ನಿಮಗೆ ಪವಾಡಗಳಲ್ಲಿ ನಂಬಿಕೆ ಇದೆಯಾ? ಇಲ್ಲದಿದ್ದರೆ ನಮ್ಮ ರಾಜಕಾರಣಿಗಳು ಆಗಾಗ ಪವಾಡ ಮಾಡಿ ನಂಬಿಕೆ ಹುಟ್ಟಿಸುತ್ತಾರೆ. ಇದಕ್ಕೆ ಬಹಳಷ್ಟು ಉದಾಹರಣೆಗಳನ್ನು ಕೊಡಬಹುದು. ಜಿಂದಾಲ್ ಉಕ್ಕು ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನು ನೀಡಲು ತೀರ್ಮಾನಿಸಿರುವುದು ತೀರಾ ಇತ್ತೀಚಿನ ಉದಾಹರಣೆ.
ಜಿಂದಾಲ್ ಕಂಪನಿಗೆ ಭೂಮಿ ಕೊಡುವ ಸಂಬಂಧದ ಮಾತುಕತೆ 2005ರಿಂದಲೂ ನಡೆಯುತ್ತಲೇ ಇದೆ. ಕಾಂಗ್ರೆಸ್ ಪಕ್ಷ ಭೂಮಿ ನೀಡಲು ಮುಂದಾದರೆ, ಆಗಿನ ವಿರೋಧ ಪಕ್ಷ ಬಿಜೆಪಿ ವಿರೋಧ ಮಾಡುತ್ತದೆ. ಬಿಜೆಪಿ ಆಡಳಿತಕ್ಕೆ ಬಂದಾಗ ಆ ಪಕ್ಷವೂ ಜಿಂದಾಲ್‌ಗೆ ಭೂಮಿ ಕೊಡಲು ನಿರ್ಧಾರ ಮಾಡುತ್ತದೆ. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತದೆ. ಆಡಳಿತ ಪಕ್ಷದಲ್ಲಿದ್ದಾಗ ಒಂದು ನಿಲುವು, ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ನಿಲುವು. ಹೀಗೆ ನಿಲುವು ಬದಲಾಗುವ ಪವಾಡ ನಡೆಯುತ್ತಲೇ ಇರುತ್ತದೆ.
ಬಡವರಿಗೆ ಸೂರು ಕಲ್ಪಿಸುವುದು, ರೈತರಿಗೆ ನೆರವು ನೀಡುವುದು, ಭೂಕುಸಿತದಿಂದ ತೊಂದರೆಗೆ ಒಳಗಾದವರಿಗೆ ನೆರವು ನೀಡುವುದು, ಪರಿಶಿಷ್ಟರಿಗೆ ಭೂಮಿ ನೀಡುವಂತಹ ವಿಷಯಗಳಲ್ಲಿ ಮಾತ್ರ ಇಂತಹ ಪವಾಡಗಳು ನಡೆಯುವುದೇ ಇಲ್ಲ. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್ ಕಂಪನಿಗೆ 2,000.58 ಎಕರೆ ಭೂಮಿ ಹಂಚಿಕೆಗೆ ಅನುಮೋದನೆ ನೀಡಲಾಗಿತ್ತು. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ 6 ವರ್ಷಕ್ಕೆ ಲೀಸ್ ಆಧಾರದಲ್ಲಿ ಕೊಡಲಾಗಿತ್ತು. 2007ರಲ್ಲಿ ಮತ್ತೆ 1,666.73 ಎಕರೆ ಹಂಚಿಕೆ ಮಾಡಲಾಗಿತ್ತು. 2015ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶುದ್ಧ ಕ್ರಯಪತ್ರ ಮಾಡಿಕೊಡುವ ವಿಚಾರ ಸಂಪುಟದ ಮುಂದೆ ಬಂದಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದಾಗ 2019ರಲ್ಲಿ ಪ್ರತಿ ಎಕರೆಗೆ ₹1.22 ಲಕ್ಷದಂತೆ 3,667 ಎಕರೆ ಮಾರಾಟ ಮಾಡಲು ಒಪ್ಪಿಗೆ ನೀಡಲಾಗಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೇ ಅಲ್ಲದೆ ‘ಕುಮಾರಸ್ವಾಮಿ ಲಂಚ ಪಡೆದಿದ್ದಾರೆ’ ಎಂದೂ ಆರೋಪಿಸಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಅವರ ನಿಲುವು ಬದಲಾಯಿತು. 2021ರಲ್ಲಿ ಕಂಪನಿಗೆ ಭೂಮಿ ಮಾರಾಟ ಮಾಡಲು ಅವರು ಒಪ್ಪಿಗೆ ಸೂಚಿಸಿದ್ದರು.
ಬಿಜೆಪಿಯ ಅರವಿಂದ ಬೆಲ್ಲದ ಆಗಲೂ ಇದನ್ನು ವಿರೋಧಿಸಿದ್ದರು, ಈಗಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಂದಾಲ್ ಕಂಪನಿಗೆ ಭೂಮಿ ನೀಡಲು ಬಿಜೆಪಿ ನೇತೃತ್ವದ ಸರ್ಕಾರ ಮುಂದಾದಾಗ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವರಲ್ಲಿ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ಪ್ರಮುಖರು. ಈಗ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕಾನೂನು ಮಂತ್ರಿ. ಜಿಂದಾಲ್ ಕಂಪನಿಗೆ ಭೂಮಿ ನೀಡುವ ಪ್ರಸ್ತಾಪ ಸಚಿವ ಸಂಪುಟದ ಮುಂದೆ ಬಂದಾಗಲೂ ಅವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಕಂಪನಿಗೆ ಭೂಮಿ ನೀಡಲು ಸಂಪುಟ ಒಪ್ಪಿಗೆ ನೀಡಿತು. ಆ ನಿರ್ಧಾರವನ್ನು ಬಹಿರಂಗವಾಗಿ ಪ್ರಕಟಿಸುವ ಇಕ್ಕಟ್ಟಿಗೆ ಎಚ್.ಕೆ.ಪಾಟೀಲರು ಸಿಲುಕಬೇಕಾಯಿತು.
ಪವಾಡ ನಡೆಯುವುದು ನಿಲುವು ಬದಲಾವಣೆಯಲ್ಲಿ ಮಾತ್ರ ಅಲ್ಲ. ಭೂಮಿಯ ಬೆಲೆ ನಿಗದಿಯಲ್ಲಿಯೂ ಪವಾಡ ನಡೆಯುತ್ತದೆ. ರಾಜ್ಯ ಸರ್ಕಾರ ಈಗ ಒಂದಷ್ಟು ಭೂಮಿಗೆ ಒಂದು ಎಕರೆಗೆ ₹ 1.22 ಲಕ್ಷ ಮತ್ತು ಇನ್ನುಳಿದ ಭೂಮಿಗೆ ₹ 1.50 ಲಕ್ಷದಂತೆ ಕಂಪನಿಗೆ ನೀಡಲು ಮುಂದಾಗಿದೆ. ಜಿಂದಾಲ್ ಉಕ್ಕು ಕಂಪನಿಗೆ ನೀಡಲು ಉದ್ದೇಶಿಸಿರುವ ಭೂ ಪ್ರದೇಶದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶವೂ ಇದೆ. ಅಲ್ಲಿ ಒಂದು ಎಕರೆ ಭೂಮಿಯ ಬೆಲೆ ₹ 3 ಕೋಟಿ ಇದೆ ಅನ್ನುತ್ತಾರೆ ಅಲ್ಲಿನ ರೈತರು. ಉಳಿದ ಭೂಮಿಗೆ ಎಕರೆಗೆ ₹ 50 ಲಕ್ಷದಿಂದ ₹ 1.25 ಕೋಟಿ ಮಾರುಕಟ್ಟೆ ಬೆಲೆ ಇದೆ ಎಂದೂ ಅವರು ಹೇಳುತ್ತಾರೆ. ಅದೇ ಭೂಮಿಯನ್ನು ಇಷ್ಟು ಕಡಿಮೆ ಬೆಲೆಗೆ ಕಂಪನಿಗೆ ನೀಡಲು ನಿರ್ಧರಿಸುವ ಪವಾಡವೂ ಇಲ್ಲಿ ನಡೆಯುತ್ತದೆ.
ಕೈಗಾರಿಕೆಗಳಿಗೆ ಭೂಮಿ ನೀಡುವುದು ತಪ್ಪಲ್ಲ. ಉಚಿತವಾಗಿಯೇ ನೀಡಲಿ, ಅದೂ ಪರವಾಗಿಲ್ಲ. ಆದರೆ ಹೀಗೆ ಭೂಮಿ ನೀಡುವುದರಿಂದ ಕರ್ನಾಟಕದ ಜನರಿಗೆ ಏನೆಲ್ಲ ಲಾಭವಾಗುತ್ತದೆ ಎನ್ನುವುದನ್ನು ಸರ್ಕಾರ ಬಹಿರಂಗವಾಗಿ ಹೇಳಬೇಕು. ರಾಜ್ಯದ ಹಿತವನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಆಗ ಜನ ಕೂಡ ಬೆಂಬಲ ನೀಡುತ್ತಾರೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ 1971– 72ರಲ್ಲಿ ಸ್ವಾಧೀನ
ಪಡಿಸಿಕೊಂಡ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂಬ ಆರೋಪ ಇದೆ. ಅಲ್ಲಿನ ಜನರಿಗೆ ಉದ್ಯೋಗ ಕೂಡ ಸಿಕ್ಕಿಲ್ಲ. ಈಗ ಸರ್ಕಾರಕ್ಕೆ ನಷ್ಟ ಮಾಡಿಕೊಂಡು ಕಂಪನಿಗೆ ಭೂಮಿ ಕೊಡುವ ಜರೂರತ್ತು ಏನಿದೆ ಎಂಬ ಅನ್ನದಾತನ ಪ್ರಶ್ನೆಯಲ್ಲಿ ಅರ್ಥವಿದೆ.
ಇಷ್ಟು ಪ್ರಮಾಣದ ಭೂಮಿಯು ಕಂಪನಿಗೆ ಯಾಕೆ ಬೇಕು ಎನ್ನುವ ಪ್ರಶ್ನೆಗೂ ಸರ್ಕಾರ ಉತ್ತರ ಹೇಳಬೇಕಾ
ಗುತ್ತದೆ. ಉತ್ಪಾದನಾ ಸಾಮರ್ಥ್ಯ, ಉದ್ಯೋಗ ಸೃಷ್ಟಿ, ಕಂಪನಿಗೆ ನೀಡಲಾಗುವ ಭೂಮಿಯ ಪ್ರಮಾಣ ಎಲ್ಲವೂ ತಾಳೆಯಾಗಬೇಕು. ಅಂದಾಗ ಮಾತ್ರ ಭೂಮಿ ಕೊಡುವುದರಲ್ಲಿ ಅರ್ಥವಿದೆ. ನ್ಯಾಯಾಲಯದ ಆದೇಶದಂತೆ ಶುದ್ಧ ಕ್ರಯಪತ್ರ ಮಾಡಿಕೊಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದಾಗ ಸರ್ಕಾರ ಸೂಕ್ತ ದಾಖಲೆಗಳನ್ನು ನೀಡಿಲ್ಲ ಮತ್ತು ವಾದವನ್ನೂ ನಡೆಸಿಲ್ಲ ಎಂಬ ಆರೋಪವೂ ಇದೆ. ಸರ್ಕಾರದ ವಿರುದ್ಧ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಶುದ್ಧ ಕ್ರಯಪತ್ರ ಮಾಡಿಕೊಡುವ ನಿರ್ಧಾರದ ಪುನರ್‌ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದ ಸರ್ಕಾರ, ಸಂಬಂಧಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ. ಈ ಎಲ್ಲದಕ್ಕೂ ಸರ್ಕಾರ ಉತ್ತರಿಸಬೇಕಾಗುತ್ತದೆ.
ಇದನ್ನೆಲ್ಲಾ ನೋಡಿದಾಗ ಒಂದು ಕತೆ ನೆನಪಾಗುತ್ತದೆ. ಒಬ್ಬ ರಾಜ ಇದ್ದನಂತೆ. ಅವನಿಗೆ ಅಹಂಕಾರ ಇತ್ತು. ಅಲ್ಲದೆ ಅವನಿಗೆ ಹೊಟ್ಟೆಕಿಚ್ಚು ಜಾಸ್ತಿ. ಯಾರಾದರೂ ಇತರರನ್ನು ಹೊಗಳಿದರೆ ಅವನಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಒಂದು ದಿನ ಅವನಿಗೆ ಯಾರೋ ಒಂದು ಆನೆಯನ್ನು ಉಡುಗೊರೆಯಾಗಿ ನೀಡಿದರು. ಅದು ಉತ್ಕೃಷ್ಟವಾದ ಆನೆ. ಬೆಳೆಯುತ್ತಾ ಬೆಳೆಯುತ್ತಾ ಆನೆಯ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಅದನ್ನು ಸಹಿಸಲು ರಾಜನಿಗೆ ಸಾಧ್ಯವಾಗಲಿಲ್ಲ.
ಒಂದು ದಿನ ರಾಜ ಮಾವುತನಿಗೆ ‘ಇದು ಅತ್ಯಂತ ಶ್ರೇಷ್ಠವಾದ ಆನೆಯೇ?’ ಎಂದು ಕೇಳಿದ. ‘ಹೌದು ಸ್ವಾಮಿ, ಇಂತಹ ಆನೆ ವಿಶ್ವದಲ್ಲೇ ಇಲ್ಲ’ ಎಂದ ಮಾವುತ. ‘ಸರಿ ಹಾಗಾದರೆ ಅದನ್ನು ನಾಳೆ ಬೆಟ್ಟದ ತುದಿಗೆ ಕರೆದುಕೊಂಡು ಬಾ’ ಎಂದು ಹೇಳಿದ. ಅದರಂತೆ ಮಾರನೇ ದಿನ ಬೆಟ್ಟದ ತುದಿಗೆ ಆನೆಯನ್ನು ಕರೆದುಕೊಂಡು ಹೋಗಲಾಯಿತು. ಆನೆಗೆ ‘ಒಂದು ಕಾಲನ್ನು ಮೇಲಕ್ಕೆ ಎತ್ತು’ ಎಂದ ರಾಜ. ಆನೆ ಕಾಲು ಮೇಲಕ್ಕೆ ಎತ್ತಿತು. ‘ಎರಡು ಕಾಲನ್ನು ಮೇಲಕ್ಕೆ ಎತ್ತು’ ಎಂದ ರಾಜ. ಆನೆ ಹಾಗೆಯೇ ಮಾಡಿತು. ‘ಈಗ ಬೆಟ್ಟದಿಂದ ಕೆಳಕ್ಕೆ ಹಾರು’ ಎಂದು ಆನೆಗೆ ಆದೇಶಿಸಿದ ರಾಜ. ಆನೆಗೆ ಸಿಟ್ಟು ಬಂತು. ತಿರುಗಿ ಬಂದು ರಾಜನನ್ನು ಸೊಂಡಿಲಿನಲ್ಲಿ ಸುತ್ತಿಕೊಂಡು ಬೆಟ್ಟದಿಂದ ಕೆಳಕ್ಕೆ ಎತ್ತಿ ಬಿಸಾಕಿತು. ಮಂತ್ರಿಯನ್ನು ಕರೆದು ತಂದು ಸಿಂಹಾಸನದ ಮೇಲೆ ಕುಳ್ಳಿರಿಸಿತು.
ಕರ್ನಾಟಕದಲ್ಲಿಯೂ ಹೀಗೆಯೇ ಆಗಿದೆ. ಮತದಾರ ಎಂಬ ಆನೆ ಪ್ರತಿ ಬಾರಿಯೂ ರಾಜನನ್ನು ಎತ್ತಿ ಕೆಳಕ್ಕೆ ಹಾಕುತ್ತದೆ. ಮತ್ತೊಬ್ಬನನ್ನು ತಂದು ಸಿಂಹಾಸನದ ಮೇಲೆ ಕುಳ್ಳಿರಿಸುತ್ತದೆ. ಆದರೆ ಹೊಸದಾಗಿ ಬಂದ ರಾಜ ಮಾತ್ರ ಹಿಂದಿನ ರಾಜನಂತೆಯೇ ನಡೆದುಕೊಳ್ಳುತ್ತಾನೆ. ಕರ್ಮ ಕರ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.