ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ರಾಜನ ಪುರೋಹಿತನ ಮಗನಾಗಿ ಹುಟ್ಟಿದ್ದ. ಅವನು ಹುಟ್ಟಿದ ದಿನವೇ ರಾಜನಿಗೂ ಮಗ ಹುಟ್ಟಿದ್ದ. ಇಬ್ಬರೂ ಜೊತೆಗೇ ತಕ್ಷಶಿಲೆಗೆ ಹೋಗಿ ಶಿಕ್ಷಣ ಪಡೆದು ಬಂದರು.

ರಾಜ ಇಬ್ಬರಿಗೂ ಅದೇ ರೀತಿಯ ಪ್ರೀತಿ ತೋರುತ್ತಿದ್ದ. ಮುಂದೆ ರಾಜನ ಮರಣಾನಂತರ ರಾಜಕುಮಾರ ರಾಜನಾದ. ತನ್ನ ಪರಮಮಿತ್ರನಾದ ಪುರೋಹಿತನ ಮಗನನ್ನು ಪುರೋಹಿತನನ್ನಾಗಿ ನಿಯಮಿಸಿ ಸಾಕಷ್ಟು ಧನ-ಕನಕಗಳನ್ನು ನೀಡಿ ತೃಪ್ತಿಪಡಿಸಿದ. ಒಂದು ದಿನ ರಾಜ ಮತ್ತು ಪುರೋಹಿತರಿಬ್ಬರೂ ಪಟ್ಟದಾನೆಯ ಮೇಲೆ ಕುಳಿತುಕೊಂಡು ನಗರ ಪ್ರದಕ್ಷಿಣೆ ಮಾಡುತ್ತಿದ್ದರು. ಅರಮನೆಯ ಕಿಟಕಿಯಲ್ಲಿ ನಿಂತು ಇದನ್ನು ನೋಡುತ್ತಿದ್ದ ರಾಜನ ತಾಯಿ ಹಿಂದೆ ಕುಳಿತಿದ್ದ ಪುರೋಹಿತನನ್ನು ನೋಡಿದಳು. ಅದೇನು ವಿಷಗಳಿಗೆಯೋ ಅವನಲ್ಲಿ ಆಕರ್ಷಿತಳಾಗಿಬಿಟ್ಟಳು. ‘ಅವನು ನನಗೆ ಸಿಗದಿದ್ದರೆ ಊಟ-ನಿದ್ರೆ ಬಿಟ್ಟು ಸತ್ತು ಹೋಗುತ್ತೇನೆ’ ಎಂದು ತೀರ್ಮಾನಿಸಿ ತನ್ನ ಕೋಣೆಗೆ ಬಂದು ಮಲಗಿಬಿಟ್ಟಳು.

ರಾಜ ಅರಮನೆಗೆ ಬಂದು ತಾಯಿಯನ್ನು ಕಾಣಲಾರದೆ, ಆಕೆಯನ್ನು ಕರೆದುಕೊಂಡು ಬರುವಂತೆ ತನ್ನ ಹೆಂಡತಿಗೆ ಹೇಳಿದ. ರಾಣಿ ಹೋಗಿ ರಾಜಮಾತೆಯನ್ನು ಮಾತನಾಡಿಸಿದಾಗ ಆಕೆ ತನ್ನ ಇಚ್ಛೆಯನ್ನು ಪ್ರಕಟಿಸಿದಾಗ ಆಕೆಗೆ ಆಘಾತವಾದಂತಾಯಿತು. ಮರಳಿ ಬಂದು ರಾಜನಿಗೆ ಈ ವಿಷಯ ತಿಳಿಸಿದಳು. ಆತ ಕೋಪ ಮಾಡಿಕೊಳ್ಳದೆ, ‘ತಾಯಿಗೆ ಅದೇ ಅಪೇಕ್ಷೆಯಾಗಿದ್ದರೆ, ನಾಳೆಯೇ ಪುರೋಹಿತನನ್ನು ರಾಜನನ್ನಾಗಿ ಮಾಡಿ ಆಕೆಯನ್ನು ರಾಣಿಯನ್ನಾಗಿ ಘೋಷಿಸುತ್ತೇನೆ. ನಾನು ಉಪರಾಜನಾಗಿ ಕೆಲಸ ಮಾಡುತ್ತೇನೆ’ ಎಂದು ತೀರ್ಮಾನಿಸಿ ಮರುದಿನವೇ ಹಾಗೆ ಮಾಡಿಬಿಟ್ಟ.

ಪುರೋಹಿತನಿಗೆ ಧರ್ಮಸಂಕಟ. ರಾಜನ ತಾಯಿಯನ್ನು ತನ್ನ ತಾಯಿಯಂತೆಯೇ ಕಂಡವನು, ಅದೇ ಗೌರವ ತೋರಿದವನು. ಈಗ ಆಕೆಯೊಡನೆ ಬದುಕುವುದು ಹೇಗೆ? ಆತ ಮೊದಲಿನಂತೆಯೇ ಆಕೆಯೊಂದಿಗೆ ಮರ್ಯಾದೆಯೊಂದಿಗೇ ವ್ಯವಹರಿಸುತ್ತಿದ್ದ. ಇದು ಆಕೆಗೆ ತೃಪ್ತಿ ತರಲಿಲ್ಲ. ಈ ಜೀವನವನ್ನು ಆಕೆ ಬಯಸಿರಲಿಲ್ಲ. ಗಂಡನಾದವನು ಮಗನಂತೆ ವರ್ತಿಸುವುದು ಆಕೆಗೆ ಸರಿ ಎನ್ನಿಸಲಿಲ್ಲ, ಬಹುಶಃ ಅವನಿಗೆ ತಾನು ವೃದ್ಧೆ ಎಂಬ ಭಾವನೆ ಇರುವುದರಿಂದ ಹೀಗೆ ಆಗುತ್ತಿದೆಯೇ? ತನ್ನ ತಲೆಯಲ್ಲಿ ಕೂದಲು ಬೆಳ್ಳಗಾಗುತ್ತಿವೆ. ಅವನ ತಲೆಯಲ್ಲೂ ಬಿಳಿಕೂದಲು ಇದೆ ಎಂದು ಹೇಳಿ ತೋರಿಸಿದರೆ ಅವನೂ ತನಗೂ ನನ್ನಷ್ಟೇ ವಯಸ್ಸಾಯಿತು ಎಂದುಕೊಂಡು ರಮಿಸಬಹುದು ಎಂದು ಯೋಚಿಸಿದಳು.

ಮರುದಿನ ತನ್ನ ತಲೆಯಲ್ಲಿಯ ಬಿಳಿಕೂದಲನ್ನು ಕಿತ್ತು ಕೈಯಲ್ಲಿ ಹಿಡಿದುಕೊಂಡು ರಾಜನ ಹಿಂದೆ ಬಂದು ನಿಂತು ಅವನ ತಲೆಯಲ್ಲಿಯ ಕರಿ ಕೂದಲನ್ನು ಕಿತ್ತು, ಅದನ್ನು ಕೆಳಕ್ಕೆಸೆದು, ತನ್ನ ಬಿಳಿ ಕೂದಲನ್ನು ತೋರಿಸಿ, ‘ನೋಡಿ ನಿಮ್ಮ ತಲೆಯಲ್ಲಿಯೂ ಬಿಳಿ ಕೂದಲು ಬಂದಿದೆ, ನನ್ನ ಹಾಗೆಯೇ’ ಎಂದು ನಕ್ಕಳು. ಆಗ ಆಕೆ ನಿರೀಕ್ಷೆ ಮಾಡದಿದ್ದ ಘಟನೆ ನಡೆಯಿತು. ರಾಜ ಬಿಳಿ ಕೂದಲನ್ನು ಕೈಯಲ್ಲಿ ತೆಗೆದುಕೊಂಡು, ‘ಅಯ್ಯೋ, ಆಯುಷ್ಯ ವ್ಯರ್ಥವಾಗಿ ಹೋಯಿತು. ಯಾವ ಸಾಧನೆಯನ್ನು ಮಾಡಲಿಲ್ಲವಲ್ಲ’ ಎಂದು ತಕ್ಷಣವೇ ಅರಮನೆಯನ್ನು ತೊರೆದು ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೊರಟು ಹೋದ. ತನ್ನ ಬಾಳಿಗೆ ಏನು ಅರ್ಥವಿನ್ನು ಎಂದು ರಾಣಿ ತಾನೂ ಅರಮನೆಯನ್ನು ಬಿಟ್ಟು ಸನ್ಯಾಸಿನಿಯಾಗಿ ಹೋದಳು.

ಅಪೇಕ್ಷೆ ಮಾಡಬಾರದ್ದನ್ನು ಅಪೇಕ್ಷೆ ಮಾಡಿದರೆ ಆಗಬಾರದ್ದೇ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.