ಸೋಮವಾರ, ಜನವರಿ 17, 2022
26 °C

ಬೆರಗಿನ ಬೆಳಕು: ಶಿಕ್ಷೆಯಲ್ಲಿ ಕಡಿತ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಡಿ.ವಿ.ಗುಂಡಪ್ಪ

ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ|
ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್||
ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು|
ಕುಂದಿಸಲಿಕಾಗದೇಂ?- ಮಂಕುತಿಮ್ಮ ||507||

ಪದ-ಅರ್ಥ: ಕ್ಷಮಿಸೆನಲ್= ಕ್ಷಮಿಸು+ ಎನಲ್ (ಎನ್ನಲು), ನಿನ್ನೊಳ್ತನವನ್= ನಿನ್ನ+ ಒಳ್ತನವನ್ (ಒಳ್ಳೆಯತನವನ್ನು), ಅಂದಿನಳಲನ್= ಅಂದಿನ+ ಅಳಲನ್ (ದುಃಖವನ್ನು), ತಂದೆಬಗೆಯಿಂ= ತಂದೆಯ ರೀತಿಯಲ್ಲಿ, ಬಗೆದು= ಕಂಡು, ಶಾಸನೋಗ್ರವನಿನಿತು= ಶಾಸನ+ ಉಗ್ರವನು+ ಇನಿತು (ಸ್ವಲ್ಪ), ಕುಂದಿಸಲಿಕಾಗದೇಂ= ಕುಂದಿಸಲಿಕೆ (ಕಡಿಮೆ ಮಾಡಲಿಕ್ಕೆ)+ ಆಗದೇಂ (ಆಗದೆ).

ವಾಚ್ಯಾರ್ಥ: ನ್ಯಾಯಪತಿ ದಂಡವಿಧಿಸುವಾಗ ನೀನು ಕ್ಷಮಿಸು ಎಂದು ಬೇಡಿದರೆ ಆತ, ನಿನ್ನ ಹಿಂದೆ ಮಾಡಿದ ಒಳ್ಳೆಯದನ್ನು ಮತ್ತು ಇಂದಿನ ದುಃಖವನ್ನು ಗಮನಿಸಿ, ತಂದೆಯಂತೆ ತಿಳಿದು ನಿನ್ನ ಉಗ್ರಶಿಕ್ಷೆಯನ್ನು ಕೊಂಚ ಕಡಿಮೆ ಮಾಡದಿರಲಾರನೆ?

ವಿವರಣೆ: ಇದೊಂದು ನೈಜ ಘಟನೆ. ಒಂದು ಕಂಪನಿಯಲ್ಲಿ ಒಬ್ಬ ವ್ಯಕ್ತಿ ಇಪ್ಪತ್ತೈದು ವರ್ಷಗಳ ಕಾಲ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಅವನ ಕೆಲಸದಲ್ಲಿ ಯಾವ ತಪ್ಪು ಹುಡುಕುವುದೂ ಸಾಧ್ಯವಿರಲಿಲ್ಲ. ಅವನ ನಿಷ್ಠೆ ಅಚಲವಾಗಿತ್ತು. ಆತ ಸದಾಕಾಲ ಕಂಪನಿಯ ಶ್ರೇಯಕ್ಕಾಗಿಯೇ ಚಿಂತಿಸುತ್ತಿದ್ದ. ಏನು ಮಾಡಿದರೆ ಕಂಪನಿಗೆ ಒಳ್ಳೆಯದಾದೀತು ಎಂದು ಹೊಸ ಹೊಸ ಯೋಜನೆಗಳನ್ನು ಮಾಡುತ್ತಿದ್ದ. ನಡೆಯುವವರು ಎಡವದೆಯೇ, ಕುಳಿತವರು ಎಡುವುದುಂಟೆ ಎಂಬಂತೆ ಈ ವ್ಯಕ್ತಿ ಮಾಡಿದ ಒಂದು ಕಾರ್ಯ ತಪ್ಪಾಯಿತು. ತಪ್ಪು ಮಾತ್ರವಲ್ಲ ಕಂಪನಿಯ ಮಾನ ಹೋಗುವ ಪ್ರಸಂಗ ಬಂದಿತು. ವಿಷಯ ಕುಂದುಕೊರತೆಗಳ ಸಮಿತಿಯ ಮುಂದೆ ಹೋಯಿತು. ಅದಕ್ಕೆ ಕಂಪನಿಯ ಅಧ್ಯಕ್ಷರು ಮತ್ತು ನಿವೃತ್ತ ನ್ಯಾಯಮೂರ್ತಿಗಳು ಮುಖ್ಯಸ್ಥರ ವಿಚಾರಣೆ ನಡೆಯಿತು. ಕಂಪನಿಯ ಕಾಯಿದೆಗಳ ಪ್ರಕಾರ, ಆ ವ್ಯಕ್ತಿಯನ್ನು ಕೆಲಸದಿಂದ ತೆಗೆಯುವುದು ಮಾತ್ರವಲ್ಲ, ಈ ಸಮಸ್ಯೆಯನ್ನು ಕೋರ್ಟಿಗೆ ಹಾಕಿ ಅವನನ್ನು ಜೈಲಿಗೆ ಕಳುಹಿಸಬಹುದಿತ್ತು. ಆದರೆ ಸಮಿತಿಯುವರು ಹಾಗೆ ಮಾಡದೆ ಅವನನ್ನು ಕರೆಸಿ, ಎಚ್ಚರಿಕೆ ಕೊಟ್ಟು, ಮೂರು ಇನ್‍ಕ್ರಿಮೆಂಟ್‍ಗಳನ್ನು ಕಡಿಮೆ ಮಾಡಿದ ಶಿಕ್ಷೆ ನೀಡಿದರು. ಯಾಕೆಂದರೆ, ಆತ ಹಿಂದೆ ಸಂಸ್ಥೆಗೆ ಮಾಡಿದ ಅನೇಕ ಒಳ್ಳೆಯ, ಪ್ರಾಮಾಣಿಕ ಸೇವೆಯನ್ನು ಅವರು ಗುರುತಿಸಿದ್ದರು. ಅದಕ್ಕೇ ಶಿಕ್ಷೆ ಕಡಿಮೆಯಾಗಿತ್ತು. ಇದೇ ಕಗ್ಗದ ಮಾತು. ನ್ಯಾಯಪತಿ ಶಿಕ್ಷೆ ನೀಡುವ ಮೊದಲು ಹಿಂದೆ ಮಾಡಿದ ಒಳ್ಳೆಯ ಕಾರ್ಯಗಳನ್ನು, ಇಂದಿನ ದುಸ್ಥಿತಿಯನ್ನು ಕರುಣೆಯಿಂದ ತಂದೆಯಂತೆ ನೋಡಿ ಶಿಕ್ಷೆಯನ್ನು ಕಡಿಮೆ ಮಾಡಬಹುದು. ಇದು ನಮ್ಮ ಬದುಕಿಗೂ ಅನ್ವಯಿಸಿದ್ದು. ಭಗವಂತ ಯಾವಾಗಲೂ ನ್ಯಾಯಾಧೀಶನಂತೆ, ನಾವು ಮಾಡುವ ಒಳಿತು-ಕೆಡುಕುಗಳನ್ನು ಗಮನಿಸುತ್ತಾನೆ. ನಾವು ಹೆಚ್ಚು ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ಮುಂದೆ ತಪ್ಪಾದಾಗ, ಅವುಗಳನ್ನು ಗಮನಿಸಿ ಶಿಕ್ಷೆಯನ್ನು ಕಡಿತಗೊಳಿಸುತ್ತಾನೆ. ಅಂತೆಯೇ, ನಾವು ನಮ್ಮ ನಿತ್ಯಜೀವನದಲ್ಲಿ ಆದಷ್ಟು ಹೆಚ್ಚು ಹೆಚ್ಚು ಧನಾತ್ಮಕವಾದ, ಪರೋಪಕಾರದ, ಸತ್ಕಾರ್ಯಗಳನ್ನು ಮಾಡುತ್ತ ಬಂದರೆ, ಅಕಸ್ಮಾತ್ ನಮ್ಮಿಂದಾದ ತಪ್ಪುಗಳನ್ನು ಕ್ಷಮಿಸಿ, ಆದಷ್ಟು ಶಿಕ್ಷೆಯ ತೀವ್ರತೆಯನ್ನು ಕಡಿಮೆ ಮಾಡುತ್ತಾನೆ. ಇಂದಿನ ಸತ್ಕಾರ್ಯಗಳು ಮುಂದಿನ ಸುಖಜೀವನಕ್ಕೆ ಬುನಾದಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು