ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪುಣ್ಯಶಾಲಿಯ ಬದುಕು

ಗುರುರಾಜ ಕರಜಗಿ ಅಂಕಣ
Last Updated 3 ಮಾರ್ಚ್ 2022, 19:09 IST
ಅಕ್ಷರ ಗಾತ್ರ

ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು |
ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು ||
ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ |
ಪುಣ್ಯಶಾಲಿಯ ಪಾಡು – ಮಂಕುತಿಮ್ಮ || 576 ||

ಪದ-ಅರ್ಥ: ಶಕ್ತಿಯನಳೆದು=ಶಕ್ತಿಯನು+ಅಳೆದು, ಬಗೆದು=ತಿಳಿದು, ಧೃತಿ=ಧೈರ್ಯ, ಕರ್ತವ್ಯಪರಿಧಿ=ಕರ್ತವ್ಯದ ಮಿತಿ, ಮೀರದುಜ್ಜುಗಿಸೆ=ಮೀರದೆ+ಉಜ್ಜುಗಿಸೆ (ಕರ್ತವ್ಯ ಮಾಡಿದರೆ)

ವಾಚ್ಯಾರ್ಥ: ತನ್ನ ಶಕ್ತಿಯನ್ನು ಅಳೆದು, ತನ್ನ ಗುಣಗಳನ್ನು ತಿಳಿದುಕೊಂಡು, ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತುಕೊಂಡು, ಧೈರ್ಯದಿಂದ ತನ್ನ ಕರ್ತವ್ಯದ ಮಿತಿಗಳನ್ನು ಮೀರದೆ ಕರ್ತವ್ಯ ಪಾಲನೆ ಮಾಡುವುದು ಪುಣ್ಯಶಾಲಿಯ ಬದುಕು.

ವಿವರಣೆ: ಈ ಕಗ್ಗ ಒಂದು ರೀತಿಯಲ್ಲಿ ಯಶಸ್ಸಿನ ಸಾಧನೆಗೆ ತಾಳೆಪಟ್ಟಿ ಇದ್ದಂತಿದೆ. ಒಬ್ಬ ಮನುಷ್ಯ ಸಾಧನೆಯ ಮೆಟ್ಟಿಲನ್ನೇರಿ ಪುಣ್ಯಶಾಲಿ ಎನ್ನಿಸಿಕೊಳ್ಳಬೇಕಾದರೆ ಮಾಡಬೇಕಾದ ಪ್ರತಿಯೊಂದು ಹಂತದ ಮೆಟ್ಟಿಲಿದೆ.

ಯಾವುದೇ ಕಾರ್ಯ ಮಾಡುವಾಗ ವ್ಯಕ್ತಿ ತನ್ನ ಶಕ್ತಿಯ ಮಟ್ಟವನ್ನು ತಿಳಿದಿರಬೇಕು. ತನ್ನ ಶಕ್ತಿಗೆ ಮೀರಿದ್ದಕ್ಕೆ ಕೈ ಹಾಕಿದರೆ ಯಶಸ್ಸು ಕಷ್ಟ ಮಾತ್ರವಲ್ಲ, ಪೆಟ್ಟೂ ಬಿದ್ದೀತು. ಇದರೊಂದಿಗೆ, ತನ್ನ ಗುಣಗಳ ಪರಿಚಯವೂ ಚೆನ್ನಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಗೆ ಅವನದೇ ಆದ ವಿಶಿಷ್ಟ ಗುಣಗಳಿವೆ. ಆ ಗುಣಗಳಿಗೆ ಹೊಂದುವ ಕಾರ್ಯ ಮಾಡಿದರೆ ಕೆಲಸ ಸುಲಭವಾಗುತ್ತದೆ. ಆತನ ಗುಣಗಳಿಗೆ ವಿರುದ್ಧವಾದ ಕಾರ್ಯ ಸುಗಮವಾಗಿ ನಡೆಯುವುದು ಕಷ್ಟ. ಮೃದು ಸ್ವಭಾವದ ವ್ಯಕ್ತಿ ಪೋಲೀಸ್ ಅಥವಾ ಸೈನ್ಯ ಸೇರಿದಾಗ ಅವನು ತನ್ನ ಗುಣಗಳಿಗೆ ವಿರುದ್ಧವಾದ ಕೆಲಸ ಮಾಡಬೇಕಾಗುತ್ತದೆ. ಅಂತೆಯೇ ಅತ್ಯಂತ ಧೃಡಕಾಯನಾದ, ಕಠಿಣಪರಿಶ್ರಮಿ ಮತ್ತು ಉಗ್ರ ಸ್ವಭಾವದ ವ್ಯಕ್ತಿ ಹೂಗಳನ್ನು ಕಟ್ಟಿ ಮಾಲೆ ಮಾಡುವುದೂ ಕಷ್ಟದ ಕೆಲಸ. ಕಾರ್ಯ ಮಾಡಲಾಗುವುದಿಲ್ಲವೆಂದಲ್ಲ. ಆದರೆ ಮನಸ್ಸಿನ ಸ್ವಭಾವಕ್ಕೆ ಹೊಂದುವ ಕಾರ್ಯ ಸುಲಲಿತವಾಗಿರುತ್ತದೆ.

ತನ್ನ ಶಕ್ತಿಯನ್ನು ಅಳೆದು, ತನ್ನ ಗುಣಗಳನ್ನು ಚೆನ್ನಾಗಿ ತಿಳಿದ ವ್ಯಕ್ತಿ ಕೂಡ ಸನ್ನಿವೇಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಒಂದು ಸನ್ನಿವೇಶದಲ್ಲಿ ಸುಸೂತ್ರವಾಗಿ ನಡೆದ ಕೆಲಸ ಮತ್ತೊಂದು ಸನ್ನಿವೇಶದಲ್ಲಿ ಹಾಗೆಯೇ ನಡೆದೀತು ಎಂದು ಹೇಳಲಾಗುವುದಿಲ್ಲ. ಬದಲಾದ ಸನ್ನಿವೇಶದಲ್ಲಿ ಕಾರ್ಯನಕ್ಷೆಯೇ ಬದಲಾಗಬೇಕಾಗುತ್ತದೆ.

ಕ: ಕಾಲ: ಕಾನಿ ಮಿತ್ರಾಣಿ ಕೋ ದೇಶ: ಕೌ ವ್ಯಯಾಗಮೌ |
ಕಸ್ಯಾಹಂ ಕಾ ಚ ಮೇ ಶಕ್ತಿರಿತಿ ಚಿಂತ್ಯಂ ಮುಹುರ್ಮುಹು: ||

ಸುಭಾಷಿತ

‘ಈಗ ಯಾವ ಕಾಲ ಸನ್ನಿವೇಶ ಇದಿರಾಗಿದೆ? ನಮಗೆ ಸಹಾಯ ಮಾಡುವ ಮಿತ್ರರು ಯಾರು? ನಾನಿರುವ ದೇಶದ ಪರಿಸರ ಹೇಗಿದೆ? ನನ್ನ ಸಂಕಲ್ಪದಂತೆ ನಡೆಯುವುದರಿಂದ ಲಾಭವೇನು? ನಷ್ಟವೇನು? ಇಷ್ಟಾಗಿ ನಾನು ಯಾರು? ನನ್ನಲ್ಲಿರುವ ವಿಶಿಷ್ಟ ಶಕ್ತಿ ಏನು? ಹೀಗೆ ಹಲವು ದೃಷ್ಟಿಕೋನಗಳಿಂದ ಚಿಂತನೆ ಮಾಡುತ್ತ ಕಾರ್ಯನಿರತನಾಗಬೇಕು.

ಸನ್ನಿವೇಶವನ್ನು ಅರಿತ ಮೇಲೆ ಯಾವ ಸಮಸ್ಯೆ ಬಂದರೂ ಅದನ್ನು ಎದುರಿಸುತ್ತೇನೆ ಎಂಬ ಧೈರ್ಯ ಬೇಕು. ಕೊನೆಗೆ ತನ್ನ ಕರ್ತವ್ಯದ ಮಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕರ್ತವ್ಯದ ಮಿತಿಗಳನ್ನು ದಾಟಿದಾಗ ಅಥವಾ ಮಿತಿಮೀರಿ ಸ್ವಾತಂತ್ರ್ಯ ತೆಗೆದುಕೊಂಡರೆ ಆಪತ್ತು ತಪ್ಪಿದ್ದಲ್ಲ. ಕಗ್ಗ ಈ ಎಲ್ಲ ಗುಣಗಳನ್ನು ಒಂದೇ ಚೌಪದಿಯಲ್ಲಿ ಕಟ್ಟಿಕೊಡುತ್ತದೆ. ಶಕ್ತಿಯ ಮಿತಿಗಳನ್ನು ತಿಳಿದು, ತನ್ನ ಗುಣಗಳ ಸ್ವರೂಪವನ್ನು ಅರಿತು, ಸನ್ನಿವೇಶದ ಸೂಕ್ಷ್ಮತೆಯನ್ನು ಅಳೆದು, ಧೈರ್ಯವನ್ನು ಕಳೆದುಕೊಳ್ಳದೆ, ತನ್ನ ಕರ್ತವ್ಯದ ಪರಿಧಿಯಲ್ಲೇ ದುಡಿದ ವ್ಯಕ್ತಿ ಒಬ್ಬ ಪುಣ್ಯಶಾಲಿ ಅವನ ಬದುಕು ಒಂದು ಜೈತ್ರಕಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT