ಗುರುವಾರ , ಏಪ್ರಿಲ್ 15, 2021
24 °C

ಬೆರಗಿನ ಬೆಳಕು | ಅನಸೂಯ ಗುಣ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಮಿಥಿಲೆಯನ್ನು ಸುರುಚಿ ಎಂಬ ರಾಜ ಆಳುತ್ತಿದ್ದ. ಅವನಿಗೊಬ್ಬ ಮಗ. ಅವನ ಹೆಸರು ಸುರುಚಿಕುಮಾರ. ಆತ ವಿದ್ಯೆ ಕಲಿಯಲು ತಕ್ಕಶಿಲೆಗೆ ಹೋಗುವಾಗ ದಾರಿಯಲ್ಲಿ ಒಂದು ಧರ್ಮಶಾಲೆಯಲ್ಲಿ ಕುಳಿತಿದ್ದ. ಆಗ ಅಲ್ಲಿಗೆ ಮತ್ತೊಬ್ಬ ಹುಡುಗ ಬಂದ. ಆತ ವಾರಣಾಸಿಯ ರಾಜನ ಮಗ ಬ್ರಹ್ಮದತ್ತ ಕುಮಾರ. ಇಬ್ಬರಲ್ಲೂ ಸ್ನೇಹ ಬೆಳೆಯಿತು. ಜೊತೆಗೇ ಆಚಾರ್ಯರ ಬಳಿಗೆ ಹೋಗಿ ಶಿಕ್ಷಣ ಪಡೆದರು. ಶಿಕ್ಷಣ ಮುಗಿಸಿ ಮರಳಿ ಬರುವಾಗ ದಾರಿ ಕವಲೊಡೆಯುತ್ತಿದ್ದ ಸ್ಥಳದಲ್ಲಿ ನಿಂತರು. ನಮ್ಮಿಬ್ಬರಿಗೂ ಮಗ ಮತ್ತು ಮಗಳು ಹುಟ್ಟಿದರೆ, ಅವರ ಮದುವೆಯನ್ನು ಮಾಡಿ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳೋಣ ಎಂದು ತೀರ್ಮಾನಿಸಿದರು.

ತಮ್ಮ ತಮ್ಮ ರಾಜ್ಯಗಳಿಗೆ ಸೇರಿ, ಮದುವೆಯಾಗಿ ರಾಜರಾದರು. ಸುರುಚಿಕುಮಾರನಿಗೆ ಮಗ ಹುಟ್ಟಿದ. ಅವನ ಹೆಸರು ಚಿಕ್ಕ ಸುರುಚಿಕುಮಾರ. ಆತನೂ ವಿದ್ಯೆ ಕಲಿತು ಮರಳಿ ಬಂದ. ಆಗ ವಾರಣಾಸಿಯ ರಾಜನಾಗಿದ್ದ ಬ್ರಹ್ಮದತ್ತ ಕುಮಾರನಿಗೆ ಸುಮೇಧಾ ಎಂಬ ಸುಂದರಳಾದ ಮಗಳಿದ್ದಳು. ಹಿಂದೆ ಮಾತನಾಡಿದಂತೆ, ಅವರ ಮದುವೆ ಮಾಡಬೇಕೆಂದು ಸುರುಚಿಕುಮಾರ ಮಂತ್ರಿಗಳೊಡನೆ ಉಡುಗೊರೆಗಳನ್ನು ಕೊಟ್ಟು ರಾಜನ ಹತ್ತಿರ ಮಾತನಾಡಿ ಬರುವಂತೆ ವಾರಣಾಸಿಗೆ ಕಳುಹಿಸಿದ. ಬ್ರಹ್ಮದತ್ತ ಕುಮಾರನಿಗೆ ತನ್ನ ಮಗಳ ಮೇಲೆ ಅಪಾರವಾದ ಪ್ರೀತಿ. ತನ್ನ ಮಗಳು ಮತ್ತೊಬ್ಬ ರಾಜನ ಸಹಸ್ರಾರು ಹೆಂಡಂದಿರಲ್ಲಿ ಒಬ್ಬಳಾಗಬಾರದು, ಒಬ್ಬಳನ್ನೇ ಮದುವೆಯಾಗುವವನನ್ನು ಮಾತ್ರ ಹುಡುಕುತ್ತೇನೆ. ಸುರುಚಿಕುಮಾರ ರಾಜನಾಗುವುದರಿಂದ ಅವನಿಗೆ ಸಾವಿರಾರು ಹೆಂಡಂದಿರಾಗುತ್ತಾರೆ. ಆದ್ದರಿಂದ ನಾನು ಮಗಳನ್ನು ಕೊಡಲಾರೆ ಎಂದುಬಿಟ್ಟ. ಮಂತ್ರಿಗಳು ಬಂದು ವಿಷಯವನ್ನು ರಾಜನಿಗೆ ಅರುಹಿದರು. ಅವನಿಗೆ ಭಾರೀ ಕೋಪ ಬಂದಿತು. ನಮ್ಮದು ಇಷ್ಟು ವಿಸ್ತಾರವಾದ ದೇಶ. ಅದರ ಪ್ರಕಾರ ನನ್ನ ಮಗನಿಗೆ ಹದಿನಾರು ಸಾವಿರ ಹೆಂಡತಿಯರಾದರೂ ಇರಬೇಕು. ಈ ಸಂಬಂಧವಾಗದಿದ್ದರೆ ಬೇಡ ಎಂದ. ಆದರೆ ಮಗ ಚಿಕ್ಕ ಸುರುಚಿಕುಮಾರ ಸುಮೇಧಾಳ ರೂಪ, ಗುಣಗಳ ಬಗ್ಗೆ ಕೇಳಿದ್ದರಿಂದ, ಅವಳನ್ನೇ ಮದುವೆಯಾಗುತ್ತೇನೆ, ನನಗೆ ಹೆಂಗಸರ ದಂಡು ಬೇಕಿಲ್ಲ ಎಂದ. ಕೊನೆಗೆ ಇಬ್ಬರೂ ರಾಜರು ಒಪ್ಪಿ ಸಂಭ್ರಮದಿಂದ ಮದುವೆಯನ್ನು ಮಾಡಿದರು.

ಮುಂದೆ ಹತ್ತು ಸಾವಿರ ವರ್ಷಗಳಾದರೂ ಸುಮೇಧಳಿಗೆ ಮಕ್ಕಳಾಗಲಿಲ್ಲ. ರಾಜ್ಯದ ಪ್ರಜೆಗಳು ಬಂದು ರಾಜನನ್ನು ಬೇಡಿದರು. ರಾಜ್ಯಕ್ಕೊಬ್ಬ ನಾಯಕ ಬೇಕು, ಅದಕ್ಕೆ ಬೇರೆ ಮದುವೆಯಾಗಿ ಎಂದು ಒತ್ತಾಯಿಸಿದರು. ಸುಮೇಧಳೂ ಬೆನ್ನುಬಿದ್ದಳು. ಕೊನೆಗೆ ಅವಳೇ ಸ್ತ್ರೀಯರನ್ನು ಆರಿಸಿ ಹದಿನಾರು ಸಾವಿರ ಹೆಣ್ಣುಮಕ್ಕಳೊಡನೆ ಮದುವೆ ಮಾಡಿಸಿದಳು. ಮುಂದೆ ಹತ್ತು ಸಾವಿರ ವರ್ಷ ಕಳೆದರೂ ಯಾರಿಂದಲೂ ಮಕ್ಕಳಾಗಲಿಲ್ಲ. ಮತ್ತ್ತೆ ಪ್ರಜೆಗಳು ರಾಜಮಂದಿರದ ಮುಂದೆ ನಿಂತು ರಾಜಕುಮಾರನಿಗಾಗಿ ಬೇಡಿದರು. ಆಗ ರಾಜನ ಹೆಂಡಂದಿರೆಲ್ಲ ಸೇರಿ ಇಂದ್ರನ ಪ್ರಾರ್ಥನೆ ಮಾಡಿದರು. ಎರಡು ವರ್ಷಗಳ ಕಾಲ ದೀರ್ಘ ಪ್ರಾರ್ಥನೆ ಮಾಡಿದಾಗ ಇಂದ್ರ ಅದನ್ನರಿತು ಭೂಮಿಗೆ ಬಂದ. ರಾಜನ ಎಲ್ಲ ಹೆಂಡಂದಿರು ಪುತ್ರಭಾಗ್ಯವನ್ನು ಬೇಡಿದರು. ಆದರೆ ಸುಮೇಧ ಮಾತ್ರ, “ಯಾರಲ್ಲಿ ಶೀಲವಿದೆಯೋ, ಅರ್ಹತೆ ಇದೆಯೋ ಅದನ್ನು ನೀನೇ ಪರೀಕ್ಷಿಸಿ ನೀಡು” ಎಂದಳು. ಅವಳ ಅನಸೂಯಗುಣ ಇಂದ್ರನಿಗೆ ಮೆಚ್ಚಿಗೆಯಾಯಿತು. ಆಕೆಗೇ ಮಗುವನ್ನು ಕರುಣಿಸಿದ. ಮುಂದೆ ರಾಜ್ಯ ಬೆಳೆಯಿತು.

ಸ್ವಾರ್ಥ ಅಲ್ಪಾಯುಷಿ. ಅದರಿಂದ ಬರುವ ಸಂತೋಷ ಕಡಿಮೆ. ಅಸೂಯೆಯನ್ನು ತೊರೆದಾಗ ಬರುವ ಸಂತೋಷ ಶಾಶ್ವತವಾದದ್ದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.