ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮೂರು ಶಾಪಗಳು

Last Updated 8 ಜುಲೈ 2020, 19:30 IST
ಅಕ್ಷರ ಗಾತ್ರ

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್|

ಆಭಾಸವನು ಸತ್ಯವೆಂದು ಬೆಮಿಸುವುದುಮ್ ||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ – ಮಂಕುತಿಮ್ಮ || 310 ||

ಪದ-ಅರ್ಥ: ನಭಕೇಣಿ=ನಭಕೆ (ಆಕಾಶಕ್ಕೆ)+
ಏಣಿ, ಅಭಾಸ=ಭ್ರಾಂತಿ. ಬೆಮಿಸುವುದು=
ಭ್ರಮಿಸುವುದು, ಸೌಭಾಗ್ಯಗಳನರಸಿ=
ಸೌಭಾಗ್ಯಗಳನ್ನು ಅರಸಿ (ಹುಡುಕಿ), ದೌರ್ಭಾಗ್ಯಕೀಡಹುದು=ದೌರ್ಭಾಗ್ಯಕ್ಕೆ+ಈಡು+ಅಹುದು, ಅಭಿಶಾಪ=ಶಾಪ

ವಾಚ್ಯಾರ್ಥ: ಪ್ರಕೃತಿ ಸಹಜವಾದದ್ದನ್ನು ಮರೆತು ಆಕಾಶಕ್ಕೆ ಏಣಿ ಹೂಡುವುದು, ಭ್ರಾಂತಿಯನ್ನು ಸತ್ಯವೆಂದು ಭ್ರಮಿಸುವುದು, ಸೌಭಾಗ್ಯಗಳನ್ನು ಹುಡುಕಿಕೊಂಡು ಹೋಗುತ್ತ ದೌರ್ಭಾಗ್ಯಕ್ಕೆ ಸಿಕ್ಕು ಹಾಕಿಕೊಳ್ಳುವುದು, ಇವೆಲ್ಲ ಮನುಷ್ಯಕುಲಕ್ಕೆ ಬಂದ ಶಾಪಗಳು.

ವಿವರಣೆ: ಕ್ರಿಸ್ತಪೂರ್ವ ಎಂಟನೇ ಶತಮಾನದಲ್ಲಿದ್ದ ಒಬ್ಬ ಗ್ರೀಕ್ ದೇಶದ ದೊರೆ ಮಿಡಾಸ್‌ನ ಬಗ್ಗೆ ಪ್ರಚಲಿತವಾದ ಕಥೆ ಇದೆ. ಆತ ರಾಜನಾದ್ದರಿಂದ ಶ್ರೀಮಂತಿಕೆಗೆ ಯಾವ ಕೊರತೆಯೂ ಇರಲಿಲ್ಲ. ಆದರೂ ದುರಾಸೆಗೆ ಮಿತಿ ಎಲ್ಲಿದೆ? ಒಂದು ಬಾರಿ ಅವನನ್ನು ಮೆಚ್ಚಿಕೊಂಡ ದೈವ ಅವನಿಗೆ ಒಂದು ವರ ಕೇಳುವ ಅವಕಾಶವನ್ನು ನೀಡಿತು. ತನ್ನಷ್ಟು ಶ್ರೀಮಂತ ವ್ಯಕ್ತಿ ಜಗತ್ತಿನಲ್ಲಿ ಬೇರಾರೂ ಇರಕೂಡದೆಂದು ಚಿಂತಿಸಿ, ತಾನು ಮುಟ್ಟಿದ್ದೆಲ್ಲ ಬಂಗಾರವಾಗುವ ವರವನ್ನು ಬೇಡಿದ. ದೈವ ಅದರ ಬಗ್ಗೆ ಎಚ್ಚರಿಸಿದರೂ ಕೇಳದೆ ಅದನ್ನು ಪಡೆದ. ವರದ ಸಿದ್ಧಿಯನ್ನು ಪರೀಕ್ಷಿಸುವುದಕ್ಕೆ ಮರದ ಕೊಂಬೆಯೊಂದನ್ನು ಮುಟ್ಟಿದ. ಅದು ಕ್ಷಣದಲ್ಲಿ ಬಂಗಾರವಾಯಿತು. ರಾಜನ ಸಂತೋಷ, ಆವೇಗಕ್ಕೆ ಮಿತಿ ಇಲ್ಲದಂತಾಯಿತು. ಆತ ಕಂಡ ಕಂಡದ್ದನ್ನೆಲ್ಲ ಮುಟ್ಟಿದ. ಅದೆಲ್ಲ ಕ್ಷಣದಲ್ಲಿ ಬಂಗಾರವಾಯಿತು. ಒಂದು ಸೇಬುಹಣ್ಣನ್ನು ಮುಟ್ಟಿದಾಕ್ಷಣ ಅದೂ ಬಂಗಾರದ್ದಾಯಿತು. ಎಲ್ಲವೂ ಬಂಗಾರವೇ ಆಯಿತು! ಆತ ದಾಹದಿಂದ ನೀರು ಕುಡಿಯಲು ಹೋದರೆ ನೀರೂ ಬಂಗಾರವಾಯಿತು. ಆದರೆ ಅದರಿಂದ ದಾಹ ಕಡಿಮೆಯಾದೀತೇ? ಹಸಿವಿನಿಂದ ಆಹಾರ ತಿನ್ನಲು ಹೋದರೆ ಅದೂ ಬಂಗಾರವೇ. ಅವನಿಗೆ ತನ್ನ ವರದ ಮಿತಿ ತಿಳಿಯತೊಡಗಿತ್ತು. ಆಗ ಅಲ್ಲಿಗೆ ಬಂದ ಅವನ ಪ್ರೀತಿಯ ಮಗಳು ಓಡಿ ಬಂದಾಗ, ಆತ ಬೇಡ, ಬೇಡ ಎನ್ನುವುದರಲ್ಲಿ ಆಕೆ ಅವನನ್ನು ತಬ್ಬಿಕೊಂಡಾಗ ಬಂಗಾರದ ಪುತ್ಥಳಿಯೇ ಆದಳು. ಬೇಡಿ ಪಡೆದ ವರ ಶಾಪವಾಗಿತ್ತು. ಇದನ್ನೇ ಕಗ್ಗ ಸ್ವಾಭಾವಿಕವನ್ನು ಮರೆತು ಆಕಾಶಕ್ಕೆ ಏಣಿ ಇಡುವುದು ಎನ್ನುತ್ತದೆ.

ಇದೇ ರೀತಿ ಅನೇಕ ಭ್ರಾಂತಿಗಳನ್ನೇ ಸತ್ಯವೆಂದು ನಂಬುವುದು ಮತ್ತೊಂದು ಶಾಪ. ದೊರೆತ ಅಧಿಕಾರ ಶಾಶ್ವತವೆಂಬ ಭ್ರಮೆ. ಜನಮನ್ನಣೆ ಯಾವಾಗಲೂ ಇರುತ್ತದೆಂಬ ಭ್ರಮೆ, ತನ್ನ ಯೌವನದ, ಸೌಂದರ್ಯಗಳ ಭ್ರಮೆ, ಶ್ರೀಮಂತಿಕೆಯ, ಸ್ಥಾನ ಗೌರವದ ಭ್ರಮೆ. ಇವೆಲ್ಲವನ್ನು ಸತ್ಯವೆಂದು ನಂಬುವುದೂ ಒಂದು ಶಾಪ. ಯಾಕೆಂದರೆ ಇವೆಲ್ಲ ತುಂಬ ತಾತ್ಪೂರ್ತಿಕವಾದವುಗಳು.

ಮನುಷ್ಯ ಸೌಭಾಗ್ಯಗಳನ್ನು ಪಡೆಯಲು ಅವುಗಳ ಬೆನ್ನು ಹತ್ತಿ ಓಡುತ್ತಾನೆ. ಎಷ್ಟಾದರೆ ಸಾಕು ಎನ್ನುವುದರ ಅರಿವಿಲ್ಲ. ಆಸೆಗೆ ಕೊನೆಯಿಲ್ಲ. ಹೀಗೆ ಧಾವಂತದಿಂದ ಸೌಭಾಗ್ಯವೆಂದು ಕಾಣುವುದರೆಡೆಗೆ ಮುನ್ನುಗ್ಗುವ ಮನುಷ್ಯ ದೌರ್ಭಾಗ್ಯಕ್ಕೆ ಈಡಾಗುವುದು ಒಂದು ದುರಂತ.

ಕಗ್ಗ ಹೇಳುವ ಈ ಮೂರು ಅಸಹಜವಾದ, ಅನವಶ್ಯಕವಾದ ಪ್ರಯತ್ನಗಳು ಮನುಷ್ಯಕುಲಕ್ಕೆ ಶಾಪಗಳು. ನಮ್ಮ ಶಕ್ತಿಯ ಮಿತಿ ಯಾವಾಗಲೂ ನಮ್ಮ ಗಮನದಲ್ಲಿರುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT