ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ವಿಧಿಯ ಕೈಚಳಕ

Last Updated 23 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |
ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||
ಖೇಲನವ ಬೇಡವೆನುವರನು ವಿಧಿರಾಯನವ- |
ಹೇಳಿಪನು ಸೆರೆವಿಡಿದು – ಮಂಕುತಿಮ್ಮ || 267 ||

ಪದ-ಅರ್ಥ: ನಾವಿನ್ನುಮೆನುತ=ನಾವು+ಇನ್ನು+ಎನುತ, ಪಲ್ಕಡಿದು=ಹಲ್ಲು ಕಡಿದು, ಖೇಲನ=ಆಟ, ವಿಧಿರಾಯನವಹೇಳಿಪನು=ವಿಧಿರಾಯನು+ಅವಹೇಳಿಪನು(ಅವಹೇಳನ ಮಾಡುವನು)

ವಾಚ್ಯಾರ್ಥ: ಈ ಬದುಕೊಂದು ಲೀಲೆಯೇ? ಇಂಥ ಹಾಸ್ಯ ಸಾಕು. ಇದನ್ನು ನಂಬಲು ನಾವೇನು ಪುಟ್ಟ ಬಾಲಕರೆ? ಎನ್ನುತ್ತ ಹಲ್ಲುಕಚ್ಚಿ ಈ ಆಟವನ್ನು ಬೇಡವೆನ್ನುವವರನ್ನು ವಿಧಿರಾಯ ಬಿಗಿದು ಅವಹೇಳನ ಮಾಡುತ್ತಾನೆ.

ವಿವರಣೆ: ಇದುವರೆಗೂ ದಾರ್ಶನಿಕರು ತಮ್ಮ ಅನುಭವದಿಂದ ಹೇಳಿದಂತೆ ಈ ವಿಶ್ವವೊಂದು ದೊಡ್ಡ ನಾಟಕರಂಗ, ನಾವೆಲ್ಲ ಪಾತ್ರಧಾರಿಗಳು, ನಮ್ಮ ನಮ್ಮ ಪಾತ್ರಗಳನ್ನು ಅಭಿನಯಿಸಿ, ಸಮಯ ಬಂದಾಗ ನೇಪಥ್ಯಕ್ಕೆ ಸರಿದು ಹೋಗುತ್ತೇವೆ. ಇಡೀ ವಿಶ್ವವನ್ನು ಆಟವಾಗಿ ಸೃಷ್ಟಿಸಿದವನು ಮತ್ತು ಅದನ್ನು ನಿರ್ದೇಶಿಸುವವನು ಭಗವಂತ. ಇದನ್ನು ದೈವಭಕ್ತರು ನಂಬುತ್ತಾರೆ. ಆದರೆ ಇದನ್ನು ನಂಬದವರೂ ಇದ್ದಾರಲ್ಲವೇ? ನಮ್ಮ ಬದುಕು ಮತ್ತಾರದೋ ಆಟವಾಗಬೇಕೇ? ಕಣ್ಣಿಗೆ ಕಾಣದ ಅದಾರೋ ಎಲ್ಲಿಯೋ ಕುಳಿತು ಆಟವಾಡುತ್ತಾನಂತೆ, ನಾವೆಲ್ಲ ಅವನ ಆಟದಲ್ಲಿ ಪಾತ್ರಧಾರಿಗಳಂತೆ. ಇದೂ ಹಾಸ್ಯವೇ? ಇದನ್ನು ಇಷ್ಟು ಬಲವಾಗಿ ನಂಬಿರುವುದೇ ಹಾಸ್ಯಾಸ್ಪದ. ನಾವೇನು ಮಕ್ಕಳೇ ಇದನ್ನು ನಂಬಲು?

ಒಬ್ಬ ಕ್ಷೌರಿಕ ಗಿರಾಕಿಗೆ ಕ್ಷೌರ ಮಾಡುತ್ತಲೇ ಬಾಗಿಲಿಂದಾಚೆಗೆ ಒಬ್ಬ ದೀನನಾದ, ಕಂಗಾಲಾದ ಭಿಕ್ಷುಕನನ್ನು ಕಂಡು ಹೇಳಿದ, ‘ದೇವರು ಇರುವುದು, ಈ ಲೋಕವನ್ನು ಸೃಷ್ಟಿಸಿದ್ದು, ಅದನ್ನು ರಕ್ಷಿಸುವುದು ಎಲ್ಲವೂ ಸುಳ್ಳು ಸರ್. ದೇವರೆಂಬುವುದು ನಿಜವಾಗಿಯೂ ಇದ್ದರೆ, ಕರುಣಿಯಾಗಿದ್ದರೆ, ಅಲ್ಲಿ ನೋಡಿ, ಅಂಥ ಭಿಕ್ಷುಕ ಹೀಗೆ ಕಷ್ಟಪಡಬೇಕಿತ್ತೇ?’ ಗಿರಾಕಿ ಏನೂ ಮಾತನಾಡಲಿಲ್ಲ. ಸಲೂನ್‌ನಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆದಾಗ ಎದುರಿಗೊಬ್ಬ ಕರಡಿಯಂಥ ಮನುಷ್ಯ ಬಂದ. ಅವನ ತಲೆಯಲ್ಲಿ, ಮುಖದ ಮೇಲೆ ಕಾಡಿನಂಥ ಕೂದಲು. ವರ್ಷಗಳಿಂದ ಕ್ಷೌರ ಕಾಣದ ಮುಖ ಅದು. ಗಿರಾಕಿ ಅವನನ್ನು ಕರೆದುಕೊಂಡು ಕ್ಷೌರಿಕನ ಅಂಗಡಿಗೆ ಬಂದು ಕ್ಷೌರಿಕನಿಗೆ ಹೇಳಿದ, ‘ಜಗತ್ತಿನಲ್ಲಿ ಕ್ಷೌರಿಕರೇ ಇಲ್ಲ’. ಕ್ಷೌರಿಕ, ‘ಅರೆ, ನಾನು ಇದ್ದೀನಲ್ಲ, ಇದೇ ತಾನೇ ನಿಮಗೇ ಕ್ಷೌರ ಮಾಡಿದೆ’ ಎಂದ. ಆಗ ಆ ಕರಡಿ ಮನುಷ್ಯನನ್ನು ಮುಂದೆ ತಂದು, ‘ಜಗತ್ತಿನಲ್ಲಿ ಕ್ಷೌರಿಕರು ಇದ್ದಿದ್ದರೆ, ಈತ ಹೀಗೆ ಇರಬೇಕಿತ್ತೇ?’ ಎಂದು ಕೇಳಿದ. ಕ್ಷೌರಿಕ ನಕ್ಕುಬಿಟ್ಟು, ‘ಸ್ವಾಮೀ, ಕ್ಷೌರಿಕರಿದ್ದಾರೆ. ಆದರೆ ಈತ ನಮ್ಮ ಅಂಗಡಿಗೆ ಬಂದರೆ ತಾನೇ ಕ್ಷೌರ ಮಾಡುವುದು? ಬರದೇ ಇದ್ದರೆ ಏನು ಮಾಡಲಿಕ್ಕಾಗುತ್ತದೆ?’ ಎಂದ. ಗಿರಾಕಿ ಹೇಳಿದ, ‘ದೇವರೂ ಹಾಗೆಯೇ ಅಲ್ವೇ? ಅವನ ಬಳಿಗೆ ಹೋಗಿ, ಅವನಿಗೆ ಶರಣಾದರೆ ತಾನೆ ಅವನು ಕಾಪಾಡುವುದು?’ ಬಹುಶಃ ಕ್ಷೌರಿಕ ಈ ವಾದವನ್ನು ಒಪ್ಪಿರಬೇಕು. ಒಪ್ಪಿದನೋ, ಬಿಟ್ಟನೋ, ವಿಧಿ ಅವನನ್ನು ಮತ್ತೆಲ್ಲರನ್ನು ತನ್ನ ಚಕ್ರದಲ್ಲಿ ಹಾಕಿ ಅರೆಯುವುದನ್ನು ಬಿಡುವುದಿಲ್ಲ.

ಅದನ್ನು ಈ ಕಗ್ಗ ಹೇಳುತ್ತದೆ. ಈ ಬಾಳಿಗೆ ಒಬ್ಬ ನಿರ್ದೇಶಕನಿದ್ದಾನೆ. ನಾವೆಲ್ಲ ನಟರು ಎಂಬುದನ್ನು ಒಪ್ಪದವರನ್ನು ಹಾಗೂ ಒಪ್ಪಿದವರನ್ನೂ ವಿಧಿ ಎಳೆದಾಡಿ ಅವಹೇಳನ ಮಾಡುತ್ತದೆ. ಅವಹೇಳನವೆಂದರೆ ಕೀಳು ಮಾತನಾಡುವುದಲ್ಲ, ಹೀಯಾಳಿಸುವುದಲ್ಲ, ಅದು ಪರೀಕ್ಷೆಗೆ ಒಡ್ಡಿ ಮನಸ್ಸಿಗೆ ಸ್ಪಷ್ಟತೆಯನ್ನು ಕೊಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT