ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮರಳಿ ಯತ್ನವ ಮಾಡು

Last Updated 18 ಆಗಸ್ಟ್ 2022, 19:12 IST
ಅಕ್ಷರ ಗಾತ್ರ

ಉತ್ತಮತೆಯಿಂತೆಂದು ಮತಿಗೆ ತೋರ್ದೊಡೇನು? |
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ||
ಮತ್ತುಮತ್ತನುವರ್ತಿಸುತ, ಭಂಗವಾದಂದು |
ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ || 697 ||

ಪದ-ಅರ್ಥ: ಉತ್ತಮತೆಯಿಂತೆಂದು=ಉತ್ತಮತೆ(ಶ್ರೇಷ್ಠತೆ)+ಇಂತು+ಎಂದು, ಮತಿಗೆ=ಬುದ್ಧಿಗೆ, ತೋರ್ದೊಡೇನು=ತೋರಿದರೇನು,ಅದೂರಿ=ಅದು+ಊರಿ, ಸ್ವಭಾವಾಂಶವಾಗಲ್=ಸ್ವಭಾವ+ಅಂಶವಾಗಲ್ (ಅಂಶವಾದಾಗ), ಮತ್ತು ಮತ್ತನುವರ್ತಿಸುತ=ಮತ್ತೆ+ಮತ್ತೆ+ಅನುವರ್ತಿಸುತ( ಮಾಡುತ್ತ), ಭಂಗವಾದಂದು=ಭಂಗವು+ಆದಂದು, ಯತ್ನಿಸಿನ್ನು=ಯತ್ನಿಸು+ಇನ್ನು

ವಾಚ್ಯಾರ್ಥ: ಶ್ರೇಷ್ಠತೆ ಎನ್ನುವುದು ಹೀಗೆ ಎಂದು ಬುದ್ಧಿಗೆ ಹೊಳೆದರೇನು? ಅದು ನಮ್ಮ ಬದುಕಿನಲ್ಲಿ ನೆಲೆನಿಂತು ಸ್ವಭಾವವೇ ಆಗಲು ಮತ್ತೆ ಮತ್ತೆ ಪ್ರಯತ್ನಿಸಬೇಕು. ಅದಕ್ಕೆ ಭಂಗಬಂದರೆ ಮತ್ತೆ ಪ್ರಯತ್ನಿಸಬೇಕು.

ವಿವರಣೆ: ಬದುಕಿನಲ್ಲಿ ಶ್ರೇಷ್ಠತೆ ಯಾವುದು ಎನ್ನುವುದು ಎಲ್ಲರಿಗೂ ತಿಳಿದಿದೆ. ಅದನ್ನು ಸಾಧಿಸಬೇಕೆಂಬ ಮನಸ್ಸೂ ಸಾಕಷ್ಟು ಜನರಿಗಿದೆ. ಆದರೆ ಅದನ್ನು ಪಡೆಯುವತ್ತ ಮಾಡಬೇಕಾದ ಪರಿಶ್ರಮದ, ಪ್ರಯತ್ನದ ಬಗ್ಗೆ ಒಲವಿರುವುದು ಕೇವಲ ಕೆಲವೇ ಜನರಿಗೆ. ಅವರಲ್ಲಿ ಒಬ್ಬಿಬ್ಬರು ಮಾತ್ರ ಚಿಂತನೆಯನ್ನು ಕಾರ್ಯರೂಪಕ್ಕೆ ತಂದು, ವೈಫಲ್ಯಗಳು ಇದಿರಾದರೂ,ಎದೆಗುಂದದೆ, ಸತತ ಪ್ರಯತ್ನ ಮಾಡಿ ಗುರಿ ಸಾಧಿಸುತ್ತಾರೆ. ಅದಕ್ಕೇ ಸಾಧಕರ ಸಂಖ್ಯೆ ತುಂಬ ಸಣ್ಣದು. ಅವರು ಅತ್ಯಂತ, ಸಾಧಾರಣ ಆರ್ಥಿಕ ಸ್ಥಿತಿಯ ಕುಟುಂಬದಲ್ಲಿ ಹುಟ್ಟಿದವರು. ಶಾಲೆ ಕಲಿಯುವ ಅದಮ್ಯ ಆಸೆ. ಆದರೆ ಎಲ್ಲರಿಗೂಆಸೆಗಳು ಈಡೇರುವುದಿಲ್ಲವಲ್ಲ.

ಕುಟುಂಬದ ಖರ್ಚಿಗಾಗಿ ದುಡಿಯಲೇಬೇಕಾದ ಪರಿಸ್ಥಿತಿ. ಈ ಮುಸ್ಲಿಂ ಹುಡುಗ ಶಾಲೆ ಬಿಟ್ಟ. ಏನು ಮಾಡಬೇಕೆಂಬ ಸ್ಪಷ್ಟ ಕಲ್ಪನೆ ಇಲ್ಲದೆ, ಮತ್ತೊಬ್ಬರನ್ನು ನೋಡಿ ತಾನೂ ಕಿತ್ತಳೆ ಹಣ್ಣು ಮಾರುವ ಕೆಲಸದಲ್ಲಿ ತೊಡಗಿದ. ಒಮ್ಮೆ ವಿದೇಶಿ ಪ್ರವಾಸಿ ಬಂದು ಇಂಗ್ಲೀಷಿನಲ್ಲಿ ಕಿತ್ತಳೆ ಹಣ್ಣಿನ ಬೆಲೆಯನ್ನು ಕೇಳಿದಾಗ ಅರ್ಥವಾಗದೆ ತಡವರಿಸಿದ ಹುಡುಗ ಮುಜುಗರಪಟ್ಟಿದ್ದ. ತನಗೆ ಯಾವುದೂ ಔಪಚಾರಿಕ ಶಿಕ್ಷಣ ದೊರಕಲಿಲ್ಲವೆಂದು ಚಿಂತಿಸಿದ, ತನಗಾದದ್ದು ಬೇರೆ ಮಕ್ಕಳಿಗೆ ಆಗಬಾರದೆಂದು ತೀರ್ಮಾನಿಸಿ ಊರಿನಲ್ಲಿ ಒಂದು ಶಾಲೆ ಪ್ರಾರಂಭಿಸಲು ತೀರ್ಮಾನಿಸಿದ. ತನ್ನ ಕಿತ್ತಳೆ ಹಣ್ಣಿನ ವ್ಯಾಪಾರದಿಂದ ಬಂದ ಹಣದಲ್ಲಿ ಒಂದಷ್ಟು ಭಾಗವನ್ನು ಶಾಲೆಗಾಗಿ ಎತ್ತಿಟ್ಟು ತನ್ನ ಹಳ್ಳಿ
ಹೊಸಪದಪುನಲ್ಲಿ ಶಾಲೆ ಪ್ರಾರಂಭಿಸಿಯೇ ಬಿಟ್ಟ.

ಅದು ಸುಲಭದ ಕೆಲಸವೇ? ಪುನಃ ಪುನಃ ವಿಶ್ರಾಂತಿಯಿಲ್ಲದೆ ದುಡಿದ. ಯಾವುದನ್ನು ಮೇಲಿಂದ ಮೇಲೆ ಮಾಡುತ್ತೇವೋ ಅದು ಅಭ್ಯಾಸವಾಗುತ್ತದೆ. ಅಭ್ಯಾಸವನ್ನು ಮುಂದುವರೆಸಿದರೆ ಮನೋಧರ್ಮವಾಗಿ, ಸ್ವಭಾವವೇ ಆಗುತ್ತದೆ. ನಂತರ ಸರಕಾರದ, ಸಾರ್ವಜನಿಕರ ಸಹಕಾರ ದೊರೆತು ಇಂದು ಅದು ಹಾಜಬ್ಬ ಶಾಲೆ ಎಂಬ ಖ್ಯಾತಿ ಪಡೆದಿದೆ. ಅದಕ್ಕೆ ತಮ್ಮೆಲ್ಲವನ್ನೂ ಧಾರೆಯೆರೆದ ಹರೇಕಳ ಹಾಜಬ್ಬರನ್ನು ಪದ್ಮಶ್ರೀ ಪ್ರಶಸ್ತಿಹುಡುಕಿಕೊಂಡು ಬಂದಿದೆ.

ಹೀಗೆ ಸಾಕು ಎನ್ನದೆ ಸತತ ದುಡಿದ ಪರಿಶ್ರಮದ ಫಲ ಇದು. ಕಗ್ಗ ಇದನ್ನೇ ಧ್ವನಿಸುತ್ತದೆ. ಜೀವನದಲ್ಲಿ ಶ್ರೇಷ್ಠತೆ ಎಂದುಕೊಂಡದ್ದನ್ನು ಸಾಧಿಸಲು ಸತತ ಪ್ರಯತ್ನದಿಂದ, ಅದನ್ನು ಸ್ವಭಾವವನ್ನಾಗಿಸಲು, ಮರಮರಳಿ ಶ್ರಮಿಸಬೇಕು. ನಡುವೆ ಅದಕ್ಕೇನಾದರೂ ಭಂಗ ಬಂದರೆ, ಮತ್ತೆ ಪ್ರಯತ್ನದ ಹಾದಿಯನ್ನು ಬಿಡಕೂಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT