ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆತ್ಮ-ಜಗದಾತ್ಮ

Last Updated 2 ನವೆಂಬರ್ 2021, 22:30 IST
ಅಕ್ಷರ ಗಾತ್ರ

ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು?|
ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ||
ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು|
ವಹ್ನಿಸ್ಫುಲಿಂಗಗಳೊ – ಮಂಕುತಿಮ್ಮ ||489||

ಪದ-ಅರ್ಥ: ಸಹಕೃತಿಯಿನುಭಯ= ಸಹಕೃತಿಯಿಂ (ಸಹಕಾರದಿಂದ)+ ಉಭಯ, ಜಗದಾತ್ಮಕಂತು= ಜಗದಾತ್ಮಕೆ+ ಅಂತು, ವಹ್ನಿ= ಬೆಂಕಿ, ಸ್ಫುಲಿಂಗ= ಕಿಡಿ.

ವಾಚ್ಯಾರ್ಥ: ಕಣ್ಣೇ ಇರದಿದ್ದರೆ ಸೂರ್ಯನ ಬೆಳಕಿನಿಂದ ಏನು ಪ್ರಯೋಜನ? ಸೂರ್ಯನೆ ಇಲ್ಲದಿದ್ದರೆ ಕಣ್ಣಿದ್ದರೂ ಪ್ರಯೋಜನವೇನು? ಹೀಗೆ ಕಣ್ಣು ಮತ್ತು ಬೆಳಕಿಗೆ ಸಾರ್ಥಕತೆ ಬರುವುದು ಪರಸ್ಪರ ಸಹಕಾರದಿಂದ. ಮನುಷ್ಯನ ಹಾಗೂ ಜಗದ ಆತ್ಮಕ್ಕೆ ಸಂಬಂಧ ಕೂಡ ಬೆಂಕಿ ಮತ್ತು ಕಿಡಿಗಳ ಸಂಬಂಧದಂತೆ.

ವಿವರಣೆ: ಕಣ್ಣಿನ ಕೆಲಸವಿರುವುದೇ ಬೆಳಕಿನಲ್ಲಿ. ಬೆಳಕಿಲ್ಲದೆ ಅದಕ್ಕೆ ಕೆಲಸವಿಲ್ಲ. ಜಗತ್ತಿನಲ್ಲಿ ನಡೆಯುವುದೆಲ್ಲ ಕತ್ತಲು ಮತ್ತು ಬೆಳಕಿನ ಆಟ. ಕತ್ತಲಿನ ಎದೆಯನ್ನು ಸೀಳಿ ಬರುವ ಬೆಳಕು. ಬೆಳಕಿದ್ದಾಗ ಕತ್ತಲೆ ಮರೆಯಾಗುತ್ತದೆ. ಜಗತ್ತನ್ನು ಕಣ್ಣಿಗೆ ಕಾಣುವಂತೆ ಮಾಡುವುದು ಬೆಳಕಲ್ಲವೆ? ಹಾಗಿದ್ದರೆ ಕಣ್ಣಿಲ್ಲದವರಿಗೆ ಬೆಳಕೇ ಇಲ್ಲವೇ? ಇದೆ. ಅದು ಬಾಹ್ಯದ ಕತ್ತಲೆಯನ್ನು ಮೀರಿ ಅಂತರಂಗದ ಪ್ರಕಾಶವನ್ನು ಕಾಣುತ್ತದೆ. ಆದರೆ ಸಾಮಾನ್ಯ ದೃಷ್ಟಿಯಲ್ಲಿ ಕಣ್ಣು ಮತ್ತು ಬೆಳಕುಗಳು ಪರಸ್ಪರ ಹೊಂದಾಣಿಕೆಯಲ್ಲೇ ಇರುವಂಥವುಗಳು. ಒಂದಿಲ್ಲದಿದ್ದರೆ ಮತ್ತೊಂದಿಲ್ಲ. ಅವೆರಡರ ಸಹಕಾರದಲ್ಲೆ ದೃಷ್ಟಿಯ ಸಾರ್ಥಕತೆ. ಇದೇ ಬಗೆಯ ಸಂಬಂಧ ಇರುವುದು ನಮ್ಮ ಆತ್ಮ ಹಾಗೂ ಜಗದಾತ್ಮದ ನಡುವೆ. ಮನುಷ್ಯ ‘ನಾನು’ ಎಂದು ಹೇಳುವಾಗ ತನ್ನ ಮನಸ್ಸಿನಲ್ಲಿ ಯಾವುದನ್ನು ಉದ್ದೇಶಿಸಿಕೊಂಡಿದ್ದಾನೋ ಅದು ಆತ್ಮ. ಇದು ನನ್ನ ಕೈ, ಇದು ನನ್ನ ಕಾಲು, ನನ್ನ ತಲೆ ಎಂದೆಲ್ಲ ಹೇಳುವುದು, ಇದು ನನ್ನ ಪೆನ್ನು, ಇದು ನನ್ನ ವಾಚು ಎಂದು ಹೇಳಿದಂತೆ.

ಹಾಗೆ ಹೇಳುವಾಗ, ನಾನು ಬೇರೆ, ಪೆನ್ನು, ವಾಚು ಬೇರೆ ಅಲ್ಲವೇ? ಇದು ‘ನನ್ನ ಕೈ’ ಎಂದು ಹೇಳಿದಾಗ ನಾನು ಬೇರೆ, ಕೈ ಬೇರೆ. ನಾನು ಕೈ ಅಲ್ಲ, ಕಾಲು ಅಲ್ಲ. ಹಾಗಾದರೆ ‘ನಾನು’ ಯಾರು? ನನ್ನ ದೇಹದಲ್ಲೇ ಇದ್ದು ದೇಹಕ್ಕಿಂತ ಬೇರೆಯದಾದ, ಆದರೆ ಇಡೀ ದೇಹವನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡ, ಚೈತನ್ಯವೇ ಆತ್ಮ. ಅದು ನನ್ನ ಆತ್ಮ. ಹೀಗೆ ಪ್ರಪಂಚದ ಎಲ್ಲ ಪ್ರಾಣಿಗಳಲ್ಲಿಯೂ ಇರುವ ಚೈತನ್ಯಗಳ ಒಟ್ಟು ಜ್ಞಾನವೇ ಜಗದಾತ್ಮ ಅಥವಾ ಪರಮಾತ್ಮ. ಪ್ರತಿಯೊಬ್ಬ ಮನುಷ್ಯನಲ್ಲಿರುವ ಆತ್ಮಕ್ಕೂ, ಜಗತ್ತಿನ ಆತ್ಮಕ್ಕೂ ಒಂದು ಅನ್ಯೋನ್ಯ ಸಂಬಂಧ. ಒಂದು ಬಿಟ್ಟು ಮತ್ತೊಂದಿಲ್ಲ.

ಸಮುದ್ರಕ್ಕೆ ಹೋಗಿ ಒಂದು ಬಿಂದಿಗೆ ನೀರು ತುಂಬಿಕೊಂಡು ಬಂದಾಗ ಅದು ಬಿಂದಿಗೆ ನೀರು ಮಾತ್ರ. ಈ ಬಿಂದಿಗೆ ನೀರು ಸಹಸ್ರ ಸಹಸ್ರ ಕೋಟಿ ಬಿಂದಿಗೆಗಳಷ್ಟು ವಿಶಾಲವಾದ ಸಮುದ್ರದ ಒಂದು ಹನಿ. ಬಿಂದಿಗೆ ನೀರು ನನ್ನಾತ್ಮವಾದರೆ ಸಮುದ್ರದ ನೀರು ಜಗದಾತ್ಮ. ಈ ಮಾತನ್ನು ಕಗ್ಗ ಎಷ್ಟು ಸುಂದರವಾದ ಉಪಮೆಯೊಂದಿಗೆ ವರ್ಣಿಸುತ್ತದೆ! ‘ವಹ್ನಿ ಸ್ಫುಲಿಂಗಗಳು’ ಎನ್ನುತ್ತದೆ. ವಹ್ನಿ ಎಂದರೆ ಬೆಂಕಿ. ದಗದಗನೆ ದೊಡ್ಡದಾಗಿ ಉರಿಯುತ್ತಿರುವ ಬೆಂಕಿಯಿಂದ ಆಗಾಗ ಪುಟ್ಟ ಕಿಡಿಗಳು ಹಾರುತ್ತವೆ. ಕಿಡಿ ಜೀವಾತ್ಮ ಮತ್ತು ಬೆಂಕಿ ಜಗದಾತ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT