ಗುರುವಾರ , ಮೇ 6, 2021
25 °C

ಕೃಷ್ಣಾ ನದಿ ಯೋಜನೆ: ಮತ್ತೆ ಮಂಕುಬೂದಿ ಎರಚದಿರಿ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಕೃಷ್ಣಾ ನದಿ ಯೋಜನೆ: ಮತ್ತೆ ಮಂಕುಬೂದಿ ಎರಚದಿರಿ

ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿಯಲ್ಲಿ ನಿರ್ಮಿಸಿರುವ ಅಣೆಕಟ್ಟೆಯನ್ನು 524.256 ಮೀಟರ್‌ಗೆ ಏರಿಸಲು ಬೇಕಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಇದೇ ವರ್ಷದಿಂದಲೇ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪ್ರಕಟಿಸಿದ್ದಾರೆ. ಇದರ ಜೊತೆಗೆ ಮತ್ತು ಹಿನ್ನೀರಿನಲ್ಲಿ ಭೂಮಿ ಕಳೆದುಕೊಳ್ಳಲಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಇನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ರೂ 50,000 ಕೋಟಿಯನ್ನು ಈ ಅವಧಿಯಲ್ಲಿ ಒದಗಿಸುವ ಭರವಸೆಯನ್ನು ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದೆ. ಇದುವರೆಗೂ ರಾಜ್ಯವನ್ನು ಆಳಿದ ಎಲ್ಲ ರಾಜಕೀಯ ಪಕ್ಷಗಳು ಇದೇ ರೀತಿಯ ಘೋಷಣೆಗಳನ್ನು ಮಾಡುವ ಮೂಲಕ ಜನರಿಗೆ ಮಂಕುಬೂದಿ ಎರಚಿ ಅಧಿಕಾರ ಪಡೆದುಕೊಂಡಿದ್ದಾರೆ ಎಂಬುದು ರಾಜ್ಯದಲ್ಲಿ ಸಾಗಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ನೋಡಿದಾಗ ಅನಿಸುತ್ತದೆ.ಆಲಮಟ್ಟಿ ಜಲಾಶಯ ಕಟ್ಟುವುದಕ್ಕೆ ಸರ್ಕಾರ ತೆಗೆದುಕೊಂಡದ್ದು ಬರೋಬ್ಬರಿ 42 ವರ್ಷಗಳು (ಉದ್ಘಾಟನೆವರೆಗೆ). ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 1976ರಲ್ಲಿ ನೀಡಿದ ತೀರ್ಪಿನ ಅನ್ವಯ ರಾಜ್ಯಕ್ಕೆ ದೊರೆತ 734 ಟಿಎಂಸಿ ಅಡಿ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲು, ಈವರೆಗೂ ಅಗತ್ಯ ಯೋಜನೆ ರೂಪಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಈಗ ಹೊಸ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದೆ!

ಆಲಮಟ್ಟಿ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸಲು (1964ರಲ್ಲಿ) ಬಂದಿದ್ದ ಆಗಿನ ಕೇಂದ್ರ ಸಚಿವ ಲಾಲ್‌ಬಹದ್ದೂರ್ ಶಾಸ್ತ್ರಿಯವರು, `10 ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆಯಾದರೂ ಎಂಟು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು' ಎಂದು ಸಲಹೆ ನೀಡಿದ್ದರು. ಶಾಸ್ತ್ರಿಯವರು ಇದ್ದ ಕಾಂಗ್ರೆಸ್ ಪಕ್ಷವೇ ಆಗಿನ ಮೈಸೂರು ರಾಜ್ಯದಲ್ಲಿ ಆಡಳಿತದಲ್ಲಿತ್ತು. ಆದರೂ ಅವರ ಮಾತಿಗೆ ಬೆಲೆ ಸಿಗಲಿಲ್ಲ! ಇದು ಅಭಿವೃದ್ಧಿ ಪರ ದೊಡ್ಡ ದನಿಯಲ್ಲಿ ಮಾತನಾಡುವ ರಾಜಕಾರಣಿಗಳ ಇಚ್ಛಾಶಕ್ತಿ! ಈಗ ಮತ್ತೆ ಅದೇ ಕಾಂಗ್ರೆಸ್ ಸರ್ಕಾರ, ಅದೇ ಕೃಷ್ಣಾ ನದಿ ನೀರಿನ ಬಳಕೆ ಬಗ್ಗೆ ಮಾತನಾಡುತ್ತಿದೆ. ಇದನ್ನು ಜನತೆ ನಂಬುವುದಾದರೂ ಹೇಗೆ?ಸರ್ಕಾರದ ವಿಳಂಬ ನೀತಿ ಮತ್ತು ಆಲಸ್ಯದ ಫಲ ಎಷ್ಟೆಂದರೆ, ಆಲಮಟ್ಟಿ ಜಲಾಶಯ ಯೋಜನೆಯನ್ನು ಕೈಗೆತ್ತಿಕೊಂಡಾಗ ಅದರ ವೆಚ್ಚ ಇದ್ದುದು ರೂ 120 ಕೋಟಿ ! ಆದರೆ ಜಲಾಶಯ ಅಧಿಕೃತವಾಗಿ ಉದ್ಘಾಟನೆಯಾಗುವ ವೇಳೆಗೆ (2006ರಲ್ಲಿ) ಆದ ವೆಚ್ಚ ರೂ 10,000 ಕೋಟಿ  ಮುಟ್ಟಿತ್ತು (2001ರಿಂದಲೇ ಜಲಾಶಯದಲ್ಲಿ ನೀರು ಸಂಗ್ರಹ ಆರಂಭವಾಗಿತ್ತು). ಇನ್ನು ಇದಕ್ಕಿಂತಲೂ ಭೀಕರ ಸಂಗತಿ ಎಂದರೆ ಆರ್.ಎಸ್. ಬಚಾವತ್ ನೇತೃತ್ವದ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು ರಾಜ್ಯಕ್ಕೆ ನೀಡಿದ 734 ಟಿಎಂಸಿ ಅಡಿ ನೀರನ್ನು 2000 ಇಸವಿಯೊಳಗೆ ಬಳಕೆ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಅನುಗುಣವಾಗಿ ಯೋಜನೆಗಳು ಅನುಷ್ಠಾನವಾಗಬೇಕಿತ್ತು. ವಿಪರ್ಯಾಸವೆಂದರೆ ಆ ಅವಧಿ ಮುಗಿದು 13 ವರ್ಷ ಕಳೆದಿದ್ದರೂ ನಮ್ಮ ಪಾಲಿಗೆ ಬಂದ ನೀರಿನ ಬಳಕೆ ಪೂರ್ಣವಾಗಿ ಆಗಿಲ್ಲ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹಕ್ಕೇನೋ ವ್ಯವಸ್ಥೆ ಆಗಿದೆ. ಆದರೆ ಬರೀ ಜಲಾಶಯದಲ್ಲಿ ನೀರಿದ್ದರೆ ಆಯಿತೇ? ಅದು ರೈತರ ಹೊಲಗಳಿಗೆ ಹರಿಯಬೇಕಲ್ಲ? ಆದರೆ ಅದಕ್ಕೆ ಬೇಕಾದ ಕಾಲುವೆ, ನಾಲೆ, ಉಪ ಕಾಲುವೆ, ವಿತರಣಾ ನಾಲೆಗಳ ಕೆಲಸ ಇನ್ನೂ ಆಗಿಯೇ ಇಲ್ಲ. ಇದು 734 ಟಿಎಂಸಿ ಅಡಿ ನೀರು ದೊರೆತು 37 ವರ್ಷದ ನಂತರದ ಸ್ಥಿತಿ! ಇನ್ನು ರೈತರ ಬಾಳು ಹಸನು  ಹೇಗಾದೀತು? ಇದು ಸರ್ಕಾರದ ನಿರ್ಲಕ್ಷ್ಯದ ಪರಮಾವಧಿ. ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡಲು ಮುಂದಾಗದೇ ಅಧಿಕಾರ ಅನುಭವಿಸಿದ ರಾಜಕೀಯ ಪಕ್ಷಗಳು ಈಗಲೂ ಅದೇ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ಮರಳು ಮಾಡುವ ಕಾಯಕದಲ್ಲಿ ತೊಡಗಿವೆ ಎನ್ನುವುದಕ್ಕೆ ಸರ್ಕಾರದ ಘೋಷಣೆಗಳೇ ಸಾಕ್ಷಿಯಾಗಿವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಂತೂ ಎಲ್ಲ ಪಕ್ಷಗಳ ಆದ್ಯತೆಯೂ ಕೃಷ್ಣೆ, ನೀರಾವರಿಯೇ ಆಗಿದ್ದುದು ವಿಪರ್ಯಾಸ.ಹಿಂದಿನ ನ್ಯಾಯಮಂಡಳಿಯ (ಬಚಾವತ್) ತೀರ್ಪಿನ ಸ್ಥಿತಿಯೇ ಈ ರೀತಿ ಇದೆ ಎಂದರೆ, ಇನ್ನು ನ್ಯಾಯಮೂರ್ತಿ ಬ್ರಜೇಶ್ ಕುಮಾರ್ ನೇತೃತ್ವದ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ತೀರ್ಪಿನ ಅನುಷ್ಠಾನಕ್ಕೆ ಎಷ್ಟು ವರ್ಷಗಳು ಹಿಡಿಯಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಇದೇ ಸಿದ್ದರಾಮಯ್ಯ ಅವರೇ ರಾಜ್ಯದ ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ `ಖ್ಯಾತಿ' ಹೊಂದಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಏಕೆ ಕೃಷ್ಣಾ ನದಿಯ ಯೋಜನೆಗಳು, ಕಾಮಗಾರಿಗಳು ಜ್ಞಾಪಕಕ್ಕೆ ಬರಲಿಲ್ಲ? ಈಗ `ವರ್ಷಕ್ಕೆ ರೂ 10,000 ಕೋಟಿ  ಒದಗಿಸಲು ಸರ್ಕಾರ ಬದ್ಧ' ಎನ್ನುವ ಅವರು, ಆಗ ಏಕೆ ರೈತರ ಕಣ್ಣೀರು ಒರೆಸಲು ಹೆಚ್ಚುವರಿ ಹಣ ಒದಗಿಸಲಿಲ್ಲ? ಅವರಿಗೆ ಅಡ್ಡಿಯಾದುದಾದರೂ ಏನು? ಇದಕ್ಕೆ ಉತ್ತರವಿದೆಯೇ? ನೆರೆಯ ಆಂಧ್ರಪ್ರದೇಶಕ್ಕೆ ಹೋಲಿಸಿದರೆ ನೀರಾವರಿ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ಕರ್ನಾಟಕ ಬಹಳ ಹಿಂದೆ ಇದೆ. ರಾಜ್ಯದ ಹಿತದ ಪ್ರಶ್ನೆ ಬಂದಾಗ, ಅಲ್ಲಿನ ರಾಜಕಾರಣಿಗಳು ಪಕ್ಷಭೇದ ಮರೆತು ಒಂದಾಗಿ ನಿಲ್ಲುತ್ತಾರೆ. ಇತರೆ ಕಾರ್ಯಕ್ರಮಗಳನ್ನು ಬದಿಗೊತ್ತಿ ಪ್ರತಿ ವರ್ಷ ಹೆಚ್ಚು ಹಣ ಒದಗಿಸುವ ಮೂಲಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಹೆಚ್ಚುವರಿಯಾಗಿ ಲಭಿಸಿದ ನೀರನ್ನು ಬಳಸಿಕೊಳ್ಳಲು ಸಿದ್ಧವಾಗಿದೆ. ಈ ವಿಚಾರದಲ್ಲಿ ಅಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ. ಆದರೆ ಕರ್ನಾಟಕದಲ್ಲಿ ಈ ಇಚ್ಛಾಶಕ್ತಿ ಒಲ್ಲ. ಹಾಗಾಗಿ ರಾಜ್ಯದ ಪಾಲಿಗೆ ಬಂದಿರುವ ನೀರೂ ಆಂಧ್ರಕ್ಕೆ ಹೋಗುತ್ತಿದೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ  ನಿರಂತರವಾಗಿ ಯೋಜನೆ ಸಾಗುವ ನೀತಿಯೊಂದನ್ನು ನಮ್ಮಲ್ಲಿ ರೂಪಿಸಿಲ್ಲ. ಹಿಂದಿನ ಸರ್ಕಾರ ಆರಂಭಿಸಿದ್ದ ಯೋಜನೆಗೆ ಹಣವನ್ನೇ ಒದಗಿಸದೇ, ಹೊಸ ಸರ್ಕಾರಗಳು ಅದನ್ನು ಹಾಳುಗೆಡುವುದಕ್ಕೇ ಹೆಚ್ಚು ಗಮನ ಕೊಟ್ಟ ನಿದರ್ಶನಗಳು ಬೇಕಾದಷ್ಟಿವೆ. ಹೀಗಾಗಿಯೇ ಮಹತ್ವಾಕಾಂಕ್ಷೆಯ ಯೋಜನೆಗಳೂ ಆಮೆಯ ವೇಗಕ್ಕಿಂತಲೂ ನಿಧಾನವಾಗಿ ಸಾಗುತ್ತಿವೆ.ಇಂತಹ ಪ್ರಮುಖ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಜತೆಗೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿರಬೇಕು. ಯೋಜನೆ ಅನುಷ್ಠಾನದಲ್ಲಿ ಮತ್ತೆ ವಿಳಂಬವಾಗದಂತೆ ಎಚ್ಚರವಹಿಸಲು ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆದು ಚರ್ಚಿಸಿ, ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ, ಖಚಿತವಾದ, ನಿರಂತರವಾಗಿ ಜಾರಿಯಲ್ಲಿರುವಂತಹ ನೀತಿಯೊಂದನ್ನು ರೂಪಿಸಬೇಕು. ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೇ ವಿನ್ಯಾಸ ಮಾಡಿರುವುದರಿಂದ ಗೇಟ್ ಎತ್ತರಿಸುವ  ಕೆಲಸವಷ್ಟೇ ಉಳಿದಿದೆ. ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಂಡು ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ಜತೆ ಜತೆಯಲ್ಲಿಯೇ ರೈತರ ಹೊಲಗಳಿಗೆ ನೀರು ಹರಿಸುವ ಕಾಲುವೆ, ನಾಲೆ, ಉಪ ಕಾಲುವೆ, ವಿತರಣಾ ಕಾಲುವೆ ನಿರ್ಮಾಣವೂ ಸಾಗಬೇಕು. ಜಲಾಶಯದಲ್ಲಿ ನೀರನ್ನು ಹಿಡಿದಿಟ್ಟುಕೊಂಡ ಮಾತ್ರಕ್ಕೆ ಕೆಲಸವಾದಂತಲ್ಲ.ರೈತನ ಹೊಲದಲ್ಲಿ ಹಸಿರು ಕಂಗೊಳಿಸಿದಾಗ ಮಾತ್ರ ಆತನ ಮುಖದಲ್ಲಿ ನಗೆ ಚಿಮ್ಮುತ್ತದೆ. ಈ ಕೆಲಸಕ್ಕೆ ಆದ್ಯತೆ ದೊರೆಯಬೇಕು. ವಿಜಾಪುರ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯವಿದ್ದರೂ ಆ ಜಿಲ್ಲೆಗೆ ಹೆಚ್ಚಿನ ಲಾಭವಾಗಿಲ್ಲ. ಪ್ರಭಾವವಿದ್ದ ರಾಜಕಾರಣಿಗಳು ತಮ್ಮೂರಿನತ್ತ ನೀರು ಹರಿಯುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭೂಮಿ, ಊರು ಕಳೆದುಕೊಂಡ ವಿಜಾಪುರ ಜಿಲ್ಲೆಯವರು ಮಾತ್ರ ಪರಿತಪಿಸುತ್ತಿದ್ದಾರೆ. ಜಿಲ್ಲೆಗೆ ಈಗ ಸಿಗುತ್ತಿರುವುದು ಇಂಡಿ ಶಾಖಾ ನಾಲೆ ಮತ್ತು ಮುಳವಾಡ ಏತ ನೀರಾವರಿ ಯೋಜನೆಯ ಲಾಭ ಮಾತ್ರ. ಅವಿಭಜಿತ ವಿಜಾಪುರ ಜಿಲ್ಲೆಯಲ್ಲಿ ಐದು ನದಿಗಳು ಹರಿಯುತ್ತಿದ್ದವು. ಹಸಿರಿನಿಂದ ಕಂಗೊಳಿಸಬೇಕಿದ್ದ ವಿಜಾಪುರ ಒಂದು ರೀತಿಯಲ್ಲಿ ಶಾಶ್ವತ ಬರಪೀಡಿತ ಪ್ರದೇಶವಾಗಿದೆ.ಹಿಂದೆ ಕೊಯ್ನಾ ಅಣೆಕಟ್ಟೆ ನಿರ್ಮಿಸುವ ಸಂದರ್ಭದಲ್ಲಿ ಬಾಂಬೆ ಸರ್ಕಾರ ರೂ 2 ಕೋಟಿ  ಕೊಟ್ಟರೆ ವಿಜಾಪುರ ಜಿಲ್ಲೆಗೆ ಏತ ನೀರಾವರಿ ಮೂಲಕ ನೀರು ಒದಗಿಸುವುದಾಗಿ ಹೇಳಿತ್ತು. ಆಗ ಮೈಸೂರು ಸರ್ಕಾರ (ವಿಜಾಪುರದವರೇ ಆದ ಬಿ.ಡಿ. ಜತ್ತಿಯವರು ಮುಖ್ಯಮಂತ್ರಿಯಾಗಿದ್ದರು) ಈ ಬೇಡಿಕೆಗೆ ಸ್ಪಂದಿಸಲಿಲ್ಲ. ಆಗ ರಾಜ್ಯ ಸರ್ಕಾರ ಕೇವಲ ರೂ 2 ಕೋಟಿ ಕೊಟ್ಟಿದ್ದರೆ ಈ ಜಿಲ್ಲೆ ದಶಕಗಳ ಹಿಂದೆಯೇ ನೀರಾವರಿಗೆ ಒಳಪಡುತ್ತಿತ್ತು. ಕೃಷ್ಣಾ ನದಿಯ ಯೋಜನೆ ರೂಪಿಸುವಾಗ ವರ್ಷಕ್ಕೆ ರೂ 6,000 ಕೋಟಿ ಬೆಳೆ ಬೆಳೆಯಬಹುದು ಎಂದು ಅಂದಾಜು ಮಾಡಲಾಗಿದೆ. ಆ ಪ್ರಕಾರ ರೈತ ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ರಾಜ್ಯ ಸರ್ಕಾರ ಕೃಷ್ಣಾ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚು ಹಣವನ್ನು ಒದಗಿಸಿ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಬೇಕು. ಇಲ್ಲದಿದ್ದರೆ ಘೋಷಣೆಗಳು ರಾಜಕಾರಣಿಗಳ ಮೊಸಳೆಕಣ್ಣೀರಾಗುತ್ತದೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.