ಭಾನುವಾರ, ಜನವರಿ 26, 2020
24 °C

ಪ್ರಪಾತದ ಅಂಚಿಗೆ ಮತ್ತೆ ಹೊರಳಿದ ಪೃಥ್ವಿ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ಬರಲಿರುವ ಡಿಸೆಂಬರ್ 21ರ ಬೋಗಸ್ ಪ್ರಳಯದ ವಿಚಾರವನ್ನು ತೊಟ್ಟಿಗೆ ಹಾಕಿ. ಅದನ್ನು ಸುಶಿಕ್ಷಿತರು ಯಾರೂ ನಂಬುತ್ತಿಲ್ಲ. ಆದರೆ ಇದೀಗ ವಿಜ್ಞಾನಿಗಳೇ ಬೇರೊಂದು ಬಗೆಯ ಪ್ರಳಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ. `ಪ್ರಳಯದ ಗಡಿಯಾರ~ದ ಮುಳ್ಳನ್ನು ಒಂದು ನಿಮಿಷ ಮುಂದಕ್ಕೆ ಸರಿಸಿದ್ದಾರೆ.ವಿಜ್ಞಾನಿಗಳನ್ನು ಆತಂಕಕ್ಕೆ ದೂಡಿದ ಈಗಿನ ವಿಚಾರ ಮೇಲ್ನೋಟಕ್ಕೆ ತೀರಾ ಚಿಕ್ಕದು: ನಮ್ಮ ಉತ್ತರ ಪ್ರದೇಶದಲ್ಲಿ ಆರೋಗ್ಯ ಮಿಶನ್ (ಎನ್ನಾರೆಚ್ಚೆಮ್) ಹಗರಣದಲ್ಲಿ ಸಿಲುಕಿದವರ ಸರಣಿ ಹತ್ಯೆ- ಆತ್ಮಹತ್ಯೆ ನಡೆಯುತ್ತಿದೆ ತಾನೆ? ಅದೇ ರೀತಿ ಇರಾನ್ ದೇಶದಲ್ಲಿ ಪರಮಾಣು ವಿಜ್ಞಾನಿಗಳ ಸರಣಿ ಹತ್ಯೆ ನಡೆಯುತ್ತಿದೆ.

 

ಕಳೆದ ವಾರ ಅಲ್ಲಿನ ಪರಮಾಣು ವಿಜ್ಞಾನಿ ಮುಸ್ತಾಫಾ ರೋಶನ್ ಮತ್ತು ಆತನ ಬೆಂಗಾವಲು ಭಟ ಇಬ್ಬರೂ ಕಾರ್ ಬಾಂಬ್ ಸ್ಫೋಟದಿಂದ ಮೃತರಾದರು. ಹಿಂದಿನ ಮೂರು ವರ್ಷಗಳಲ್ಲಿ ಹೀಗೆ ಐವರು ಪರಮಾಣು ವಿಜ್ಞಾನಿಗಳು ಗುಂಡೇಟು ಇಲ್ಲವೆ ಬಾಂಬ್ ಸ್ಫೋಟದಿಂದ ಅಲ್ಲಿ ಸತ್ತಿದ್ದಾರೆ.

 

ಒಬ್ಬ ಪರಮಾಣು ವಿಜ್ಞಾನಿ ಕ್ಷಣಾರ್ಧದಲ್ಲಿ ಸ್ಫೋಟದಿಂದ ಬಚಾವಾಗಿದ್ದಿದೆ. ಈ ಸರಣಿ ಹತ್ಯೆಯ ಚಿಕ್ಕ ಕಿಡಿಯೇ ಮುಂದೆ ಇಡೀ ಪೃಥ್ವಿಯನ್ನು ಅಪಾಯದಂಚಿಗೆ ತಂದು ನಿಲ್ಲಿಸೀತೆ ಎಂಬ ಆತಂಕ ಎದುರಾಗಿದೆ.ಕಿಡಿ ಹೊತ್ತಲು ಕಾರಣವಿಷ್ಟೆ: ಇರಾನ್ ಪರಮಾಣು ಬಾಂಬ್‌ಗಳನ್ನು ತಯಾರಿಸಲು ಹೊರಟಿದೆ. ಅದನ್ನು ತಡೆಯಲು ಯಾವುದೇ ಬಗೆಯ ರಾಜತಾಂತ್ರಿಕ ಶಕ್ತಿಗೂ ಸಾಧ್ಯವಾಗುತ್ತಿಲ್ಲ.

 

ಆದರೆ ಹೇಗಾದರೂ ತಡೆಯಲೇಬೇಕು ಎಂದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಹಠತೊಟ್ಟಿವೆ; ಏಕೆಂದರೆ ಪಾಕಿಸ್ತಾನದಲ್ಲಿ ಬಾಂಬ್ ಇದೆಯೆಂಬುದೇ ಅನೇಕ ದೇಶಗಳ ನಿದ್ದೆ ಕೆಡಿಸಿದೆ. ಇರಾನ್ ಇನ್ನೊಂದು `ಇಸ್ಲಾಮಿಕ್ ಬಾಂಬ್~ ತಯಾರಿಸಿದ ದೇಶ ಎನಿಸುವುದು ಅನೇಕರಿಗೆ ಇಷ್ಟವಿಲ್ಲ.ಆದ್ದರಿಂದಲೇ ಇರಾನೀ ಯತ್ನವನ್ನು ವಿಫಲಗೊಳಿಸಲು ಏನೆಲ್ಲ ಬಗೆಯ ತೆರೆಮರೆಯ ವೈಜ್ಞಾನಿಕ ದುಸ್ಸಾಹಸಗಳು ನಡೆದಿವೆ. ಬಾಂಬ್ ತಯಾರಿಕೆಗೆ ಬೇಕಾದ ಯುರೇನಿಯಂ ಧಾತುವನ್ನು ಸಾಂದ್ರಗೊಳಿಸುವ ಇರಾನಿನ ಭೂಗತ ಫ್ಯಾಕ್ಟರಿಯೊಳಕ್ಕೆ ಯಾರೋ ಭಾರೀ ಮೇಧಾವಿಗಳು `ಸ್ಟಕ್ಸ್‌ನೆಟ್~ ಹೆಸರಿನ ಕಂಪ್ಯೂಟರ್ ವೈರಸ್ಸನ್ನು ನುಗ್ಗಿಸಿ ಕಳೆದ ವರ್ಷ ಅಲ್ಲಿನ ಯಂತ್ರಗಳು ಒಂದೊಂದಾಗಿ ಕೆಟ್ಟು ಕೂರುವಂತೆ ಮಾಡಿದ್ದರು.ಇರಾನ್‌ಗೆ ಅದು ಅಕಸ್ಮಾತ್ ಗೊತ್ತಾಗಿ ವೈರಸ್ಸನ್ನು ಹೊಸಕಿ ಹಾಕಿತು. ಕುಪಿತ ಇರಾನ್ ಇನ್ನಷ್ಟು ಉತ್ಸಾಹದಿಂದ ಬಾಂಬ್ ತಯಾರಿಕೆಯ ಸಿದ್ಧತೆಯಲ್ಲಿರುವಾಗ ಈಗ ವಿಜ್ಞಾನಿಗಳ ಮೇಲೆ ದಾಳಿ ನಡೆಯುತ್ತಿದೆ.

 

ತನ್ನ ಒಬ್ಬೊಬ್ಬ ವಿಜ್ಞಾನಿಯ ಹತ್ಯೆಯಾದಾಗಲೂ ಇರಾನ್ ಇನ್ನಷ್ಟು ಹೂಂಕರಿಸುತ್ತ, ಯುದ್ಧಾಸ್ತ್ರಗಳನ್ನು ಝಳಪಿಸತೊಡಗಿದೆ. ಇರಾನನ್ನು ತನ್ನ ಆಜನ್ಮ ವೈರಿಯೆಂದೇ ಪರಿಗಣಿಸಿರುವ ಯಹೂದ್ಯರ ರಾಷ್ಟ್ರ ಇಸ್ರೇಲ್ ತಾನೇ ಮುಂದಾಗಿ ಇರಾನಿನ ಬಾಂಬ್ ಫ್ಯಾಕ್ಟರಿಯ ಮೇಲೇ ಬಾಂಬ್ ಹಾಕುವ ಸೂಚನೆ ನೀಡಿದೆ.

 

ಇಸ್ರೇಲ್ ಬಳಿ ಪರಮಾಣು ಬಾಂಬ್ ಇಲ್ಲವಾದರೂ ಅಣು ಸ್ಥಾವರದ ಮೇಲೆ ಸಾಮಾನ್ಯ ಬಾಂಬ್ ಹಾಕಿದರೂ ಪರಿಣಾಮ ಗಂಭೀರದ್ದೇ ತಾನೆ? ಇಸ್ರೇಲಿಗೆ ಪರೋಕ್ಷವಾಗಿ ಅಮೆರಿಕ ಬೆಂಬಲ ನೀಡುತ್ತಿರುವುದೂ ರಹಸ್ಯ ಸಂಗತಿಯೇನಲ್ಲ.`ಅಮೆರಿಕ ದೊಡ್ಡ ಸೈತಾನ, ಇಸ್ರೇಲ್ ಮರಿ ಸೈತಾನ~ ಎಂದು ಇರಾನ್ ಕಿಡಿ ಕಾರಿದೆ. ತನ್ನ ಬಾಂಬ್ ಘಟಕದ ಮೇಲೆ ಬಾಂಬ್ ದಾಳಿ ನಡೆದಿದ್ದೇ ಆದರೆ ಅದು ಪಾಕಿಸ್ತಾನದ ಪರಮಾಣು ಬಾಂಬ್‌ಗಳ ನೆರವು ಕೋರಬಹುದು. ಇಷ್ಟಕ್ಕೂ ಇರಾನಿಗೆ ಬಾಂಬ್ ತಯಾರಿಕೆಯ ಸೂತ್ರವನ್ನು ಕಲಿಸಿಕೊಟ್ಟಿದ್ದೇ ಪಾಕಿಸ್ತಾನಿ ವಿಜ್ಞಾನಿ ಎ.ಕ್ಯೂ. ಖಾನ್ ತಾನೆ?ಅಂತೂ ಇಡೀ ಜಗತ್ತೇ ಅಪಾಯದ ಅಂಚಿಗೆ ಹೊರಳುತ್ತಿದೆ ಎಂದು ಅಮೆರಿಕದ ಪರಮಾಣು ತಜ್ಞರು ತಮ್ಮದೇ ವಿಧಾನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಅಲ್ಲಿನ ಹೆಸರಾಂತ `ಪ್ರಳಯದ ಗಡಿಯಾರ~ದ ಮುಳ್ಳನ್ನು ಒಂದು ನಿಮಿಷ ಮುಂದಕ್ಕೆ ಸರಿಸಿದ್ದಾರೆ.

`ಪ್ರಳಯದ ಗಡಿಯಾರ~ (ಡೂಮ್ಸ ಡೇ ಕ್ಲಾಕ್) ಎಂಬುದು ಒಂದು ಸಾಂಕೇತಿಕ ಫಲಕ ಅಷ್ಟೆ. ಅದರಲ್ಲಿ ಯಂತ್ರಭಾಗಗಳಿಲ್ಲ.

 

ನಿಮಿಷದ ಮುಳ್ಳು 12ಕ್ಕೆ ತಲುಪಿದಾಗ ಮನುಕುಲ ಸರ್ವನಾಶ ಆಗುತ್ತದೆ ಎಂದು ಎಚ್ಚರಿಸುವ ಫಲಕ ಅದು. 1945ರಲ್ಲಿ ಹಿರೊಶಿಮಾ, ನಾಗಾಸಾಕಿ ಮೇಲೆ ಬಾಂಬ್ ಬೀಳಿಸಿದ ನಂತರ ಯಾರೂ ಅಂಥ ಭಯಾನಕ ಅಸ್ತ್ರವನ್ನು ಮತ್ತೆ ಬಳಸಲಾರರು ಎಂಬ ಕಲ್ಪನೆಯಿತ್ತು.

 

ಆದರೆ ಅದಾಗಿ ಎರಡೇ ವರ್ಷಗಳಲ್ಲಿ ಇನ್ನಷ್ಟು ಭಯಾನಕ ಹೈಡ್ರೊಜನ್ ಬಾಂಬ್ ಸಿದ್ಧವಾದಾಗ ಈ ಗಡಿಯಾರ ಅಸ್ತಿತ್ವಕ್ಕೆ ಬಂತು. ಅಮೆರಿಕದ `ಬುಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್‌ಸ್~ ಹೆಸರಿನ ವಿಜ್ಞಾನ ಪತ್ರಿಕೆಯನ್ನು ನಡೆಸುವ ಪರಿಣತರ ಸಮಿತಿಯೊಂದು ನಿರ್ಮಿಸಿದ ಈ ಗಡಿಯಾರದ ನಿಮಿಷದ ಮುಳ್ಳು ಆರಂಭದಲ್ಲೇ  9ರ ಅಂಕಿಯ ಮೇಲೆ ನಿಂತಿತ್ತು.ಬಾಂಬ್ ತಯಾರಿಕೆಯ ಪೈಪೋಟಿ ಹೆಚ್ಚಿದಂತೆಲ್ಲ ಮೆಲ್ಲಗೆ ಅದರ ಮುಳ್ಳು 11ರ ಕಡೆ ಸರಿಯತೊಡಗಿತ್ತು. ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಅಮೆರಿಕ- ರಷ್ಯ ಒಟ್ಟಾಗಿ ಸಹಿ ಹಾಕಿದಾಗ ಮುಳ್ಳು ತುಸು ಹಿಂದಕ್ಕೆ ಸರಿದಿತ್ತು. ಭಾರತ- ಪಾಕಿಸ್ತಾನ ಇಲ್ಲಿ ಬಾಂಬ್ ಸ್ಫೋಟ ನಡೆಸಿದಾಗ ಮತ್ತೆ ತುಸು ಮುಂದಕ್ಕೆ ಸರಿದು 11ನೇ ಅಂಕಿಯ ಬಳಿ ಬಂದಿತ್ತು.ಈಚಿನ ವರ್ಷಗಳಲ್ಲಿ ಭೂಮಿಯ ತಾಪಮಾನ ಏರುತ್ತ ಬಂದಿರುವುದೂ ಮನುಕುಲದ ಪ್ರಳಯದ ಕಡೆಗಿನ ಪಯಣವೆಂದೇ ಪರಿಗಣಿಸಿ, ಕಳೆದ ವರ್ಷ ಕೊಪೆನ್‌ಹೇಗನ್‌ನಲ್ಲಿ ಭೂ ರಕ್ಷಣೆಯ ಜಾಗತಿಕ ಒಪ್ಪಂದ ವಿಫಲವಾದಾಗ ಮುಳ್ಳು 11ರ ಮೇಲೆಯೇ ಬಂದು ಕೂತಿತ್ತು. ಈಗ ಇರಾನ್-ಇಸ್ರೇಲ್ ಜಟಾಪಟಿ ಎದ್ದ ನಂತರ ಮುಳ್ಳು ಇನ್ನೂ ಕೊಂಚ ಮುಂದಕ್ಕೆ ಸರಿದಿದೆ.

 

12ಕ್ಕೆ ನಾಲ್ಕೇ ನಿಮಿಷ ಬಾಕಿ ಇದೆ. `ಜಗತ್ತಿನ ನಿವಾಸಿಗಳನ್ನು ಅನೇಕ ಬಾರಿ ನಾಶ ಮಾಡಬಲ್ಲ 20 ಸಾವಿರ ನ್ಯೂಕ್ಲಿಯರ್ ಬಾಂಬ್‌ಗಳು ಸನ್ನದ್ಧವಾಗಿ ಕೂತಿವೆ. ಸಾಲದ್ದಕ್ಕೆ ಆತಂಕವಾದಿಗಳೂ ಅಂಥ ಬಾಂಬ್‌ಗಳನ್ನು ಬಳಸಬಹುದಾದ ಪರಿಸ್ಥಿತಿ ಉದ್ಭವವಾಗಿದೆ~ ಎಂದು ಪ್ರಳಯ ಗಡಿಯಾರದ ಪ್ರಾಯೋಜಕ ಮಂಡಲಿಯ ಸಹ ಅಧ್ಯಕ್ಷ ಹಾಗೂ ವಿಜ್ಞಾನಿ ಲಾರೆನ್ಸ್ ಕ್ರಾವ್ಸ್ ಹೇಳಿದ್ದಾರೆ.ಪರಮಾಣು ಬಾಂಬ್ ಬಿಡಿ, ಬರಿದೇ ಭಯಪಟ್ಟು ಪ್ರಯೋಜನವಿಲ್ಲ. ಇರಾನ್, ಇಟಲಿ, ಇಂಡಿಯಾ ಈ ಮೂರು `ಇ~ಗಳಿಗೆ ಸಂಬಂಧಿಸಿದಂತೆ ಈ ವಾರ ಇನ್ನೊಂದು ಬಗೆಯ ಆತಂಕವನ್ನು ವಿಜ್ಞಾನ ಪತ್ರಿಕೆಗಳು `ಪ್ರಳಯಾಂತಕ~ ಎಂದು ಹೆಸರಿಸಿವೆ.

 

ಅದು, ಯಾವ ಔಷಧಕ್ಕೂ ಜಗ್ಗದ ಹೊಸ ಬಗೆಯ ಕ್ಷಯರೋಗ. ಹಿಂದೆ 2007ರಲ್ಲಿ ಇಟಲಿಯ ಇಬ್ಬರನ್ನು, 2009ರಲ್ಲಿ ಇರಾನಿನ 15 ಜನರನ್ನು ಬಲಿಹಾಕಿದ ರುದ್ರ ಕ್ಷಯ ರೋಗಾಣು ಇದೀಗ ಮುಂಬೈಯಲ್ಲಿ 12 ಜನರಲ್ಲಿ ಪತ್ತೆಯಾಗಿದೆ.

 

ಮೂವರು ಅಸು ನೀಗಿದ್ದಾರೆ. ದಿಲ್ಲಿಯಿಂದ ವಿಶೇಷ ದಳವೊಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರೊಂದಿಗೆ ಮುಂಬೈಗೆ ತುರ್ತಾಗಿ ಧಾವಿಸಿ ತನಿಖೆಯಲ್ಲಿ ತೊಡಗಿದೆ.ನಾವೀಗ ಹೆದರಬೇಕು. ಕ್ಷಯದ ರೋಗಾಣುಗಳು ಬಹುಬೇಗ ಗಾಳಿಯಲ್ಲೂ ಪಸರಿಸುತ್ತವೆ; ಕ್ರಿಕೆಟ್ ಮೈದಾನದ ಪ್ರೇಕ್ಷಕರ ಗ್ಯಾಲರಿಯ ಮಧ್ಯೆ ಸಿಕ್ಸರ್ ಚೆಂಡು ಬಂದು ಬಿದ್ದಾಗ ಅಲ್ಲಿದ್ದ ಕ್ಷಯರೋಗಿಯೊಬ್ಬ ಅತಿ ಉತ್ಸಾಹದಿಂದ ತುತ್ತೂರಿ ಊದಿದರೆ ಸಾಕು- ಸುತ್ತಲಿನ ನೂರಾರು ಜನರ ಶ್ವಾಸಕೋಶಕ್ಕೆ ಕ್ಷಯದ ರೋಗಾಣುಗಳು ತೂರಿಕೊಳ್ಳುತ್ತವೆ.ರೈಲಿನಲ್ಲಿ, ಸಂತೆಯಲ್ಲಿ, ಜಾತ್ರೆಯಲ್ಲಿ ಎಲ್ಲೆಂದರಲ್ಲಿ ಎಂದಾದರೊಂದು ರೋಗಾಣುಗಳ ಪ್ರಸಾರಕ್ಕೆ ಭಾರತದಲ್ಲಿ ಹೇರಳ ಅವಕಾಶಗಳಿವೆ. ಅದೃಷ್ಟಕ್ಕೆ ನಮ್ಮ ದೇಹದ ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ನಮ್ಮಳಗಿನ ಅಂಗಾಂಶಗಳೇ ರೋಗಾಣು ಆಚೀಚೆ ಚಲಿಸದಂತೆ ಬಂಧಿಸಿ ಇಡುತ್ತವೆ. ಹತ್ತಾರು ವರ್ಷಗಳ ಕಾಲ ಅಲ್ಲೇ ಬಂಧಿಸಿ ಇಡಬಹುದು.ಪ್ರತಿರೋಧಕ ಶಕ್ತಿ ದುರ್ಬಲವಾದಾಗ ಅವು ಶರೀರದ ಇತರ ಭಾಗಕ್ಕೆ ದಾಳಿ ಇಡುತ್ತವೆ. ಏಡ್ಸ್ ರೋಗಿಗಳು, ದುರ್ಬಲರು, ಧೂಮಪಾನಿಗಳು ಮತ್ತು ಆಸ್ಪತ್ರೆಗೆ ಬೇರೆ ಚಿಕಿತ್ಸೆಗೆಂದು ಹೋದವರು ಇವಕ್ಕೆ ಸುಲಭದಲ್ಲಿ ಬಲಿಯಾಗುತ್ತಾರೆ.ಸಾಮಾನ್ಯ ಕ್ಷಯದಿಂದಾಗಿಯೇ ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬೊಬ್ಬ ಭಾರತೀಯ ಅಸು ನೀಗುತ್ತಿದ್ದಾನೆ. ಸರ್ಕಾರ ಭಾರೀ ಹಣವನ್ನು ವ್ಯಯಿಸಿ ಸಾಮಾನ್ಯ ಕ್ಷಯಕ್ಕೆ ಪ್ರತಿ ರೋಗಿಗೆ ಸಾವಿರ ರೂಪಾಯಿ ವೆಚ್ಚದ ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡುತ್ತಿದೆ.ಆದರೆ ಈಗೀಗ ಸಾಮಾನ್ಯ ಔಷಧಗಳೇ ಬಲಿಷ್ಠ ರೋಗಾಣುಗಳ ವಿಕಾಸಕ್ಕೆ ಕಾರಣವಾಗುತ್ತಿವೆ. ಅವುಗಳ ಚರ್ಮ ಅಕ್ಷರಶಃ ದಪ್ಪವಾಗುತ್ತಿದೆ ಎಂದು ಇರಾನಿ ರೋಗಾಣುಗಳ ಪರೀಕ್ಷೆಯಿಂದ ತಿಳಿದು ಬಂದಿದೆ.

 

ಅನುಕೂಲಸ್ಥ ರೋಗಿಗಳು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟೊಟ್ಟಿಗೇ ಎರಡು, ಮೂರು, ನಾಲ್ಕು, ಔಷಧಗಳನ್ನು ಸೇವಿಸಿ ಬದುಕಬಹುದಿತ್ತು. ಮುಂಬೈಯ 106 ಖಾಸಗಿ ಆಸ್ಪತ್ರೆಗಳ ಸಮೀಕ್ಷೆ ನಡೆಸಿದಾಗ, ಅಷ್ಟೊಂದು ಹಣ ವ್ಯಯಿಸಿಯೂ ಕೇವಲ ಐದು ಆಸ್ಪತ್ರೆಗಳಲ್ಲಿ ಮಾತ್ರ ಕ್ಷಯಕ್ಕೆ ಯಥಾಯೋಗ್ಯ, ವೈಜ್ಞಾನಿಕ ಚಿಕಿತ್ಸೆ ಸಿಗುತ್ತಿದ್ದದು ಕಂಡುಬಂದಿತ್ತು.

 

ಅವೈಜ್ಞಾನಿಕ ಔಷಧ ಸೇವನೆಯ ಮೇಲೆ ನಿಗಾ ಇಡಲೆಂದೇ ಸರ್ಕಾರ `ಡಾಟ್~ ಕಾರ್ಯಕ್ರಮವನ್ನು ರೂಪಿಸಿ, ಮನೆಮನೆಗೆ ಆರೋಗ್ಯ ಕಾರ್ಯಕರ್ತರನ್ನು ಕಳಿಸುತ್ತಿರುವಾಗ ಖಾಸಗಿ ಆಸ್ಪತ್ರೆಗಳಲ್ಲಿ ಬಹುಔಷಧ ಸೇವಿಸುವವರ ಮೇಲೆ ನಿಗಾ ಇಡುವವರಿಲ್ಲ. ಈಗ ಅಂಥ ಬಹುಔಷಧ ಚಿಕಿತ್ಸೆಗೂ ಬಗ್ಗದ ಹೊಸ ತಳಿಗಳು ಬಂದಿವೆ ಎಂದರೆ ಅದು ಅನುಕೂಲಸ್ಥರಿಗೂ ಆತಂಕದ ಸಂಗತಿಯೇ ಹೌದು.ಬಡವರ ರೋಗಗಳಿಗೆ ಯಾರೂ ಹೊಸ ಔಷಧಗಳನ್ನು ಶೋಧಿಸುವುದಿಲ್ಲ. ಕ್ಷಯಕ್ಕೆ ಕಳೆದ 60 ವರ್ಷಗಳೀಚೆ ಯಾವ ಹೊಸ ಔಷಧವೂ ಬಂದಿಲ್ಲ. ಈಗ ಅನುಕೂಲಸ್ಥರೂ ಈ ಕಾಯಿಲೆಗೆ ತುತ್ತಾಗುತ್ತಿದ್ದು, ಸರ್ಕಾರದ ಹಣದ ಥೈಲಿಯೂ ದಪ್ಪವಾಗಿರುವುದರಿಂದ ಹೊಸ ಔಷಧಗಳ ಶೋಧಕ್ಕೆ ತುರುಸಿನ ಪೈಪೋಟಿ ನಡೆದಿದೆ.ಅಂಥ ದಿವ್ಯೌಷಧ ಪತ್ತೆಯಾದರೂ ಪ್ರಯೋಗದ ಎಲ್ಲ ಹಂತಗಳನ್ನೂ ದಾಟಿ ಜನ ಬಳಕೆಗೆ ಬರಬೇಕೆಂದರೆ ಐದಾರು ವರ್ಷಗಳೇ ಬೇಕಾಗುತ್ತದೆ. ಅದು ಸಿಗುವವರೆಗೆ ರುದ್ರ ಕ್ಷಯದ ರೋಗಾಣುಗಳು ಆಚೀಚೆ ಹಬ್ಬದಂತೆ ರೋಗಿಗಳನ್ನು ಜನಸಂಪರ್ಕವಿಲ್ಲದ ಪ್ರತ್ಯೇಕ ಕಕ್ಷೆಗಳಲ್ಲಿ ಇರಿಸಬೇಕಾಗುತ್ತದೆ.ವಿಜ್ಞಾನಯುಗದ ವಿಪರ್ಯಾಸವೆಂದರೆ ಇದು: ಅತ್ತ ಪರಮಾಣು ಬಾಂಬ್‌ಗಳ ಮೇಲೆ ಕಣ್ಣಿಟ್ಟ ಉಗ್ರರನ್ನು ಬಂಧನದಲ್ಲಿಡಬೇಕು. ಇತ್ತ, ಪ್ರಳಯಾಂತಕ ರೋಗಾಣುಗಳನ್ನು ತುಂಬಿಕೊಂಡ ನತದೃಷ್ಟರನ್ನೂ ಬಂಧನದಲ್ಲಿಡಬೇಕು.ಪೋಲಿಯೊ ರೋಗವನ್ನು ನಾವು ಬಹುತೇಕ ಹಿಮ್ಮೆಟ್ಟಿಸಿದ್ದೇವೆ. ಇನ್ನೇನು, ಕೊನೆಯ ಬಾರಿ ಸಾರ್ವತ್ರಿಕ ಲಸಿಕೆ ಹಾಕಲು ಸಿದ್ಧತೆ ನಡೆಸುತ್ತ, ಕೀರ್ತಿಯ ಕದ ತಟ್ಟುತ್ತಿದೆ ಭಾರತ. ಇನ್ನೊಂದೆಡೆ ಕ್ಷಯದ ರೋಗಾಣುಗಳು ಉಗ್ರರೂಪ ತಾಳಿ ಕದ ತಟ್ಟುತ್ತಿವೆ. (ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ಪ್ರತಿಕ್ರಿಯಿಸಿ (+)