ಶುಕ್ರವಾರ, ಅಕ್ಟೋಬರ್ 23, 2020
24 °C
ಈ ರಾಜಕೀಯ ಆಟವನ್ನು ಮೂವರೂ ಮುಖಂಡರು ಆಲೋಚಿಸಿಯೇ ಆಡಿರಬಹುದೇ?

ಅನುಸಂಧಾನ | ಶ್ವಾಸ ಉಳಿಸಲಷ್ಟೇ ಅವಿಶ್ವಾಸ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

Prajavani

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಮ್ಮೆ ಅವರು ಮಹಾರಾಷ್ಟ್ರದ ಆಗಿನ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಮುಂಬೈಗೆ ಹೋಗಿದ್ದರು. ಆಗ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿತ್ತು. ಹೆಗಡೆ ವಾಪಸು ಬಂದ ನಂತರವೂ ಈ ಭೇಟಿಯ ಬಗ್ಗೆ ಸದನದಲ್ಲಿ ಯಾರೂ ಪ್ರಸ್ತಾಪಿಸಲಿಲ್ಲ. ಆಗ ಹೆಗಡೆ ಅವರೇ ಆಗಿನ ವಿರೋಧ ಪಕ್ಷದ ನಾಯಕ ಕೆ.ಎಚ್.ಪಾಟೀಲ್ ಅವರಿಗೆ ಒಂದು ಚೀಟಿ ಕಳಿಸಿ, ತಮ್ಮ ಮುಂಬೈ ಪ್ರವಾಸದ ಬಗ್ಗೆ ಪ್ರಸ್ತಾಪಿಸುವಂತೆ ಕೋರಿದ್ದರು. ಚೀಟಿ ಬಂದ ನಂತರ ಪಾಟೀಲರು ಹೆಗಡೆ ಮತ್ತು ಶರದ್ ಪವಾರ್ ಭೇಟಿ ಕುರಿತಂತೆ ಸದನದಲ್ಲಿ ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಈಗಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸದನದಲ್ಲಿ ಅವಿಶ್ವಾಸ ನಿಲುವಳಿ ಮಂಡಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಚೀಟಿ ಕೊಟ್ಟಿರಬಹುದೇ?

ಕಾಂಗ್ರೆಸ್ ಪಕ್ಷವು ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಹೌದು, ಯಡಿಯೂರಪ್ಪ ಅವರಿಗೆ ಶಕ್ತಿ ತುಂಬುವುದಕ್ಕಾಗಿಯೇ ಅವಿಶ್ವಾಸ ಮಂಡಿಸಿದ್ದೇವೆ’ ಎಂದು ಸಿದ್ದರಾಮಯ್ಯ ಅವರೇ ಸದನದಲ್ಲಿ ಹೇಳಿದ್ದಾರೆ. ‘ಪ್ರತೀ ಆರು ತಿಂಗಳಿಗೆ ಒಮ್ಮೆ ನೀವು ಅವಿಶ್ವಾಸ ಮಂಡಿಸುತ್ತಲೇ ಇರಿ. ನನಗೆ ವಿಶ್ವಾಸ ತುಂಬುತ್ತಲೇ ಇರಿ’ ಎಂದು ಯಡಿಯೂರಪ್ಪ ಅವರೂ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅದೇನೂ ರಹಸ್ಯ ಭೇಟಿಯಲ್ಲ. ಬಹಿರಂಗ ಭೇಟಿ. ಮಾತುಕತೆ ಮಾತ್ರ ರಹಸ್ಯ ಅಷ್ಟೆ.

ಇವೆಲ್ಲ ಮೇಲ್ನೋಟಕ್ಕೆ ಆಟದಂತೆ ಕಾಣುತ್ತವೆ. ಆದರೆ ಇವೆಲ್ಲ ಸಾಮಾನ್ಯ ಆಟ ಅಲ್ಲ. ರಾಜಕೀಯ ಎನ್ನುವುದೂ ಒಂದು ಆಟ, ನಿಜ. ಆದರೆ ಈ ಆಟವನ್ನು ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರೂ ಗಂಭೀರವಾಗಿ ಆಲೋಚಿಸಿಯೇ ಆಡಿದ್ದಾರೆ ಎನ್ನಿಸುತ್ತದೆ.

ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಬಹುಮತ ಇದೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಈ ಹಂತದಲ್ಲಿ ಸರ್ಕಾರವನ್ನು ಕೆಡವಿ ಬಿಡುತ್ತೇನೆ ಎಂಬ ವಿಶ್ವಾಸವೂ ಅವರಿಗೆ ಇರಲಿಲ್ಲ. ಅದರ ಅಗತ್ಯವೂ ಕಾಂಗ್ರೆಸ್‌ಗೆ ಇದ್ದ ಹಾಗೆ ಕಾಣುತ್ತಿಲ್ಲ. ಅವಿಶ್ವಾಸವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಇನ್ನೊಂದು ವಿರೋಧ ಪಕ್ಷವಾದ ಜೆಡಿಎಸ್ ಜೊತೆಗೆ ಚರ್ಚೆ ನಡೆಸಬೇಕಾಗಿತ್ತು. ಹಾಗೇನೂ ಮಾಡಿಲ್ಲ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡುವುದಕ್ಕೆ ಅವಿಶ್ವಾಸ ನಿಲುವಳಿಯನ್ನು ಬಳಸಿಕೊಳ್ಳುವುದು ಸಿದ್ದರಾಮಯ್ಯ ತಂತ್ರವಾಗಿತ್ತು ಎನ್ನುವುದು ಸ್ಪಷ್ಟ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಉದ್ದೇಶ ಇಷ್ಟೇ ಇತ್ತೆ ಎಂದು ಕೇಳಿದರೆ ಕಾಂಗ್ರೆಸ್ ವಲಯ ಇದನ್ನು ಅಲ್ಲಗಳೆಯುತ್ತದೆ. ಅವಿಶ್ವಾಸ ನಿಲುವಳಿ ಮಂಡಿಸಲು ಇನ್ನೂ ಗಂಭೀರವಾದ ಕಾರಣಗಳು ಇದ್ದವು ಎನ್ನುವುದನ್ನು ಈ ವಲಯ ಹೇಳುತ್ತದೆ. ಅದಕ್ಕೆ ಅದು ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಬೊಟ್ಟು ಮಾಡುತ್ತದೆ.

ಮೇಲ್ನೋಟಕ್ಕೆ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿ ಇರುವಂತೆ ಕಂಡರೂ ಒಳಗೊಳಗೆ ಅತೃಪ್ತಿ ಹೊಗೆಯಾಡುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಮುಖ್ಯಮಂತ್ರಿಯನ್ನು ಬದಲಾಯಿಸಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ. ‘ಮುಂದಿನ ಬಜೆಟ್ ಮಂಡನೆಗೆ ಅವಕಾಶ ನೀಡಿ. ಬಜೆಟ್ ಮಂಡಿಸಿ ನಾನು ಗೌರವಯುತವಾಗಿ ಅಧಿಕಾರದಿಂದ ಕೆಳಕ್ಕೆ ಇಳಿಯುತ್ತೇನೆ’ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಬಿಜೆಪಿಯ ಹಳೆ ಹುಲಿಗಳು ದೆಹಲಿಗೆ ತೆರಳಿ ಲಾಬಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಶಾಸಕರಿಗೆ ಸಿಗುತ್ತಿರುವ ಗೌರವ ಹಳೆಯ ತಲೆಗಳಿಗೆ ಸಿಗುತ್ತಿಲ್ಲ ಎಂಬ ನೋವು ಹಲವರನ್ನು ಕಾಡುತ್ತಿದೆ. ಈ ನಡುವೆ ಯಡಿಯೂರಪ್ಪ ಅವರನ್ನು ಈ ಬಾರಿ ಗೌರವಯುತವಾಗಿಯೇ ಬೀಳ್ಕೊಡುವ ಮನೋಭಾವ ಬಿಜೆಪಿ ಹೈಕಮಾಂಡ್‌ಗೆ ಇದೆ ಎಂಬ ಭಾವನೆಯೂ ರಾಜಕೀಯ ವಲಯದಲ್ಲಿ ಇದೆ.

ಈ ನಡುವೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಾಜರಾಗಿ ವೀಕ್ಷಣೆ ಮಾಡಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆಯೇ ಅವರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದಾರೆ. ಶಾಸಕರ ನಿಲುವು ಏನೆಂಬುದನ್ನು ತಿಳಿಯಲು ಪ್ರಯತ್ನಪಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಸಿದ್ಧರಾಗಿ ಯಡಿಯೂರಪ್ಪ ದೆಹಲಿಗೆ ಹೋದರೂ ಅವರಿಗೆ ಯಾವುದಕ್ಕೂ ಅವಕಾಶ ಸಿಗಲಿಲ್ಲ. ಈ ಎಲ್ಲ ಕಾರಣಗಳಿಗಾಗಿ ಬಿಜೆಪಿಯಲ್ಲಿ ಸಾಕಷ್ಟು ಅಂತಃಕಲಹ ಇದೆ, ಅಧಿವೇಶನದ ನಂತರ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

ಇದರ ಲಾಭವನ್ನು ಪಡೆಯಲು ಕಾಂಗ್ರೆಸ್ ಪಕ್ಷ ಯತ್ನಿಸಿತೇ ಎಂದು ಕೇಳಿದರೆ ‘ಗಡಿಬಿಡಿ ಮಾಡಬೇಡಿ ಸ್ವಾಮಿ. ಇದು ಅಷ್ಟು ಸುಲಭವಾಗಿಲ್ಲ. ಬಿಜೆಪಿಯಲ್ಲಿ ಕಲಹ ಇರುವುದು, ಭಿನ್ನಮತ ಇರುವುದು, ಯಡಿಯೂರಪ್ಪ ಮತ್ತು ಅವರ ಕುಟುಂಬದ ಬಗ್ಗೆ ಸಿಟ್ಟು ಇರುವುದು ಎಲ್ಲವೂ ನಿಜ. ಆದರೆ ಅದರ ಲಾಭವನ್ನು ವಿರೋಧ ಪಕ್ಷಗಳು ಪಡೆಯಲು ಬಿಜೆಪಿ ಬಿಡುವುದಿಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆಯಿಂದ ಇಳಿಸುವುದು ಬಿಜೆಪಿ ಹೈಕಮಾಂಡ್ ವಿನಾ ಮತ್ಯಾರೂ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅದು ಸಾಧ್ಯವೂ ಇಲ್ಲ. ಸದ್ಯಕ್ಕೆ ಅಗತ್ಯವೂ ಇಲ್ಲ’ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.

ಬಿಜೆಪಿ ನೇತೃತ್ವದ ಸರ್ಕಾರ ಬೀಳುವ ಅಗತ್ಯವಿಲ್ಲ ಎಂದಾದರೆ ಅವಿಶ್ವಾಸದ ಅಸ್ತ್ರ ಯಾಕೆ ಎಂದು ಕೇಳಿದರೆ ‘ಅದೇ ರಾಜಕೀಯದ ಗಮ್ಮತ್ತು. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಿದ್ದು ಹೋದರೆ ಇನ್ನೊಂದು ಸರ್ಕಾರ ಅಸ್ತಿತ್ವಕ್ಕೆ ಬರುವುದಿಲ್ಲ. ಯಾಕೆಂದರೆ ಯಡಿಯೂರಪ್ಪ ಅದಕ್ಕೆ ಅವಕಾಶ ಕೊಡುವುದಿಲ್ಲ. ಕುಮಾರಸ್ವಾಮಿ ಅವರೊಂದಿಗೆ ಸೇರಿ ಸರ್ಕಾರ ರಚಿಸುವಷ್ಟು ಶಾಸಕರ ಬಲವೂ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಮತ್ತೆ ಚುನಾವಣೆಗೆ ಹೋಗಬೇಕಾಗುತ್ತದೆ. ಈಗಲೇ ಚುನಾವಣೆ ಬಂದರೆ ಚುನಾವಣೆ ಎದುರಿಸುವ ಮನಃಸ್ಥಿತಿ ಕಾಂಗ್ರೆಸ್‌ಗಾಗಲೀ ಜೆಡಿಎಸ್‌ಗಾಗಲೀ ಇಲ್ಲ. ಮತ್ತೆ ಚುನಾವಣೆಗೆ ಹೋಗುವುದಕ್ಕಿಂತ ಯಡಿಯೂರಪ್ಪ ನೇತೃತ್ವದ ಸರ್ಕಾರವೇ ಮುಂದುವರಿಯುವುದು ಲೇಸು. ನಮ್ಮ ನಾಯಕರು ಈಗಾಗಲೇ ಹೇಳಿರುವಂತೆ ಯಡಿಯೂರಪ್ಪ ಅವರಿಗೆ ವಿಧಾನಸಭೆಯ ವಿಶ್ವಾಸ ಸಿಗಬೇಕು. ರಾಜ್ಯದ ಜನತೆಯ ವಿಶ್ವಾಸ ಸಿಗಬಾರದು. ಅದೇ ನಮ್ಮ ಉದ್ದೇಶ’ ಎಂದು ಉತ್ತರಿಸುತ್ತಾರೆ.

ಯಡಿಯೂರಪ್ಪ ಅವರಾಗಲಿ, ಕುಮಾರಸ್ವಾಮಿ ಅವರಾಗಲಿ ರಾಜಕೀಯವಾಗಿ ದಡ್ಡರಲ್ಲ. ಅವರು ಪರಸ್ಪರ ಭೇಟಿಯಾಗಬೇಕು ಎಂದಾದರೆ ರಹಸ್ಯವಾಗಿ ಭೇಟಿ ಮಾಡಬಹುದು. ಆದರೂ ಇಬ್ಬರೂ ಬಹಿರಂಗವಾಗಿಯೇ ಭೇಟಿ ಮಾಡಿದ್ದಾರೆ. ಎಲ್ಲರಿಗೂ ಗೊತ್ತಾಗುವ ಹಾಗೆಯೇ ಕೋಣೆಯ ಬಾಗಿಲು ಹಾಕಿಕೊಂಡು ಚರ್ಚೆ ನಡೆಸಿದ್ದಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುವಂತೆ ಕೂಡ ನೋಡಿಕೊಂಡಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರೆ ನಂಬುವವರು ಯಾರು?

ಕೊಂಚ ಹಿಂದಕ್ಕೆ ಹೋಗಿ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಏನಾಯ್ತು? ಮೂವರು ಮುಖ್ಯಮಂತ್ರಿಗಳು ಬಂದರೂ 2013ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಈಗ ಹರಿಬಿರಿಯಲ್ಲಿ ಚುನಾವಣೆಗೆ ಹೋಗಿ ಮತ್ತೆ ಅತಂತ್ರ ಸ್ಥಿತಿಯನ್ನು ಅನುಭವಿಸುವುದಕ್ಕಿಂತ 2023ರಲ್ಲಿಯೇ ಚುನಾವಣೆ ನಡೆಯಲಿ. ಅಲ್ಲಿಯವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ
ಯಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇದೆ. ಅವಸರವೇ ಅಪಘಾತಕ್ಕೆ ಕಾರಣವಲ್ಲವೇ? ಸರ್ಕಾರದ ಶ್ವಾಸ ಇರಲಿ. ವಿಶ್ವಾಸ ಮುಂದೆ ನೋಡಿಕೊಂಬ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು