ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಭಕ್ತಿ-ತಾಪಸಿ

Last Updated 27 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ |
ತತ್ತ್ವ ಶೋಧನೆ ಕಷ್ಟ; ಮತಿಕಾರ್ಯ ಕಷ್ಟ ||
ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |
ಹತ್ತುವನು ತಾಪಸಿಯೊ – ಮಂಕುತಿಮ್ಮ || 528 ||

ಪದ-ಅರ್ಥ: ತತ್ವಶೋಧನೆ=ತತ್ವದ ಹುಡುಕಾಟ, ಮತಿಕಾರ್ಯ=ಬುದ್ಧಿಯ ಕೆಲಸ, ಸುಳುವು=ಸುಲಭ.

ವಾಚ್ಯಾರ್ಥ: ಭಕ್ತಿ, ನಂಬಿಕೆಗಳು ಸುಲಭ. ಭಜನೆ, ನಮಸ್ಕಾರಗಳೂ ಸುಲಭ. ಆದರೆ ತತ್ತ್ವದ ಹುಡುಕಾಟ ಕಷ್ಟ. ಅದರಂತೆ ಬುದ್ಧಿಯ ಕಾರ್ಯಗಳೂ ಕಷ್ಟ. ಗಿರಿಯನ್ನು ಅರಿಯಲು ಸುಲಭವೆಂದು ಲೋಕದ ಜನ ಅದನ್ನು ಸುತ್ತುತ್ತಾರೆ. ಸಾಧಕನಾದ ತಪಸ್ವಿ ಗಿರಿಯನ್ನು ಏರಿ ಅರಿಯುತ್ತಾನೆ.

ವಿವರಣೆ: ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗಗಳು ಹಲವು. ಜ್ಞಾನಮಾರ್ಗ, ಕರ್ಮಮಾರ್ಗಗಳು ಹೇಗೆ ಮುಖ್ಯವೋ ಹಾಗೆಯೇ ಭಕ್ತಿಮಾರ್ಗವೂ ಮುಕ್ತಿದಾಯಕವೇ. ಭಕ್ತಿ ಎಲ್ಲ ಭಕ್ತರಲ್ಲಿ, ಎಲ್ಲ ಸಮಯದಲ್ಲಿ ಒಂದೇ ತೆರನಾಗಿ ಹೊಮ್ಮುವುದಿಲ್ಲ. ಕೆಲವರು ಭಗವಂತನ ಹಾಡುಗಳನ್ನು ಹಾಡಿ ತೃಪ್ತಿ ಪಡೆದರೆ ಮತ್ತೊಬ್ಬರು ಪೂಜೆ, ಸೇವೆಗಳಲ್ಲಿ ಧನ್ಯತೆಯನ್ನು ಅನುಭವಿಸುತ್ತಾರೆ. ಭಕ್ತನಿಗೆ ಒಮ್ಮೆ ತಾನು ಭಗವಂತನ ದಾಸನೆಂದೆನಿಸಿದರೆ ಮತ್ತೊಮ್ಮೆ ಮಿತ್ರಭಾವ ಉಂಟಾಗಬಹುದು. ಹೀಗಾಗಿ ಭಕ್ತಿಯಲ್ಲಿ ನವವಿಧಗಳನ್ನು ದಾರ್ಶನಿಕರು ಗುರುತಿಸಿದ್ದಾರೆ. ಅವುಗಳು, ಶ್ರವಣ, ಕೀರ್ತನ, ಸ್ಮರಣ, ಚರಣ ಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನ.

ಈ ನವವಿಧಭಕ್ತಿಯಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಅವರ ಮನಸ್ಥಿತಿಯಂತೆ, ಪರಿಸ್ಥಿತಿಯಂತೆ ಭಕ್ತಿಯ ವಿಧಾನವನ್ನು ಆರಿಸಿಕೊಳ್ಳುತ್ತಾರೆ. ಮೊದಲ ಹಂತಗಳು ಸುಲಭವಾದವುಗಳು. ನಮಗೆ ಇಂದು ಭಕ್ತಿಯೆಂದರೆ ಪೂಜೆ, ಪುನಸ್ಕಾರ, ಗಂಧ, ಮಾಲೆಗಳು, ಅಲಂಕಾರ, ಧೂಪಾರತಿ, ಭಜನೆ ಎಂದೋ, ಜಪಮಣಿ ಹಿಡಿದು ರಾಮನಾಮವನ್ನೋ, ಶಿವನಾಮವನ್ನೋ ಜಪಿಸುತ್ತಾ, ಬರೆಯುತ್ತಾ ಇರುವುದೆಂದೋ, ಧ್ಯಾನಮಾಡುತ್ತ, ವಾರಕ್ಕೆರಡು ದಿನ ಉಪವಾಸ ಮಾಡುವುದೆಂದೋ ಭಾವಿಸುವುದಾಗಿದೆ. ಕಗ್ಗ ಈ ಎಲ್ಲ ವಿಧಾನಗಳು ಸುಲಭವಾದವು ಎನ್ನುತ್ತದೆ. ಆದರೆ ಬದುಕಿನ ತತ್ವದ ಶೋಧನೆ ಮಾಡುವುದು ಬಲುಕಷ್ಟ. ಯಾಕೆಂದರೆ ಅದು ಬರೀ ಹೃದಯದ ಕಾರ್ಯವಲ್ಲ, ಬುದ್ಧಿಯ ಕೆಲಸ. ಅಲ್ಲಿ ಪೂಜೆ, ಪ್ರಸಾದಗಳಿಗಿಂತ ಎತ್ತರದ ಮಟ್ಟವನ್ನು ತಲುಪ
ಬೇಕಾಗುತ್ತದೆ. ಬಸವಣ್ಣ ಹೇಳುತ್ತಾರೆ,

ಲಿಂಗವ ಪೂಜಿಸಿ ಫಲವೇನಯ್ಯ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮ ದೇವರ ಪೂಜಿಸಿ,
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?

ವಚನದಲ್ಲಿಯ ಕೊನೆಯ ಸಾಲು ಮುಖ್ಯ. ಪೂಜಿಸಿದ ನಂತರ ನದಿಯೊಳಗೆ ನದಿ ಬೆರೆತಂತೆ ಭಕ್ತ, ಭಗವಂತನಲ್ಲಿ ಸೇರಬೇಕು. ಅಂಥವನು ನಿಜವಾದ ತಾಪಸಿ. ಉಳಿದವರು, ಬೆಟ್ಟ ಹತ್ತುವುದಕ್ಕಿಂತ ಅದನ್ನು ಸುತ್ತಿ ಪರಿಕ್ರಮಣ ಮಾಡುವುದು ಸುಲಭವೆಂದು ಸುತ್ತುತ್ತಾರೆ. ಕೆಲವೇ ಸಾಧಕರು ತತ್ವವನ್ನು ಅರಸಿ, ಅರಿತು ಧೈರ್ಯದಿಂದ ಬೆಟ್ಟವನ್ನು ಏರಿ ತಪಸ್ವಿಗಳಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT