ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸತ್ಯದ ಪೂರ್ಣದರ್ಶನ

Last Updated 31 ಜನವರಿ 2022, 19:30 IST
ಅಕ್ಷರ ಗಾತ್ರ

ಚೂರುಗಳು ಹದಿನಾರು ಚಂದ್ರಮಂಡಲಕಂತೆ |
ನೂರಾರು ಚೂರುಗಳು ಸತ್ಯ ಚಂದ್ರನವು ||
ಸೇರಿಸುತಲವುಗಳನು ಬಗೆಯರಿತು ಬೆಳೆಸುತಿರೆ |
ಸಾರ ಋತಪೂರ್ಣಿಮೆಯೊ – ಮಂಕುತಿಮ್ಮ || 553 ||

ಪದ-ಅರ್ಥ: ಚಂದ್ರಮಂಡಲಕಂತೆ=ಚಂದ್ರಮಂಡಲಕ್ಕೆ+ಅಂತೆ, ಸೇರಿಸುತಲವುಗಳನು=ಸೇರಿಸುತಲಿ+ಅವುಗಳನು, ಋತಪೂರ್ಣಿಮೆ=ಸತ್ಯದ ಪೂರ್ಣದರ್ಶನ.

ವಾಚ್ಯಾರ್ಥ: ಚಂದ್ರಮಂಡಲಕ್ಕೆ ಹದಿನಾರು ಚೂರುಗಳಂತೆ, ಸತ್ಯವೆಂಬ ಚಂದ್ರನಿಗೆ ನೂರಾರು ಚೂರುಗಳು. ಅವುಗಳನ್ನು ಸೇರಿಸುತ್ತ, ಹದವರಿತು ಬೆಳೆಸಿದರೆ ಸಂಪೂರ್ಣ ಸತ್ಯದ ದರ್ಶನವಾದೀತು.

ವಿವರಣೆ: ಚಂದ್ರನ ನಿಜವಾದ ರೂಪ ಯಾವುದು? ಪಾಡ್ಯದ ದಿನ ಕಂಡ ಕೇವಲ ಒಂದು ಬೆಳ್ಳಿಗೆರೆಯೆ? ಮುಂದೆ ಪ್ರತಿ ದಿನ ಸ್ವಲ್ಪ ಸ್ವಲ್ಪ ಬೆಳೆಯುತ್ತ ಹದಿನಾರನೇ ದಿನ ಪೂರ್ಣಚಂದ್ರನಾಗುತ್ತಾನೆ. ಹೀಗಾಗಿ ಪೂರ್ಣಚಂದ್ರನ ದರ್ಶನಕ್ಕೆ ಹದಿನಾರು ಚೂರುಗಳು ಎಂದು ಹೇಳುತ್ತಾರೆ. ಆ ಹದಿನಾರು ಚೂರುಗಳನ್ನು ಸೇರಿದಾಗ ಚಂದ್ರದರ್ಶನ. ನಮಗೆ ಕಣ್ಣಿಗೆ ಕಾಣುವ ಚಂದ್ರದರ್ಶನಕ್ಕೇ ಹದಿನಾರು ಚೂರುಗಳು ಇರುವುದಾದರೆ ಕಣ್ಣಿಗೆ ಕಾಣದ ಪರಮಸತ್ಯಕ್ಕೆ ಎಷ್ಟು ಮುಖಗಳಿರಬೇಕು?

ಸತ್ಯವೆಂಬುದು ನಮಗೆ ಮುಖ್ಯವಾಗಿದ್ದು ಯಾವುದರಿಂದ? ಅದರಿಂದ ಧರ್ಮಸಾಧನೆಯಾಗುತ್ತದೆ ಎಂಬುದರಿಂದಲ್ಲವೆ? ಧರ್ಮ ನಮಗೆ ಅವಶ್ಯವಾಗಿರುವುದರಿಂದ ಸತ್ಯ ನಮಗೆ ಕರ್ತವ್ಯವಾಗುತ್ತದೆ. ಆದರೆ ಕೆಲವೊಮ್ಮೆ ನಾವು ಸತ್ಯವೆಂದು ಭಾವಿಸಿದ್ದು ಧರ್ಮಕ್ಕೆ ಹಾನಿಯನ್ನು ಮಾಡಬಹುದು. ಹಾಗೆ ಆದಾಗ ನಮ್ಮ ಕರ್ತವ್ಯವೇನು? ಸತ್ಯವೆಂದುಕೊಂಡದ್ದನ್ನು ನಡೆಸುವುದೋ, ಧರ್ಮವನ್ನು ಕಾಪಾಡುವುದೋ?

ಒಂದು ಕಾಡಿನಲ್ಲಿ ಕೌಶಿಕನೆಂಬ ಋಷಿ ತಪಸ್ಸು ಮಾಡಿಕೊಂಡಿದ್ದ. ಒಂದು ದಿನ ಅವನ ಆಶ್ರಮಕ್ಕೆ ಕೆಲಪ್ರವಾಸಿಗರು ಓಡಿಬಂದರು. ಅವರನ್ನು ದರೋಡೆಕಾರರು ಬೆನ್ನಟ್ಟಿದ್ದಾರೆ. ಅವರು ಋಷಿಯ ಅನುಮತಿ ಪಡೆದು ಬೇಲಿಯ ಹಿಂದೆ ಅಡಗಿ ಕುಳಿತರು. ಸ್ವಲ್ಪ ಸಮಯದ ನಂತರ ದರೋಡೆಕಾರರ ಗುಂಪು ಅಲ್ಲಿಗೆ ಬಂದಿತು. ಅವರು ತಪಸ್ಸು ಮಾಡುತ್ತಿದ್ದ ಋಷಿಯನ್ನು ಕೇಳಿದರು, ‘ಇಲ್ಲಿಗೆ ಯಾರಾದರೂ ಪ್ರವಾಸಿಗರು ಬಂದರೇ?’ ಈಗ ಋಷಿ ಏನು ಮಾಡಬೇಕು? ಋಷಿ ಕೌಶಿಕ ಮಹಾನ್ ಸತ್ಯವಾದಿ. ಎಂದೆಂದೂ ಸುಳ್ಳು ಹೇಳಿದವನಲ್ಲ. ಅವನು ಸತ್ಯಕ್ಕೇ ಕಟ್ಟುಬಿದ್ದವನಾದ್ದರಿಂದ, ‘ಹೌದು, ಪ್ರವಾಸಿಗರು ಇಲ್ಲಿಗೆ ಬಂದಿದ್ದರು. ನಾನೇ ಅವರಿಗೆ ಬೇಲಿಯ ಹಿಂದೆ ಅಡಗಿ ಕುಳಿತುಕೊಳ್ಳಲು ಹೇಳಿದ್ದೇನೆ’ ಎಂದ. ದರೋಡೆಕಾರರು ಸಂತೋಷದಿಂದ ಆ ಕಡೆಗೆ ಹೋಗಿ ಪ್ರವಾಸಿಗರಲ್ಲಿ ಕೆಲವರನ್ನು ಕೊಂದು, ಮತ್ತೆ ಉಳಿದವರನ್ನು ಹೊಡೆದು ಎಲ್ಲ ವಸ್ತುಗಳನ್ನು ದೋಚಿಕೊಂಡು ಹೋದರು. ಕೆಲವರ್ಷಗಳ ನಂತರ ಕೌಶಿಕ ತೀರಿಹೋದ. ಅಲ್ಲಿ ಚಿತ್ರಗುಪ್ತರು ಆ ಎಲ್ಲ ಪ್ರವಾಸಿಗರಿಗೆ ಆದ ತೊಂದರೆಯನ್ನು ಕೌಶಿಕನ ಪಾಪದ ಲೆಕ್ಕಕ್ಕೆ ಹಾಕಿದ್ದರು. ಆದ್ದರಿಂದ ಸತ್ಯವನ್ನು ನಿಜಾರ್ಥದಲ್ಲಿ ತಿಳಿಯುವುದು ಕಷ್ಟ.
ಯತ್ರಾನೃತಂ ಭವೇತ್ ಸತ್ಯಂ |
ಸತ್ಯಂ ಜಾಪ್ಯನೃತಂ ಭವೇತ್ ||

(ಸುಳ್ಳೇ ಸತ್ಯದಂತೆ ಒಳ್ಳೆಯದಾಗುವ ಸಂದರ್ಭವುಂಟು. ಸತ್ಯವೇ ಸುಳ್ಳಿನಂತೆ ಕೇಡಾಗುವ ಸಂದರ್ಭವೂ ಉಂಟು). ಅದಕ್ಕೇ ಕಗ್ಗ, ಸತ್ಯದ ಅನೇಕ ಮುಖಗಳನ್ನು ಸೇರಿಸಿಕೊಂಡು, ಅವುಗಳ ನಿಜಾರ್ಥವನ್ನು ಗಮನಿಸಿ ಬೆಳೆಸಿದಾಗ ಸತ್ಯದ ಪೂರ್ಣದರ್ಶನವಾಗುತ್ತದೆ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT