ಶನಿವಾರ, ಮೇ 21, 2022
26 °C

ವಿಜ್ಞಾನದ ಕಲಿಕೆಯ ಮೊದಲ ಪಾಠ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ವಿಜ್ಞಾನದ ಶಿಕ್ಷಕರು ನಮಗೆಲ್ಲ ತುಂಬ ಅಚ್ಚುಮೆಚ್ಚಾಗಿದ್ದರು. ಅವರ ಸುಕ್ಕಿಲ್ಲದ ಬಟ್ಟೆ, ಆಕರ್ಷಕ ವ್ಯಕ್ತಿತ್ವ, ಸದಾ ನಗೆ ಸೂಸುವ ಮುಖ, ಹೊಳೆಯುವ ಕಣ್ಣುಗಳು, ಸಲಿಲಧಾರೆಯಂತೆ ಹರಿಯುವ ಮಾತಿನ ಪ್ರವಾಹ ನಮ್ಮನ್ನೆಲ್ಲ ತುಂಬ ಬೆರಗುಗೊಳಿಸಿದ್ದವು. ಅವರು ತರಗತಿಯನ್ನು ನಡೆಯಿಸುವ ರೀತಿಯೇ ವಿಶಿಷ್ಠ. ಪ್ರತಿದಿನ ಹೊಸಹೊಸ ಪ್ರಯೋಗಗಳು, ಚಿತ್ರವಿಚಿತ್ರ ಪರೀಕ್ಷೆಗಳು ನಮ್ಮನ್ನು ಸದಾ ಅವರ ತರಗತಿಗಾಗಿ ಕಾಯುವಂತೆ ಮಾಡುತ್ತಿದ್ದವು. ಒಂದು ದಿನ ಮೇಷ್ಟ್ರು ತರಗತಿಗೆ ಬಂದಾಗ ಅವರ ಕೈಯಲ್ಲಿ ಒಂದು ಪುಟ್ಟ ತಲೆಬುರುಡೆ ಇತ್ತು.ಅದನ್ನು ನೋಡಿದ ತಕ್ಷಣ ನಮ್ಮೆಲ್ಲರ ಕುತೂಹಲ ಗರಿಗೆದರಿತು. ಅವರು ಆ ತಲೆಬುರುಡೆಯನ್ನು ಎಲ್ಲರಿಗೂ ತೋರಿಸಿ  ಇದು ಯಾವ ಪ್ರಾಣಿಯ ತಲೆಬುರುಡೆ ಗೊತ್ತೇ  ಎಂದು ಕೇಳಿದರು. ಕೆಲವರು ಅದನ್ನು ಕೋತಿಯ ತಲೆಬುರುಡೆ, ಕೆಲವರು ಬೆಕ್ಕಿನದು ಎಂದರು. ಮತ್ತೆ ಉಳಿದವರು ತಮತಮಗೆ ಹೊಳೆದ ಪ್ರಾಣಿಗಳ ಹೆಸರು ಕೇಳಿದರು. ಮೇಷ್ಟ್ರು ಅವನ್ನೆಲ್ಲ ಕೇಳಿ ತಲೆ ಅಲ್ಲಾಡಿಸಿ,  ಅದಾವುದೂ ಇಲ್ಲ. ಈ ಪ್ರಾಣಿಯ ಹೆಸರು  ಗೆದ್ರಪೊಟ್ಟಿ. ಈ ಪ್ರಾಣಿ ಸುಮಾರು ಮೂವತ್ತು ಸಾವಿರ ವರ್ಷಗಳ ಹಿಂದೆ ಬದುಕಿತ್ತು. ನಂತರ ವಾತಾವರಣದ ಬದಲಾವಣೆಗೆ ಹೊಂದದೇ ಇಪ್ಪತ್ತೈದು ಸಾವಿರ ವರ್ಷಗಳ ಹಿಂದೆಯೇ ಅದರ ಸಂತತಿಯ ನಿರ್ನಾಮವಾಯಿತು. ಅದರ ಗುಣಲಕ್ಷಣಗಳು ವಿಚಿತ್ರವಾಗಿದ್ದವು. ಅದು ಒಂದು ತರಹದ ನಿಶಾಚರ ಪ್ರಾಣಿ. ಅದಕ್ಕೆ ಸಾಮಾನ್ಯ ನಾಲ್ಕು ಕಾಲಿನ ಪ್ರಾಣಿಗಳ ತರಹ ಉದ್ದವಾದ ಬಾಲವೂ ಇತ್ತು ಮತ್ತು ವಿಶೇಷವೆಂದರೆ ಅದಕ್ಕೆ ಎರಡು ರೆಕ್ಕೆಗಳಿದ್ದವು. ಅದು ನೆಲದ ಮೇಲೆ ವೇಗವಾಗಿ ನಡೆಯುವುದರೊಂದಿಗೆ ಗಾಳಿಯಲ್ಲಿ ಹಾರಾಡುತ್ತ ಬೇಟೆಯಾಡುತ್ತಿತ್ತು. ರಾತ್ರಿ ಅದರ ಕಣ್ಣುಗಳು ಹೆಚ್ಚು ಚುರುಕಾಗಿರುತ್ತಿದ್ದವು  ಎಂದು ಹೇಳಿ ಮುಂದೆ ಹತ್ತು ನಿಮಿಷಗಳ ಕಾಲ ಅದರ ಇತರ ಗುಣಲಕ್ಷಣಗಳನ್ನೂ ವಿವರಿಸಿದರು. ನಂತರ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ತಲೆ ಬುರುಡೆಯನ್ನು ಮುಟ್ಟಿ ನೋಡಲು ಅವಕಾಶ ಕೊಟ್ಟರು. ನಮಗೆ ಈ ವಿಶೇಷ ಪ್ರಾಣಿಯ ಬಗ್ಗೆ ತಿಳಿದುಕೊಂಡ ಬಗ್ಗೆ ತುಂಬ ಸಂತೋಷ.ಮರುದಿನ ಮೇಷ್ಟ್ರು ಒಂದು ಪುಟ್ಟ ಪರೀಕ್ಷೆ ಕೊಟ್ಟರು. ಅದು ಕೇವಲ ಹದಿನೈದು ನಿಮಿಷದ ಪರೀಕ್ಷೆ. ಅವರ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿನ ದಿನ ವರ್ಣಿಸಿದ್ದ ಪ್ರಾಣಿಯ ಬಗ್ಗೆ   ಪ್ರಶ್ನೆಗಳು ಇದ್ದವು. ಹಿಂದಿನ ದಿನವೇ ಕುತೂಹಲದಿಂದ ಕಲಿತಿದ್ದೆವಲ್ಲ, ಎಲ್ಲರೂ ಚೆನ್ನಾಗಿಯೇ ಉತ್ತರ ಬರೆದೆವು. ಮರುದಿನ ಮೇಷ್ಟ್ರು ನಮ್ಮ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿ ತಂದಿದ್ದರು. ಪತ್ರಿಕೆಗಳನ್ನು ಪಡೆದುಕೊಂಡ ಮೇಲೆ ನಮ್ಮೆಲ್ಲರ ಮುಖಗಳು ಇಳಿದುಹೋಗಿದ್ದವು. ಯಾಕೆಂದರೆ ಎಲ್ಲರಿಗೂ ಬಂದದ್ದು ಒಂದೇ ಅಂಕ- ಸೊನ್ನೆ. ಅಷ್ಟು ಸರಿಯಾದ ಉತ್ತರ ಬರೆದ್ದರೂ ಸೊನ್ನೆ ಯಾಕೆ. ಯಾರ ಪತ್ರಿಕೆಯಲ್ಲಿ ಒಂದೇ ಒಂದು ಸರಿಯಾದ ಉತ್ತರವೂ ಇರಲಿಲ್ಲವೇ. ಆಗ ಮೇಷ್ಟ್ರು ಹೇಳಿದರು. ನೀವೆಲ್ಲ ಬುದ್ಧಿವಂತರು ಎಂದುಕೊಂಡಿದ್ದೆ. ನೀವು ಕೇವಲ ವಿಜ್ಞಾನ ಕಲಿಯುತ್ತಿದ್ದೀರಿ, ಆದರೆ ವಿಜ್ಞಾನಿಗಳಾಗುವ ಲಕ್ಷಣ ಕಾಣುತ್ತಿಲ್ಲ. ಪ್ರಶ್ನೆಗಳನ್ನು ಕೇಳದವನು ವಿಜ್ಞಾನಿಯಾಗಲಾರ. ಯಾವುದನ್ನೂ ಪ್ರಶ್ನಿಸದೇ ಕೇವಲ ವಿಷಯ ಸಂಗ್ರಹ ಮಾಡಿದರೆ ನಿಮಗೆ ಪರೀಕ್ಷೆಯಲ್ಲಿ ಮಾರ್ಕುಗಳು ಬಂದಾವು. ಆದರೆ, ನೀವು ಶ್ರೇಷ್ಠ ವಿಜ್ಞಾನಿಗಳಾಗಲಾರಿರಿ. ನಾನೇನು ಹೇಳಿದ್ದೆ ನೆನಪಿದೆಯೇ. ಈ ಪ್ರಾಣಿಯ ಸಂತತಿ ನಶಿಸಿ ಹೋಗಿ ಇಪ್ಪತ್ತೈದು ಸಾವಿರ ವರ್ಷಗಳಾಗಿ ಹೋಗಿವೆ ಎಂದು ಹೇಳಿ ಅದರ ತಲೆಬುರುಡೆ ತೋರಿಸಿದೆ. ಒಬ್ಬರಾದರೂ ಈ ಪ್ರಾಣಿ ಅಷ್ಟು ವರ್ಷಗಳಿಂದ ಇಲ್ಲದೇ ಹೋಗಿದ್ದರೆ ಇಷ್ಟು ಹೊಸದಾಗಿ ಕಾಣುವ ತಲೆಬುರುಡೆ ಹೇಗೆ ದೊರಕಿತೆಂದು ಕೇಳಿದಿರಾ. ಮೂಲಭೂತ ಪ್ರಶ್ನೆಗಳನ್ನು ಕೇಳದೇ ವಿಜ್ಞಾನದ ಮೂಲಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ. ನಮಗೆ ಆಗ ವಿಜ್ಞಾನದ ಕಲಿಕೆಯ ಮೊದಲ ಪಾಠ ದೊರಕಿತು. ಕಣ್ಣು ಮುಚ್ಚಿಕೊಂಡು ಹೇಳಿದ್ದನ್ನೆಲ್ಲ ಒಪ್ಪದೇ ನಮ್ಮ ತಿಳಿವಿನ ಮಿತಿಯಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತ ಹೋದಾಗ ಮನಸ್ಸು ವಿಚಾರಶೀಲವಾಗುತ್ತದೆ, ವೈಜ್ಞಾನಿಕವಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.