ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಹರ್ಷಿಗಳ ಮಹಾಕಾವ್ಯಗಳು

Last Updated 19 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ |
ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ||
ಗೀತೆಯಲ್ಲಿ ವಿಶ್ವಜೀವನರಹಸ್ಯವನವರ್ |
ಖ್ಯಾತಿಸಿಹರದು ಕಾವ್ಯ – ಮಂಕುತಿಮ್ಮ || 462 ||

ಪದ-ಅರ್ಥ: ಗಹನಮಾರ್ಗಮಂ=ಕಷ್ಟದ ದಾರಿ, ವಿಶ್ವಜೀವನ ರಹಸ್ಯವನವರ್=ವಿಶ್ವಜೀವನ+ರಹಸ್ಯವನು+ಅವರ್, ಖ್ಯಾತಿಸಿಹರು=ಪ್ರಸಿದ್ಧಿ ಪಡಿಸಿದ್ದಾರೆ.

ವಾಚ್ಯಾರ್ಥ: ಪ್ರೀತಿಯ ಮಹಿಮೆಯನ್ನು ವಾಲ್ಮೀಕಿ ಮಹರ್ಷಿಗಳು, ನೀತಿಸೂಕ್ಷ್ಮದ ಕಠಿಣದಾರಿಯನ್ನು ಮತ್ತು ಗೀತೆಯಲ್ಲಿ ವಿಶ್ವಜೀವನದ ರಹಸ್ಯವನ್ನು ವ್ಯಾಸರು ಪ್ರಸಿದ್ಧಿಪಡಿಸಿದ್ದಾರೆ. ಅದು ಕಾವ್ಯ.

ವಿವರಣೆ: ಇಡೀ ಸಾಹಿತ್ಯ ಪ್ರಪಂಚದಲ್ಲಿ ಭರತಭೂಮಿಯ ಕೀರ್ತಿ ಎರಡು ಕಾವ್ಯಗಳಿಂದ ಅಮರವಾಗಿ, ಅತ್ಯುನ್ನತವಾಗಿ ನಿಂತಿದೆ. ಆ ಎರಡು ಕಾವ್ಯಗಳು – ರಾಮಾಯಣ ಮತ್ತು ಮಹಾಭಾರತ. ವೇದ, ಉಪನಿಷತ್ತುಗಳ ನಂತರ ಈ ಕಾವ್ಯಗಳು ನಮಗೆ ಪರಮಪೂಜ್ಯವಾದ, ಜೀವನಾದರ್ಶದ ಮಾರ್ಗದರ್ಶಿಗಳು.

ರಾಮಾಯಣ ಹಿಮವತ್ಪರ್ವತದಂತೆ, ಅತ್ಯಂತ ರಮಣೀಯವೂ, ಗಗನಚುಂಬಿಯೂ ಆಗಿದೆ. ರಾಮಾಯಣದಲ್ಲಿ ಬರುವ ಅಪೂರ್ವವಾದ, ನಿಷ್ಕಲ್ಮಷವಾದ ಪ್ರೀತಿಯ ನೆಲೆಗಳು ಅನೇಕ. ದಶರಥನಿಗೆ ರಾಮನ ಮೇಲೆ ಪ್ರೀತಿ, ಲಕ್ಷ್ಮಣನ ಸಂಪೂರ್ಣ ಶರಣಾಗತಿಯ ಪ್ರೀತಿ, ರಾಮ-ಸೀತೆಯರ ಪ್ರೀತಿ, ರಾಮ-ಭರತರ ಪ್ರೀತಿ, ರಾಮ-ಆಂಜನೇಯರ ಪ್ರೀತಿ, ರಾಮ-ಶಬರಿಯ ಪ್ರೀತಿ, ಹೀಗೆ ಪಟ್ಟಿ ಮಾಡುತ್ತ ಹೋದರೆ ಪ್ರೀತಿಯ ಅನೇಕ ಛಾಯೆಗಳು ಕಾಣುತ್ತವೆ. ಆದ್ದರಿಂದ ವಾಲ್ಮೀಕಿ ಮಹರ್ಷಿಗಳ ರಾಮಾಯಣ, ಪ್ರೀತಿಯ ವಿವಿಧ ಮುಖಗಳ ಅನನ್ಯ ಚಿತ್ರಣ.

ಭಗವಾನ್ ವೇದವ್ಯಾಸರು ಬರೆದ ಮಹಾಭಾರತ ಸಮುದ್ರದಂತೆ, ವಿಸ್ತಾರವಾಗಿ, ಪ್ರಕ್ಷುಬ್ದವಾಗಿ ಜೀವನದ ತೊಡಕಿನ ಪ್ರಸಂಗಗಳನ್ನು ತೋರಿಸುವುದಾಗಿದೆ. ಮಹಾಭಾರತದ ಕಾಲ ದ್ವಾಪರಯುಗ. ಅದನ್ನು ಕಲಿಯುಗದ ಅರುಣೋದಯ ಕಾಲವೆಂದು ವರ್ಣಿಸಲಾಗಿದೆ. ನಮಗೆ ಈಗ ಇಪ್ಪತ್ತೊಂದನೆಯ ಶತಮಾನದಲ್ಲಿ, ನಮ್ಮ ಪ್ರಪಂಚದಲ್ಲಿ ಎಂಥ ಸಂದೇಹಗಳು, ಎಂಥ ಸಂಕಟ, ಸಂಕ್ಷೋಭೆಗಳು ವಿಕಟರೂಪದಲ್ಲಿ ನಮ್ಮನ್ನು ಕೆಣಕುತ್ತಿವೆಯೋ ಅಂಥ ಉತ್ಕಟವಾದ ಧಾರ್ಮಿಕ, ನೈತಿಕ ಪ್ರಶ್ನೆಗಳೇ ಮಹಾಭಾರತದ ಗ್ರಂಥಿ ಸ್ಥಾನಗಳು. ದುರ್ಯೋಧನನ ಛಲ, ಧರ್ಮಿಷ್ಠರಾದ ಪಾಂಡವರ ಸಂಕಟಗಳು, ಜ್ಞಾನಿಗಳಾದ ಭೀಷ್ಮ, ದ್ರೋಣರ ಅಸಹಾಯಕತೆ, ದ್ರೌಪದಿಯ ಅಪಮಾನ, ಅದರಿಂದಾಗಿ ಉದ್ಭವಿಸಿದ ಸೇಡಿನ ಪ್ರತಿಜ್ಞೆಗಳು, ಅವುಗಳ ಸಾಧನೆಗೆ ಹಿಡಿಯಬೇಕಾದ ಕುಟಿಲೋಪಾಯಗಳು, ಕೊನೆಗೆ ಕೃಷ್ಣನ ಧರ್ಮಪ್ರಜ್ಞೆ, ಧರ್ಮರಕ್ಷಣೆ, ದುಷ್ಟರ ನಾಶ ಇವೆಲ್ಲ ಸೇರಿ ಭಾರತ ನಮಗೆ ಒಂದು ದೃಷ್ಟಿಯಿಂದ ಸಮಕಾಲೀನ ಚರಿತ್ರೆಯಾಗಿದೆ.

ಮಹಾಭಾರತದ ಭಾಗವೇ ಆಗಿರುವ ಭಗವದ್ಗೀತೆ, ಒಂದು ಸ್ವತಂತ್ರ ಕೃತಿಯೋ ಎನ್ನುವಷ್ಟು ಪ್ರಖ್ಯಾತವಾಗಿದೆ. ಉಪನಿಷತ್ತುಗಳು ಜೀವ, ಜಗತ್ತು ಮತ್ತು ಈಶ್ವರ ಎಂಬ ಮೂರರನ್ನು ಕುರಿತು ಚರ್ಚಿಸುವ ವೇದಾಂತ ಗ್ರಂಥಗಳಾದರೆ, ಗೀತೆಯು ಈ ವೇದಾಂತ ತತ್ವಗಳನ್ನು ಪ್ರತಿಯೊಬ್ಬನೂ ತನ್ನ ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಂಡು ಬದುಕಬಹುದು ಎಂಬುದನ್ನು ಸರಳವಾಗಿ ಉಪದೇಶಿಸುವ ಜೀವನಧರ್ಮಶಾಸ್ತ್ರವಾಗಿದೆ.

ಹೀಗೆ ಮಹರ್ಷಿ ವಾಲ್ಮೀಕಿ ಹಾಗೂ ಭಗವಾನ್ ವೇದವ್ಯಾಸರು ನೀಡಿದ ಮಹಾಕಾವ್ಯಗಳು, ಸಹಸ್ರಾರು ವರ್ಷಗಳಿಂದ ಮತ್ತು ಮುಂದೆ ಸಹಸ್ರಾರು ವರ್ಷಗಳವರೆಗೆ ಮಾನವರಿಗೆ ಧೈರ್ಯ, ಸಾಂತ್ವನ, ನೀತಿಯನ್ನು ಬೋಧಿಸುವ ಗ್ರಂಥಗಳಾಗಿವೆ ಎನ್ನುವುದು ಈ ಕಗ್ಗದ ಸಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT