ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ ಮತ್ತು ಎಚ್ಚರಿಕೆ

Last Updated 19 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |
ಸಂದಿಹುದು ಚಿರನವತೆಯಶ್ವತ್ಥಮರಕೆ ||
ಎಂದೆಂದುಮಂತಿರುವುದೀ ವಿಶ್ವವೃಕ್ಷವದ |
ರೊಂದು ರೆಂಬೆಯೊ ನೀನು – ಮಂಕುತಿಮ್ಮ || 252 ||

ಪದ-ಅರ್ಥ: ಬಾಡಲಿನ್ನೊಂದು=ಬಾಡಲು+ಇನ್ನೊಂದು, ಸಂದಿಹುದು=ದೊರೆತಿಹುದು, ಚಿರನವತೆಯಶ್ವತ್ಥಮರಕೆ=ಚಿರ(ಶಾಶ್ವತವಾದ)+ನವತೆ(ಹೊಸತು)+ಅಶ್ವತ್ಥ ಮರಕೆ, ಎಂದೆಂದುಮಂತಿರುವುದೀ=ಎಂದೆಂದು+ಅಂತು+ಇರುವುದು+ಈ,

ವಾಚ್ಯಾರ್ಥ: ಒಂದು ಕೊಂಬೆ ಬಾಡುವಾಗ ಮತ್ತೊಂದು ಕೊಂಬೆ ಚಿಗುರುತ್ತದೆ. ಹೀಗೆ ಈ ಅಶ್ವತ್ಥಮರಕ್ಕೆ ಹೊಸತನ ಬಂದಿದ್ದು, ಶಾಶ್ವತವಾಗಿದೆ. ಎಂದೆಂದೂ ಹೀಗೆಯೇ ಇರುವ ವಿಶ್ವವೆಂಬ ಅಶ್ವತ್ಥಮರದ ಒಂದು ಕೊಂಬೆ ನೀನು.

ವಿವರಣೆ: ಅಶ್ವತ್ಥವೃಕ್ಷದ ಬಗ್ಗೆ ಕಠೋಪನಿಷತ್ತಿನಲ್ಲಿ ಸುಂದರವಾದ ಮಾತಿದೆ. ಯಮ ಈ ಪ್ರಪಂಚವನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುತ್ತಾನೆ. ಈ ಮರಕ್ಕೆ ಮುಖ್ಯವಾಗಿ ನಾಲ್ಕು ಗುಣಗಳು. ಇವು ಪ್ರಪಂಚಕ್ಕೂ, ಅಶ್ವತ್ಥಕ್ಕೂ ಸಮಾನವಾಗಿರುವುವು.

ಬಹುಕಾಲಿತ್ವ: ಮರವಾಗಲಿ, ಪ್ರಪಂಚವಾಗಲಿ, ಬಹುದೀರ್ಘಕಾಲ ಇರುವಂಥವು. ಒಂದು ಕಡೆ ಬಾಡಿದರೆ ಮತ್ತೊಂದೆಡೆ ಚಿಗುರುತ್ತದೆ. ಎಲ್ಲೊ ಒಂದು ವೈರಸ್ ಬಂದೋ, ಯಾವುದೋ ನಿಸರ್ಗದ ಪ್ರಕೋಪದಿಂದಲೇ ಸಹಸ್ರಾರು ಜನ ಸಾಯುವುದನ್ನು ಕೇಳಿದ್ದೇವೆ. ಇದು ಈ ವಿಶ್ವವೆಂಬ ಅಶ್ವತ್ಥವೃಕ್ಷದ ಒಂದು ಕೊಂಬೆ ಬಾಡಿದಂತೆ. ಆದರೆ ವಿಶ್ವ ಕೊನೆಯಾಗಲಿಲ್ಲ, ಮತ್ತೆಲ್ಲೋ ಅದು ಚಿಗುರುತ್ತಲೇ ಇದೆ. ಮನುಷ್ಯ ಜೀವನ, ಸಂತಾನ ಪರಂಪರೆಯಲ್ಲಿ ದೀರ್ಘಜೀವಿ.

ಬಹುಗ್ರಂಥಿಲತ್ವ: ಈ ಮರದ ಕೊಂಬೆಗಳೂ, ಬಿಳಲುಗಳೂ ಗಂಟುಗಂಟಾಗಿ, ಜಡೆಜಡೆಯಾಗಿ, ಸೊಟ್ಟಸೊಟ್ಟಗಾಗಿ ಎಲ್ಲೆಲ್ಲಿಯೋ ಸಿಕ್ಕಿಕೊಂಡಂತಿವೆ. ಅಂತೆಯೇ ಪ್ರಪಂಚದ ತೊಡಕುಗಳು, ಸಿಕ್ಕುಗಳು ಬಿಡಿಸಲಾರದಂತೆ ಹೆಣೆದುಕೊಂಡಿವೆ. ಇವೆಲ್ಲ ಋಣಾನುಬಂಧದ ಎಳೆತಗಳು.

ಬಹುವಿಸ್ತ್ರತತ್ವ: ಮರದ ಕೊಂಬೆ, ಕವಲುಗಳು, ಬಿಳಲುಗಳು, ಬೇರುಗಳು ಬಹುದೂರ ಹರಡಿರುತ್ತವೆ. ಅದರಂತೆಯೇ ಸಂಸಾರದ ಶಾಖೆಗಳು, ಮನುಷ್ಯನ ಬದುಕು ಎಲ್ಲೆಡೆಗೆ ವಿಸ್ತಾರವಾಗಿ ಹರಡಿಕೊಂಡಿದೆ.

ಬಹುಪೋಷಕತ್ವ: ಈ ಬೃಹತ್ ಮರ ಅನೇಕ ಪಕ್ಷಿ, ಕ್ರಿಮಿ, ಕೀಟಗಳಿಗೆ ಆಶ್ರಯವಾಗಿದೆ. ಅಂತೆಯೇ ಈ ಪ್ರಪಂಚ ಕೂಡ ಮನುಷ್ಯರನ್ನು ಒಳಗೊಂಡಂತೆ ಲಕ್ಷಾಂತರ ಜೀವರಾಶಿಗಳಿಗೆ ನೆಲೆಯಾಗಿದೆ, ಪೋಷಕವಾಗಿದೆ.

ಹೀಗೆ ಅಶ್ವತ್ಥವೃಕ್ಷ ಸದಾ ಕಾಲ ನವ, ನವೀನತೆಯಿಂದ ಕೂಡಿರುವುದಲ್ಲದೆ ಚಿರಾಯುವೂ ಆಗಿದೆ. ಅದರಂತೆಯೇ ಈ ವಿಶ್ವವೃಕ್ಷವೂ ಸದಾಕಾಲ ಹೊಸದಾಗುತ್ತ, ಬದಲಾಯಿಸುತ್ತ ಇದ್ದರೂ ಕೋಟಿ ವರ್ಷಗಳಿಂದ ಬದುಕಿ ಚಿರಂಜೀವಿಯಾಗಿದೆ. ಈ ಕಗ್ಗ ನಮಗೆ ಎರಡು ವಿಷಯಗಳನ್ನು ತಿಳಿಸುತ್ತದೆ.

ನೀನು ಒಬ್ಬ ಮನುಷ್ಯ ಈ ವಿಶ್ವ ವೃಕ್ಷದ ಒಂದು ಕೊಂಬೆ ಇದ್ದ ಹಾಗೆ. ಅಂದರೆ ಈ ಅಪರಂಪಾರವಾದ ವಿಶ್ವದಲ್ಲಿ ನಿನಗೂ ಒಂದು ಪ್ರಮುಖವಾದ ಸ್ಥಾನವಿದೆ. ನಿನ್ನ ಬದುಕು ವ್ಯರ್ಥವಲ್ಲ, ಅಪ್ರಯೋಜಕವಲ್ಲ. ಇಲ್ಲಿ ಎಚ್ಚರಿಕೆಯೂ ಇದೆ. ನೀನೇ ವಿಶ್ವದ ಕೇಂದ್ರವೆಂಬಂತೆ, ನೀನಿಲ್ಲದೆ ಪ್ರಪಂಚ ನಡೆಯದೆಂಬ ಜಂಬ ಬೇಡ. ಈ ವಿಶ್ವವೃಕ್ಷದಲ್ಲಿ ನೀನು ಒಂದು ಕೊಂಬೆ ಮಾತ್ರ. ಈ ವಿಶ್ವದಲ್ಲಿ ನನ್ನ ಅಲ್ಪತೆಯನ್ನೂ, ನನ್ನ ಪ್ರಾಮುಖ್ಯತೆಯನ್ನು ಏಕಕಾಲದಲ್ಲಿ ತೋರಿ ಧೈರ್ಯನೀಡುವ, ಎಚ್ಚರಿಸುವ ಈ ಕಗ್ಗ ತುಂಬ ಮನೋಜ್ಞವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT