ಗುರುವಾರ , ಫೆಬ್ರವರಿ 20, 2020
30 °C

ನೈವೇದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಜೀವನವದೊಂದು ಪರಮೈಶ್ವರ್ಯ ಬೊಮ್ಮನದು |

ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ||

ಈವರಾರ್ ಕೊಳುವರಾರೆಲ್ಲರೊಂದಾಗಿರಲು |

ನೈವೇದ್ಯಭಾಗಿ ನೀಂ – ಮಂಕುತಿಮ್ಮ || 250 ||

ಪದ-ಅರ್ಥ: ಬೊಮ್ಮ=ಬ್ರಹ್ಮ,  ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ = ಸೇವೆ +ಅದನು+ ಊರ್ಜಿತಗೊಳಿಸುವ(ಹೆಚ್ಚುಗೊಳಿಸುವ)+ಎಲ್ಲ+ ಎಸಕ(ಕಾರ್ಯ), ಈವರಾರ್=ಕೊಡುವರಾರ್, ನೈವೇದ್ಯಭಾಗಿ=ನೈವೇದ್ಯದ ಪಾಲುಗಾರ.

ವಾಚ್ಯಾರ್ಥ: ಜೀವನವೆನ್ನುವುದು ಬ್ರಹ್ಮನ ಪರಮ ಐಶ್ವರ್ಯ. ನಾವು ಮಾಡುವ ಸೇವೆ ಅವನ  ಐಶ್ವರ್ಯವನ್ನು ವೃದ್ಧಿಸುವ ಕೆಲಸ. ಎಲ್ಲರೂ ಒಂದೇ ಆಗಿರುವಾಗ ಕೊಡುವವರು ಯಾರು, ತೆಗೆದುಕೊಳ್ಳುವವರು ಯಾರು? ನಾವೂ ಆ ಪ್ರಸಾದದಲ್ಲಿ ಭಾಗಿ.

ವಿವರಣೆ: ಇಡೀ ಪ್ರಪಂಚವೇ ಭಗವಂತನ ಸೃಷ್ಟಿ. ಅವನದಲ್ಲದ ವಸ್ತು ಯಾವುದೂ ಇಲ್ಲಿಲ್ಲ. ಈ ಜಗತ್ತಿನ ಸಂಭ್ರಮ ಅವನ ಪರಮ ಐಶ್ವರ್ಯ. ಮನುಷ್ಯರು ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯ ಪ್ರಪಂಚದ ಹಿರಿಮೆಯನ್ನು, ಶ್ರೀಮಂತಿಕೆಯನ್ನು, ಶ್ರೇಯಸ್ಸನ್ನು ವೃದ್ಧಿಸುತ್ತದೆ. ಅದೆಲ್ಲ ನಾವು ಭಗವಂತನಿಗೆ ಮಾಡುವ ಸೇವೆ. ನಮ್ಮ ಶರೀರ, ಬುದ್ಧಿ, ಮನಸ್ಸು ಎಲ್ಲವೂ ಅವನದೇ ಸೃಷ್ಟಿ. ಆದ್ದರಿಂದ ನಾನು ಇಂಥದ್ದನ್ನು ಸಾಧಿಸಿ ಪ್ರಪಂಚಕ್ಕೆ ಕಾಣಿಕೆ ನೀಡಿದ್ದೇನೆ ಎಂದು ಹೇಳುವುದು ಎಷ್ಟು ಸರಿ? ಅವನದೇ ದೇಹ, ಅವನೇ ಕೊಟ್ಟ ಮನಸ್ಸು. ಅವುಗಳಿಂದ ಸಾಧಿಸಿದ್ದನ್ನು ಕೊಡುವುದಾರಿಗೆ? ಈ ಪ್ರಪಂಚಕ್ಕೇ ತಾನೇ? ಈ ಪ್ರಪಂಚ ಯಾರದ್ದು? ಇದೂ ಭಗವಂತನದೇ. ಅಂದರೆ ಅವನದಾದದ್ದನ್ನು, ಅವನಿಗೋಸ್ಕರ ನಿರ್ಮಿಸಿ ಅವನಿಗೇ ನೀಡಿದಂತಾಯಿತು.

ಅದಕ್ಕೆಂದೇ ದಾಸರು ಹಾಡಿದರು, ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ’ ಎಂದು. ನೀರು ಕೆರೆಯದ್ದು, ಅದನ್ನೇ ಮತ್ತೆ ಕೆರೆಗೆ ಹಾಕಿದರೆ ನಮಗೆ ವರವೇಕೆ? ಒಮ್ಮೆ ಖ್ಯಾತ ನಟ, ನಿರ್ದೇಶಕ ಶ್ರೀ ಜಿ.ವಿ. ಅಯ್ಯರ್‌ರವರು ನನಗೊಂದು ಅತ್ಯದ್ಭುತವಾದ ವಿಷಯವನ್ನು ಹೇಳಿದ್ದರು. ಅದನ್ನು ಅವರು ತಮ್ಮ ‘ಶ್ರೀ ಶಂಕರಾಚಾರ್ಯ’ ಚಲನಚಿತ್ರದಲ್ಲಿ ಮೊದಲನೇ ದೃಶ್ಯದಲ್ಲಿ ತೋರಿಸಲು ಪ್ರಯತ್ನಿಸಿದ್ದರಂತೆ. ನಮ್ಮಲ್ಲಿ ಕೆಲವರು ನದಿಯಲ್ಲಿ, ಸಮುದ್ರದಲ್ಲಿ ಸ್ನಾನಕ್ಕೆ ಹೋದಾಗ ನಡುಮಟ್ಟ ನೀರಲ್ಲಿ ನಿಂತು, ಸೂರ್ಯನ ಕಡೆಗೆ ಮುಖ ಮಾಡಿ ಹರಿಯುವ ನೀರಿನಲ್ಲಿ ಒಂದು ಬೊಗಸೆಯಷ್ಟು ನೀರನ್ನು ತೆಗೆದುಕೊಂಡು ಅದನ್ನೇ ಸೂರ್ಯನಿಗೆ ಅರ್ಘ್ಯ ಎಂದು ಕೊಡುತ್ತಾರೆ. ಅದರಲ್ಲಿ ಅವರ ಸ್ವಂತದ್ದೇನೂ ಇಲ್ಲ. ನದಿಯ ನೀರು ಮತ್ತೆ ನದಿಗೇ. ಇದರ ಆಧ್ಯಾತ್ಮಿಕ ಅರ್ಥ ತುಂಬ ಸುಂದರ. ನಾವು ನಿಂತಿರುವ, ಪ್ರವಹಿಸುತ್ತಿರುವ ನೀರು ಜೀವಗಳ ಪ್ರವಾಹ. ಅದರಲ್ಲಿ ನನ್ನ ಆಯುಷ್ಯವನ್ನು, ಕೇವಲ ಬೊಗಸೆಯಷ್ಟು ಆಯುಷ್ಯವನ್ನು, ಕೈಯಲ್ಲಿ ಹಿಡಿದು, ಅದನ್ನು ನೀಡಿದ ಭಗವಂತನಿಗೇ ನೈವೇದ್ಯವಾಗಿ ನೀಡುತ್ತೇವೆ. ಇದೇ ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕ್ರಿಯೆ.

ಯಾವುದು ನಿವೇದಿಸಲ್ಪಡುತ್ತದೆಯೋ ಅದು ನೈವೇದ್ಯ. ಅಲ್ಲಿರುವುದು ಕೇವಲ ನಿವೇದನೆ, ಅಹಂಕಾರವಲ್ಲ. ‘ಭಗವಂತಾ, ಇದು ನೀನೇ ಸೃಷ್ಟಿಸಿರುವ ಮತ್ತು ಒದಗಿಸಿರುವ ಪದಾರ್ಥ. ಇದು ನಿನ್ನದೇ, ನನ್ನದಲ್ಲ’ ಎಂದು ನಿವೇದಿಸುವುದೇ ನೈವೇದ್ಯ. ಅದನ್ನ ಕಗ್ಗ ಕೇಳುತ್ತದೆ. ಎಲ್ಲವೂ ಒಂದೇ ಆಗಿರುವಾಗ ಕೊಡುವವರು ಯಾರು, ಪಡೆಯುವವರು ಯಾರು? ಭಗವಂತನ ಆ ನೈವೇದ್ಯದಲ್ಲಿ ನಾವೂ ಭಾಗಿಯಾಗಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)