ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬದಲಾದ ಪರಿಸರ

Last Updated 20 ಅಕ್ಟೋಬರ್ 2020, 15:08 IST
ಅಕ್ಷರ ಗಾತ್ರ

ಕಾಂಪಿಲ್ಯ ದೇಶದಲ್ಲಿ ಪಾಂಚಾಲ ರಾಜನಿದ್ದ. ಅವನ ಪಟ್ಟದರಸಿ ಗಂಡುಮಗುವನ್ನು ಹೆತ್ತಳು. ಅವಳ ಹಿಂದಿನ ಜನ್ಮದಲ್ಲಿ ಸವತಿಯಾಗಿದ್ದವಳು ಇವಳ ಮೇಲಿನ ಕೋಪದಿಂದ ಅವಳ ಮಕ್ಕಳನ್ನೆಲ್ಲ ಕೊಲ್ಲುವದಾಗಿ ಪ್ರತಿಜ್ಞೆ ಮಾಡಿ, ಸತ್ತು, ಯಕ್ಷಿಯಾಗಿ ಹುಟ್ಟಿದ್ದಳು. ಗಂಡು ಮಗು ಹುಟ್ಟಿದ ಕೂಡಲೇ ಅದನ್ನೆತ್ತಿಕೊಂಡು ಹೊರಗೋಡಿ ತಿಂದು ಹಾಕಿದಳು. ಎರಡನೆಯ ಮಗುವಿಗೂ ಅದೇ ಗತಿಯಾಯಿತು. ಮೂರನೆಯ ಮಗು ಹುಟ್ಟುವ ಸಮಯದಲ್ಲಿ ಬಲವಾದ ಕಾವಲಿತ್ತು.

ಯಕ್ಷಿ ಮಗುವನ್ನೆತ್ತಿದ ಕೂಡಲೇ ರಾಜಭಟರು ಆಕೆಯ ಬೆನ್ನಟ್ಟಿದರು. ಆಕೆ ಮಗುವನ್ನೆತ್ತಿಕೊಂಡು ತನ್ನ ಗುಹೆಯ ಕಡೆಗೆ ಓಡಿದಳು. ಮಗು ಆಕೆಯನ್ನು ತಾಯಿಯೆಂದು ತಿಳಿದು ಸ್ತನಪಾನ ಮಾಡತೊಡಗಿತು. ತಕ್ಷಣ ಯಕ್ಷಿಗೆ ಮಾತೃಭಾವ ಜಾಗ್ರತವಾಗಿ ಮಗುವನ್ನು ಸಾಕತೊಡಗಿದಳು. ಗುಹೆಯಲ್ಲಿಟ್ಟುಕೊಂಡು ತನ್ನಂತೆಯೇ ನರಮಾಂಸವನ್ನು ತಿನ್ನಿಸತೊಡಗಿದಳು. ಅವನು ಅಂತರ್ಧಾನನಾಗಿ ಹೋಗಿ ಮಾಂಸವನ್ನು ತಿನ್ನಲು ಸಾಧ್ಯವಾಗುವಂತೆ ಮೂಲಿಕೆಯೊಂದನ್ನು ಅತನಿಗೆ ಕೊಟ್ಟಳು. ಅದನ್ನು ತಿಂದಾಗ ಮುಂದೆ ಆರು ತಾಸು ಯಾರ ಕಣ್ಣಿಗೂ ಆತ ಕಾಣುತ್ತಿರಲಿಲ್ಲ. ಕೆಲವು ದಿನಗಳಲ್ಲಿ ಯಕ್ಷಿ ಸತ್ತು ಹೋದಳು.

ರಾಣಿ ನಾಲ್ಕನೆಯ ಬಾರಿಗೂ ಗಂಡುಮಗುವನ್ನು ಹೆತ್ತಳು. ಈಗ ಯಾವ ಭಯವೂ ಇಲ್ಲದಿದ್ದುದರಿಂದ ಮಗು ಚೆನ್ನಾಗಿ ಬೆಳೆದು, ದೊಡ್ಡವನಾದ ಮೇಲೆ ರಾಜನಾದ. ಮುಂದೆ ಬೋಧಿಸತ್ವ ಆತನ ಮಗನಾಗಿ ಹುಟ್ಟಿದ. ಅವನಿಗೆ ಅಲೀನ ಶತ್ರುಕುಮಾರ ಎಂದು ಹೆಸರಾಯಿತು.

ಇತ್ತ ಕಡೆಗೆ ಯಕ್ಷಿ ಬೆಳೆಸಿದ್ದ ಪುತ್ರ ಮೂಲಿಕೆಯನ್ನು ಕಳೆದುಕೊಂಡು ಮಾಯವಾಗುವ ಶಕ್ತಿಯನ್ನು ಕಳೆದುಕೊಂಡು ಬಿಟ್ಟ. ಯಾರ ಭಯವಿಲ್ಲದೆ ಸ್ಮಶಾನಕ್ಕೆ ನುಗ್ಗಿ ನರಮಾಂಸ ತಿನ್ನತೊಡಗಿದ. ಅವನನ್ನು ಕಂಡು ಭಯಭೀತರಾಗಿ ಜನ ಓಡತೊಡಗಿದರು. ಬರಬರುತ್ತ ಅವನೊಬ್ಬ ರಾಕ್ಷಸನೇ ಆಗಿಬಿಟ್ಟ. ಒಂದು ದಿನ ರಾಜ ಬೇಟೆಯಿಂದ ಮರಳಿ ಬರುವಾಗ ಅವನನ್ನೇ ಹಿಡಿದುಕೊಂಡ.

ಬೋಧಿಸತ್ವ ತಂದೆಯನ್ನು ಬಿಡಿಸಿಕೊಂಡು ಬರುತ್ತೇನೆಂದು ಹೊರಟ. ಮಂತ್ರಿಗಳು, ತಾಯಿ ಎಲ್ಲರೂ, ನೀನು ಚಿಕ್ಕ ಹುಡುಗ, ರಾಕ್ಷಸನನ್ನು ಹೇಗೆ ಎದುರಿಸುತ್ತೀ ಎಂದು ಹೇಳಿದರೂ ಅವರನ್ನೆಲ್ಲ ಒಪ್ಪಿಸಿ ರಾಕ್ಷಸ ಕುಳಿತಿದ್ದ ಸ್ಮಶಾನಕ್ಕೆ ಬಂದ.

ಈ ಪುಟ್ಟ ಹುಡುಗ ಯಾವ ಭಯವೂ ಇಲ್ಲದೆ ಬರುವುದನ್ನು ಕಂಡು ಯಕ್ಷಿ ಪುತ್ರ ಬೆರಗಾದ.

ಬೋಧಿಸತ್ವ ನೇರವಾಗಿ ಅವನ ಬಳಿಗೆ ಹೋಗಿ ನಮಸ್ಕಾರ ಮಾಡಿದ, ‘ನೀನು ನನ್ನ ತಂದೆಯಂತೆಯೇ. ಆಶೀರ್ವಾದ ಮಾಡು’ ಎಂದ. ಯಕ್ಷಿ ಪುತ್ರ ಆಶ್ಚರ್ಯದಿಂದ ನೋಡುತ್ತಲೇ ಇದ್ದ. “ಹುಡುಗಾ, ನಿನಗೆ ಭಯವಿಲ್ಲವೆ? ನಾನು ನಿನ್ನನ್ನು ಮತ್ತು ನಿನ್ನ ತಂದೆಯನ್ನು ಒಂದೇ ಬಾರಿಗೆ ತಿಂದು ಬಿಡಬಲ್ಲೆ” ಎಂದ ಯಕ್ಷಿಪುತ್ರ. ಆಗ ಬೋಧಿಸತ್ವ ಧೈರ್ಯವಾಗಿ ಹೇಳಿದ, ‘ನಾನು ಇದುವರೆಗೂ ತಿಳಿದು ಒಂದು ಪಾಪವನ್ನೂ ಮಾಡಿಲ್ಲ. ನನ್ನ ಧರ್ಮ ನನ್ನನ್ನು ಕಾಪಾಡುತ್ತದೆ. ನಾನಿಲ್ಲಿಗೆ ಬರುವಾಗ ಶಕ್ರ ನನಗೆ ಹೇಳಿದ, ನೀನು ನನ್ನ ದೊಡ್ಡಪ್ಪ. ನೀನು ಯಕ್ಷನಲ್ಲ, ಮನುಷ್ಯ. ಯಕ್ಷಿ ಎತ್ತಿಕೊಂಡು ಹೋಗಿ ಬೆಳೆಸಿದಳು. ಬೇಕಾದರೆ ಸ್ಮಶಾನದ ಪಕ್ಕದಲ್ಲಿರುವ ತಪಸ್ವಿಯನ್ನು ಕೇಳು. ಆತನಿಗೆ ಎಲ್ಲವೂ ತಿಳಿದಿದೆ.’ ತಪಸ್ವಿಯೂ ಅವನ ಮಾತನ್ನು ಅನುಮೋದಿಸಿದ. ರಾಕ್ಷಸನಂತಿದ್ದ ದೊಡ್ಡಪ್ಪನನ್ನು, ತಂದೆಯನ್ನು ಅರಮನೆಗೆ ಕರೆದುಕೊಂಡು ಬರುವಾಗ ದೊಡ್ಡಪ್ಪ ಊರ ಹೊರಗಿನ ರಾಜೋದ್ಯಾನದಲ್ಲಿಯೇ ಉಳಿದು ಪ್ರಾಯಶ್ಚಿತ್ತ ಮಾಡಿಕೊಂಡು ಆಯುಷ್ಯ
ಕಳೆದ.

ಬದಲಾದ ಪರಿಸರ ರಾಜನಾಗಬಹುದಾದವನನ್ನು ರಾಕ್ಷಸನನ್ನಾಗಿ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT