ಸೋಮವಾರ, ಮೇ 17, 2021
30 °C
ರಾಜಕಾರಣದಲ್ಲಿ ತನ್ನತನ ಕಾಯ್ದುಕೊಳ್ಳದ ‘ವಾರಸುದಾರ’ ಮಹಿಳೆಗೆ ಅಸ್ತಿತ್ವ ಇರದು

‘ವಾರಸುದಾರಿಕೆ’ಯ ರಾಜಕಾರಣದಲ್ಲಿ ಮಹಿಳೆ

ಡಾ. ಎಂ.ಉಷಾ Updated:

ಅಕ್ಷರ ಗಾತ್ರ : | |

ಚಿತ್ರನಟಿ ಮತ್ತು ದಿವಂಗತ ಅಂಬರೀಷ್‌ ಅವರ ಪತ್ನಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದರ ಬಗೆಗಿನ ಭಿನ್ನ ಹೇಳಿಕೆಗಳು ಇನ್ನೂ ತೇಲಾಡುತ್ತಿವೆ. ಹಾಗೆ ನೋಡಿದರೆ, ಸುಮಲತಾ ಅವರ ರಾಜಕೀಯ ಪ್ರವೇಶ ಒಂದು ಪ್ರಶ್ನೆಯೇ ಆಗಬೇಕಾದ್ದಿಲ್ಲ. ಒಬ್ಬ ನಾಗರಿಕಳಾಗಿ ಮಂಡ್ಯ ಮಾತ್ರವಲ್ಲ, ಭಾರತದ ಯಾವುದೇ ಕ್ಷೇತ್ರದಿಂದ ಬೇಕಿದ್ದರೂ ಚುನಾವಣೆಗೆ ನಿಲ್ಲುವುದಕ್ಕೆ ಅವರಿಗೆ ಸಾಂವಿಧಾನಿಕ ಹಕ್ಕಿದೆ. ಹಾಗೆಯೇ ಒಬ್ಬ ವ್ಯಕ್ತಿಯಾಗಿ ಅವರು ಪತ್ನಿಯಾಗಿಯೋ, ತಾಯಿಯಾಗಿಯೋ, ಮಂಡ್ಯದ ‘ಗೌಡ್ತಿ’ಯಾಗಿಯೋ, ತೆಲುಗಿನ ‘ಆಡಪಡುಚು’ ಆಗಿಯೋತಮ್ಮ ‘ಗುರುತು’ ಕಟ್ಟಿಕೊಳ್ಳಲು ಸ್ವತಂತ್ರರು ಎಂಬುದರಲ್ಲಿಯೂ ಎರಡು ಮಾತಿಲ್ಲ. ಆದಾಗ್ಯೂ ಈ ಸಂದರ್ಭವನ್ನುನೆಪವಾಗಿಟ್ಟುಕೊಂಡು ‘ಮಹಿಳಾ ವಾರಸುದಾರಿಕೆ ರಾಜಕಾರಣ’ದ ಬಗ್ಗೆ ಮರುಚಿಂತಿಸುವ ಅಗತ್ಯವಿದೆ.

ಭಾರತದ ಚುನಾವಣಾ ರಾಜಕಾರಣವು ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳಿಂದ ದೂರ ಸರಿಯುತ್ತಿರುವುದರಿಂದ ಸಹಜವಾಗಿಯೇ ಅದು ‘ಒಳಗೊಳ್ಳುವ ರಾಜಕಾರಣ’ದಿಂದಲೂ ದೂರ ಸರಿಯುತ್ತಿದೆ. ರಾಜಕೀಯ ಶ್ರೇಣಿಯನ್ನು ಹಂತಹಂತವಾಗಿ ಕ್ರಮಿಸಿ ಜನಪ್ರತಿನಿಧಿಗಳಾಗುವ ಮಾದರಿಗೆ ಬದಲಾಗಿ, ಹಣ, ಜಾತಿ–ಧರ್ಮ, ಕುಟುಂಬದ ಪ್ರತಿಷ್ಠೆ ಇತ್ಯಾದಿಗಳನ್ನು ಬೆನ್ನಿಗಿಟ್ಟುಕೊಂಡು ಬರುವ ಜನಪ್ರತಿನಿಧಿಗಳು ಹೆಚ್ಚಾದಂತೆಲ್ಲ ‘ವ್ಯಕ್ತಿತ್ವ’ಗಳು ರಾಜಕಾರಣದಲ್ಲಿ ಕಳೆದು ಹೋಗುತ್ತಿವೆ. ಇವೆಲ್ಲದರ ಪರಿಣಾಮವಾಗಿ ಪ್ರಜಾಪ್ರಭುತ್ವದ ‘ಅಣಕು’ ಹೆಚ್ಚಾಗುತ್ತಲೇ ನಡೆದಿದೆ. ಇದಕ್ಕೆ ಮಹಿಳೆಯರ ರಾಜಕೀಯ ಸಂದರ್ಭವೇನೂ ಹೊರತಾಗಿಲ್ಲ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ‘ಮಹಿಳಾ ರಾಜಕಾರಣ’ದ ಚರ್ಚೆಯನ್ನು ನಡೆಸಬೇಕಿದೆ.

ವಾರಸುದಾರಿಕೆ ಮತ್ತು ಅನುಕಂಪದ ರಾಜಕಾರಣಕ್ಕೆ ಇಂದು ಯಾವ ಪಕ್ಷವೂ ಹೊರತಾಗಿಲ್ಲ ಮತ್ತು ಒಂದು ನಿರ್ದಿಷ್ಟ ನಿಲುವಿಗೆ ಬದ್ಧವಾಗಿಲ್ಲ. ಹಾಗಾಗಿಯೇ ಪ್ರತೀ ಪಕ್ಷವೂ ಬೇರೆ ಪಕ್ಷಗಳ ಸಂದರ್ಭದಲ್ಲಿ ಅದನ್ನು ಖಂಡಿಸುವುದನ್ನು, ತಮ್ಮ ಸರತಿ ಬಂದಾಗ ಸಮರ್ಥಿಸಿಕೊಳ್ಳುವುದನ್ನು ರೂಢಿಸಿಕೊಂಡಿವೆ. ಇದಕ್ಕೆ ಅಸಲಿ ಕಾರಣವಾದರೂ ಏನು? ಊಳಿಗಮಾನ್ಯ ರಾಜಪ್ರಭುತ್ವದ ವಾರಸುದಾರಿಕೆಯ ರಾಜಕಾರಣವು ಪ್ರಜಾಪ್ರಭುತ್ವದ ಚುನಾವಣಾ ರಾಜಕಾರಣದಲ್ಲಿಯೂ ಪಕ್ಷಗಳಿಗೆ ಆಪ್ಯಾಯಮಾನ ಎನಿಸುವುದೇಕೆ? ಬಹುಶಃ ಇದಕ್ಕೆ ಮುಖ್ಯ ಕಾರಣ, ರಾಜಕೀಯ ಪಕ್ಷಗಳು ಎರಡು ಮತ್ತು ಮೂರನೇ ಹಂತದ ನಾಯಕರನ್ನು ರೂಪಿಸುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸದಿರುವುದು. ಮಹಾಭಾರತದಲ್ಲಿ ಮಗನಿಗೂ ಹೇಳಿಕೊಡದ ವಿದ್ಯೆಗಳನ್ನು ದ್ರೋಣಾಚಾರ್ಯರು ತಮ್ಮ ಪ್ರಿಯಶಿಷ್ಯನಾದ ಅರ್ಜುನನಿಗೆ ಕಲಿಸಿದ್ದರು ಎಂಬ ಮಾತು ಬರುತ್ತದೆ. ಈ ಬಗೆಯ ‘ಗುರುತನ’ದಿಂದ ನಮ್ಮ ಸಮಕಾಲೀನ ರಾಜಕಾರಣ ಎಷ್ಟೆಷ್ಟು ದೂರ ಸರಿಯುತ್ತದೋ ಅಷ್ಟಷ್ಟೂ ವಾರಸುದಾರಿಕೆಯ ರಾಜಕಾರಣ ಬಲಗೊಳ್ಳುತ್ತಲೇ ಹೋಗುತ್ತದೆ. ಯಾವಾಗ ಕ್ಷೇತ್ರಗಳು ಮತ್ತು ಪಕ್ಷಗಳು ಪರ್ಯಾಯ ನಾಯಕತ್ವದ ಕೊರತೆಯಿಂದ ನಿತ್ರಾಣಗೊಳ್ಳುತ್ತವೋ ಆಗೆಲ್ಲ ಅವು ಈ ಬಗೆಯ ಅನುಕಂಪದ ರಾಜಕಾರಣಕ್ಕೆ ಮುಗಿಬೀಳುವಂತಾಗುತ್ತದೆ.

ಮಹಿಳೆಯರ ‘ವಾರಸುದಾರಿಕೆ ರಾಜಕಾರಣ’ದ ವಿಷಯವೂ ಇಂದು ನಿನ್ನೆಯದಲ್ಲ. ಇತಿಹಾಸದುದ್ದಕ್ಕೂ ರಾಜರು ಯುದ್ಧ ಮತ್ತಿತರ ಸಂದರ್ಭಗಳಲ್ಲಿ ರಾಜಧಾನಿಯಿಂದ ದೂರ ಹೋಗುವಾಗ ತಮ್ಮ ರಾಣಿಯರಿಗೆ ವಾರಸುದಾರಿಕೆಯನ್ನು ಒಪ್ಪಿಸುತ್ತಿದ್ದ ಮತ್ತು ರಾಜನ ಹಠಾತ್ ನಿರ್ಗಮನದ ಸಂದರ್ಭದಲ್ಲಿ ‘ರಾಜಾಸ್ಥಾನ’ವು ರಾಣಿಯನ್ನು ತಮ್ಮ ಒಡತಿಯಾಗಿ ಸ್ವೀಕರಿಸುತ್ತಿದ್ದ ಹಲವು ಪ್ರಸಂಗಗಳನ್ನು ನಾವು ಓದಿದ್ದೇವೆ. ಹಾಗೆ ವಾರಸುದಾರಿಕೆ ರಾಜಕಾರಣಕ್ಕೆ ಬಂದ ಹಲವು ಮಹಿಳೆಯರು ‘ಸ್ವ’ಸಾಮರ್ಥ್ಯದ ಮೇಲೆ ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಕೂಡ. ಆದಾಗ್ಯೂ, ಆಧುನಿಕ ರಾಜಕಾರಣದಲ್ಲಿ ಜನಪ್ರಿಯ ರಾಜಕೀಯ ನಾಯಕರು ನಿಧನರಾದಾಗ ಅವರ ‘ಖಾಲಿತನ’ವನ್ನು ತುಂಬಿಕೊಳ್ಳಲು ‘ಸ್ಟಾಪ್‍ಗ್ಯಾಪ್’ ಆಗಿ ಅವರ ‘ಶ್ರೀಮತಿ’ಯರನ್ನು ಬಳಸುವ ಸಂಗತಿಯು ಮಹಿಳಾ ರಾಜಕಾರಣದ ದೃಷ್ಟಿಯಿಂದ ಗಂಭೀರವಾದ ಚರ್ಚೆಗೆ ಒಳಗಾಗಬೇಕಾದ ವಿಷಯವಾಗಿದೆ.

ಸಮಕಾಲೀನ ಸಂದರ್ಭದಲ್ಲಿಯೂ ವಾರಸುದಾರಿಕೆಯ ರಾಜಕಾರಣದಿಂದಲೇ ಪ್ರವೇಶ ಪಡೆದ ಹಲವುಮಹಿಳೆಯರು, ನಂತರದಲ್ಲಿ ತಮ್ಮದೇ ‘ಗುರುತನ್ನು’ ಛಾಪಿಸಿ ಯಶಸ್ವಿಯಾದ ಉದಾಹರಣೆಗಳೂ ನಮ್ಮ ಮುಂದಿವೆ. ಅಲ್ಲದೆ, ಮಹಿಳೆಯ ರಾಜಕೀಯ ಪ್ರವೇಶದ ದಾರಿಗಳೇ ಕ್ಷೀಣವಾಗುತ್ತಿರುವ ಈ ಹಂತದಲ್ಲಿ ಆಕೆಯ ಈ ಬಗೆಯ ವಾರಸುದಾರಿಕೆ ರಾಜಕೀಯ ಪ್ರವೇಶವನ್ನು ಸ್ವಲ್ಪ ಸಹಾನುಭೂತಿಯಿಂದ ನೋಡುವ ಅಗತ್ಯವಿದೆ ಎಂಬುದೂ ನಿಜ. ತಮ್ಮ ‘ಗುರುತನ್ನು’ ಬದಿಗಿಟ್ಟು ಗಂಡನ ‘ಗುರುತನ್ನೇ’ ತನ್ನ ಗುರುತಾಗಿಸಿಕೊಂಡು ಬದುಕುವ ಹೆಣ್ಣುಮಕ್ಕಳು ಗಂಡಂದಿರ ರಾಜಕೀಯ ವಾರಸುದಾರಿಕೆ ಚಲಾಯಿಸುವುದನ್ನು ಅವರ ಹಕ್ಕಾಗಿಯೂ ನಾವು ನೋಡಬಹುದು. ಅದೆಲ್ಲಕ್ಕೂ ಮಿಗಿಲಾಗಿ, ‘ಗಂಡನನ್ನು ಪ್ರತಿನಿಧಿಸುವುದೇ ನಿನ್ನ ಧರ್ಮ’ ಎಂದು ಬೋಧಿಸುವ ಸಮಾಜವು ತನ್ನ ಅನುಕೂಲ ಸಿಂಧುತ್ವಕ್ಕಾಗಿ ದೇಶ, ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ‘ಅನ್ಯ’ ಎಂದು ಮಹಿಳೆಯನ್ನು ಅವಮಾನಿಸುವುದನ್ನು ಕಂಡಾಗ ವಾರಸುದಾರಿಕೆಯ ‘ಜಿದ್ದೂ’ ಸಹ್ಯ ಎನಿಸುತ್ತದೆ.

ಸುಮಲತಾ ಈ ಎಲ್ಲ ನೆಲೆಗಳಿಂದಲೂ ರಾಜಕೀಯ ಪ್ರವೇಶಕ್ಕೆ ಯೋಗ್ಯರಾದವರೇ ಸರಿ. ಆದರೆ ಈ ವಾರಸುದಾರಿಕೆ ರಾಜಕಾರಣದಲ್ಲಿ ಪಡೆಯುವ ಪ್ರವೇಶವು ತಾತ್ಕಾಲಿಕ ಎಂಬುದನ್ನು ಅಂಥವರು ಮರೆಯಬಾರದು. ಏಕೆಂದರೆ, ಈ ಬಗೆಯ ಪ್ರವೇಶದಿಂದ ಬಂದ ಮಹಿಳೆಯರು ‘ಹೀಗೆ ಬಂದು ಹಾಗೆ ಹೋಗುವ’ ಪಾತ್ರಧಾರಿಗಳಾಗಿಕಳೆದು ಹೋಗುವುದೇ ಹೆಚ್ಚು. ಅನುಕಂಪದ ಅಲೆಯ ಬಾಳಿಕೆ ಹೆಚ್ಚೆಂದರೆ ಒಂದು ಚುನಾವಣೆವರೆಗೆ ಮಾತ್ರ. ನಂತರ ಮಹಿಳೆ ಮತ್ತದೇ ಪುರುಷ ರಾಜಕಾರಣವನ್ನು ಎದುರಿಸಬೇಕಾಗುತ್ತದೆ. ಪುರುಷಪ್ರಧಾನ ‘ಟೋಕನಿಸಂ’ ರಾಜಕಾರಣವು ಕೊಡಮಾಡುವ ಅಲ್ಪ ಪ್ರಾತಿನಿಧ್ಯದೊಳಗೆ ತನ್ನ ಅವಕಾಶವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇಂತಹ ಸನ್ನಿವೇಶವನ್ನು ಮಹಿಳೆಗೆ ಎದುರಿಸಲು ಸಾಧ್ಯವಾಗುವುದು ತನ್ನನ್ನು ತಾನು ಪ್ರತಿನಿಧಿಸಿಕೊಂಡಾಗ ಮತ್ತು ತಾನು ತಾನಾಗಿ ತನ್ನ ಜನರನ್ನು ಪ್ರತಿನಿಧಿಸಿದಾಗ ಮಾತ್ರ. ಈ ಎರಡು ಲಕ್ಷಣವೂ ವಾರಸುದಾರಿಕೆಯ ರಾಜಕಾರಣಕ್ಕೆ ಇಲ್ಲವಾದ್ದರಿಂದ ಸುಮಲತಾ ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ತಮ್ಮತನದೊಂದಿಗೆ ರಾಜಕೀಯ ಪ್ರವೇಶಿಸುವ ದಿಕ್ಕಿನಲ್ಲಿ ಯೋಚಿಸುವುದು ಉತ್ತಮ.

ಕೊನೆಗೂ, ಈ ಎಲ್ಲ ತರ್ಕಗಳ ನಡುವೆ ಒಂದು ಸತ್ಯ ಕಳೆದುಹೋಗುತ್ತದೆ. ಅದುವೇ ಮಹಿಳಾ ರಾಜಕಾರಣದ ಆತ್ಮವಿಶ್ವಾಸ. ಭಾರತದ ಚುನಾವಣಾ ರಾಜಕಾರಣ ದಿನದಿಂದ ದಿನಕ್ಕೆ ‘ಪುರುಷತ್ವ’ವನ್ನು ಆರೋಪಿಸಿ ಕೊಂಡಷ್ಟೂ ಮಹಿಳೆಗಿರುವ ರಾಜಕೀಯ ಪ್ರವೇಶದ ಹಾದಿಗಳು ಮಸುಕಾಗುತ್ತಲೇ ಹೋಗುತ್ತಿವೆ. ಮಹಿಳೆ ರಾಜಕೀಯ ನಾಯಕಿಯಾಗಿ ಮೆರೆಯುವುದಿರಲಿ, ಕುಟುಂಬ ರಾಜಕಾರಣಕ್ಕೆ ಹೊರತಾಗಿ, ಒಬ್ಬ ನಾಗರಿಕಳಾಗಿ ತನಗೆ ಇಷ್ಟವೆನಿಸಿದ ಯಾವುದಾದರೊಂದು ಪಕ್ಷದ ಜೊತೆಗೆ ಗುರುತಿಸಿಕೊಂಡು ಪ್ರಾಥಮಿಕ ಹಂತದಲ್ಲಿ ಕೆಲಸ ಮಾಡುವ ಹಾದಿಯೇ ಅವಳಿಗೆ ಇನ್ನೂ ಮುಕ್ತವಾಗಿ ತೆರೆದುಕೊಂಡಿಲ್ಲ. ಅಂತಹ ವ್ಯತಿರಿಕ್ತ ಸನ್ನಿವೇಶದಲ್ಲಿ ತಳಮಟ್ಟದಿಂದ ಕೆಲಸ ಮಾಡುತ್ತಾ ಬಂದಿರುವ ಮಹಿಳೆಯರಿಗೆ ಸಿಗಬೇಕಾದ ಅವಕಾಶಗಳನ್ನು ‘ವಾರಸುದಾರ ರಾಜಕಾರಣಿ’ಗಳು ತಮ್ಮದಾಗಿಸಿಕೊಳ್ಳುತ್ತಾಹೋದರೆ, ಅದು ತಳಮಟ್ಟದಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸ ಮಾಡಿದ ಮಹಿಳೆಯರಿಗೆ ಯಾವ ಸಂದೇಶವನ್ನು ರವಾನಿಸುತ್ತದೆ?

ಲೇಖಕಿ: ಪ್ರಾಧ್ಯಾಪಕಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು