ಶುಕ್ರವಾರ, ಜನವರಿ 27, 2023
20 °C

ಬೆರಗಿನ ಬೆಳಕು- ಗುರುರಾಜ ಕರಜಗಿ ಅಂಕಣ| ಸಹಜ ಸರ್ವಾರ್ಪಣದ ಶಬರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತನ್ನ ರುಚಿ ರಾಮರುಚಿ, ತನ ಸಂತುಷ್ಟಿ ಪರಿ - |
ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ||
ಎನ್ನುವಾ ಸಾಜದಾ ದೈವಾತ್ಮಭಾವದಲಿ |
ಧನ್ಯಳಾದಳು ಶಬರಿ – ಮಂಕುತಿಮ್ಮ || 765 ||

ಪದ-ಅರ್ಥ: ಪರಿಪೂರ್ಣವಪ್ಪುದು=ಪರಿಪೂರ್ಣವಾಗುವುದು, ರಾಮಸಂತುಷ್ಟಿಯಿಂದೆಂ=ರಾಮ+ಸಂತುಷ್ಟಿ(ತೃಪ್ತಿ)+ಇಂದೆ,
ಸಾಜದಾ=ಸಹಜವಾದ.

ವಾಚ್ಯಾರ್ಥ: ರಾಮನ ರುಚಿಯೇ ತನ್ನ ರುಚಿ, ತನಗೆ ಸಂಪೂರ್ಣ ತೃಪ್ತಿ ದೊರಕುವುದು ರಾಮನ ಸಂತೃಪ್ತಿಯಿಂದ ಎನ್ನುವ ಸಹಜವಾದ ದೈವಾತ್ಮಭಾವವನ್ನು ಹೊಂದಿ ಶಬರಿ ಧನ್ಯಳಾದಳು.
ವಿವರಣೆ: ನಮ್ಮ ದಾರ್ಶನಿಕರು ಕಂಡುಕೊಂಡ ಭಕ್ತಿಯ ವಿಧಾನಗಳಲ್ಲಿ ಒಂಭತ್ತು ವಿಧ. ಅವುಗಳಲ್ಲಿ ಅತ್ಯಂತ ಎತ್ತರದ್ದು ಆತ್ಮನಿವೇದನೆ. ಅದು ಸಂಪೂರ್ಣ ಸರ್ವಾರ್ಪಣ ಬುದ್ಧಿ. ಗೋಪಿಯರು ಕೃಷ್ಣನಿಗೆ ತೋರಿದುದು ಅದೇ ಸರ್ವಾರ್ಪಣ. ಅವನ ದರ್ಶನವಿಲ್ಲದೆ ಒಂದು ಕ್ಷಣವೂ ಇರಲಾರರು. ಅವನ ಕೊಳಲ ದನಿ ಕೇಳಿ ತಮ್ಮ ಪರಿವಾರವನ್ನೆಲ್ಲ ತೊರೆದು ಬಂದವರವರು. ಕನಕದಾಸರದೂ ಅದೇ ಪ್ರಶ್ನೆ, “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ?”. ಇಲ್ಲಿ ದ್ವಂದ್ವವಿಲ್ಲ. ಲೋಕದ ಬೆರಗು ಅವರನ್ನು ಸೆಳೆಯಲಿಲ್ಲ, ಭಗವಂತ ಕೊಟ್ಟ ಅನುಗ್ರಹವೇ ನಮಗೆ ದೊರೆತ ಜ್ಞಾನ ಮತ್ತು ಭಾಗ್ಯ. ನಮ್ಮ ಜೀವನದ ಉಸಿರೇ ಅವನ ಕೃಪೆ. ಅವನಿಲ್ಲದೆ ಜೀವನ ಸಾಧ್ಯವೇ? ಇದನ್ನು ತಮ್ಮ ಬದುಕಿನಲ್ಲಿ ತೋರಿಸಿದವರು ಗೋಪಿಯರು, ಬಲಿ ಮಹಾರಾಜ, ಲಕ್ಷ್ಮಣ, ಭರತ, ಹನುಮಂತ ಇವರೆಲ್ಲ. ಮಹಾದೇವಿಯಕ್ಕನ ಸರ್ವಾರ್ಪಣ, ಶರಣಾಗತಿ ಅದ್ಭುತ.

ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು,
ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ.
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ.

 ಆಪತ್ತಿಗೆ ಸಖಿಯರನಾರನೂ ಕಾಣೆ. ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ, ಎನಗೆ ನೀ ಕರುಣಿಸಾ, ಚೆನ್ನ ಮಲ್ಲಿಕಾರ್ಜುನಾ.

ತನ್ನ ಬದುಕನ್ನು ಸಮರ್ಪಿಸಿ ಧನ್ಯತೆಯನ್ನು ಪಡೆದವಳು ಅಕ್ಕ. ಈ ಕಗ್ಗ ಮತ್ತೊಬ್ಬ ಅಂಥ ಆತ್ಮನಿವೇದನೆ ಮಾಡಿದ ಚೈತನ್ಯದ ಬಗ್ಗೆ ತಿಳಿಸುತ್ತದೆ. ಎಲ್ಲೋ ಕಿಷ್ಕಿಂಧೆಯ ಕಾಡಿನಲ್ಲಿದ್ದವಳು ಶಬರಿ. ಆಕೆಯ ಪ್ರಾರ್ಥನೆ ದೂರದ ಆಯೋಧ್ಯೆಯ ರಾಜಕುಮಾರ ರಾಮನಿಗೆ. ಆದರೆ ಅವಳ ಭಕ್ತಿಯ ಸೆಳೆತ ಆ ಸುಕುಮಾರ ರಾಜಕುಮಾರನನ್ನು ಹೆಡಮುರಿಗೆ ಕಟ್ಟಿ ಕಿಷ್ಕಿಂಧೆಗೆ ಎಳೆದುಕೊಂಡು ಬರುತ್ತದೆ. ಆತ್ಮನಿವೇದನದ ಶಕ್ತಿಯನ್ನು ಪ್ರಸಿದ್ಧಗೊಳಿಸುತ್ತದೆ. ರಾಮನ ರುಚಿಯೇ ತನಗೆ ರುಚಿ. ಅವನ ಸಂತುಷ್ಟಿಯೇ ತನ್ನ ತೃಪ್ತಿ ಎಂದು ತನ್ನ ಇಡೀ ಬದುಕನ್ನು ರಾಮದರ್ಶನಕ್ಕೆ ಮುಡಿಪಿಟ್ಟವಳು ಶಬರಿ. ಅವಳದು ಸಹಜವಾದ ದೈವಭಕ್ತಿ. ಅದಕ್ಕೆ ಅಪೇಕ್ಷೆ ಇಲ್ಲ. ನಿರಪೇಕ್ಷವಾದ ಭಕ್ತಿ ಸದಾ ಮಂಗಳವನ್ನೇ ಮಾಡುತ್ತದೆ. ಅದಕ್ಕೇ ಶಬರಿ ರಾಮದರ್ಶನವಾದ ಮೇಲೆ ಇನ್ನು ಭೌತಿಕ ದೇಹಕ್ಕೆ ಯಾವ ಬೆಲೆಯೂ ಇಲ್ಲ ಎಂಬಂತೆ ದೇಹ ತೊರೆದು ಹೋಗಿ ಬಿಟ್ಟಳು, ಶಾಶ್ವತಳಾದಳು. ನಿರಪೇಕ್ಷ, ಸರ್ವಾರ್ಪಣ ಬಹುದೊಡ್ಡ ಸಾಧನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು