ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬ್ರಹ್ಮಾನುಭವ

Last Updated 10 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ||
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |
ಬ್ರಹ್ಮಾನುಭವಿಯಾಗೊ- ಮಂಕುತಿಮ್ಮ || 754 ||

ಪದ-ಅರ್ಥ: ಕೆಳಕೂಟದಲಿ=ಗೆಳೆಯರ ಗುಂಪಿನಲ್ಲಿ, ಬ್ರಹ್ಮಾನುಭವಿಯಾಗೊ=ಬ್ರಹ್ಮನ+ಅನುಭವಿಯಾಗೊ.

ವಾಚ್ಯಾರ್ಥ: ಒಮ್ಮೆ ತೋಟ ಸಂಚಾರದಲಿ, ಒಮ್ಮೆ ಮಿತ್ರಕೂಟದಲ್ಲಿ, ಒಮ್ಮೆ ಸಂಗೀತದಲ್ಲಿ ಮತ್ತೊಮ್ಮೆ ಶಾಸ್ತ್ರದಲ್ಲಿ, ಒಮ್ಮೆ ಸಂಸಾರದಲಿ ಮತ್ತೆ ಕೆಲವೊಮ್ಮೆ ಮೌನದಲ್ಲಿ ಬ್ರಹ್ಮದ ಅನುಭವವನ್ನು ಪಡೆ.

ವಿವರಣೆ: ಅಧ್ಯಾತ್ಮಿಕವಾಗಿ ಮನುಷ್ಯ ಜೀವನದ ಪರಮಗುರಿ ಬ್ರಹ್ಮವಸ್ತುವಿನ ಸಾಕ್ಷಾತ್ಕಾರ. ಅದನ್ನು ಎಲ್ಲಿ ಹುಡುಕುವುದು? ಜೀವನದ ಪರ್ವತಶಿಖರವನ್ನು ಯಾವ ಕಡೆಯಿಂದಲೂ ಏರಬಹುದು. ತುದಿ ತಲುಪಿದಾಗ ಎಲ್ಲ ಮಾರ್ಗಗಳೂ ಒಂದೇ ಕಡೆಗೆ ಸೇರುತ್ತವೆ. ಪಯಣದ ಪ್ರಾರಂಭಿಕ ನೆಲೆಗಳು ಬೇರೆ ಬೇರೆಯಾಗಿರುವುದಕ್ಕೆ ಸಾಂಸ್ಕೃತಿಕ, ಐತಿಹಾಸಿಕ,ಭೌಗೋಳಿಕ ಮತ್ತು ಜನಸಮುದಾಯದ ಮನೋಧರ್ಮಗಳು ಕಾರಣವಾಗಿರಬಹುದು. ಮನುಷ್ಯನ ಅಪ್ರತಿಮ ಸಾಹಸವೈಭವಕ್ಕೆ ವೈವಿಧ್ಯಮಯ ಮೆರುಗನ್ನು ನೀಡುವ ಈ ಚಿಂತನೆ ಆಶ್ಚರ್ಯವೇನಲ್ಲ. ಎಲ್ಲರಿಗೂ ಒಂದೇ ಸಾಂಪ್ರದಾಯಿಕ ಮಾರ್ಗವನ್ನು ಹಾಕಿ ಕೊಟ್ಟಿದ್ದಿದ್ದರೆ,ಇದ್ದಿರಬಹುದಾದ ಏಕತಾನತೆಗೆ ಹೋಲಿಸಿದರೆ, ಲೋಕದಲ್ಲಿ ಅಂತಹವೈವಿಧ್ಯಕ್ಕೆ ಅವಕಾಶವಿರುವುದು ಎಷ್ಟೊಂದು ಕಲಾತ್ಮಕವಾಗಿದೆ! ವಿವಿಧ ಮಾರ್ಗಗಳಲ್ಲಿ ಸಾಧನೆ ಮಾಡಲು ಆಸಕ್ತಿ ಮೂಡಿಸುವಂತಿದೆ.

ದೇವನು ಒಬ್ಬನೇ ಆದರೂ, ಅನೇಕ ಪ್ರಕಾರಗಳಲ್ಲಿ ಆಟವಾಡುತ್ತಾನಲ್ಲವೆ? ಎಲ್ಲ ವ್ಯತ್ಯಾಸಗಳಿಗೂ ಅತೀತನಾಗಿ, ಎಲ್ಲರನ್ನೂ ಕೈ ಬೀಸಿ ಕರೆಯುತ್ತಿರುವುದು ಒಂದೇ ಗುರಿಎನ್ನುವುದು ಸುಳ್ಳಲ್ಲ. ಕಗ್ಗ ಆ ಮಾತನ್ನು ಎಷ್ಟು ಸುಂದರವಾಗಿ ಹೇಳುತ್ತದೆ! ಬ್ರಹ್ಮಾನುಭವಿಯಾಗಲು ಅನೇಕ ದಾರಿಗಳು. ಯಾವ ದಾರಿಯೂಶ್ರೇಷ್ಠವಲ್ಲ, ಯಾವ ದಾರಿಯೂ ಕನಿಷ್ಠವಲ್ಲ. ತೋಟದಲ್ಲಿಬೆಮರು ಹರಿಸಿ ದುಡಿಯುವ ಮಾಲಿ, ಎರಡು ಮೂರುತಿಂಗಳುಗಳ ಪರಿಶ್ರಮದ ನಂತರ ಬೆಳೆದ ಸುಂದರ ಹೂಗಳನ್ನು ಕೈಯಲ್ಲಿ ಹಿಡಿದಾಗ ಆಗುವ ಆನಂದ, ಅನುಭೂತಿ,ಋಷಿಯ ಅನುಭೂತಿಗೆ ಕಡಿಮೆಯದಲ್ಲ. ಸಜ್ಜನರ ಸಂಗದಲ್ಲಿ, ಸ್ನೇಹಿತರ ಆತ್ಮೀಯತೆಯಲ್ಲಿ ಹೊಳೆದು ಮಿನುಗಿದ ಅಂತ:ಕರಣ ಬ್ರಹ್ಮದ ದರ್ಶನವೇ.

ಸಂಗೀತದ ಉತ್ತುಂಗ ಶಿಬಿರಗಳಲ್ಲಿ ಮಗ್ನನಾದ ಗಾಯಕನಿಗಾಗುವುದೂ ಅದೇ ದಿವ್ಯಾನುಭವ.ಶಾಸ್ತ್ರದ ಆಳ, ವಿಸ್ತಾರಗಳನ್ನು ತನ್ನ ಆಂತರ್ಯದಲ್ಲಿ ಇಳಿಸಿಕೊಳ್ಳುವ ಜ್ಞಾನಿಗೂ ಅದೇ ದರ್ಶನವಾದೀತು. ಸಂಸಾರದಜೀವನ ಸುಲಭವಲ್ಲ. ಅಲ್ಲಿಯ ಅಸಮಂಜಸತೆಗಳನ್ನು ಸಮನ್ವಯಿಸುವಾಗ, ಮತ್ತೊಬ್ಬರೊಡನೆ ಹೊಂದಾಣಿಕೆ ಮಾಡಿಕೊಳ್ಳುವಾಗ ತೋರುವ ಮನಸ್ಥಿಮಿತತೆ, ದಯೆ, ತ್ಯಾಗಗಳು ದೈವೀಲಕ್ಷಣಗಳೇ. ಇವೆಲ್ಲವುಗಳೊಂದಿಗೆ ಕೇವಲ ತನ್ನ ಆಂತರ್ಯವನ್ನೇ ವೀಕ್ಷಿಸುತ್ತ, ಅದನ್ನು ಪರಿಶುದ್ಧಗೊಳಿಸುತ್ತ ಮೌನದಲ್ಲಿಯೂ ಬ್ರಹ್ಮವಸ್ತುವನ್ನು ಕಾಣಬಹುದು. ಹೀಗೆ ಹಲವು ವಿಧಗಳಲ್ಲಿ, ಹಲವು ಹಂತಗಳಲ್ಲಿ ಮನಸ್ಸನ್ನು ಹದಗೊಳಿಸುತ್ತ, ಪರಿಶುದ್ಧಗೊಳಿಸುತ್ತ
ಹೋದಾಗ ದೊರೆವುದೇ ಬ್ರಹ್ಮಾನುಭವ. ಬ್ರಹ್ಮಾನುಭವೆಂದರೆ ನಾಲ್ಕು ಕೈ, ಕಿರೀಟ ಧರಿಸಿದ ದೇವರನ್ನು ಕಾಣುವುದಲ್ಲ, ಎಲ್ಲರಲ್ಲೂ, ಎಲ್ಲದರಲ್ಲೂ ಭಗವಂತನ ಅವತರಣವನ್ನು ಕಾಣುವ ಮನೋಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT