ಶುಕ್ರವಾರ, ಜನವರಿ 27, 2023
27 °C

ಬೆರಗಿನ ಬೆಳಕು: ಹಗುರವಾದ ಬದುಕು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |
ಒಳಿತನಾಗಿಸು, ಕೊಡುತ ಕೊಳುತ ಸಂತಸವ ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |
ಮಿಳಿತನಿರು ವಿಶ್ವದಲಿ - ಮಂಕುತಿಮ್ಮ || 750 ||

ಪದ-ಅರ್ಥ: ಮೇಲೀಜುತಿರು=ಮೇಲೆ+ಈಜುತಿರು, ಒಳಿತನಾಗಿಸು=ಒಳಿತನು+ಆಗಿಸು, ಕಳವಳಂಬಡದೆ=ಕಳವಳಪಡದೆ, ಬಂದಂದು=ಬಂದ+ಅಂದು, ಮಿಳಿತನಿರು=ಸೇರಿಕೊಂಡಿರು.

ವಾಚ್ಯಾರ್ಥ: ಬದುಕಿನ ಪ್ರವಾಹದಲ್ಲಿ ಮುಳುಗಿ ಹೋಗಬೇಡ, ಅದರ ತೆರೆಯ ಮೇಲೆ ಹಗುರವಾಗಿ ಈಜುತ್ತಿರು. ಕೊಡುತ್ತ, ಪಡೆಯುತ್ತ ಲೋಕಕ್ಕೆ ಒಳ್ಳೆಯದನ್ನು ಮಾಡು. ಕಡೆಯ ಕರೆ ಬಂದಾಗ ಕಳವಳಪಡದೆ ನಡೆದುಬಿಡು. ವಿಶ್ವದ ಆಗುಹೋಗುಗಳಲ್ಲಿ ತನ್ಮಯತೆಯಿಂದ ಸೇರಿಕೊಂಡಿರು.

ವಿವರಣೆ: ಅಮೃತಲಾಲ್ ಠಕ್ಕರ್ ಗುಜರಾತಿನವರು. ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿ ಉಗಾಂಡಾ ದೇಶಕ್ಕೆ ಹೋಗಿ ಅಲ್ಲಿ ರೇಲ್ವೆ ಹಳಿಗಳನ್ನು ಹಾಕಿಸುವ ಕೆಲಸ ಮಾಡಿದರು. ಕೆಲಕಾಲ ಸಾಂಗ್ಲಿ ಸಂಸ್ಥಾನದ ಪ್ರಧಾನ ಎಂಜಿನಿಯರ್‌ ಆಗಿದ್ದರು. ಒಂದು ದಿನ ಭಂಗೀಜನರ ಕಾಲೊನಿಗೆ ಹೋದಾಗ ಅವರ ಜೀವನದ ದುರ್ಭರತೆಯನ್ನು ಕಂಡು ತಮ್ಮ ಕಾರ್ಯಕ್ಕೆ ರಾಜೀನಾಮೆ ಕೊಟ್ಟು ಸಮಾಜಸೇವೆಗೆ ನಿಂತರು. ಗೋಖಲೆಯವರು ಸ್ಥಾಪಿಸಿದ “ಸರ್ವೆಂಟ್ಸ್ ಆಪ್ ಇಂಡಿಯಾ”ವನ್ನು ಸೇರಿದರು. ಹರಿಜನರ, ಕಾಡುಜನರ (ಭಿಲ್ಲರ) ಅಭಿವೃದ್ಧಿಯೇ ಅವರಿಗೆ ತಪಸ್ಸಾಯಿತು. ಮುಂದೆ ಗಾಂಧೀಜಿಯ ಸೆಳೆತ ಅವರನ್ನು ಸೇವಾಗ್ರಾಮಕ್ಕೆ ಕರೆತಂದಿತು. ಅದು ಎಂತಹ ತನ್ಮಯತೆಯ ಕರ್ಮ! ಸದಾ ದುಡಿತದ ಗಾಂಧೀಜಿಯವರೇ, “ಬಾಪಾ, ಕೆಲವು ದಿನಗಳಾದರೂ ನೀವು ವಿಶ್ರಾಂತಿ ತೆಗೆದುಕೊಳ್ಳಬಾರದೆ?” ಎಂದು ಕೇಳಿದಾಗ, “ಬಾಪೂ, ಇನ್ನೂ ಕೆಲಸ ಬಹಳ ಬಿದ್ದಿದೆ. ಹೇಗೆ ವಿಶ್ರಾಂತಿ ತೆಗೆದುಕೊಳ್ಳಲಿ? ಕೆಲಸದಲ್ಲಿಯೇ ನನಗೆ ವಿಶ್ರಾಂತಿಯ ಸುಖ” ಎಂದರಂತೆ!

ಅವರದೊಂದು ಪರಿವ್ರಾಜಕ ಜೀವನ. ಅವರ ಕರ್ಮ ಜೀವನಕ್ಕೆ ಅನಾಸಕ್ತಿ ಪರಿಮಳ ನೀಡುತ್ತಿತ್ತು. ಅವರು ಅನಾಸಕ್ತಿ ಸಾಧಿಸಿ ಹದ ಮಾಡಿಕೊಂಡದ್ದಲ್ಲ. ಅದು ಸಹಜವಾಗಿಯೇ ಅರಳಿ ಕಂಪು ನೀಡುವ ಹೂವಿನಂತೆ. ಅವರ ಸಮಾಜಸೇವೆಯನ್ನು, ದೀನದಲಿತರ ಬದುಕನ್ನೇ ಅಪ್ಪಿಕೊಂಡ ಅವರ ಬದುಕನ್ನು ಕಂಡು ಮಹಾತ್ಮ ಗಾಂಧೀಜಿ (ಬಾಪೂ) ರವರೇ ಠಕ್ಕರ್‌ರವರನ್ನು ‘ಬಾಪಾ’ ಎಂದು ಕರೆದರು. ಅಂದಿನಿಂದ ಅವರು ಪ್ರಪಂಚಕ್ಕೆಲ್ಲ ‘ಠಕ್ಕರ್ ಬಾಪಾ’ ಆಗಿ ಹೋದರು. ಅವರ ಮರಣವೂ (1951) ಹಾಗೆಯೇ ನಿರ್ಮಲವಾದ ಧ್ಯಾನಸ್ಥ ಸ್ಥಿತಿಯಲ್ಲಿ ಆಯಿತಂತೆ. ಈ ಕಗ್ಗ ಠಕ್ಕರ್ ಬಾಪಾರಂಥವರ ಬದುಕಿಗೊಂದು ವ್ಯಾಖ್ಯೆ ಇದ್ದಂತಿದೆ. ಕಗ್ಗ ಹೇಳುತ್ತದೆ, ಜೀವನದ ಮಹಾಪ್ರವಾಹದಲ್ಲಿ ಆಸೆ ಆಮಿಷಗಳೆಂಬ ಅನೇಕ ಮಡುವುಗಳಿವೆ, ಸುಳಿಗಳಿವೆ. ಅವುಗಳಲ್ಲಿ ಮುಳುಗಿ ಹೋಗಬೇಡ. ತೆರೆಗಳ ಮೇಲೆ ಹಗುರಾಗಿ ಈಜುತ್ತಿರು ನಿನ್ನ ಬದುಕನ್ನು ಹಗುರಾಗಿಸಲು ಪ್ರಪಂಚಕ್ಕೆ ಸಾಧ್ಯವಾದಷ್ಟು ಸಂತೋಷವನ್ನು ನೀಡುತ್ತ, ಪಡೆಯುತ್ತ ಬದುಕು. ಸಂತೋಷವೆಂಬುದು ಬೆನ್ನಿಗೆ ಕಟ್ಟಿದ ಸೋರೆಕಾಯಿ, ಮುಳುಗಲು ಬಿಡುವುದಿಲ್ಲ. ಹೀಗಿದ್ದಾಗ, ಸಾವಿನ ಕರೆ ಬಂದಾಗ ಮನದಲ್ಲಿ ಸಂಕಟ, ಕಳವಳ ಬೇಡ. ಬದುಕು ಸಂಭ್ರಮವಾದರೆ, ಸಾವು ಅದರ ಶಿಖರ. ಈ ಸಂಭ್ರಮದ ಶಿಖರ ತಲುಪಲು ಸತತವಾಗಿ ಪ್ರಪಂಚದ ಆಗುಹೋಗುಗಳಲ್ಲಿ ಅನನ್ಯವಾದ ಪ್ರೀತಿಯಿಂದ ಭಾಗವಹಿಸು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು