ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಸಂತೋಷಕ್ಕೆ ಪಾಠ ಸಂತೋಷಕ್ಕೆ!

ಪಠ್ಯ ಪರಿಷ್ಕರಣೆಗೊಂದು ಸ್ಪಷ್ಟ ನೀತಿ ತರಲು ಇದು ಸಕಾಲ
Last Updated 28 ಜೂನ್ 2022, 2:21 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಈಗ ‘ಸಂತೋಷ’ ಮರೆಯಲ್ಲಿದೆ ಎಂದು ಕೆಲವರು ಹೇಳುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಹಿಂದೆಯೂ ‘ಸಂತೋಷ’ ಇದೆಯಂತೆ. ಆದರೆ ಅದು ಬಹಿರಂಗವಾಗಿ ಕಾಣಿಸುವುದಿಲ್ಲ ಎನ್ನುವುದು ಬಿಜೆಪಿ ವಲಯದ ಅಂಬೋಣ. ಇದ್ದರೂ ಇರಬಹುದು. ಆದರೆ ರಾಜ್ಯದ ಜನರೂ ಸಂತೋಷವಾಗಿರುವುದು ಬಹಿರಂಗವಾಗಿ ಕಾಣುತ್ತಿಲ್ಲ. ಅದರಲ್ಲಿಯೂ ಮಕ್ಕಳು ಸಂತೋಷವಾಗಿಲ್ಲ ಎಂದು ಬಹಿರಂಗವಾಗಿಯೇ ಹೇಳಬಹುದು.

ರಾಜ್ಯದ ಆಡಳಿತ ಪಕ್ಷದಲ್ಲಿ ಈಗ ಎರಡು ಪಂಗಡಗಳಂತೆ. ಒಂದು ಸಂತೋಷದ ಪಂಗಡವಾದರೆ, ಇನ್ನೊಂದು ಅಸಂತೋಷದ ಪಂಗಡವಂತೆ. ಈ ಪಂಗಡಗಳ ಗುದ್ದಾಟದಲ್ಲಿ ಪ್ರಜೆಗಳಂತೂ ಅಸಂತೋಷದಲ್ಲಿಯೇ ಇದ್ದಾರೆ. ದೊಡ್ಡವರದ್ದು ಒಂದು ರೀತಿ ದುಃಖ, ಮಕ್ಕಳದ್ದು ಒಂದು ರೀತಿಯ ದುಃಖ.

ರಾಜ್ಯದ ಶಾಲಾ ಮಕ್ಕಳ ಪರಿಸ್ಥಿತಿ ಹೇಗಾಗಿದೆ ಎಂದರೆ, ಅಪ್ಪ ಅಮ್ಮ ಮಕ್ಕಳನ್ನು ಊಟಕ್ಕೆ ಕರೆದಿದ್ದಾರೆ. ಬಾಳೆಯನ್ನೂ ಹಾಕಿದ್ದಾರೆ. ಮಕ್ಕಳು ಬಂದು ಊಟಕ್ಕೆ ಕುಳಿತಿದ್ದಾರೆ. ಊಟಕ್ಕೆ ಏನು ಬಡಿಸಬೇಕು ಎನ್ನುವುದರ ಬಗ್ಗೆ ಅಪ್ಪ ಅಮ್ಮ ಜಗಳವಾಡುತ್ತಿದ್ದಾರೆ. ಅಪ್ಪ ಅಮ್ಮನ ಜಗಳವನ್ನು ನೋಡುತ್ತಾ ಮಕ್ಕಳು ಸುಮ್ಮನೆ ಕುಳಿತಿದ್ದಾರೆ. ಅವರು ಬಡಿಸುತ್ತಿಲ್ಲ. ಅವರು ಬಡಿಸದೇ ಇವರು ಉಣ್ಣುವಂತಿಲ್ಲ. ಜಗಳ ಹೀಗೆಯೇ ಮುಂದುವರಿದರೆ ಮಕ್ಕಳಿಗೆ ಊಟವಿಲ್ಲ. ಊಟವಿಲ್ಲದಿದ್ದರೆ ಮಕ್ಕಳು ಬಡವಾಗುತ್ತಾರೆ. ಮಕ್ಕಳು ಬಡವಾದರೆ ರಾಜ್ಯವೂ ಬಡವಾಗುತ್ತದೆ. ಆ ಮೂಲಕ ದೇಶ ಕೂಡ.

ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುವಾಗ, ಶಿಕ್ಷಣ ಮತ್ತು ಗೃಹ ಖಾತೆಗಳನ್ನು ಆರ್‌ಎಸ್ಎಸ್ ಮೂಲದವರಿಗೇ ಕೊಡಬೇಕು ಎನ್ನುವ ತಾಕೀತು ಇತ್ತಂತೆ. ಅದರಂತೆ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿಯೂ ಬಿ.ಸಿ.ನಾಗೇಶ್‌ ಶಿಕ್ಷಣ ಸಚಿವರಾಗಿಯೂ ಅಧಿಕಾರ ವಹಿಸಿಕೊಂಡರು. ಇಬ್ಬರಿಗೂ ಇದು ಮೊದಲ ಅನುಭವ. ಅವರ ಅನುಭವದ ಕೊರತೆ ಕೆಲವೇ ದಿನಗಳಲ್ಲಿ ಬಹಿರಂಗವಾಗತೊಡಗಿತು. ಮುಖ್ಯಮಂತ್ರಿಗೆ ಈ ಇಬ್ಬರ ಎಡವಟ್ಟುಗಳ ಭಾರವನ್ನು ಹೊತ್ತುಕೊಳ್ಳುವುದೇ ಕೆಲಸವಾಯಿತು. ಅವರೂ ಕೆಲದಿನ ಹೊತ್ತುಕೊಂಡರು. ನಂತರ ಭಾರವನ್ನು ನೆಲಕ್ಕಿಟ್ಟು ನಿರುಮ್ಮಳರಾದಂತೆ ಕಾಣುತ್ತಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ನಮ್ಮ ಗೃಹ ಸಚಿವರು ‘ಆ ಯುವತಿ ರಾತ್ರಿ ವೇಳೆ ಅಲ್ಲಿಗೆ ಹೋಗಿದ್ಯಾಕೆ?’ ಎಂದು ಕೇಳಿ ಮುಜುಗರಕ್ಕೆ ಈಡಾದರು. ಬೆಂಗಳೂರಿನ ಗೋರಿಪಾಳ್ಯದಲ್ಲಿ ಯುವಕನೊಬ್ಬನ ಕೊಲೆ ಯಾದಾಗಲೂ ಗೃಹ ಸಚಿವರು ‘ಯುವಕ ಉರ್ದು ಮಾತನಾಡದಿದ್ದುದಕ್ಕೆ ಈ ಕೊಲೆ ನಡೆದಿದೆ’ ಎಂದು ತಕ್ಷಣವೇ ಹೇಳಿಕೆ ಕೊಟ್ಟರು. ನಂತರ ಬೆಂಗಳೂರು ಪೊಲೀಸ್ ಕಮಿಷನರ್ ಅವರು ‘ಇದು ಉರ್ದು ಮಾತನಾಡದ ಕಾರಣಕ್ಕಾಗಿ ನಡೆದ ಕೊಲೆಯಲ್ಲ. ಬೈಕ್ ಅಪಘಾತಕ್ಕೆ ಸಂಬಂಧಿಸಿದ ಘರ್ಷಣೆಯ ವೇಳೆ ಕೊಲೆ ನಡೆದಿದೆ’ ಎಂದು ಸಮಜಾಯಿಷಿ ನೀಡಿದರು.

ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣವಾಗಲಿ, ಹಿಜಾಬ್ ಗಲಾಟೆಯಾಗಲಿ ಎಲ್ಲದರಲ್ಲಿಯೂ ಅವರದ್ದು ಅನನುಭವದ ನಡೆ. ಧಾರವಾಡ ಹೊರವಲಯದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸ ಮಾಡಿದಾಗಲೂ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ವಿವಾದಕ್ಕೆ ತೇಪೆ ಹಾಕಿದರೇ ವಿನಾ ಗೃಹ ಸಚಿವರು ವಿವೇಚನೆಯಿಂದ ಪ್ರತಿಕ್ರಿಯಿಸಲೇ ಇಲ್ಲ. ಪಿಎಸ್ಐ ನೇಮಕಾತಿ ಅಕ್ರಮದ ವಿಷಯದಲ್ಲಿಯೂ ಆ ಬಗ್ಗೆ ಇನ್ನೂ ವಿಚಾರಣೆ ನಡೆಯುತ್ತಿದ್ದಾಗಲೇ ‘ಮರುಪರೀಕ್ಷೆ ನಡೆಸಲಾಗುವುದು’ ಎಂದು ಘೋಷಿಸಿಬಿಟ್ಟರು. ಅದೊಂದು ವಿವಾದದ ಗೂಡಾಯಿತು.

ಗೃಹ ಸಚಿವರ ಪಾಡು ಹೀಗಾದರೆ, ಶಿಕ್ಷಣ ಸಚಿವರ ಅವಾಂತರ ಇನ್ನೊಂದು ತರಹ. ರಾಜ್ಯದಲ್ಲಿ ಪಠ್ಯಪುಸ್ತಕದ ವಿವಾದ ತಾರಕಕ್ಕೆ ಏರಿದಾಗ ನಮ್ಮ ಶಿಕ್ಷಣ ಮಂತ್ರಿಗಳು ‘ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರು ಯಾರೆಂದು ತಿಳಿದುಕೊಂಡಿದ್ದೀರಿ. ಅವರು ಐಐಟಿ ಪ್ರೊಫೆಸರ್. ಅವರು ಮಾಡಿದ್ದು ಸರಿ ಇಲ್ಲ ಎನ್ನಲಾಗದು’ ಎಂದು ಹೇಳಿಕೆ ನೀಡಿ ಮರೆಯಲ್ಲಿರುವ ‘ಸಂತೋಷ’ದ ಮರ್ಯಾದೆಯನ್ನೂ ಕಳೆದುಬಿಟ್ಟರು. ನಂತರ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರೇ ತಾವು ಐಐಟಿ ಪ್ರೊಫೆಸರ್ ಅಲ್ಲ ಎಂದು ಸ್ಪಷ್ಟನೆ ನೀಡಬೇಕಾಯಿತು.

ಪಠ್ಯಪುಸ್ತಕವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ನೀಡಿದ ಹೇಳಿಕೆಗಳೂ ವಿವಾದಕ್ಕೆ ಕಾರಣವಾಗುತ್ತಲೇ ಹೋದವು. ‘ನಾವು ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿದ್ದೇವೆ ಅಷ್ಟೆ. ಉದಾಹರಣೆಗೆ, ‘ಬಸವಣ್ಣನವರು ಜನಿವಾರವನ್ನು ಕಿತ್ತೆಸೆದು ಹೋದರು’ ಎಂದು ಹಿಂದಿನ ಪಾಠದಲ್ಲಿತ್ತು. ಅದನ್ನು ಬದಲಾಯಿಸಿ ‘ಅವರು ಉಪನಯನವಾದ ನಂತರ ಹೊರನಡೆದರು’ ಎಂದು ತಿದ್ದುಪಡಿ ಮಾಡಿದ್ದೇವೆ. ಇದರಲ್ಲಿ ವಿರೋಧ ಮಾಡುವುದು ಏನಿದೆ?’ ಎಂದು ನಮ್ಮ ಶಿಕ್ಷಣ ಸಚಿವರು ಪ್ರಶ್ನಿಸಿದರು. ಸ್ವತಃ ಬ್ರಾಹ್ಮಣರೇ ಆಗಿರುವ ಶಿಕ್ಷಣ ಸಚಿವ ರಿಗೆ ಉಪನಯನ ಆದ ಮೇಲೆ ಹೋಗುವುದಕ್ಕೂ ಜನಿವಾರವನ್ನು ಕಿತ್ತೆಸೆದು ಹೋಗುವುದಕ್ಕೂ ಇರುವ ವ್ಯತ್ಯಾಸ ತಿಳಿದಿಲ್ಲ ಎನ್ನುವುದನ್ನು ನಂಬುವುದು ಕಷ್ಟ. ಆದರೆ ಅವರು ರಾಜ್ಯದ ಜನರನ್ನು ಈ ವಿಷಯದಲ್ಲಿ ನಂಬಿಸುವುದಕ್ಕೆ ಹೊರಟಿದ್ದಾರೆ. ಅಂಬೇಡ್ಕರ್ ಕುರಿತ ಪಾಠದಲ್ಲಿ ಇದ್ದ ‘ಸಂವಿಧಾನ ಶಿಲ್ಪಿ’ ಎಂಬ ಪದಗಳನ್ನು ತೆಗೆಯಬಹುದು ಅಥವಾ ತೆಗೆಯಬಾರದು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ ಎಂದರೆ ಏನನ್ನುವುದು?

ರವೀಂದ್ರ ಭಟ್ಟ
ರವೀಂದ್ರ ಭಟ್ಟ

ಅಧಿಕಾರದಲ್ಲಿ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು. ವಿಷಯವನ್ನು ತಿಳಿದುಕೊಂಡು ಮಾತನಾಡಬೇಕು. ಇಲ್ಲವಾದರೆ ಮಾತು ಮನೆ ಕೆಡಿಸಿತು ಎಂದಂತೆ ಆಗುತ್ತದೆ. ಪಠ್ಯಪುಸ್ತಕದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಈಗ ಮೇಲ್ನೋಟಕ್ಕೇ ಕಾಣುತ್ತಿದೆ. ಎಲ್ಲ ತಪ್ಪುಗಳನ್ನು ಸರಿಪಡಿಸುವುದು ಈಗಿನ ಮೊದಲ ಆದ್ಯತೆಯಾಗಬೇಕು. ಜೊತೆಗೆ ಮಕ್ಕಳಿಗೆ ಶೀಘ್ರದಲ್ಲಿ ಸರಿಯಾದ ಪಠ್ಯವನ್ನು ತಲುಪಿಸುವ ಕೆಲಸವಾಗಬೇಕು. ತಪ್ಪಾಗಿದೆ ಎನ್ನುವುದು ಗೊತ್ತಾದ ನಂತರ ಅದನ್ನು ಸರಿಪಡಿಸಲು ಶಿಕ್ಷಣ ಸಚಿವರಾದರೂ ಪ್ರಯತ್ನ ಮಾಡಬೇಕಿತ್ತು, ಇಲ್ಲವೇ ಮುಖ್ಯಮಂತ್ರಿಯಾದರೂ ಮುಂದಾಗಬೇಕಿತ್ತು. ತಪ್ಪನ್ನೇ ಸಮರ್ಥಿಸಿಕೊಳ್ಳುವ ಕೆಲಸವನ್ನು ಮಾಡಬಾರದಿತ್ತು.

ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ರಾಜ್ಯದ, ದೇಶದ ಮುಂದಿನ ಜನಾಂಗದ ಭವಿಷ್ಯ ಮಸುಕಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಹಿರಿಯರ ಮೇಲಿದೆ. ಅದಕ್ಕೇ ಎಲ್ಲ ತಜ್ಞರನ್ನೂ ಒಂದೆಡೆ ಸೇರಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು. ಇಲ್ಲಿ ಸಿದ್ಧಾಂತಗಳ ತಿಕ್ಕಾಟ ಇರಬಾರದು. ಅದು ನಾಗರಿಕ ಸರ್ಕಾರದ ಲಕ್ಷಣ.

ಆಗಿರುವ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಈಗ ಒಂದು ಸಣ್ಣ ಹೆಜ್ಜೆ ಇಟ್ಟಿದೆ. ಅದು, ಪೂರ್ಣಪ್ರಮಾಣದಲ್ಲಿ ಆಗಬೇಕು. ಜೊತೆಗೇ ಮುಂದೆ ಕೂಡ ಇಂತಹ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬೇಕು, ಎಂದರೆ ಪಠ್ಯಪುಸ್ತಕ ಪರಿಷ್ಕರಣೆಗೆ ಒಂದು ನಿರ್ದಿಷ್ಟ ನೀತಿಯನ್ನು ರೂಪಿಸಬೇಕು. ಪಠ್ಯಪುಸ್ತಕ ಪರಿಷ್ಕರಣೆ ಎಂದರೆ ಏನೋ ಒಂದಿಷ್ಟು ತೆಗೆಯುವುದು, ಇನ್ನೊಂದಿಷ್ಟು ಸೇರಿಸುವುದು ಎಂದಾಗಬಾರದು. ಏನನ್ನು ತೆಗೆಯಬೇಕು ಮತ್ತು ಏನನ್ನು ಸೇರಿಸಬೇಕು ಎನ್ನುವುದಕ್ಕೆ ಸ್ಪಷ್ಟವಾದ ನೀತಿ ಇರಬೇಕು. ಮಕ್ಕಳ ಮನಸ್ಸನ್ನು ಅರಳಿಸುವ, ಮುಂದೆ ಅವರ ಬದುಕಿಗೆ ಭದ್ರ ಬುನಾದಿಯನ್ನು ಹಾಕುವ, ಅವರು ಉತ್ತಮ ನಾಗರಿಕರಾಗಿ ಬೆಳೆಯಲು ಬೇಕಾದ ಅಂಶಗಳನ್ನು ತುಂಬಬೇಕು. ಇದು ಅತ್ಯಂತ ವೈಜ್ಞಾನಿಕವಾಗಿ ನಡೆಯಬೇಕು. ಅಧಿಕಾರದಲ್ಲಿ ಇರುವವರು ಇದಕ್ಕೆ ಮನಸ್ಸು ಮಾಡಬೇಕು. ಈಗ ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸುತ್ತಿರುವವರನ್ನೂ ಕರೆದು ಮಾತನಾಡಬೇಕು. ಇದರಲ್ಲಿ ಯಾವುದೇ ಹಟ ಮಾಡಬಾರದು. ಮಕ್ಕಳಿಗೆ ಒಳ್ಳೆಯದಾಗಬೇಕು ಎನ್ನುವುದು ಆದ್ಯತೆಯಾಗಬೇಕೇ ವಿನಾ ಬೇರೆ ಯಾವುದೇ ವಿಷಯ ತಲೆಯಲ್ಲಿ ಇರಬಾರದು.

ಪಠ್ಯಪುಸ್ತಕ ಪರಿಶೀಲನೆಗೆ ನೇಮಕವಾದವರನ್ನೇ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಅದಕ್ಕೆ ಘಟನೋತ್ತರ ಒಪ್ಪಿಗೆ ಪಡೆದ ಹಾಗೆಯೇ ಈಗ ವಿವಾದ ಬಗೆಹರಿಸುವುದಕ್ಕೂ ಘಟನೋತ್ತರ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಶಾಲಾ ಪಠ್ಯವನ್ನು ಮಕ್ಕಳು ಸಂತೋಷದಿಂದ ಕಲಿಯಬೇಕು. ಪಠ್ಯವು ಮಕ್ಕಳ ಸಂತೋಷಕ್ಕೆ ಇರಬೇಕೇ ವಿನಾ ವಿವಾದಕ್ಕೆ ಅಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಸಂತೋಷ ಮರೆಯಲ್ಲಿದ್ದರೆ ಒಳ್ಳೆಯದಲ್ಲ. ಬಹಿರಂಗವಾದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT