪ್ರಸಿದ್ಧ ಸ್ತನ ಕ್ಯಾನ್ಸರ್ ತಜ್ಞರ ಕಣ್ಣಿಗೆ ಮ್ಯೋಸೆಕ್ಟಮಿ (ಎಂದರೆ ಪೂರ್ಣ ಸ್ತನವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು) ನಂತರ ಮೂರನೇ ದಿನದಲ್ಲಿ ಗಾಯ ಪೂರ್ಣ ಮಾಸಿದ್ದು ಸಣ್ಣನೆಯ ಒಂದು ಎಳೆಯ ಹೊಲಿಗೆ ಬ್ಯೂಟಿಫುಲ್ ಆಗಿ ಕಾಣಿಸಿತ್ತು. ವೈದ್ಯರ ಕಣ್ಣಲ್ಲಿ ಸೌಂದರ್ಯದ ಕಲ್ಪನೆ! ಗಾಯದ ಮೇಲೆ ಕೀವು ಕಾಣದ ಗಳಿಗೆ. ಇಲ್ಲಿ ಭೂಮಿ ಅಥವಾ ಮತ್ತಾವುದೇ ಹೆಸರಿನ ಹೆಣ್ಣು, ಕ್ಯಾನ್ಸರ್ ತಗುಲಿದ್ದಕ್ಕಾಗಿ ಸ್ತನವನ್ನು ತೆಗೆಯಲು ಒಪ್ಪಿ ಆಂಗ್ಲ ವೈದ್ಯಕೀಯ ವಿಧಿಗೆ ಶರಣಾದಾಗ, ಅಮೆರಿಕದ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟಿ ಬಹಿರಂಗವಾಗಿ ನಿಂತಿದ್ದು ಧೈರ್ಯವನ್ನು ನೀಡಲಿಲ್ಲ. ಒಡಲ ಬೆಂಕಿಯನ್ನು ಹೀಗೆ ಹೊರ ಹಾಕುತ್ತಿರುವವರು ಯಾರು?ಏಂಜೆಲಿನಾ ಜೋಲಿ ಹಾಲಿವುಡ್‌ನ ಅತ್ಯಾಕರ್ಷಕ ನಟಿ. ಅದರಲ್ಲೂ ಆ್ಯಕ್ಷನ್ ಹೀರೊಯಿನ್ ಆಗಿ ಉತ್ಕರ್ಷದಲ್ಲಿ ಇದ್ದಾಕೆ, ಇದ್ದಕ್ಕಿದ್ದಂತೆ ತನ್ನೆರಡು ಮೊಲೆಗಳನ್ನು ಕತ್ತರಿಸಿರುವುದಾಗಿ ಬಹಿರಂಗವಾಗಿ ಹೇಳಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಕ್ಯಾನ್ಸರ್ ತಗುಲಿರದಿದ್ದರೂ ಮುಂಜಾಗ್ರತಾ ಕ್ರಮವಾಗಿ ಮೊಲೆಗಳನ್ನು ಕತ್ತರಿಸಿಕೊಂಡರೇಕೆ? ಜೊತೆಗೆ ವೈದ್ಯಕೀಯ ಆದರ್ಶವಾಗಿ ಇದನ್ನು ಜಗತ್ತಿನ ಮುಂದಿಡಲಾಯಿತು. ಅದರಲ್ಲೂ `ಬ್ರೆಸ್ಟ್ ಕ್ಯಾನ್ಸರ್' ಬಗ್ಗೆ ಸರಿಯಾದ ಅರಿವಿಲ್ಲದ ಭಾರತದಲ್ಲಿ ಇದನ್ನು ಸಾರಬೇಕೆಂದು ಹೊರಟಿದ್ದು ಸರಳವಾದ ವಿಚಾರಗಳಲ್ಲ ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತದೆ.ಹೆಣ್ತನದ ಅಂಗವಾಗಿ ತಾಯಿ-ಮಗುವಿನ ಸಂಬಂಧ ಸೇತುವಾದ ಸ್ತನಗಳನ್ನು ಕ್ಯಾನ್ಸರ್ ಬಿಡುತ್ತಿಲ್ಲ. ದೇಹದ ಯಾವ ಭಾಗಕ್ಕಾದರೂ ಕ್ಯಾನ್ಸರ್ ತಗಲುವ ಸಾಧ್ಯತೆಯಿರುವಾಗ ಸ್ತನ ಕ್ಯಾನ್ಸರ್ ಬಗ್ಗೆ ಯಾಕೆ ಇಂತಹ ಕಾಳಜಿ? ಸ್ತನ, ಗರ್ಭಕೋಶ, ಧ್ವನಿಪೆಟ್ಟಿಗೆ - ಹೀಗೆ ಕೆಲವು ಅಂಗಗಳನ್ನು ಪೂರ್ಣ ತೆಗೆಯಬಹುದಾದ್ದರಿಂದ ಅವು ಸಂಪೂರ್ಣ ಗುಣವಾಗುತ್ತವೆ.ಎಲ್ಲಾ ನಗರಗಳಿಗಿಂತ ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಿದೆ ಎನ್ನುವುದು ಭೀತಿ ಹುಟ್ಟಿಸಿದೆ. ಕ್ಯಾನ್ಸರ್‌ಗೂ ಬೆಂಗಳೂರು ರಾಜಧಾನಿಯಾಗುವುದು ಹೆಮ್ಮೆಯ ವಿಷಯವಲ್ಲ.ಕ್ಯಾನ್ಸರ್ ಯಾವುದೇ ಭಾಗಕ್ಕೆ ತಗುಲಿದರೂ ಆರಂಭದಲ್ಲೇ ಗುರುತಿಸಿದಲ್ಲಿ ಕ್ಷಕಿರಣ ಹರಿಯಬಿಟ್ಟು ಅಥವಾ ಕಿಮೋದಿಂದ ಬಗೆಹರಿಸುತ್ತಾರೆಂಬುದು ನಿಜ. ಸದಾ ಕಾಲಕ್ಕೂ ಮುಚ್ಚಿಟ್ಟುಕೊಂಡು ಬದುಕಿದ್ದ ಸ್ತನಗಳನ್ನು ವೈದ್ಯರು ಪರೀಕ್ಷಿಸತೊಡಗಿದಾಗ ಗಾಬರಿಯಾಗಲು ಹಲವು ಕಾರಣಗಳಿರುತ್ತವೆ. ನಮ್ಮ ಬದುಕು ಇಲ್ಲಿಗೇ ಮುಗಿದೇ ಹೋಗಿರಬೇಕೆಂದು. ಸಾಮಾನ್ಯವಾಗಿ ನಲವತ್ತು ಮೀರಿದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣುವುದರಿಂದ ಕೆಲವು ಸಾಮಾನ್ಯ ಕಾರಣಗಳಂತೂ ಇರುತ್ತವೆ. ಗರ್ಭ ತಡೆಯಲು ಗುಳಿಗೆಗಳನ್ನು ನುಂಗಿರಬಹುದೆ; ಸೌಂದರ್ಯ ಹೆಚ್ಚಿಸಿಕೊಳ್ಳಲು ಸ್ತನಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಬಹುದೆ; ಹಾರ್ಮೋನ್ ಚುಚ್ಚುಮದ್ದನ್ನು ತೆಗೆದುಕೊಂಡು ಸ್ತನಗಳನ್ನು ಸುಂದರಗೊಳಿಸಿಕೊಂಡಿರಬಹುದೆ; ಇಲ್ಲವಾದರೆ ಮನೆಯಲ್ಲಿ ತಾಯಿ ಅಥವಾ ಮತ್ತ್ಯಾರಿಗಾದರೂ ಬಂದಿದ್ದಿರಬಹುದೆ?ಹೀಗೆ ಪ್ರಶ್ನೆಗಳು ಮುಂದುವರಿದಂತೆ ಎದುರು ಕುಳಿತ ಹೆಣ್ಣಿಗೆ ದೈನ್ಯತೆಯ ಮುಖಭಾವ ಮಾತ್ರ ಉಳಿದಿರುತ್ತದೆ. ಮಗುವಿಗೆ ಹಾಲುಣಿಸಿದ್ದೆನಲ್ಲಾ ಎಂಬುದು ಅವಳ ಮನದಲ್ಲಿ ಬಂದು ಹೋಗುತ್ತದೆ.ನಲವತ್ತು ವರ್ಷಗಳ ನಂತರ ಕಡ್ಡಾಯವಾಗಿ ಸ್ತನ ಪರೀಕ್ಷೆ ಮಾಡಿಸಬೇಕೆಂಬ ಎಚ್ಚರಿಕೆಯ ಮಾತು ಆರಂಭವಾಗಿ ದಶಕಗಳೇ ಆಗಿವೆ. ಆದರೆ ಭಾರತೀಯ ಶೈಲಿಯ ಸಾಂಸಾರಿಕ ಬದುಕಿನಲ್ಲಿ ನೋವು ನುಂಗುವುದನ್ನು ಹೆಣ್ಣುಮಕ್ಕಳು ಸೊಗಸಾಗಿ ಕಲಿತಿದ್ದಾರೆ. ದೇಹದ ನೋವಿಗಿಂತ ಸಂಸಾರದಲ್ಲಿ ಮೂಡಬಹುದಾದ ಬಿರುಕಿಗೆ ಸದಾ ಹೆದರುತ್ತಾಳೆ. ಅಂಜಿ, ಅಳುಕಿ, ಮುಚ್ಚಿಟ್ಟುಕೊಳ್ಳುವ ಹೊತ್ತಿಗೆ ಮೊದಲ ಹಂತಗಳು ದಾಟಿರುತ್ತವೆ. ಆದರೆ ಬದುಕು ಎಷ್ಟು ಒತ್ತಡಗಳಿಂದ ಕೂಡಿತ್ತು ಎಂದು ಯಾರೂ ಕೇಳುವುದೇ ಇಲ್ಲ. ಹೊಸ ಭಾಷ್ಯವನ್ನೇ ಬರೆಯಬೇಕಾಗಿದೆ.ಇದನ್ನು ಆಕೆ ಹೇಗೆ ಎದುರಿಸಬಲ್ಲಳು? ಎಲ್ಲರಿಗೂ ಒಂದೇ ಸೂತ್ರವಂತೂ ಇಲ್ಲ.  ಆಸ್ಪತ್ರೆ, ಓಡಾಟ ಮುಂತಾದವನ್ನೆಲ್ಲಾ ಹಣವಂತರು, ನಗರದ ಮಧ್ಯಮವರ್ಗ ಹೇಗೊ ನಿಭಾಯಿಸಲು ಸಾಧ್ಯವಾದರೆ ಯಾವುದೇ ಕ್ಯಾನ್ಸರ್ ಗೆಲ್ಲಬಹುದು. ಅದರಲ್ಲೂ ಸ್ತನ ಕ್ಯಾನ್ಸರ್ ಆದಲ್ಲಿ ಆರೇಳು ತಿಂಗಳಲ್ಲಿ ಮರಳಿ ತಮ್ಮ ದಿನನಿತ್ಯದ ಬದುಕನ್ನು ಖಂಡಿತ ನಿಭಾಯಿಸಬಹುದು. ವೈದ್ಯರು ಕೊಡುವ ಔಷಧಿಯ ಆಚೆಗೆ ಕೆಲಸ ಮಾಡುವುದು ಮನೋಬಲ. ಆ ಮನೋಬಲವೂ ವ್ಯಕ್ತಿನೆಲೆಯಲ್ಲಿ ಹುಟ್ಟುವಂತಹುದಲ್ಲ. ಅದಕ್ಕೂ ಬಲವಾದ ಸಾಮಾಜಿಕ ಹಿನ್ನೆಲೆ ಕಾರಣವಿರುತ್ತದೆ.ಹಳ್ಳಿಯ ಹೆಣ್ಣುಮಕ್ಕಳಿಗಾಗಿ ಸರ್ಕಾರ ಮೊಬೈಲ್ ಮ್ಯೋಮೊಗ್ರಾಮ್ ವಾಹನವನ್ನು ಆರಂಭಿಸಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿದೆ. ಯೋಜನೆಗಳನ್ನು ರೂಪಿಸಿದೆ. ಆದರೆ ಆಸ್ಪತ್ರೆವರೆಗೆ ಬರುವ ಚೈತನ್ಯ ಬರಿಸುವವರಾರು? ಮುಂಜಾಗ್ರತಾ ಕ್ರಮವಾಗಿ ಮೆಡಿಕಲ್ ಇನ್ಷೂರೆನ್ಸ್ ಇರುವವರು ಸ್ವಲ್ಪಮಟ್ಟಿಗಾದರೂ ಹಣಕಾಸಿನ ಸಮಸ್ಯೆಯನ್ನು ನಿಭಾಯಿಸಿಕೊಳ್ಳುತ್ತಿದ್ದಾರೆ.ಏಂಜೆಲಿನಾ ಜೋಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಾಯಿ ಸ್ತನ ಕ್ಯಾನ್ಸರ್‌ನಿಂದ ಸತ್ತರೆಂದು, ಚಿಕ್ಕಮ್ಮನೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆಂದು ಮುಂಜಾಗ್ರತೆಯಾಗಿ ತನಗೆ ಸ್ತನ ಕ್ಯಾನ್ಸರ್ ಬರುವ ಎಲ್ಲಾ ಸಾಧ್ಯತೆಗಳನ್ನು ನಿರೀಕ್ಷಿಸಿ ತನ್ನ 38ನೇ ವಯಸ್ಸಿನಲ್ಲೇ ತನ್ನ ಎರಡೂ ಸ್ತನಗಳನ್ನು ತೆಗೆಸಿಕೊಳ್ಳುವಂತೆ ಮಾಡಿದ್ದು ಯಾವ ಮಟ್ಟದ ವೈದ್ಯಕೀಯ ಸಾಧನೆ?

  ಕ್ಯಾನ್ಸರ್ ಬಂದ ನಂತರ ಅದರ ಸಾಧಕ ಬಾಧಕಗಳ ಬಗ್ಗೆ ಗಮನ ಹರಿಸುತ್ತಿದ್ದೇವೆಯೇ ಹೊರತು ಬಾರದಂತೆ ತಡೆಯುವ ಯೋಜನೆಗಳೇಕೆ ಇಲ್ಲ? ಕ್ಯಾನ್ಸರ್ ಬಂದಷ್ಟೂ, ಮನುಷ್ಯ ನರಳಿದಷ್ಟೂ ಔಷಧಿ ಉದ್ದಿಮೆಗಳು ಸುಖಕರವಾಗಿ ಬೆಳೆಯುತ್ತವೆ.ಸಂಭ್ರಮಿಸುತ್ತವೆ. ಈ ವಿಷ ವರ್ತುಲದಲ್ಲಿ ಸಿಕ್ಕಿ ನರಳಲು ಎಲ್ಲರನ್ನೂ ಸನ್ನದ್ಧಗೊಳಿಸಲಾಗುತ್ತಿದೆ. ಒತ್ತಡದ ಈ ಬದುಕನ್ನು ಒಪ್ಪಿಕೊಳ್ಳುತ್ತಾ ಕಡೆಗೂ ಕಾಣದ ಕೈವಾಡಕ್ಕೆ ಸಿಕ್ಕಿಸುತ್ತಾ ಹೋಗುವ ಈ ತಂತ್ರಗಾರಿಕೆ ಕಳ್ಳುಬಳ್ಳಿಯ ತಂತುಗಳನ್ನು ಕೀಳುತ್ತಿದೆ.

 

ಭಾರತದಲ್ಲಿ 1970ರ ದಶಕದಲ್ಲಿ ಪರಿಚಯಿಸಿದ್ದು ಹಸಿರುಕ್ರಾಂತಿ, 60ರ ವರೆಗೆ ಭಾರತ ಎದುರಿಸಿದ ಆಹಾರ ಸಮಸ್ಯೆಗೆ ಕಂಡುಕೊಂಡ ಪರಿಹಾರ ಅದು. ಎಲ್ಲಾ ಅರ್ಥಶಾಸ್ತ್ರದ ಗ್ರಂಥಗಳಲ್ಲಿ, ಕೃಷಿ ಪಠ್ಯಗಳಲ್ಲಿ ಭಾರತದ ಕೃಷಿ ಹಿಂದುಳಿಯುವಿಕೆಗೆ ರೈತರ ಮೌಢ್ಯತೆಯೇ ಕಾರಣವೆಂದೂ, ಆ ಮೌಢ್ಯತೆಗೆ ಕಾರಣ ಅವರು ಆಧುನಿಕ ತಂತ್ರಜ್ಞಾನ ಬಳಸುತ್ತಿಲ್ಲ ಎಂದು ಹೇಳಲಾಯಿತು. ಈಗ, ಇಂದಿನ ಪರಿಸರದ ಪಾಠಗಳಲ್ಲಿ ಭಾರತದ ರೈತರು ಮೌಢ್ಯತೆಯಿಂದಾಗಿ ಅಗತ್ಯ ಮೀರಿ ಬಳಸುತ್ತಿರುವ ಕ್ರಿಮಿನಾಶಕದಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದಾ ಕಾಲಕ್ಕೂ ಮುಗ್ಧ ರೈತರೇ ಅಪರಾಧಿಗಳು. ಹಸಿರು ಕ್ರಾಂತಿಗೂ ರೈತರಿಗೂ  ಕ್ಯಾನ್ಸರ್‌ಗೂ ಎಲ್ಲಿಗೆಲ್ಲಿಯ ಸಂಬಂಧ!ಒತ್ತಡದಿಂದಾಗಿ ಬರುವ ಬಿ.ಪಿ, ಶುಗರ್, ಕ್ಯಾನ್ಸರ್ ಇವೆಲ್ಲಾ ನಗರದವರಿಗೆ ಬರುವ ಕಾಯಿಲೆಗಳು ಎಂದು ಈವರೆಗೆ ನಾವು ಭಾವಿಸ್ದ್ದಿದೆವು. `ಹಸಿರು ಕ್ರಾಂತಿ'ಯಲ್ಲಿ ಮಂಚೂಣಿಯಲ್ಲಿದ್ದ ರಾಜ್ಯ ಪಂಜಾಬ್. ಅಲ್ಲಿಂದ `ಬಿಕನೇರ್'ಗೆ ಹೋಗುವ ರೈಲನ್ನು `ಕ್ಯಾನ್ಸರ್ ರೈಲು' ಎಂದೇ ಕರೆಯಲಾಗುತ್ತಿದೆ. ಆ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಿಗಳು ಆ ರೈಲಿನಲ್ಲಿ ಹೋಗುತ್ತಿದ್ದಾರೆ. ನಾಲ್ಕು ದಶಕಗಳ ಕಾಲ ನಿರಂತರವಾಗಿ ಬಳಸಿದ ಕ್ರಿಮಿನಾಶಕ ಕ್ಯಾನ್ಸರ್‌ಗೆ ಕಾರಣವಾಗಿದೆ. ಬಡರೈತರು ತಮ್ಮ ಮನೆಯಲ್ಲೇ ಇರುವ ಅಂಗೈ ಅಗಲ ಜಾಗದಲ್ಲಿ ಮಗುವಿನ ತೊಟ್ಟಿಲ ಕೆಳಗೆ ಕ್ರಿಮಿನಾಶಕಗಳನ್ನು ಇಟ್ಟಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ರಸಗೊಬ್ಬರವನ್ನು ರೈತ ನೇರವಾಗಿ ಕೈಯಲ್ಲೇ ತೆಗೆದು ಗಿಡಕ್ಕೆ ಹಾಕುತ್ತಾನೆ. ಹಿಂದೆ ಮುಂದೆ ನೋಡಿದರೆ ಇದೇನು `ಆರಂಭ ಮಾಡೋ ಹುಟ್ಟ' ಎಂದು ತಲೆಗೆ ಕುಕ್ಕುತ್ತಾರೆ ಅಷ್ಟೆ. ದುಡಿಮೆಯೇ ದೇವರೆಂದು ನಂಬಿದ ಕಾಯಗಳಿಗೂ ಕ್ಯಾನ್ಸರ್ ತಗುಲಿದೆ. `ಜೀನ್ ಮ್ಯುಟೇಷನ್' ಆಗಲು ಜೀವವೊಂದನ್ನು ರಸಗೊಬ್ಬರದಲ್ಲಿ, ಕೀಟನಾಶಕದಲ್ಲಿ ಅದ್ದಿ ಉರುಳಾಡಿಸಿದರೆ ನಾಲ್ಕು ದಶಕಗಳು ಸಾಲದೇ? ಕ್ಯಾನ್ಸರ್ ವೈರಸ್ ಅ್ಲ್ಲಲ, ಬ್ಯಾಕ್ಟೀರಿಯಾ ಅಲ್ಲ. ನಮ್ಮದೇ ದೇಹದ ಕೋಶಗಳೂ ಸಹಜತೆಯನ್ನು ಬಿಟ್ಟು ವರ್ತಿಸತೊಡಗುತ್ತವೆ. ಆಗ ಅವನ್ನು ಕ್ಯಾನ್ಸರ್ ಕಣಗಳು ಎಂದು ಕರೆಯುತ್ತಾರೆ - ಮ್ಯುಟೇಷನ್ ಆದ ಕಣಗಳು.ಸುಂದರವಾದ ಬ್ಲೌಸ್ ಹೊಲೆಸುವಲ್ಲಿ, ಬ್ರಾ ಹುಡುಕಿಕೊಳ್ಳುವಾಗಲೂ ಆ ಸ್ತನಗಳಿಗಿರುವ ಜವಾಬ್ದಾರಿ ಕೇವಲ ಆಕರ್ಷಣೆಯಲ್ಲ. ಲೈಂಗಿಕ ಆಕರ್ಷಣೆಯ ಆಚೆಗೆ ತಾಯಿ ಮಗುವಿನ ಸಂಬಂಧವಿದೆ. ಎರಡು ಕೈಗಳ ಚಲನೆಗೆ ಅದು ಬೆಂಬಲ ನೀಡುವ ಸ್ನಾಯುವೂ ಹೌದು. ಹೊಟ್ಟೆಯೊಳಗಿನ ಕಂದ ಗಂಡಲ್ಲ ಎಂದು ಕರುಳು ಹರಿದರೆ - ಇವೆಲ್ಲಾ ಮುಂದಿನ ತಲೆಮಾರನ್ನು ಉಳಿಸಬಲ್ಲದೆ?

ಮುನ್ನೆಚ್ಚರಿಕೆಯಾಗಿ ಬದಲಾಯಿಸಿಕೊಳ್ಳಬಹುದಾದ ಆಹಾರ ಕ್ರಮ, ಹೆಚ್ಚಿಸಿಕೊಳ್ಳಬಹುದಾದ ಪೌಷ್ಟಿಕತೆ, ಬಿಟ್ಟೇಹೋಗಿರುವ ನಮ್ಮ ನೆಲಮೂಲದ ಹಣ್ಣುತರಕಾರಿಗಳು, ಮರೆತೇ ಹೋಗಿರುವ ಹನುಮ ಫಲ, ರಾಮ ಫಲ ಮುಂದಿನ ಪೀಳಿಗೆಯನ್ನು ಮತ್ತೆ ಉಳಿಸಬಲ್ಲದೆ?ಕ್ಯಾನ್ಸರ್ ಎದುರಿಸಲೇಬೇಕಾದಾಗ ಹೆಣ್ಣುಮಕ್ಕಳು ಧೈರ್ಯ ತೆಗೆದುಕೊಳ್ಳಬೇಕು. ಆಸ್ಪತ್ರೆ ಎಂಬ ವ್ಯವಸ್ಥೆಯನ್ನು ಒಪ್ಪಿ ಅಲ್ಲಿಯ ವಿಜ್ಞಾನವನ್ನು ನಂಬಿ ಮ್ಯೋಸೆಕ್ಟಮಿ, ಕೀಮೊ ಥೆರಪಿ, ರೇಡಿಯೊ ಥೆರಪಿ ಎಂದು ಔಷಧಿಗೆ ತಲೆ ಬಾಗಿದಾಗ ಬೆಳೆದು ನಿಂತ ಕಬ್ಬಿನಗದ್ದೆಗೆ ಬೆಂಕಿ ಹಾಕಿದಂತಾಗಿರುತ್ತದೆ. ಎಲ್ಲವೂ ಸುಟ್ಟು ಕರುಕಲಾದಾಗ ಆ ಗದ್ದೆಗೆ ಮತ್ತೆ ನೀರುಕಟ್ಟಿದರೆ ಭೂಗರ್ಭದಿಂದ ಹೊರ ಬರುವ ಕಬ್ಬಿನ ಚಿಗುರು ಮತ್ತೊಮ್ಮೆ ಹಸಿರಾಗಿ ಚಿಗುರಿ ಫಲಭರಿತವಾಗಿರುತ್ತದೆ. ಸುಟ್ಟ ಹೊಲದ ಒಳಗೆ ಅಡಗಿರುವ ಆ ಚೈತನ್ಯವನ್ನು ಪ್ರತಿ ಕ್ಯಾನ್ಸರ್‌ಗೆ ಒಳಗಾದ ಜೀವ ತನ್ನ ಒಡಲೊಳಗೆ ಹುದುಗಿಟ್ಟುಕೊಳ್ಳಬೇಕು.ಕ್ಯಾನ್ಸರ್ ಬಂದವರನ್ನು ಉಳಿಸಿಕೊಳ್ಳಲು ಹೋರಾಡುವ ಆಸ್ಪತ್ರೆ ಎಂಬ ಬೃಹತ್ ವ್ಯವಸ್ಥೆಯ ಮುಂದೆ ಜನರ ದನಿ ಉಡುಗಿಹೋಗಿದೆ. ಆಸ್ಪತ್ರೆ ಬೆಂಬಲವಾಗಿ ನಿಲ್ಲುವ ಇನ್ಷೂರೆನ್ಸ್ ಕಂಪೆನಿ, ಅವರ ಬೆಂಬಲಕ್ಕೆ ನಿಲ್ಲುವ ಸರ್ಕಾರ, ಆರೋಗ್ಯದ ಹೆಸರಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳ ಧನಸಹಾಯ-  ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಲು ಸಿದ್ಧವಾಗಿವೆ. ಒಡಲ ಬೆಂಕಿ ಆರದಿರಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.