ಭಾನುವಾರ, ಜೂಲೈ 5, 2020
28 °C

ಬೆರಗಿನ ಬೆಳಕು | ಭಗವಂತನ ಕೃಪೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಕಾಶಿಗ್ರಾಮದಲ್ಲಿ, ನದಿತೀರದಲ್ಲಿ ಒಬ್ಬ ಗೃಹಸ್ಥ ಮನೆ ಮಾಡಿಕೊಂಡಿದ್ದ. ಆ ಪ್ರದೇಶದ ನದಿಯಲ್ಲಿ ಭಾರಿ ಪ್ರಮಾಣದ ಕಠೋರವಾದ ಮೊಸಳೆಗಳಿದ್ದವು. ಗೃಹಸ್ಥನ ಹೆಂಡತಿ ಬಹಳ ಕಿರಿಕಿರಿ ಸ್ವಭಾವದವಳು. ಆಕೆ ತನ್ನ ಅತ್ತೆಯನ್ನು ಬಹಳವಾಗಿ ಕಾಡುತ್ತಿದ್ದಳು. ಹೆಂಡತಿಯ ತಾಯಿಯೂ ಈ ಮನೆಯಲ್ಲಿಯೇ ವಾಸವಾಗಿದ್ದಳು. ತಾಯಿ, ಮಗಳು ಇಬ್ಬರೂ ಸೇರಿ ಗೃಹಸ್ಥನ ತಲೆ ತಿನ್ನುತ್ತಿದ್ದರು. ದಿನ ಬೆಳಗಾದರೆ ಹೆಂಡತಿ ತನ್ನ ಅತ್ತೆಯ ಬಗ್ಗೆ ದೂರು ಹೇಳುತ್ತಿದ್ದಳು. ‘ಇನ್ನು ಮೇಲೆ ನಿಮ್ಮ ತಾಯಿಗೆ ನಾನು ಕೂಳು ಬೇಯಿಸಿ ಹಾಕಲಾರೆ. ಆಕೆಯನ್ನು ಕೊಂದುಬಿಡು’ ಎಂದು ಗಂಟುಬಿದ್ದಳು. ತಾಯಿಯನ್ನು ಕೊಲ್ಲುವುದು ಸರಿಯೇ ಎಂದ ಗಂಡನಿಗೆ, ‘ನೀನು ಕೊಲ್ಲಬೇಡ. ಆಕೆ ಮಲಗಿದಾಗ ಆಕೆಯನ್ನು ಮಂಚದ ಸಮೇತ ನದಿಯಲ್ಲಿ ಹಾಕಿಬಿಡೊಣ. ಮೊಸಳೆಗಳು ಆ ಕೆಲಸ ಮಾಡುತ್ತವೆ’ ಎಂದಳು. ಅಂದಿನ ರಾತ್ರಿಯೇ ಆ ಕೆಲಸ ಮಾಡುವುದೆಂದು ತೀರ್ಮಾನವಾಯಿತು.

ರಾತ್ರಿ ಗೃಹಸ್ಥ ಹೋಗಿ ನೋಡಿದ, ತನ್ನ ತಾಯಿ ಮತ್ತು ಅತ್ತೆ ಪಕ್ಕಪಕ್ಕದ ಮಂಚದ ಮೇಲೆ ಮಲಗಿದ್ದಾರೆ. ಆತ ತನ್ನ ಅತ್ತೆಯ ಮಂಚಕ್ಕೆ ಹಗ್ಗ ಕಟ್ಟಿ, ಇಬ್ಬರ ಮುಖವೂ ಕಾಣದಂತೆ ಬಟ್ಟೆ ಹೊದಿಸಿ ಬಂದ. ರಾತ್ರಿ ಆತ ಮತ್ತು ಹೆಂಡತಿ ಈ ಮಂಚವನ್ನೆತ್ತಿಕೊಂಡು ಹೋಗಿ ನದಿಯಲ್ಲಿ ಹಾಕಿದರು. ಕ್ಷಣದಲ್ಲೇ ಮೊಸಳೆಗಳು ಹೆಂಡತಿಯ ತಾಯಿಯನ್ನು ತಿಂದು ಹಾಕಿದವು. ಮರುದಿನ ಹೆಂಡತಿ ಆದ ಅನಾಹುತ ತಿಳಿದು ಬಹಳ ಅತ್ತಳು. ಮತ್ತೆ ಗಂಡನಿಗೆ ಗಂಟು ಬಿದ್ದು ಇಂದಿನ ರಾತ್ರಿ ಅವನ ತಾಯಿಯನ್ನು ನದಿಗೆ ಹಾಕುವ ಬದಲು ಸ್ಮಶಾನದಲ್ಲಿ ಸುಟ್ಟು ಹಾಕಲು ತೀರ್ಮಾನಿಸಿದಳು. ಅತ್ತೆಗೆ ಮತ್ತು ಬರುವ ಔಷಧಿಯನ್ನು ಕುಡಿಸಿ, ಗಂಡನೊಂದಿಗೆ ಮಂಚದ ಸಹಿತ ಆಕೆಯನ್ನು ಹೊತ್ತು ಸ್ಮಶಾನಕ್ಕೆ ಕರೆತಂದಳು. ಆತ ಬುದ್ಧಿವಂತಿಕೆಯಿಂದ ಬೆಂಕಿಯನ್ನು ತಂದಿರಲಿಲ್ಲ. ಅದನ್ನು ತರಲು ಅವರಿಬ್ಬರೂ ಮನೆಗೆ ಹೋದರು. ಆಗ ತಂಪುಗಾಳಿಯಿಂದ ಎಚ್ಚರವಾದ ಗೃಹಸ್ಥನ ತಾಯಿ ಎದ್ದು ತಾನು ಸ್ಮಶಾನದಲ್ಲಿರುವುದನ್ನು ತಿಳಿದಳು. ಆಕೆಗೆ ಎಲ್ಲವೂ ತಿಳಿಯಿತು. ಮತ್ತೊಂದು ಹೆಣವನ್ನು ಮಂಚದ ಮೇಲೆ ಮಲಗಿಸಿ, ಬಟ್ಟೆ ಹೊದಿಸಿ, ಹತ್ತಿರದಲ್ಲೇ ಇದ್ದ ಗುಹೆಯನ್ನು ಸೇರಿದಳು. ಒಬ್ಬ ಕಳ್ಳ ಅಪಾರ ಧನಸಂಪತ್ತನ್ನು ಕದ್ದುಕೊಂಡು ಅಲ್ಲಿ ಇಟ್ಟುಕೊಂಡು ಕುಳಿತಿದ್ದ. ನಡುರಾತ್ರಿಯಲ್ಲಿ ಬಂದ ಈ ಹೆಂಗಸನ್ನು ಕಂಡು ಈಕೆ ಯಕ್ಷಿಣಿ ಇರಬೇಕೆಂದು ಎಲ್ಲ ಬಿಟ್ಟು ಓಡಿಹೋದ.

ಮರುದಿನ ಅತ್ತೆ ರೇಷ್ಮೆಯ ಸೀರೆಯನ್ನುಟ್ಟು ಕೊಂಡು, ಮೈತುಂಬ ಆಭರಣಗಳನ್ನು ಧರಿಸಿ ಮಗನ ಮನೆಗೆ ಬಂದಳು. ನಿನ್ನೆ ತಾನೇ ಸುಟ್ಟು ಹಾಕಿದ ಅತ್ತೆ ಹೇಗೆ ಮರಳಿ ಬಂದಳು ಎಂದು ಸೊಸೆಗೆ ಆಶ್ಚರ್ಯ ಮತ್ತು ಗಾಬರಿ. ಆಕೆಯ ಶ್ರೀಮಂತಿಕೆಯನ್ನು ಕಂಡು ಅಸೂಯೆಯೂ ಆಯಿತು. ‘ಅತ್ತೆ, ನೀವು ಎಲ್ಲಿಗೆ ಹೋಗಿದ್ದಿರಿ? ಈ ಶ್ರೀಮಂತಿಕೆ ಎಲ್ಲ ಹೇಗೆ ಬಂತು?’ ಎಂದು ಕೇಳಿದಳು. ಆಗ ಅತ್ತೆ, ‘ಮಗಳೇ, ನಿನ್ನೆ ನಾನು ನಿದ್ರೆಯಲ್ಲಿದ್ದಾಗ ಯಾರೋ ನನ್ನನ್ನು ಸ್ಮಶಾನಕ್ಕೆ ಕರೆದೊಯ್ದು ಸುಟ್ಟು ಹಾಕಿದರು. ಅದೊಂದು ಅತ್ಯಂತ ಪವಿತ್ರ ಸ್ಥಳ. ಅಲ್ಲಿ ಸುಟ್ಟುಕೊಂಡವರಿಗೆ ದೇವರ ವಿಶೇಷ ಕರುಣೆ ಇದೆ. ದೇವರೇ ಐಶ್ವರ್ಯ ಕೊಟ್ಟು, ಮತ್ತೆ ಜೀವ ನೀಡಿ ಕಳುಹಿಸುತ್ತಾನೆ’ ಎಂದಳು. ಅಂದೇ ರಾತ್ರಿ ಸೊಸೆ ಇಬ್ಬರು ಸೇವಕರಿಗೆ ಹೇಳಿ ತನ್ನನ್ನು ಆ ಸ್ಮಶಾನದ ಅದೇ ಸ್ಥಳದಲ್ಲಿ ಸುಡಿಸಿಕೊಂಡು ಸತ್ತಳು.

ದ್ವೇಷ, ಅಸೂಯೆ ಎಂಬುದು ಬೆಂಕಿ ಇದ್ದಂತೆ, ಮೊದಲು ಕೈಯಲ್ಲಿ ಹಿಡಿದವರನ್ನು ಅದು ಸುಡುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.