ಬುಧವಾರ, ಸೆಪ್ಟೆಂಬರ್ 22, 2021
29 °C

ಬೆರಗಿನ ಬೆಳಕು | ನೆಲೆಯನರಿಯದೆ ವಂಚಿತರಾದವರು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಡಿವಿಜಿ

ಪಂಚಭೂತಗಳಂತೆ, ಪಂಚೇಂದ್ರಿಯಗಳಂತೆ |
ಪಂಚವೇಕೆ? ಚತುಷ್ಕ ಷಟ್ಕವೇಕಲ್ಲ? ||
ಹೊಂಚುತಿಹುನಂತೆ ವಿಭು; ಸಂಚವನದೇನಿಹುದೊ|
ವಂಚಿತರು ನಾವೆಲ್ಲ – ಮಂಕುತಿಮ್ಮ || 319 ||

ಪದ-ಅರ್ಥ: ಚತುಷ್ಕ=ನಾಲ್ಕು, ನಾಲ್ಕರ ಗುಂಪು, ಷಟ್ಕ=ಆರರ ಗುಂಪು, ಸಂಚವನದೇನಿಹುದೊ=ಸಂಚು(ಯೋಜನೆ, ಮರ್ಮ)+ಅವನದು+ಏನಿಹುದೊ, ವಿಭು=ಒಡೆಯ, ಭಗವಂತ.

ವಾಚ್ಯಾರ್ಥ: ನಾವೆಲ್ಲ ಆದದ್ದು ಪಂಚಭೂತಗಳಿಂದ, ನಮಗಿರುವುವು ಪಂಚೇಂದ್ರಿಯಗಳು ಎನ್ನುತ್ತಾರೆ. ನಾಲ್ಕು ಏಕಲ್ಲ? ಆರು ಏಕಲ್ಲ? ಭಗವಂತ ಮರೆಯಾಗಿ ಕುಳಿತಿದ್ದಾನಂತೆ. ಏನು ಅವನ ಸಂಚೊ! ಒಟ್ಟಿನಲ್ಲಿ ನಾವೆಲ್ಲ ವಂಚಿತರೆ.

ವಿವರಣೆ: ಇದೊಂದು ಅದ್ಭುತ ಚೌಪದಿ. ನಾಲ್ಕು ಸಾಲುಗಳನ್ನು ಓದಿದರೆ ತುಂಬ ಗೊಂದಲ ಕಾಣುತ್ತದೆ. ತಮಗೆ ಅರಿಯದ, ಅರಿಯಲಾಗದ ವಸ್ತುವಿನ ಬಗ್ಗೆ ಬೇಜಾರು ತೋರುತ್ತದೆ. ಅದು ಯಾವುದೋ ನಮಗೆ ಅರ್ಥವಾಗದ ವಸ್ತು, ಅದರ ಬಗ್ಗೆ ಏನೇನೋ ಹೇಳುತ್ತಾರೆ. ಆದರೆ ನಾವು ಮಾತ್ರ ಅದರ ಸ್ಪಷ್ಟತೆಯಿಂದ ವಂಚಿತರಾಗಿದ್ದೇವೆ ಎನ್ನುವ ಹತಾಶೆ ಇದೆ. ಅದೇನೋ ಪಂಚಭೂತಗಳಂತೆ, ನಾವು ಅವುಗಳಿಂದಲೇ ಸೃಷ್ಟಿಸಲ್ಪಟ್ಟಿದ್ದೇವಂತೆ. ನಮ್ಮ ಅನುಭವಗಳಿಗೆಲ್ಲ ಪಂಚೇಂದ್ರಿಯಗಳೇ ಕಾರಣಗಳಂತೆ. ಅದು ಯಾಕೆ ಕೇವಲ ಐದೋ ತಿಳಿಯದು. ನಾಲ್ಕಾಗಬಹುದಿತ್ತು, ಆರೂ ಆಗಬಹುದಿತ್ತು. ಭಗವಂತ ಇದ್ದಾನಂತೆ ಆದರೆ ಯಾರಿಗೂ ಕಾಣದಂತೆ ಮರೆಯಾಗಿದ್ದಾನಂತೆ. ಅದು ಏತಕೊ? ಅವನೇನಾದರೂ ಸಂಚು ಮಾಡುತ್ತಿದ್ದಾನೆಯೆ?


ಗುರುರಾಜ ಕರಜಗಿ

ನಮಗರ್ಥವಾಗದ ವಿಷಯದ ಬಗ್ಗೆ, ನಮ್ಮ ಬುದ್ಧಿಗೆ ನಿಲುಕದ ಚಿಂತನೆಯ ಬಗ್ಗೆ ಯೋಚಿಸುವಾಗ ಈ ತರಹದ ಪ್ರಶ್ನೆಗಳು ಏಳುವುದು ಸಹಜ. ಇದಕ್ಕೆ ಕಾರಣವೊಂದಿದೆ. ಗೊತ್ತಿರುವುದರಿಂದ ಗೊತ್ತಿರದ್ದರ ಕಡೆಗೆ ಹೋಗುವುದು ಜ್ಞಾನದ ಮಾರ್ಗ. ಗೊತ್ತಿಲ್ಲದ್ದನ್ನು ಮತ್ತೊಂದು ಗೊತ್ತಿಲ್ಲದ್ದರಿಂದ ಪರಿಚಯಿಸುವುದು ಸಾಧ್ಯವಿಲ್ಲ. ಉದಾಹರಣೆಗೆ ನೀವು ಯಾರದೋ ಮನೆಗೆ ಹೋಗಬೇಕೆಂದಿದ್ದೀರಿ. ಅವರು ನಿಮಗೆ ಫೋನ್‌ನಲ್ಲಿ ಬರುವ ದಾರಿಯನ್ನು ಹೇಳುತ್ತಿದ್ದಾರೆ. ‘ನಿಮಗೆ ಬ್ರಂಟನ್ ಸರ್ಕಲ್ ಗೊತ್ತಾ?’ ಎಂದು ಕೇಳುತ್ತಾರೆ. ನೀವು ಆ ಹೆಸರನ್ನೇ ಕೇಳಿಲ್ಲ. ‘ಪರವಾಗಿಲ್ಲ ಸಿಟಿ ಮಾಲ್ ಗೊತ್ತಲ್ಲ, ಅದೇ ಸಿಟಿ ಮಾರ್ಕೆಟ್ ಮುಂದೆ ಇದೆಯಲ್ಲ?’ ಎಂದು ಹೆಚ್ಚು ವಿವರ ಕೊಡುತ್ತಾರೆ. ನಿಮಗೆ ಅದೂ ಗೊತ್ತಿಲ್ಲ. ‘ಅಯ್ಯೋ, ಅದೂ ಗೊತ್ತಿಲ್ಲವೆ?. ಹೋಗಲಿ ಬಿಡಿ. ನಿಮಗೆ ಬೃಂದಾವನ ಥಿಯೇಟರ್ ಗೊತ್ತಲ್ಲವಾ? ಅದೊಂದು ಅತ್ಯಂತ ಪ್ರಸಿದ್ಧವಾದ ಸಿನಿಮಾ ಮಂದಿರ?’ ನಿಮಗೆ ಆ ಥಿಯೇಟರ್ ಹೆಸರೇ ತಿಳಿದಿಲ್ಲ. ಆಗ ಮಾರ್ಗದರ್ಶನ ಮಾಡುವವರು ಪೆಚ್ಚಾಗುತ್ತಾರೆ. ನಿಮಗೆ ಯಾವುದಾದರೂ ಒಂದು ಸ್ಥಳ ಗೊತ್ತಿದ್ದರೆ ಅಲ್ಲಿಂದ ಮುಂದೆ ಗೊತ್ತಿಲ್ಲದ ಸ್ಥಾನಕ್ಕೆ ದಾರಿ ತೋರಬಹುದು. ನಿಮಗೆ ಯಾವ ಸ್ಥಳವೂ ಗೊತ್ತಿಲ್ಲದಿದ್ದರೆ, ನೀವು ಆ ಪ್ರದೇಶಕ್ಕೇ ಹೊಸಬರಾಗಿದ್ದರೆ ನಿಮಗೆ ಹೊಸ ಸ್ಥಳದ ಮಾರ್ಗದರ್ಶನ ಮಾಡುವುದು ಸಾಧ್ಯವಿಲ್ಲ. ಅಧ್ಯಾತ್ಮದಲ್ಲೂ ಅದೇ ಪರಿಸ್ಥಿತಿ. ಭಗವಂತನನ್ನು ಅರಿಯಲು ನಮ್ಮ ಚಿಂತನೆ, ಅನುಭವಗಳಿಂದ ಸಾಧ್ಯವಿಲ್ಲ. ಅವನನ್ನು ತಿಳಿಯಲು ನಮಗೆ ತಿಳಿದಿರುವ ಕೆಲವು ಸ್ಥಾನಗಳಿಂದ ಮುಂದುವರೆಯಬೇಕು. ಅದು ವೇದಾಂತವಾಗಬಹುದು, ಯೋಗವಾಗಬಹುದು. ಅದಕ್ಕೇ ಪಂಚಭೂತಗಳು, ಪಂಚೇಂದ್ರಿಯಗಳು ಇವುಗಳ ಪ್ರಾಥಮಿಕ ಪರಿಚಯವಾದರೆ ಅಲ್ಲಿಂದ ಮುಂದುವರೆಯಲು ಪ್ರಯತ್ನಿಸಬಹುದು. ಅದಿಲ್ಲದಿದ್ದಾಗ ವಿಭು ಅವಿತುಕೊಂಡಂತೇ ಭಾವನೆ ಬರುತ್ತದೆ. ಹೀಗಾಗಿ ನಾವು ಆ ಜ್ಞಾನದಿಂದ ವಂಚಿತರಾಗಿಯೇ ಉಳಿಯುತ್ತೇವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು