ಸೋಮವಾರ, ಅಕ್ಟೋಬರ್ 25, 2021
25 °C
ಮತಾಂತರ ನಿಷೇಧ ಕಾಯ್ದೆ ಮೂಲಕ ಧರ್ಮವನ್ನು ಉಳಿಸಿಕೊಳ್ಳುತ್ತೇವೆ ಎನ್ನುವುದು ಹುಸಿ ನಂಬುಗೆ

ರವೀಂದ್ರ ಭಟ್ಟ ಅಂಕಣ – ಅನುಸಂಧಾನ| ಪ್ರೀತಿಯ ಅಪ್ಪುಗೆಗೆ ಕಾಯ್ದೆ ಬೇಡವೇ?

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಮೊದಲು ಈ ಮೂರು ಘಟನೆಗಳನ್ನು ನೋಡಿಕೊಂಡು ಬರೋಣ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಮಿಯಾಪುರ ಗ್ರಾಮದಲ್ಲಿ ಎರಡು ವರ್ಷದ ದಲಿತ ಮಗುವೊಂದು ಆಕಸ್ಮಿಕವಾಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಆ ಮಗುವಿನ ಪೋಷಕರಿಗೆ ₹ 25 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೆ ದೇವಾಲಯ ಶುದ್ಧ ಮಾಡುವ ಖರ್ಚನ್ನೂ ಭರಿಸಲು ಸೂಚಿಸಲಾಗಿದೆ.


ರವೀಂದ್ರ ಭಟ್ಟ 

ಅಂದು ಆ ಮಗುವಿನ ಹುಟ್ಟಿದಹಬ್ಬ ಇತ್ತು. ಅದಕ್ಕಾಗಿಯೇ ಮಗುವನ್ನು ದೇವಾಲಯಕ್ಕೆ ಕರೆತರಲಾಗಿತ್ತು. ಆ ಮಗು ದೇವಾಲಯ ಪ್ರವೇಶ ಮಾಡಿದ್ದು ‘ಅಪರಾಧ’. ದೇವಾಲಯ ‘ಅಶುದ್ಧಿ’ಯಾಯಿತು. ಅದಕ್ಕೆ ದಂಡವೆಂಬ ಬ್ರಹ್ಮಾಸ್ತ್ರ ಪ್ರಯೋಗ. ಇದು ನಡೆದಿದ್ದು ಯಾವುದೋ ಅನಾದಿ ಕಾಲದಲ್ಲಿ ಅಲ್ಲ. 21ನೇ ಶತಮಾನದ ಇದೇ ತಿಂಗಳಿನಲ್ಲಿ.

ಇನ್ನೊಂದು ಘಟನೆ ನಡೆದಿದ್ದು ಇದೇ ವಾರ. ಕರಟಗಿಯಲ್ಲಿ ಲಕ್ಷ್ಮಿ ದೇವಾಲಯವನ್ನು ಪ್ರವೇಶಿಸಿದ
ದಲಿತ ಯುವಕನೊಬ್ಬನಿಗೆ ₹ 11 ಸಾವಿರ ದಂಡ ವಿಧಿಸಲಾಗಿದೆ. ಆ ಹಣದಲ್ಲಿ ದೇವಾಲಯ ಶುದ್ಧಿ ಮಾಡ ಲಾಗಿದೆಯಂತೆ. ಮತ್ತೊಂದು ಘಟನೆ ನಡೆದಿದ್ದು ಕೆಲ ವರ್ಷಗಳ ಹಿಂದೆ. ಆದರೆ ಅಲ್ಲಿನ ಪರಿಸ್ಥಿತಿ ಈಗಲೂ ಸುಧಾರಿಸಿಲ್ಲ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಒಂದು ಹಳ್ಳಿ. ಆ ಹಳ್ಳಿಯ ಬಡ ಯುವತಿಯನ್ನು ಒಬ್ಬ ಮರುಳು ಮಾಡಿ ಕರೆದುಕೊಂಡು ನಾಪತ್ತೆಯಾದ. ಸುಮಾರು 8 ತಿಂಗಳು ಆಕೆ ಎಲ್ಲಿಗೆ ಹೋದಳು ಎನ್ನುವುದು ಪತ್ತೆಯಾಗಲಿಲ್ಲ. ಮುಂಬೈ ಕೆಂಪುದೀಪದ ಪ್ರದೇಶದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಅವಳು ಪತ್ತೆಯಾದಳು. ನಂತರ ಆಕೆಯನ್ನು ಊರಿಗೆ ತಂದು ಬಿಡಲಾಯಿತು. ಕಳೆದುಹೋದ ಮಗಳು ಸಿಕ್ಕ ಖುಷಿ ಪೋಷಕರಿಗೆ. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ. ಯಾಕೆಂದರೆ ಆ ಊರಲ್ಲಿ ಒಂದು ಪದ್ಧತಿ ಇದೆ. ಯಾವುದೇ ಯುವತಿ ನಾಪತ್ತೆಯಾಗಿ ಮತ್ತೆ ಊರಿಗೆ ಬಂದರೆ ಊರನ್ನು ಶುದ್ಧ ಮಾಡಬೇಕು. ಆಕೆಯನ್ನು ಶುದ್ಧ ಮಾಡಿದ ಮೇಲೆಯೇ ಮನೆಗೆ ಸೇರಿಸಿಕೊಳ್ಳಬೇಕು. ಅದಕ್ಕೊಂದು ಪಂಚಾಯಿತಿ. ಆ ಪಂಚಾಯಿತಿಯಲ್ಲಿ ಆ ಯುವತಿ ಕುಟುಂಬಕ್ಕೆ ₹ 2 ಸಾವಿರ ದಂಡ ವಿಧಿಸಿ ಊರಿಗೆಲ್ಲಾ ಬಾಡೂಟ ಹಾಕಿಸುವ ಶಿಕ್ಷೆ ನೀಡಲಾಯಿತು. ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ ಆ ಕುಟುಂಬ ಇನ್ನೊಂದಿಷ್ಟು ಸಾಲ ಮಾಡಿ ಊರಿಗೆಲ್ಲಾ ಬಾಡೂಟ ಹಾಕಿಸಿ ಶುದ್ಧವಾಯಿತು. ಊರವರ ಮನಸ್ಸು ಶುದ್ಧ ಮಾಡುವುದಕ್ಕೆ ಯಾವ ಗಂಜಳ ತರುವುದು?

ನಮ್ಮ ಹಳ್ಳಿಗಳಲ್ಲಿ ಇಂತಹ ಅಮಾನವೀಯ ಘಟನೆ ಗಳಿಗೆ ಲೆಕ್ಕವೇ ಇಲ್ಲ. ಅತ್ಯಂತ ಆಧುನಿಕತೆಯ ಸೋಗಿನಲ್ಲಿ ಇರುವ ನಮ್ಮ ಸಮಾಜದ ಮರೆಯಲ್ಲಿ ಈಗಲೂ ಅಸ್ಪೃಶ್ಯತೆ ಎನ್ನುವುದು ಜೀವಂತವಾಗಿದೆ. ಅದು ಚೇಳಿ ನಂತೆ ಕುಟುಕುತ್ತದೆ. ಹಾವಿನಂತೆ ವಿಷ ಕಾರುತ್ತದೆ. ಆಗಾಗ ಬುಸುಗುಡುತ್ತಲೇ ಇರುತ್ತದೆ. ಮನುಷ್ಯ ಮನುಷ್ಯನನ್ನು ದೂರ ಇಡುವ ಪದ್ಧತಿ ಗಟ್ಟಿಯಾಗಿಯೇ ಉಳಿದುಕೊಂಡಿದೆ.

ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತ ರನ್ನು ಬಾಚಿ ತಬ್ಬಿಕೊಂಡು ಮುಂದುವರಿಯುವ ಮನಸ್ಸು ಇನ್ನೂ ನಮ್ಮ ಸಮಾಜಕ್ಕೆ ಬಂದಿಲ್ಲ. ಈಗಲೂ ಹಳ್ಳಿಗಳಲ್ಲಿ ಕೆರೆಯ ನೀರನ್ನು ಮುಟ್ಟಲು ಬಿಡುವುದಿಲ್ಲ. ದೇವಾಲಯಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಹೋಟೆಲ್‌ ಗಳಲ್ಲಿ ತಟ್ಟೆ– ಲೋಟಗಳನ್ನು ಹೊರಗೆ ಪ್ರತ್ಯೇಕವಾಗಿ ಇಡಲಾಗುತ್ತದೆ. ದಲಿತರಿಗೆ ಕ್ಷೌರ ಮಾಡದೇ ಇರುವ ಸಾವಿರ ಸಾವಿರ ಹಳ್ಳಿಗಳು ಇನ್ನೂ ನಮ್ಮಲ್ಲಿ ಇವೆ. ಆದರೂ ಎಲ್ಲ ಸುಧಾರಣೆ ಯಾಗಿದೆ ಎಂಬ ಹುಸಿ ಸೋಗಿನಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಸಮ ಸಮಾಜದ ಮಾತುಗಳನ್ನು ಆಡುತ್ತೇವೆ. ನಮ್ಮ ಆತ್ಮವಂಚನೆಗೆ ಮಿತಿಯೇ ಇಲ್ಲ.

ಪರಿಸ್ಥಿತಿ ಹೀಗಿದ್ದರೂ ನಮ್ಮ ವಿಧಾನಮಂಡಲದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆಗಳು ನಡೆಯುತ್ತವೆ. ನಮ್ಮ ಗೃಹ ಸಚಿವರು ಮತಾಂತರ ತಡೆಗೆ ಅತ್ಯಂತ ಕಠಿಣ ಕಾನೂನು ತರುವುದಾಗಿ ಹೇಳುತ್ತಾರೆ. ಆಡಳಿತ ಪಕ್ಷದ ಬಹುತೇಕ ನಾಯಕರು ಇದಕ್ಕೆ ಬೆಂಬಲ ಸೂಚಿಸುತ್ತಾರೆ. ಮತಾಂತರ ಎನ್ನುವುದು ಒಂದು ಪಿಡುಗಾಗಿದ್ದು ಅದನ್ನು ಸಂಪೂರ್ಣವಾಗಿ ತೊಲಗಿಸುವುದು ನಮ್ಮ ಗುರಿ ಎಂದು ವೀರಾವೇಶದ ಮಾತನಾಡುತ್ತಾರೆ. ಶಾಸಕರೊಬ್ಬರ ತಾಯಿಯೇ ಮತಾಂತರ ಆಗಿದ್ದಾಳೆ ಎಂದರೆ ಮತಾಂತರದ ಪಿಡುಗು ಎಷ್ಟು ಜೋರಾಗಿದೆ ನೋಡಿ ಎಂದು ಅಬ್ಬರಿಸುತ್ತಾರೆ. ಶಾಸಕರು ಕೂಡಾ ಕಣ್ಣೀರು ಹಾಕುತ್ತಾರೆ. ಅವರ ಕಣ್ಣೀರ ಧಾರೆಯಲ್ಲಿ ಇಡೀ ಸದನ ಮುಳುಗಿ ಹೋಗುತ್ತದೆ. ಆದರೆ ನಮ್ಮ ದಲಿತರು, ಹಿಂದುಳಿದವರು ಶತಮಾನಗಳಿಂದ ಹರಿಸಿದ ಕಣ್ಣೀರ ಕೋಡಿಗೆ ಬೆಲೆಯೇ ಇಲ್ಲದಂತಾಗಿದೆ. ಅವರ ಕಣ್ಣೀರ ಹೊಳೆ ಇವರ ಕಣ್ಣಿಗೆ ಕಾಣುವುದೇ ಇಲ್ಲ.

ಮತಾಂತರ ನಿಷೇಧ ಕಾಯ್ದೆಯ ಮೂಲಕ ಒಂದು ಸಮಾಜವನ್ನು, ಒಂದು ಧರ್ಮವನ್ನು ಉಳಿಸಿಕೊಳ್ಳುತ್ತೇವೆ ಎನ್ನುವುದು ಹುಸಿ ನಂಬುಗೆ. ಬಾಣಗಳಿಂದ, ಅಸ್ತ್ರ ಗಳಿಂದ, ಕಾಯ್ದೆಗಳಿಂದ, ಕಾನೂನು ಕಟ್ಟಳೆಗಳಿಂದ ಬದಲಾವಣೆ ತರುತ್ತೇನೆ ಎಂದು ಹೊರಟರೆ ಗೆಲುವು ಕಷ್ಟ. ಮೊದಲು ನಾವು ಕಣ್ಣಿಗೆ ಕಟ್ಟಿಕೊಂಡ ಬಟ್ಟೆಯನ್ನು ಬಿಚ್ಚಬೇಕು.

‘ನಾನು ಹಿಂದೂವಾಗಿ ಹುಟ್ಟಿದ್ದೆ. ಆದರೆ ಸಾಯುವಾಗ ಹಿಂದೂವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ನಮ್ಮ ದೇಶದಲ್ಲಿ ಕೋಟ್ಯಂತರ ಜನ ಅವರನ್ನೇ ಅನುಸರಿಸಿದರು. ಆದರೂ ನಮಗೆ ಅವರ ಆಂತರ್ಯ ಅರ್ಥವಾಗುವುದಿಲ್ಲ ಎಂದರೆ ನಮ್ಮ ಹೃದಯದೊಳಗೆ ಬಿತ್ತಿದ ಬೀಜ ಎಷ್ಟು ಗಟ್ಟಿ ನೋಡಿ. ಆಧುನಿಕ ಕಾಲದಲ್ಲಿಯೂ ನಮ್ಮ ಹೃದಯ ಮಿಡಿಯುತ್ತಿಲ್ಲ.

ಬಲವಂತದ ಮತಾಂತರಕ್ಕೆ ಕಡಿವಾಣ ಬೇಕು ನಿಜ. ಹಿಂದೆಲ್ಲಾ ಕೋವಿಯ ನಳಿಕೆಯನ್ನು ಕತ್ತಿನಪಟ್ಟಿಯ ಮೇಲೆ ಇಟ್ಟು ಮತಾಂತರ ನಡೆಸಲಾಗಿದೆ. ಭಯದ ವಾತಾ ವರಣ ಸೃಷ್ಟಿಸಿ ಮತಾಂತರ ಮಾಡಿದ್ದೂ ನಿಜ. ಅದನ್ನೇ ಮುಂದಿಟ್ಟು ಈಗ ಕಾನೂನು ಮಾಡಿಬಿಟ್ಟರೆ ಎಲ್ಲವೂ ಸರಿಯಾಗುವುದಿಲ್ಲ. ನಮ್ಮ ಹುಣ್ಣುಗಳಿಗೆ ಮುಲಾಮು ಹುಡುಕಬೇಕಲ್ಲ. ಹುಣ್ಣನ್ನು ಮುಚ್ಚಿ ಬ್ಯಾಂಡೇಜ್ ಮಾಡಿದರೆ ದೇಹ ಕೊಳೆಯುತ್ತದೆಯೇ ವಿನಾ ರೋಗ ವಾಸಿಯಾಗುವುದಿಲ್ಲ. ಪ್ರೀತಿಯನ್ನು, ಅಂತಃಕರಣದ ಸೇವೆಯನ್ನು, ಸಮ ಸಮಾಜದ ಕನಸನ್ನು ಬಲವಂತ ಎಂದು ಹೇಳಲು ಆಗುವುದಿಲ್ಲ. ಅದಕ್ಕೆ ಕಡಿವಾಣ ಹಾಕಲು ಸಾಧ್ಯವೂ ಇಲ್ಲ.

ನಮ್ಮವರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ನಿರ್ವ್ಯಾಜ ಪ್ರೀತಿ ಬೇಕು. ಹೃದಯಾಂತರಾಳದ ಸೇವೆ ನೀಡಬೇಕು. ಸಂತೋಷದಿಂದ, ಸಂತೃಪ್ತಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಬೇಕು. ಮೇಲು ಕೀಳು ಎಂಬ ಅಸಮಾನತೆಯನ್ನು ದೂರ ಮಾಡಬೇಕು. ಈಗ ಎಲ್ಲಿದೆ ಅಸ್ಪೃಶ್ಯತೆ? ಎಲ್ಲರನ್ನೂ ಸಮಾನವಾಗಿಯೇ ನೋಡಲಾಗುತ್ತಿದೆಯಲ್ಲ ಎಂದು ಬಹಿರಂಗವಾಗಿ ಒಪ್ಪಿ ಕೊಳ್ಳುವ ಮೊದಲು ಅಂತರಂಗದಲ್ಲಿಯೂ ನಾವು ಬದಲಾಗಬೇಕು. ನಮ್ಮ ಮನಸ್ಸಿನ ಆಳವನ್ನು ಹೊಕ್ಕು ನೋಡಿಕೊಳ್ಳಬೇಕು. ಪ್ರಶ್ನೆ ಮಾಡಿಕೊಳ್ಳಬೇಕು. ಯಾವ ಪ್ರಶ್ನೆಗೂ ಆಕ್ಷೇಪಕ್ಕೂ ಅವಕಾಶವಿಲ್ಲದಂತೆ ಸಕಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಮನುಷ್ಯರಂತೆ ಕಾಣಬೇಕು.

ಒಂದು ಪ್ರೀತಿಯ ಅಪ್ಪುಗೆಗೆ, ಒಂದು ಸ್ನೇಹದ ಮುಗುಳ್ನಗೆಗೆ, ಒಂದು ವಿಶ್ವಾಸದ ಹಸ್ತಲಾಘವಕ್ಕೆ ಕರಗದ ದಲಿತರಾರೂ ಇಲ್ಲಿ ಇಲ್ಲ. ಅವರು ಕೇಳುತ್ತಿರುವುದೂ ಅದನ್ನೆ. ಒಂದು ಪ್ರೀತಿಯ ಅಪ್ಪುಗೆಯನ್ನು ನೀಡಿದರೆ, ವಿಶ್ವಾಸದ ಸಲುಗೆಯನ್ನು ನೀಡಿದರೆ ಅವರು ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮಕ್ಕೆ ಹೋಗುವುದಿಲ್ಲ. ಮೊದಲು ಮೇಲಿದ್ದವರು ಬಾಗಬೇಕು, ಕೈ ಚಾಚಬೇಕು, ಬಾಗಿ ತಬ್ಬಿಕೊಳ್ಳಬೇಕು ಅಷ್ಟೆ. ಇಲ್ಲವಾದರೆ ಮುಂದೊಂದು ದಿನ ಪ್ರೀತಿಯ ಅಪ್ಪುಗೆಗೂ ಕಾಯ್ದೆ ತರಬೇಕಾದೀತು.

ಅಸ್ಪೃಶ್ಯತೆಯ ಕೂಪದಲ್ಲಿ ಸಿಲುಕಿದವರು ಕೇಳುತ್ತಿ ರುವುದು ಕಾಯ್ದೆಯನ್ನಲ್ಲ. ಅವರ ಕೋಪ ತಾಪ ಆಕ್ರಂದನ ಎಲ್ಲ ಇರುವುದು ಪ್ರೀತಿಗಾಗಿ, ಸಮಾನತೆಗಾಗಿ, ಮಾನವೀಯ ಸ್ಪರ್ಶಕ್ಕಾಗಿ ಅಷ್ಟೆ. ಅದನ್ನು ಕಾಯ್ದೆಯಿಂದ ಮಾಡಲಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು