ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ತೀರ್ಥಕ್ಷೇತ್ರ

Last Updated 8 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ |
ಮಹಿಮೆಯಲ್ಲೇನೆಂದು ಸಂಶಯಿಸಬೇಡ ||
ವಿಹಿತಗೈದವರಾರು ವಸತಿಯಂ ದೈವಕ್ಕೆ |
ಮಹಿಮೆ ಮನಸೋತೆಡೆಯೊ – ಮಂಕುತಿಮ್ಮ || 493 ||

ಪದ-ಅರ್ಥ: ಬಹುಜನಂ=ಬಹಳ ಜನರು,
ಮಹಿಮೆಯಲ್ಲೇನೆಂದು=ಮಹಿಮೆಯು+ಅಲ್ಲಿ+ಏನೆಂದು, ವಿಹಿತಗೈದವರಾರು=ನಿಯಮಿಸಿದವರಾರು, ವಸತಿ=ವಾಸಸ್ಥಾನ.

ವಾಚ್ಯಾರ್ಥ: ಬಹಳ ಜನರು ಕೈ ಮುಗಿದ ಕ್ಷೇತ್ರದಲ್ಲಿ, ತೀರ್ಥದಲ್ಲಿ ಮಹಿಮೆ ಏನಿದೆ ಎಂದು ಸಂಶಯಪಡಬೇಡ. ದೈವಕ್ಕೆ ಅಲ್ಲಿ ವಾಸಸ್ಥಾನವನ್ನು ಕಲ್ಪಿಸಿದವರು ಯಾರು? ಎಲ್ಲಿ ಮಹಿಮೆಗೆ ಮನ ಸೋಲುತ್ತದೆಯೋ ಅಲ್ಲಿಯೇ ಅದರ ಸ್ಥಾನ.

ವಿವರಣೆ: ಹಲವು ವರ್ಷಗಳ ಹಿಂದೆ ಅಲಹಾಬಾದ್‍ನ ತ್ರಿವೇಣಿ ಸಂಗಮಕ್ಕೆ ಹೋಗಿದ್ದೆ. ಮುಂದೆ ಒಂದು ತಿಂಗಳಿನಲ್ಲಿ ಕುಂಭಮೇಳ ನಡೆಯುವುದಿತ್ತು. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವ ಒಂದು ಪವಾಡ.
ಲಕ್ಷಾಂತರ ಜನರು ಅಲ್ಲಿಗೆ ಬಂದು ಸಂಗಮದಲ್ಲಿ ಸ್ನಾನ ಮಾಡಿ ತೃಪ್ತಿಪಡುವ ದೃಶ್ಯ ಅದ್ಭುತ.
ಎಷ್ಟೋ ಜನ ತಮ್ಮ ವರ್ಷಗಟ್ಟಲೆ ದುಡಿದು ಕೂಡಿಟ್ಟ ಹಣವನ್ನು ಈ ಯಾತ್ರೆಗೆ ಖರ್ಚುಮಾಡುತ್ತಾರೆ. ಅಲ್ಲಿ ಯಾವ ವಿಶೇಷ ವ್ಯವಸ್ಥೆಯೂ ಇರಲಿಲ್ಲ. ಇರುವುದೆಲ್ಲೊ, ಮಲಗುವುದೆಲ್ಲೊ, ಊಟವೆಲ್ಲೊ ಯಾರಿಗೂ ತಿಳಿಯದು. ಜನರ ನೂಕುನುಗ್ಗಾಟದಲ್ಲಿ ಹಿಂದೆ ಅನೇಕರು ಪ್ರಾಣಕಳೆದುಕೊಂಡದ್ದು ಉಂಟು. ಇಷ್ಟಿದ್ದರೂ ಜನ ಯಾಕೆ ಅಲ್ಲಿಗೆ ಬರುತ್ತಾರೆ ಎಂಬುದು ನನಗೆ ವಿಸ್ಮಯದ ವಿಷಯವಾಗಿತ್ತು. ಅದೇ ಗಂಗೆ, ಅದೇ ಯಮುನೆ, ಅದೇ ಕಣ್ಣಿಗೆ ಕಾಣದ ಸರಸ್ವತಿ. ಆದರೆ ಆ ದಿನಗಳಲ್ಲಿ ಮಾತ್ರ ಯಾಕೆ ಏನೋ ವಿಶೇಷವಿದೆಯೆಂದು ನಂಬಿ ಜನ ಸೇರುತ್ತಾರಲ್ಲ, ತಮಗಾಗುವ ಅನಾನುಕೂಲತೆಗಳನ್ನು ಮರೆತು ಸಂಭ್ರಮಿಸುತ್ತಾರಲ್ಲ ಎಂಬುದು ನನಗೆ ಒಗಟಾಗಿತ್ತು. ಆ ಕಷ್ಟಗಳನ್ನು ಎದುರಿಸಿಯೂ ಅವರ ಮೊಗದಲ್ಲಿ ಹೊಳೆದ ತೃಪ್ತಿ, ಸಂತೋಷ ಬೆರಗು ತಂದಿತ್ತು. ಇದೆಲ್ಲಕ್ಕೆ ಕಾರಣ ಅವರಲ್ಲಿದ್ದ ಶ್ರದ್ಧೆ. ಈ ಶ್ರದ್ಧೆಯೇ ಜನರನ್ನು ಬೇರೆ ಬೇರೆ ತೀರ್ಥಕ್ಷೇತ್ರಗಳಿಗೆ ಕರೆದೊಯ್ಯುತ್ತದೆ. ಅಲ್ಲಿ ಈಶ್ವರನಿದ್ದಾನೆ, ನಾರಾಯಣನಿದ್ದಾನೆ. ರಾಮನಿದ್ದಾನೆ, ಕೃಷ್ಣನಿದ್ದಾನೆ, ಅಲ್ಲಾ ಇದ್ದಾನೆ. ಏಸೂ ಇದ್ದಾನೆ ಎನ್ನುವ ಖಚಿತವಾದ ನಂಬಿಕೆ ತೀರ್ಥಯಾತ್ರೆ ಮಾಡಿಸುತ್ತದೆ. ಕುತೂಹಲಿಗಳಿಗೆ, ನಾಸ್ತಿಕರಿಗೆ ಇದೊಂದು ಮೂಢನಂಬಿಕೆ ಎಂದು ತೋರಬಹುದು, ಕೆಲವರು ಅಪಹಾಸ್ಯ ಮಾಡಬಹುದು. ಹಾಗಾದರೆ ಆ ತೀರ್ಥಕ್ಷೇತ್ರಗಳಲ್ಲಿ ದೈವಸನ್ನಿಧಿ ಇದೆಯೆಂದು ಮೊದಲಾರು ಹೇಳಿದವರು? ದೈವಕ್ಕೆ ಅಲ್ಲಿ ವಸತಿಯನ್ನು ನಿರ್ಮಿಸಿದವರು ಯಾರು? ಎಂಬ ಸಂಶಯದ ಪ್ರಶ್ನೆಗಳು ಕುತೂಹಲಿಗೆ ಬರುವುದು ಸಹಜ. ಭಗವಂತ ಎಲ್ಲೆಲ್ಲಿಯೂ ಇಲ್ಲವೆ? ಕೆಲವು ಕಡೆಗೆ ಮಾತ್ರ ಭಗವಂತ ಇರುವುದಾದರೆ ಅವನನ್ನು ಸರ್ವಾಂತರ್ಯಾಮಿ ಎನ್ನುವುದೇಕೆ? ದೇಹದಲ್ಲಿ ರಕ್ತಮಾಂಸಗಳಿದ್ದಂತೆ ಮಲಮೂತ್ರಗಳೂ ಇವೆ. ಹಾಗೆಯೇ ಪ್ರಪಂಚದಲ್ಲಿ ಶ್ರೇಷ್ಠಾಂಗಗಳೂ ಇವೆ, ನಿಕೃಷ್ಟಾಂಶಗಳೂ ಇವೆ. ಯಾವ ವಸ್ತುವಿನ ಮೇಲೆ ಭಗವತ್ಪ್ರಕಾಶ ಬಿದ್ದಿದೆಯೋ ಅದು ಶ್ರೇಷ್ಠ. ಭಗವದ್ಗೀತೆಯ ಹತ್ತನೇ ಅಧ್ಯಾಯದಲ್ಲಿ ‘ಲೋಕದಲ್ಲಿ ಎಲ್ಲೆಲ್ಲಿ ಸತ್ಪಾತಿಶಯವುಂಟೋ, ಸೌಭಾಗ್ಯ ಸಂತೋಷಗಳುಂಟೋ ಆ ಎಲ್ಲವು ನನ್ನ ತೇಜಸ್ಸಿನ ಅಂಶಗಳು’ ಎನ್ನುತ್ತಾನೆ ಕೃಷ್ಣ. ಅಷ್ಟು ಲಕ್ಷಾಂತರ ಜನ ಹೋಗಿ ಸಂತೋಷ, ತೃಪ್ತಿಪಡುವ ಸ್ಥಳಗಳೇ ಪರಮಾತ್ಮನ ವಾಸ ಎಲ್ಲಿ ಮನಸ್ಸು ಶ್ರದ್ಧೆಯಿಂದ ಬಾಗುತ್ತದೋ ಅದೇ ಭಗವಂತನ ವಸತಿ. ಅವುಗಳ ಬಗ್ಗೆ ಸಂಶಯ, ಅಪನಂಬಿಕೆ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT